ಲೇವಿ ವಿವಾದ ಕೂಡಲೇ ಬಗೆಹರಿಸಲು ಒತ್ತಾಯ

 ಕರ್ನಾಟಕ ಸರಕಾರ ಮತ್ತು ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘಗಳು ಲೇವಿ ವಿವಾದವನ್ನು ಹುಟ್ಟಿಸಿಕೊಂಡು ಜಗಳವಾಡುತ್ತಿರುವುದು ಲಕ್ಷಾಂತರ ಅಕ್ಕಿ ಗಿರಣಿ ಕಾರ್ಮಿಕರಿಗೆ ಮಾಡಿದ ದ್ರೋಹವಾಗಿದೆ ಎಂದು ಎ.ಐ.ಸಿ.ಸಿ.ಟಿ.ಯು. ಜಿಲ್ಲಾ ಸಮಿತಿಯ ಎಂ.ವಿರುಪಾಕ್ಷಪ್ಪ ಮತ್ತು ಟಿ.ರಾಘವೇಂದ್ರರವರು  ತಿಳಿಸಿದ್ದಾರೆ. 
ಸರಕಾರ ಮತ್ತು ಅಕ್ಕಿ ಗಿರಣಿ ಮಾಲೀಕರ ಸಂಘ ಕೂಡಲೇ ಲೇವಿ ವಿವಾದವನ್ನು ಬಗೆಹರಿಸಿಕೊಂಡು ಅಕ್ಕಿ ಗಿರಣಿಗಳನ್ನು ಕೂಡಲೇ ಪ್ರಾರಂಭಿಸಿ ರೈತರ ಮತ್ತು ಕಾರ್ಮಿಕರನ್ನು ರಕ್ಷಿಸಬೇಕೆಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರಿಯ ಸಮಿತಿ ಸರಕಾರವನ್ನು ಒತ್ತಾಯಿಸುತ್ತದೆ. ಇಲ್ಲದಿದ್ದಲ್ಲಿ ಕರ್ನಾಟಕದ ಲಕ್ಷಾಂತರ ರೈತರು ಮತ್ತು ಅಸಂಘಟಿತ ಕಾರ್ಮಿಕರು ಬೀದಿ ಪಾಲಾಗುತ್ತಾರೆ. ಭತ್ತದ ಕಾಳಸಂತೆಯ ಮಾಫಿಯಾ ಬಲಗೊಂಡು ಪಟ್ಟಣಗಳಲ್ಲಿ ಮಧ್ಯಮವರ್ಗ ಅಕ್ಕಿ ಸಿಗದೇ ಪರದಾಡುವಂತಹ ಸಂದರ್ಭವಿದೆ. 
ಎಲ್ಲಾ ಸಮಸ್ಯೆಗಳಿಗೆ ರಾಜ್ಯವನ್ನಾಳುತ್ತಿರುವ ಸಿದ್ದರಾಮಯ್ಯನವರ ಸರಕಾರವೇ ಕಾರಣವಾಗಿದ್ದು, ಕೂಡಲೇ ಅವೈಜ್ಞಾನಿಕ ಲೇವಿ ನೀತಿಯನ್ನು ಸರಿಪಡಿಸಿ, ವಿವಾದ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ರಾಜ್ಯಾದ್ಯಂತ ರೈತರು, ಹಾಗೂ ಕಾರ್ಮಿಕರು ಕೂಡಿಕೊಂಡು ಉಗ್ರವಾದ ಹೋರಾಟ ಮಾಡಲಿದ್ದಾರೆಂದು ಎ.ಐ.ಸಿ.ಸಿ.ಟಿ.ಯು.  ತಿಳಿಸಿದೆ.

Leave a Reply