ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ.

ಕೊಪ್ಪಳ, ಜು.೨೫ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಜು.೨೬ ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
     ಸಚಿವರು ಜು.೨೬ ರಂದು ಕಾರಟಗಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ನಡೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ. 
ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ
ಕೊಪ್ಪಳ ಜುಲೈ ೨೫  ಪೊಲೀಸ್ ಅಧಿಕಾರಿಗಳ/ ಸಿಬ್ಬಂದಿಗಳ   ವಿರುದ್ಧ  ದೂರುಗಳ ವಿಚಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವನ್ನು ಸರ್ಕಾರ ರಚಿಸಿದ್ದು, ಈಗಾಗಲೆ   ದೂರು ಪ್ರಾಧಿಕಾರ ಕಾರ್ಯಾರಂಭ ಮಾಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ತಿಳಿಸಿದ್ದಾರೆ.
ಯಾವುದೇ ಸಾರ್ವಜನಿಕ ಸದಸ್ಯನ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಪೊಲೀಸ್ ವಶದಲ್ಲಿದ್ದಾಗ ಮರಣ, ಐ.ಪಿ.ಸಿ. ಸೆಕ್ಷನ್ ೩೨೦ ರಲ್ಲಿ ತಿಳಿಸಲಾದಂತಹ ಗಂಭೀರ ಗಾಯ, ಮಾನಭಂಗ ಅಥವಾ ಮಾನಭಂಗಕ್ಕೆ ಯತ್ನ ಅಥವಾ ಕಾನೂನು ಪ್ರಕಾರವಲ್ಲದ ಬಂಧನ ಅಥವಾ ವಶದಲ್ಲಿರಿಸಿಕೊಳ್ಳುವುದನ್ನು ದುರ್ನಡತೆಯ ಕುರಿತು ವಿಚಾರಣೆ ಮಾಡಲಿದೆ.
     ವಿಭಾಗೀಯ ಆಯುಕ್ತರು ಜಿಲ್ಲಾ ಮಟ್ಟದ ಪ್ರಾಧಿಕಾರದ  ಅಧ್ಯಕ್ಷರಾಗಿದ್ದು, ಸದಸ್ಯರುಗಳಾಗಿ ಕಲಬುರ್ಗಿಯ ಎಸ್.ಜಿ. ವಾಲಿ, ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತರು,  ಕೊಪ್ಪಳದ ನಿವೃತ್ತ ಪ್ರಾಂಶುಪಾಲ ಸಿ.ವಿ. ಜಡಿಯವರ್ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಅವರು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.  ಡಿವೈಎಸ್‌ಪಿ ಮತ್ತು ಕೆಳಹಂತದ ಅಧಿಕಾರಿ/ಸಿಬ್ಬಂದಿಗಳ ವಿರುದ್ಧದ ದೂರು ಅರ್ಜಿಗಳನ್ನು ಸಾರ್ವಜನಿಕರು, ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಅಶೋಕ ವೃತ್ತ ಹತ್ತಿರ, ಕೊಪ್ಪಳ ಇವರಲ್ಲಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರ ಆಶ್ರಯ ಯೋಜನೆ ವಂತಿಕೆ ಹಣ ಭರಿಸಲು ಅವಧಿ ವಿಸ್ತರಣೆ.
ಕೊಪ್ಪಳ, ಜು.೨೫ ಕೊಪ್ಪಳ ನಗರಸಭೆ ವ್ಯಾಪ್ತಿಯ ನಗರ ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳು ವಂತಿಕೆ ಹಣವನ್ನು ಭರಿಸಲು ಜು.೨೭ ರಿಂದ ಆಗಸ್ಟ್.೦೫ ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದರ್ ತಿಳಿಸಿದ್ದಾರೆ.
     ನಗರ ಆಶ್ರಯ ಯೋಜನೆ ಅಡಿಯಲ್ಲಿ ೨೦೦೦ ಈಗಾಗಲೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ಫಲಾನುಭವಿಗಳಿಂದ ರೂ.೩೦,೦೦೦ ವಂತಿಕೆ ಹಣವನ್ನು ಭರಿಸುವಂತೆ  ೧೫ ದಿನಗಳ ಕಾಲಾವಕಾಶ ನೀಡಿ ಈ ಹಿಂದೆ ಕೋರಲಾಗಿತ್ತು. ಆದರೆ ಈವರೆಗೂ ಕೆಲವೇ ಜನರು ಮಾತ್ರ ವಂತಿಕೆ ಹಣವನ್ನು ಭರಿಸಿದ್ದಾರೆ. ವಂತಿಕೆ ಹಣವನ್ನು ಭರಿಸದೇ ಉಳಿದುಕೊಂಡಿರುವ ಫಲಾನುಭವಿಗಳಿಗೆ ಈಗ ಮತ್ತೊಮ್ಮೆ ಕಾಲಾವಕಾಶವನ್ನು ನೀಡಲಾಗಿದ್ದು, ವಂತಿಗೆ ಹಣವನ್ನು ಆಗಸ್ಟ್. ೦೫ ರೊಳಗಾಗಿ ಡಿ.ಡಿ ಮೂಲಕ ಭರಿಸಬಹುದಾಗಿದೆ. ನಿಗದಿಪಡಿಸಿದ ಕಾಲಾವಧಿಯ ಒಳಗಾಗಿ ವಂತಿಕೆ ಹಣವನ್ನು ಭರಿಸದೇ ಇದ್ದಲ್ಲಿ ಅಂತಹ ಫಲಾನುಭವಿಗಳ ಹೆಸರನ್ನು ರದ್ದುಪಡಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಪ್ರವಾಸ : ಕುಂದು, ಕೊರತೆ ದೂರು ಆಹ್ವಾನ
ಕೊಪ್ಪಳ, ಜು.೨೫ (ಕರ್ನಾಟಕ ವಾರ್ತೆ) : ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ಅವರು ಜು.೨೭ ಮತ್ತು ಜು.೨೮ ರಂದು ಎರಡು ದಿನಗಳ ಕಾಲ ಕೊಪ್ಪಳ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.
     ಲೋಕಾಯುಕ್ತ ಡಿವೈಎಸ್‌ಪಿ ಅವರು ಜು.೨೭ ರಂದು ಬೆಳಿಗ್ಗೆ ೧೧ ಗಂಟೆಗೆ ಗಂಗಾವತಿ ಪ್ರವಾಸಿ ಮಂದಿರದಲ್ಲಿ, ಜು.೨೮ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೦೧ ಗಂಟೆಯವರೆಗೆ ಕುಷ್ಟಗಿ ಪ್ರವಾಸಿ ಮಂದಿರದಲ್ಲಿ ಹಾಗೂ ಅದೇ ದಿನ ಮಧ್ಯಾಹ್ನ ೦೨ ಗಂಟೆಯಿಂದ ಸಂಜೆ ೦೪ ರವರೆಗೆ ಯಲಬುರ್ಗಾದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳ ದೂರುಗಳನ್ನು ಸ್ವೀಕರಿಸಿ, ಅಹವಾಲುಗಳನ್ನು ಆಲಿಸಲಿದ್ದಾರೆ.
      ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಬಹುದಾಗಿದೆ.  ಅಲ್ಲದೇ ದೂರು ಸಲ್ಲಿಸಲು ಬೇಕಾಗುವ ಪ್ರಪತ್ರ ಸಂಖ್ಯೆ ೧ ಮತ್ತು ೨ ಲಭ್ಯವಿದ್ದು ಸ್ಥಳದಲ್ಲಿಯೇ ಪಡೆಯಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆರಕ್ಷಕ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಕೊಪ್ಪಳ. ದೂರವಾಣಿ ಸಂಖ್ಯೆ : ೦೮೫೩೯-೨೨೦೨೦೦, ೦೮೫೩೯-೨೨೦೫೩೩ ಗಳಿಗೆ ಸಂಪರ್ಕಿಸಬಹು ಎಂದು ಪ್ರಕಟಣೆ ತಿಳಿಸಿದೆ.
ತುಂಗಭದ್ರ ಎಡದಂಡೆ ಮುಖ್ಯ ಕಾಲುವೆ : ಆಗಸ್ಟ್.೦೫ ರವರೆಗೆ ನಿಷೇಧಾಜ್ಞೆ ಜಾರಿ
ಕೊಪ್ಪಳ, ಜು.೨೫ (ಕರ್ನಾಟಕ ವಾರ್ತೆ): ತುಂಗಭದ್ರಾ ಎಡದಂಡೆ ಮುಖ್ಯಕಾಲುವೆಯ ಮೈಲ್ ೦ ರಿಂದ ೭೪ ರವರೆಗೆ ಜು.೨೫ ರಿಂದ ಭಾರತೀಯ ದಂಡ ಪ್ರಕ್ರಿಯೆ ಕಲಂ ೧೪೪ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಆದೇಶ ಹೊರಡಿಸಿದ್ದಾರೆ.
     ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಅಡಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೩೩ ವಿತರಣಾ ಕಾಲುವೆಗಳು ಬರುತ್ತವೆ. ಈ ವಿತರಣಾ ಕಾಲುವೆಗಳ ಹತ್ತಿರ ರೈತರು ಗುಂಪು ಗುಂಪಾಗಿ ಬಂದು ವಿತರಣಾ ಕಾಲುವೆ ಗೇಟುಗಳನ್ನು ಮನಬಂದಂತೆ ತೆರೆದು ನೀರನ್ನು ಹರಿಸಿಕೊಳ್ಳುವ ಸಾಧ್ಯತೆಗಳಿದ್ದು, ಇದರಿಂದ ವಿತರಣಾ ಕಾಲುವೆಯ ತೂಬುಗಳಿಗೆ ಹಾನಿಯಾಗುವ ಸಂಭವವಿರುತ್ತದೆ. ಅಲ್ಲದೆ ಮುಖ್ಯಕಾಲುವೆ ಉದ್ದಕ್ಕೂ ಕಾನೂನು ಭಂಗವಾಗಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವ ಇರುವುದರಿಂದ ಮುಂಜಾಗೃತ ಕ್ರಮವಾಗಿ ತುಂಗಭದ್ರಾ ಎಡದಂಡೆ ಕಾಲುವೆ ೦.೦೦ ಕಿ.ಮೀ ನಿಂದ ೭೪ ಕಿ.ಮೀ ರವರೆಗೆ ಮುಖ್ಯ ಕಾಲುವೆಯ ಎಡ ಮತ್ತು ಬಲದಡಗಳಿಂದ ೧೦೦ ಮೀಟರ್ ಅಂತರದ ವ್ಯಾಪ್ತಿಯಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು, ಜು.೨೫ ರಿಂದ ಆಗಸ್ಟ್.೦೫ ರವರೆಗೆ ದಂಡ ಪ್ರಕ್ರಿಯೆ ಸಂಹಿತೆ ಕಲಂ ೧೪೪ ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
     ಈ ನಿಷೇಧಾಜ್ಞೆಯನ್ವಯ ಎಡ ಮತ್ತು ಬಲ ದಂಡೆಗಳಿಂದ ೧೦೦ ಮೀಟರ್ ವ್ಯಾಪ್ತಿಯಲ್ಲಿ ಎರಡು ಅಥವಾ ಮೂರಕ್ಕಿಂತ ಹೆಚ್ಚು ಜನ ಓಡಾಡುವಂತಿಲ್ಲ. ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ. ಈ ಆದೇಶವು ಮದುವೆ, ಶವ ಸಂಸ್ಕಾರ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Reply