ಭಿಕ್ಷೆ ಬೇಡಿಯಾದರೂ ಪಾಲಕರು ಮಕ್ಕಳಿಗೆ ವಿದ್ಯೆ ಕೊಡಿಸಬೇಕು – ಶ್ರೀಮತಿ ಕನಗವಲ್ಲಿ

ಕೊಪ್ಪಳ, ೨೨ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಜೀವನವಿಡೀ ಗಮನ ಕೊಟ್ಟರೂ ಸಾಲದು. ಪ್ರಸ್ತುತ ದಿನಮಾನಗಳಲ್ಲಿ ವಿದ್ಯೆ ಒಂದೇ ಜೀವನಕ್ಕೆ ಆಧಾರವಾದುದು. ಪಾಲಕರು ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮಕ್ಕಳು ಒಳ್ಳೆಯ ನಡೆ-ನುಡಿ ಕಲಿತು, ಸಾಮರಸ್ಯದಿಂದ ಬದುಕಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಶ್ರೀಮತಿ ಕನಗವಲ್ಲಿ ನುಡಿದರು.
ಅವರು ದಿ. ೨೦ ರಂದು ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೪೦ ನೇ ವಾರ್ಷಿಕೋತ್ಸವ ಮತ್ತು ೧೫೪ ನೇ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಈ ಮೇಲಿನಂತೆ ನುಡಿದರು. ಇದೇ ಸಂದರ್ಭದಲ್ಲಿ ಶಾಲೆಯ ೪೦ ನೇ ವರ್ಷಾಚರಣೆಯ ನಿಮಿತ್ಯ ಪ್ರಕಟಿಸಲಾದ ‘ವ್ಹಿಜನ್ ೨೦೧೬’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಇನ್ನೋರ್ವ ಅತಿಥಿಗಳಾದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಎಚ್.ಎಸ್. ಪಾಟೀಲರು ಮಾತನಾಡಿ ಲಯನ್ಸ್ ಕ್ಲಬ್ ಈ ಭಾಗದ ಶೈಕ್ಷಣಿಕ ಮತ್ತು ಆರೋಗ್ಯದ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅನನ್ಯವಾದುದು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಲಯನ್ಸ್ ಕ್ಲಬ್ ಹಿರಿಯ ಸದಸ್ಯರ ಕಾಣಿಕೆ ಇಲ್ಲಿ ಸ್ಮರಣೀಯವಾದುದು. ೪೦ ವರ್ಷಗಳನ್ನು ಪೂರೈಸಿದ ಶಾಲೆಯ ಸಾಧನೆ ಅನನ್ಯವಾದುದು ಎಂದು ನುಡಿದರು.
ಹಿರಿಯ ಲಯನ್ಸ್ ಕ್ಲಬ್ ಸದಸ್ಯರಾದ ಲಯನ್ ಜವಾಹರ ಲಾಲ್ ಜೈನ್ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಇಬ್ಬರೂ ಮುಖ್ಯ ಅತಿಥಿಗಳಾದ ಜಿಲ್ಲಾಧಿಕಾರಿ ಮತ್ತು ಎಚ್.ಎಸ್. ಪಾಟೀಲರಿಗೆ ಲಯನ್ಸ್ ಕ್ಲಬ್ ಮತ್ತು ಶಾಲೆಯ ವತಿಯಿಂದ ಲಯನ್ಸ್ ಕ್ಲಬ್ ಸದಸ್ಯರು ಸನ್ಮಾನಿಸಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಪ್ರಶಸ್ತಿ ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.
ಶಾಲಾ ಪ್ರಾಚಾರ್ಯ ಎ. ಧನಂಜಯನ್ ಮತ್ತು ಮಕ್ಕಳು ಶಾಲಾ ವಾರ್ಷಿಕ ವರದಿ ಓದಿದರು. ಪ್ರಾಸ್ತಾವಿಕವಾಗಿ ಶಿಕ್ಷಕ ಮಹೇಶ ಬಳ್ಳಾರಿ ಮಾತನಾಡಿದರು. ಅತಿಥಿಗಳ
ಪರಿಚಯವನ್ನು ಶಿಕ್ಷಕರಾದ ವೀರೇಶ ಕೊಪ್ಪಳ ಮತ್ತು ಆರೋಗ್ಯ ಮೇರಿ ನೆರವೇರಿಸಿದರು.
ಆರಂಭದಲ್ಲಿ ಚಂದನಾ, ಸುನಿಧಿ ಪ್ರಾರ್ಥಿಸಿದರೆ, ಶಾಲಾ ನಾಯಕಿ ಸುಧಾ ಸ್ವಾಗತಿಸಿದರು. ಕೃತಿಕಾ, ಫಾತಿಮಾ ಮತ್ತು ಸಹನಾ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕ ಸಮೀರ ಜೋಶಿ ವಂದಿಸಿದರು.
ವೇದಿಕೆಯ ಮೇಲೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಲಯನ್ ವಿ.ಎಸ್. ಅಗಡಿ, ಉಪಾಧ್ಯಕ್ಷರಾದ ಲಯನ್ ಜವಾಹರಲಾಲ್ ಜೈನ, ಕಾರ್ಯದರ್ಶಿಗಳಾದ ಲಯನ್ ಬಸವರಾಜ ಬಳ್ಳೊಳ್ಳಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಶ್ರೀನಿವಾಸ ಗುಪ್ತಾ, ಲಯನ್ ಮಲ್ಲಿಕಾರ್ಜುನ ಬಳ್ಳೊಳ್ಳಿ, ಲಯನ್ ಪ್ರಭು ಹೆಬ್ಬಾಳ, ಲಯನ್ ಮಹೇಶ ಮಿಟ್ಟಲಕೋಡ, ಲಯನ್ ಪರಮೇಶಪ್ಪ ಕೊಪ್ಪಳ, ಲಯನ್ ಎಸ್. ಮಲ್ಲಿಕಾರ್ಜುನ, ಲಯನ್ ಪಿ.ಕೆ. ವಾರದ, ಲಯನ್ ಅರವಿಂದ ಅಗಡಿ, ಲಯನ್ ವೆಂಕಟೇಶ ಶ್ಯಾನಬಾಗ್, ಲಯನ್ ಗುರುರಾಜ ಹಲಗೇರಿ, ಲಯನ್ ವೀರೇಶ ಹತ್ತಿ, ಲಯನ್ ನಂದಕಿಶೋರ ಸುರಾಣ, ಲಯನ್ ರಾಜೇಂದ್ರ ಜೈನ ಉಪಸ್ಥಿತರಿದ್ದರು. ವೇದಿಕೆಯ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮುಂಜಾನೆ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ವಿಠ್ಠಲ ಬೈಲವಾಡ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ ಭಾಗವಹಿಸಿದ್ದರು. ೪೦೦ ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Please follow and like us:
error