ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸಲು ತಾಕೀತು

 ಚುನಾವಣೆ ಸಂದರ್ಭದಲ್ಲಿ ಕೇಬಲ್ ಆಪರೇಟರ್‌ಗಳು, ಮುದ್ರಣಕಾರರು ಹಾಗೂ ಮೊಬೈಲ್ ಸೇವೆ ಒದಗಿಸುವ ಸಂಸ್ಥೆಗಳು ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ

ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಮುದ್ರಣಕಾರರಿಗೆ ಸೂಚನೆ ನೀಡಿದರು.

  ಚುನಾವಣೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೇಬಲ್ ಆಪರೇಟರ್‌ಗಳು, ಮುದ್ರಣಕಾರರು ಹಾಗೂ ಮೊಬೈಲ್ ಕಂಪನಿಯವರೊಂದಿಗೆ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೊಬೈಲ್ ಸಂಸ್ಥೆಗಳು : ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಎಸ್‌ಎಂಎಸ್ ಮೂಲಕ ಚುನಾವಣಾ ಪ್ರಚಾರ ಕೈಗೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದ್ದು, ಮೊಬೈಲ್ ಸಂಸ್ಥೆಗಳು ಗುಂಪು ಸಂದೇಶ (ಬಲ್ಕ್ ಎಸ್‌ಎಂಎಸ್) ಗಳನ್ನು ಬಿತ್ತರಿಸುವ ಮೊದಲು ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯಿಂದ ಪಡೆದ ಪ್ರಮಾಣಪತ್ರ ದಾಖಲೆಯನ್ನು ಪರಿಶೀಲಿಸಿದ ನಂತರವೇ ಎಸ್‌ಎಂಎಸ್ ಸೇವೆ ಒದಗಿಸಬೇಕು.  ಈಗಾಗಲೆ ಈ ಕುರಿತು ಎಲ್ಲ ರಾಜಕೀಯ ಪಕ್ಷಗಳಿಗೆ ಸಭೆಯ ಮೂಲಕ ತಿಳುವಳಿಕೆ ನೀಡಲಾಗಿದೆ.  ಮೊಬೈಲ್ ಸೇವೆ ಒದಗಿಸುವ ಸಂಸ್ಥೆಗಳು ಈ ಕುರಿತು ನಿಗಾ ವಹಿಸಬೇಕು ಎಂದರು.
ಕೇಬಲ್ ನೆಟ್‌ವರ್ಕ್ : ಕೇಬಲ್ ಆಪರೇಟರ್‌ಗಳು ಪ್ರ್ರಸಾರ ಮಾಡುವ ಯಾವುದೇ ಚುನಾವಣಾ ಪ್ರಚಾರದ ವಿಷಯಕ್ಕೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಎಂಸಿಎಂಸಿ ಸಮಿತಿಯ ಅನುಮತಿ ಪಡೆಯಲಾಗಿದೆಯೇ ಎಂಬುದರ ಕುರಿತು ಪ್ರಮಾಣಪತ್ರ ದಾಖಲೆಯನ್ನು ಪರಿಶೀಲಿಸಿದ ನಂತರವೇ ಪ್ರಸಾರಗೊಳಿಸಬೇಕು. ಒಂದು ವೇಳೆ ಸಮಿತಿಯಿಂದ ಅನುಮತಿ ಪಡೆಯದೇ ಇರುವಂತಹ ಯಾವುದೇ ಪ್ರಚಾರದ ವಿಡಿಯೋ ಅಥವಾ ಧ್ವನಿಮುದ್ರಿಕೆ ಪ್ರಸಾರಗೊಂಡಲ್ಲಿ ಅಂತಹ ಕೇಬಲ್ ಆಪರೇಟರ್‌ಗಳ ಎಲ್ಲ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.  ಈಗಾಗಲೆ ಕೇಬಲ್ ನೆಟ್‌ವರ್ಕ್‌ನ ಎಲ್ಲ ಚಾನೆಲ್‌ಗಳನ್ನು ವೀಕ್ಷಿಸಲು ವಿಡಿಯೋ ವೀಕ್ಷಣಾ ತಂಡವನ್ನು ಆಯಾ ತಾಲೂಕು ಕೇಂದ್ರದಲ್ಲಿ ರಚಿಸಲಾಗಿದ್ದು, ಈ ತಂಡವು ಎಲ್ಲ ಕೇಬಲ್ ನೆಟ್‌ವರ್ಕ್‌ಗಳ ಕಾರ್ಯಕ್ರಮಗಳ ಪ್ರಸಾರದ ಬಗ್ಗೆ ನಿಗಾ ವಹಿಸಲಿದ್ದು, ನಿಯಮ ಉಲ್ಲಂಘನೆ ಕಂಡುಬಂದಲ್ಲಿ, ಕ್ಷೇತ್ರ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಲಿದೆ.
  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಪಕ್ಷದ/ವಯಕ್ತಿಕ ಚುನಾವಣಾ ಪ್ರಚಾರವನ್ನು ವಿವಿಧ ಮಾಧ್ಯಮಗಳ ಮೂಲಕ ಮಾಡಲಿದ್ದು, ಇಂತಹ ಪ್ರಚಾರಗಳಲ್ಲಿ ನೈತಿಕತೆ, ಸಭ್ಯತೆ ಸೂಕ್ಷತೆ ಮೀರುವಂತಹ ಅಂಶಗಳನ್ನು ತಮ್ಮ ಪ್ರಚಾರಗಳಲ್ಲಿ ಬಿತ್ತರಿಸುವುದು ಹಾಗೂ ವ್ಯಕ್ತಿಗಳ ಭಾವನೆಗೆ ಧಕ್ಕೆ ತರುವಂತಹುದನ್ನು ಪ್ರಸಾರ ಮಾಡುವಂತಿಲ್ಲ.  ಕೇಬಲ್ ನೆಟ್‌ವರ್ಕ್‌ಗಳಲ್ಲಿ ಪ್ರಚಾರ ನೀಡಬಯಸುವವರು ಕನಿಷ್ಟ ೩ ದಿನ ಮೊದಲು ಅರ್ಜಿ ಸಲ್ಲಿಸಬೇಕು.  ಅಂತಹ ಅರ್ಜಿಯು ಉದ್ದೇಶಿತ ಜಾಹೀರಾತು ಪ್ರಚಾರದ ಎರಡು ಪ್ರತಿಗಳನ್ನು ವಿದ್ಯುನ್ಮಾನ ರೂಪದಲ್ಲಿ (ಸಿ.ಡಿ) ಹಾಗೂ ಜೊತೆಗೆ ದೃಢೀಕೃತಗೊಂಡಿರುವ ಅದರ ಸಂಭಾಷಣೆಯ ಹಸ್ತಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.    ಅರ್ಜಿ ನಮೂನೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗದಲ್ಲಿ ಲಭ್ಯವಿರುತ್ತದೆ.  ಜಾಹೀರಾತನ್ನು ಪರಿಶೀಲಿಸಿ, ಪ್ರಚಾರ ವಿಷಯ ಸಮರ್ಪಕವಾಗಿದ್ದಲ್ಲಿ ಜಿಲ್ಲಾಧಿಕಾರಿಗಳು ಅರ್ಹತೆಯ ಪ್ರಮಾಣಪತ್ರ ನೀಡುವರು.
ಮುದ್ರಣಕಾರರು : ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಮುದ್ರಣಕಾರರು ನಿಯಮಾನುಸಾರ ತಮ್ಮ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸಬೇಕು.  ಯಾವುದೇ ಜಾತಿ, ಧರ್ಮ ನಿಂದಿಸುವಂತಹ ಹಾಗೂ ಪ್ರಚೋದನಕಾರಿ ವಿಷಯವನ್ನೊಳಗೊಂಡ ಕರಪತ್ರವನ್ನು ಮುದ್ರಿಸಬಾರದು.  ಅಲ್ಲದೆ ವಯಕ್ತಿಕ ನಿಂದನೆ ಮತ್ತು ಕೋಮು ಸಾಮರಸ್ಯ ಕದಡುವಂತಹ ವಿಷಯಗಳನ್ನು ಪ್ರಕಟಿಸಬಾರದು.  ಚುನಾವಣಾ ಪ್ರಚಾರಕ್ಕೆ ಕರಪತ್ರಗಳನ್ನು ಮುದ್ರಿಸುವಾಗ ಸರಿಯಾದ ಚಿಹ್ನೆಗಳನ್ನು ಉಪಯೋಗಿಸಬೇಕು.   ಅಲ್ಲದೆ ಕರಪತ್ರದ ಕೆಳಭಾಗದಲ್ಲಿ ಮುದ್ರಣಾಲಯದ ಹೆಸರು, ಮುದ್ರಣ ಮಾಡಿದ ಕರಪತ್ರಗಳ ನಿಖರ ಸಂಖ್ಯೆಯನ್ನು ಅದರಲ್ಲಿ ನಮೂದಿಸಬೇಕು.  ಅಭ್ಯರ್ಥಿ ಅಥವಾ ನಿಯಮಾನುಸಾರ ನೇಮಕಗೊಂಡ ಚುನಾವಣಾ ಏಜೆಂಟ್‌ಗಳು ನೀಡಿದ ಕರಪತ್ರವನ್ನು ಮಾತ್ರ ಮುದ್ರಣ ಮಾಡಬೇಕು.  ೨೦೦೦೦ ರೂ. ಮೇಲ್ಪಟ್ಟ ಮೊತ್ತವನ್ನು ಕಡ್ಡಾಯವಾಗಿ ಚೆಕ್ ಮೂಲಕವೇ ಸ್ವೀಕರಿಸಬೇಕು.  ತಮ್ಮ ಸಂಸ್ಥೆಯ ಅಧಿಕೃತ ರಸೀದಿ, ಬಿಲ್ ಮಾತ್ರ ಬಳಸಬೇಕು.  ಲೆಕ್ಕ ಪತ್ರಗಳಿಗೆ ಸಂಬಂಧಿಸಿದಂತೆ ಬಿಲ್‌ಗಳು ಹಾಗೂ ರಸೀದಿಗಳನ್ನು ಸಮರ್ಪಕವಾಗಿ ಇರಿಸಿಕೊಳ್ಳಬೇಕು.  ತಪ್ಪಿದಲ್ಲಿ ಅಂತಹ ಮುದ್ರಣ ಸಂಸ್ಥೆಗಳು ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಸೂಚನೆ ನೀಡಿದರು.
  ಸಭೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಕೇಬಲ್ ಆಪರೇಟರ್‌ಗಳು, ಮುದ್ರಣ ಸಂಸ್ಥೆಗಳ ಮಾಲೀಕರು, ಬಿಎಸ್‌ಎನ್‌ಎಲ್ ಸೇರಿದಂತೆ ವಿವಿಧ ಮೊಬೈಲ್ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Related posts

Leave a Comment