ದುಡಿಮೆ ವಲಸಿಗರಿಂದ ಮಲೇರಿಯಾ ನಿಯಂತ್ರಣಕ್ಕೆ ತೊಂದರೆ !

ಕೊಪ್ಪಳ ನ. : ಕೊಪ್ಪಳ ಜಿಲ್ಲೆಯಲ್ಲಿಯೇ ಕುಷ್ಟಗಿ ತಾಲೂಕು ಮಲೇರಿಯಾ ಸಮಸ್ಯಾತ್ಮಕ ತಾಲೂಕಾಗಿ ಪರಿಣಮಿಸಿದ್ದು, ಈ ತಾಲೂಕಿನಿಂದ ದುಡಿಮೆಗಾಗಿ ಬೇರೆ ರಾಜ್ಯಗಳಿಗೆ ಹೋಗಿ ಬರುವ ವಲಸಿಗರೆ ಇದಕ್ಕೆ ಕಾರಣಕರ್ತರಾಗಿದ್ದಾರೆ. ಇದರಿಂದಾಗಿ ಈ ತಾಲೂಕಿನಲ್ಲಿ ಮಲೇರಿಯಾ ನಿಯಂತ್ರಿಸಲು ತೊಂದರೆ ಉಂಟಾಗಿದೆ. ಆದರೂ ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಸಿ.ಬಿ. ಬಸವರಾಜ್ ಅವರು ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ವರದಿಯಾಗಿರುವ ಮಲೇರಿಯಾ ಪ್ರಕರಣಗಳ ಪೈಕಿ, ಹೆಚ್ಚಿನ ಪ್ರಕರಣಗಳು ಕುಷ್ಟಗಿ ತಾಲೂಕಿನಿಂದ ವರದಿಯಾಗಿವೆ. ೨೦೦೫ ರಲ್ಲಿ ಇಡೀ ಜಿಲ್ಲೆಯಲ್ಲಿ ವರದಿಯಾದ ಮಲೇರಿಯಾ ಪ್ರಕರಣಗಳ ಸಂಖ್ಯೆ ೬೬೩೪ ಇದ್ದು, ಈ ಪೈಕಿ ಕುಷ್ಟಗಿ ತಾಲೂಕು ಒಂದರಲ್ಲಿಯೇ ೫೦೨೪ ಮಲೇರಿಯಾ ಪ್ರಕರಣ ವರದಿಯಾಗಿದೆ. ೨೦೦೬ ರಲ್ಲಿ ಜಿಲ್ಲೆಯ ೩೨೬೯ ಪ್ರಕರಣಗಳ ಪೈಕಿ ಕುಷ್ಟಗಿ ತಾಲೂಕಿನಲ್ಲಿ ೨೦೧೭ ಪ್ರಕರಣಗಳು, ೨೦೦೭ ರಲ್ಲಿ ಜಿಲ್ಲೆಯ ೩೧೬೩ ಪ್ರಕರಣ ಪೈಕಿ ಕುಷ್ಟಗಿ ತಾಲೂಕಿನಲ್ಲಿ ೧೦೮೭, ೨೦೦೮ ರಲ್ಲಿ ಜಿಲ್ಲೆಯ ಒಟ್ಟು ೫೪೨೫ ರ ಪೈಕಿ ಕುಷ್ಟಗಿ ತಾಲೂಕಿನಲ್ಲಿ ೨೯೪೪, ೨೦೦೯ ರಲ್ಲಿ ೨೫೨೧ ರ ಪೈಕಿ ಕುಷ್ಟಗಿ ತಾಲೂಕಿನಲ್ಲಿ ೧೭೯೫ ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಪ್ರಸಕ್ತ ವರ್ಷದ ಅಕ್ಟೋಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಪತ್ತೆಯಾಗಿರುವ ಒಟ್ಟು ೩೦೭೬ ಮಲೇರಿಯಾ ಪ್ರಕರಣಗಳ ಪೈಕಿ ಕುಷ್ಟಗಿ ತಾಲೂಕು ಒಂದರಲ್ಲಿಯೇ ೨೨೮೪ ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಕಳೆದ ನಾಲ್ಕು ವರ್ಷಗಳಿಂದಲೂ ಮಲೇರಿಯಾ ಕಾರಣದಿಂದ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭ”ಸಿಲ್ಲ. ಕುಷ್ಟಗಿ ತಾಲೂಕಿನಲ್ಲಿ ದುಡಿಮೆಗಾಗಿ ಮಲೇರಿಯಾ ಪೀಡಿತ ಪ್ರದೇಶಗಳಾಗಿರುವ ಗೋವಾ, ರತ್ನಗಿರಿ, ಮಂಗಳೂರು ಮುಂತಾದ ಪ್ರದೇಶಗಳಿಗೆ ವಲಸೆ ಹೋಗಿ ಬರುವುದರಿಂದ, ಇಲ್ಲಿ ಮಲೇರಿಯಾ ನಿಯಂತ್ರಣಕ್ಕೆ ತೊಂದರೆ ಉಂಟಾಗಿದೆ. ಅಲ್ಲದೆ ಈ ತಾಲೂಕಿನ ಹೂಲಗೇರಾ, ಮುದೇನೂರು ಮುಂತಾದ ಪ್ರದೇಶಗಳಲ್ಲಿ ಗ್ರಾನೈಟ್ ಗಣಿಗಾರಿಕೆಂದಾಗಿ ತಗ್ಗು ಪ್ರದೇಶಗಳು ಹೆಚ್ಚಾಗಿದ್ದು, ಇವು ಸೊಳ್ಳೆಗಳ ಸಂತತಿ ಹೆಚ್ಚಲು ಕಾರಣವಾಗಿದೆ. ಮಲೇರಿಯಾ ನಿಯಂತ್ರಣ ಕುರಿತು ಅಧ್ಯಯನ ತಂಡಗಳು ಜಿಲ್ಲೆಗೆ ಮೂರ್‍ನಾಲ್ಕು ಬಾರಿ ಭೇಟಿ ನೀಡಿದ್ದು, ಅವರ ಸೂಚನೆಯಂತೆ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಶೀಘ್ರ ಪತ್ತೆ ಮತ್ತು ತ್ವರಿತ ಚಿಕಿತ್ಸೆ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ. ಮಲೇರಿಯಾ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಅಂತಹ ಗ್ರಾಮಗಳಲ್ಲಿ ಜ್ವರ ಪ್ರಕರಣಗಳಿಗೆ ರಕ್ತಲೇಪನ ಸಂಗ್ರಹಿಸಿದ ದಿನವೇ, ಮಲೇರಿಯಾ ಪ್ರಕರಣ ಪತ್ತೆ ಮಾಡಿ, ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಿಗದಿತ ಗ್ರಾಮ ಭೇಟಿಗೆ ಅನುಗುಣವಾಗಿ ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತರ ಮೂಲಕ ಕ್ಲೋರೋಕ್ವೀನ್ ಮಾತ್ರೆ ವಿತರಿಸಲಾಗುತ್ತಿದೆ. ಅಂತಹ ಗ್ರಾಮಗಳಲ್ಲಿ ಜ್ವರ ಚಿಕಿತ್ಸಾ ಮಳಿಗೆಗಳನ್ನು ತೆರೆಯಲಾಗಿದೆ. ಸೊಳ್ಳೆಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಹದಿನೈದು ದಿನಗಳಿಗಿಂತ ಹೆಚ್ಚಿಗೆ ನೀರು ನಿಲ್ಲುವ ತಗ್ಗು ಪ್ರದೇಶಗಳಲ್ಲಿ ಲಾರ್ವಾಹಾರಿ ಮಿನುಗಳನ್ನು ಬಿಡಲಾಗುತ್ತಿದೆ. ಸುಮಾರು ೮೦೦೦ ಬಿ.ಪಿ.ಎಲ್. ಕುಟುಂಬಗಳಿಗೆ ಕೀಟನಾಶಕದಿಂದ ಉಪಚರಿಸಿದ ಸೊಳ್ಳೆ ಪರದೆಗಳನ್ನು ವಿತರಿಸಲಾಗಿದೆ. ಸುಮಾರು ೬೩ ಗ್ರಾಮಗಳಲ್ಲಿ ಡಿ.ಡಿ.ಟಿ. ಸಿಂಪರಣೆ, ೯೯ ಗ್ರಾಮಗಳಲ್ಲಿ ದುಬಾರಿಯಾದ ಸೈಫ್ಲೋಥ್ರೀನ್ ಕೀಟನಾಶಕ ಸಿಂಪರಣೆ ಮಾಡಲಾಗಿದೆ. ಸೊಳ್ಳೆಗಳ ನಿಯಂತ್ರಣ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ೯೪ ಗ್ರಾಮ ಪಂಚಾಯತಿಗಳಲ್ಲಿ ಪ್ರಚಾರ ಸಭೆಗಳನ್ನು ಏರ್ಪಡಿಸಿ, ಸ್ವಚ್ಛತೆ ಹಾಗೂ ರೋಗ ನಿಯಂತ್ರಣಕ್ಕೆ ಸಹಕರಿಸುವಂತೆ ಸಮುದಾಯಕ್ಕೆ ಮನವಿ ಮಾಡಲಾಗಿದೆ. ಜಿಲ್ಲೆಯ ೯೨ ಶಾಲೆಗಳ ಮಕ್ಕಳಿಗೆ ಸೊಳ್ಳೆಗಳ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ, ಸಾರ್ವಜನಿಕರ ಹಾಗೂ ಸಮುದಾಯದ ಸಹಕಾರವಿಲ್ಲದೆ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯವಿಲ್ಲವಾದ್ದರಿಂದ ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಸಿ.ಬಿ. ಬಸವರಾಜ್ ಅವರು ಮನವಿ ಮಾಡಿಕೊಂಡಿದ್ದಾರೆ.
Please follow and like us:
error