ವೇದಿಕೆ ನಿರ್ಮಾಣ ಕಾರ್ಯ ಆರಂಭ

ಗಂಗಾವತಿ: ನಗರದಲ್ಲಿ ಮುಂದಿನ ಡಿಸೆಂಬರ್‌ನಲ್ಲಿ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ, ಊಟ, ಪುಸ್ತಕ ಪ್ರದರ್ಶನ ಸೇರಿದಂತೆ ಇನ್ನಿತರ ಮಳಿಗೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಕಚೇರಿಯಲ್ಲಿ ಸೋಮವಾರ ಸಮ್ಮೇಳನದ ಪ್ರಮುಖ ಘಟ್ಟವಾದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು. ಬಳಿಕ ಸಮ್ಮೇಳನದ ತಯಾರಿ ಬಗ್ಗೆ ಮಾತನಾಡಿದರು.
ಹುಬ್ಬಳ್ಳಿ ಮೂಲದ ಸಂಸ್ಥೆಯೊಂದಕ್ಕೆ ಶಾಮಿಯಾನ, ಪೆಂಡಾಲ್, ಮಳಿಗೆ ನಿರ್ಮಾಣದ ಟೆಂಡರ್ ನೀಡಲಾಗಿದೆ. ಈಗಾಗಲೆ 15ಕ್ಕೂ ಹೆಚ್ಚು ಲಾರಿಗಳಲ್ಲಿ ಶಾಮಿಯಾನದ ಸಾಮಗ್ರಿಗಳು ಮುಖ್ಯ ವೇದಿಕೆ ನಿರ್ಮಾಣವಾಗುವ ಸ್ಥಳಕ್ಕೆ ಬಂದಿವೆ ಎಂದರು.
9ರಂದು ನಗರಕ್ಕೆ ಆಗಮಿಸಿಲಿರುವ ಮುಖ್ಯಮಂತ್ರಿ ಸದಾನಂದಗೌಡ ಸಮ್ಮೇಳನಕ್ಕೆ ಚಾಲನೆ ನೀಡುವರು. ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಸಮ್ಮೇಳನದ ಕಾರ್ಯಾಧ್ಯಕ್ಷರೂ ಆದ ಶಾಸಕ ತಿಳಿಸಿದರು.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಮಾತನಾಡಿ, ಕೊಪ್ಪಳ ಉಪ ಚುನಾವಣೆಯ ಬೆನ್ನ ಹಿಂದೆಯೆ ಬಿಡುವಿಲ್ಲದಂತೆ ಸಮ್ಮೇಳನ ಬಂದಿದೆ. ಸಮ್ಮೇಳನದ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. 
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ತಾಲ್ಲೂಕು ಅಧ್ಯಕ್ಷ ಬಸವರಾಜ ಕೋಟೆ, ಎಸ್.ಬಿ. ಗೊಂಡಬಾಳ, ಎಪಿಎಂಸಿ ಅಧ್ಯಕ್ಷ ಅಮರೇಗೌಡ ಮಾಲಿ ಪಾಟೀಲ್, ಸಿ. ಮಹಾಲಕ್ಷ್ಮಿ ಇತರರು ಇದ್ದರು.

Leave a Reply