You are here
Home > Koppal News > ಚುನಾವಣೆ : ಅಕ್ರಮ ತಡೆಗೆ ಚೆಕ್‌ಪೋಸ್ಟ್

ಚುನಾವಣೆ : ಅಕ್ರಮ ತಡೆಗೆ ಚೆಕ್‌ಪೋಸ್ಟ್

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೆರೆ ಹೊರೆಯ ಜಿಲ್ಲೆಯಿಂದ ಅಕ್ರಮ ಹಣ, ಸೀರೆ, ಇತ್ಯಾದಿ ಸಾಮಗ್ರಿಗಳ ಸಾಗಾಣಿಕೆ ತಡೆಗಟ್ಟಲು ಜಿಲ್ಲೆಯ ಒಟ್ಟು ೮ ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದ್ದಾರೆ.
  ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಆಮಿಷ ಒಡ್ಡುವ ಸಾಧ್ಯತೆಗಳಿದ್ದು, ಸೀರೆ, ಹಣ ಇತ್ಯಾದಿ ಉಡಗೊರೆಗಳನ್ನು ನೀಡುವ ಮೂಲಕ ಮತದಾರರನ್ನು ಸೆಳೆಯುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ.  ಇಂತಹ ಸಾಮಗ್ರಿಗಳು ನೆರೆ ಹೊರೆಯ ಜಿಲ್ಲೆಗಳಿಂದ ಕೊಪ್ಪಳ ಜಿಲ್ಲೆಯೊಳಗೆ ಸಾಗಾಣಿಕೆಯಾಗುವ ಸಾಧ್ಯತೆಗಳಿರುವುದರಿಂದ, ಇಂತಹ ಅಕ್ರಮಗಳನ್ನು ತಡೆಗಟ್ಟಲು ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯ ಮೂನ್ ಲೈಟ್ ದಾಭಾ ಹತ್ತಿರ, ಬೆಳಗಟ್ಟಿ ಗ್ರಾಮ.  ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಕ್ರಾಸ್, ಹನುಮನಾಳ, ಯಲಬುರ್ಗಾ ತಾಲೂಕಿನ ಸಂಕನೂರು, ಬನ್ನಿಕೊಪ್ಪ, ಯಲಬುರ್ಗಾ ತಾಲೂಕಿನ ಚಿಕ್ಕಜಂತಕಲ್ ಬ್ರಿಡ್ಜ್ ಹಾಗೂ ಚನ್ನಳ್ಳಿ ಕ್ರಾಸ್ ಬಳಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಸದ್ಯದಲ್ಲೇ ಮೊಬೈಲ್ ಚೆಕ್‌ಪೋಸ್ಟ್ ಗಳು ಚುನಾವಣಾ ಅಕ್ರಮ ತಡೆಗಟ್ಟಲು ಕಾರ್ಯ ಪ್ರವೃತ್ತಿಯಾಗಲಿವೆ.
೪೯೯೯ ಸಿಬ್ಬಂದಿ : ಚುನಾವಣೆಗಾಗಿ ಜಿಲ್ಲೆಯಲ್ಲಿ ಒಟ್ಟು ೧೧೩೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸುಗಮ ಮತದಾನ ಪ್ರಕ್ರಿಯೆಗಾಗಿ ಪ್ರತಿ ಮತಗಟ್ಟೆಗೆ ತಲಾ ಒಬ್ಬರು ಪ್ರಿಸೈಡಿಂಗ್ ಆಫೀಸರ್ ಹಾಗೂ ಸಹಾಯಕ ಪ್ರಿಸೈಡಿಂಗ್ ಆಫೀಸರ್, ತಲಾ ಇಬ್ಬರು ಚುನಾವಣಾ ಸಹಾಯಕ ಸಿಬ್ಬಂದಿ ಹಾಗೂ ಒಟ್ಟು ಸಿಬ್ಬಂದಿಗಳಿಗೆ ಶೇ. ೧೦ ರ ಸಂಖ್ಯೆಯಷ್ಟು ಕಾಯ್ದಿರಿಸಿದ ಸಿಬ್ಬಂದಿಯನ್ನು ನೇಮಿಸಲಾಗಿದೆ.  ಜಿಲ್ಲೆಯಲ್ಲಿ ಒಟ್ಟು ೧೧೩೬- ಪ್ರಿಸೈಡಿಂಗ್ ಆಫೀಸರ್, ೧೧೩೬- ಸಹಾಯಕ ಪ್ರಿಸೈಡಿಂಗ್ ಆಫೀಸರ್‍ಸ್, ೨೨೭೨- ಸಹಾಯಕ ಚುನಾವಣಾ ಸಿಬ್ಬಂದಿ ಹಾಗೂ ೪೫೫- ಕಾಯ್ದಿರಿಸಿದ ಸಿಬ್ಬಂದಿ ಸೇರಿದಂತೆ ಒಟ್ಟು ೪೯೯೯ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.  ಕುಷ್ಟಗಿ ಕ್ಷೇತ್ರದ ೨೪೫ ಮತಗಟ್ಟೆಗಳಿಗೆ ಒಟ್ಟು ೧೦೭೮ ಸಿಬ್ಬಂದಿ, ಕನಕಗಿರಿ ಕ್ಷೇತ್ರದ ೨೨೫ ಮತಗಟ್ಟೆಗಳಿಗೆ ೯೯೦ ಸಿಬ್ಬಂದಿ, ಗಂಗಾವತಿ ಕ್ಷೇತ್ರದ ೨೦೦ ಮತಗಟ್ಟೆಗಳಿಗೆ ೮೮೦ ಸಿಬ್ಬಂದಿ, ಯಲಬುರ್ಗಾ ಕ್ಷೇತ್ರದ ೨೨೯ ಮತಗಟ್ಟೆಗಳಿಗೆ ೧೦೦೮ ಸಿಬ್ಬಂದಿ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ೨೩೭ ಮತಗಟ್ಟೆಗಳಿಗೆ ೧೦೪೩ ಹೀಗೆ ಒಟ್ಟು ೪೯೯೯ ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.
ಮಸ್ಟರಿಂಗ್/ಡಿ-ಮಸ್ಟರಿಂಗ್ : ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೇ. ೦೫ ರಂದು ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯ ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.  ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗಂಗಾವತಿಯ ಎಂ.ಎನ್. ಮಾದರಿ ಮಹಿಳಾ ಪದವಿಪೂರ್ವ ಕಾಲೇಜು.  ಗಂಗಾವತಿ ಕ್ಷೇತ್ರ- ಗಂಗಾವತಿಯ ಬಾಲಕರ ಸರ್ಕಾರಿ ಪ.ಪೂ. ಕಾಲೇಜು.  ಯಲಬುರ್ಗಾ- ಯಲಬುರ್ಗಾದ ಸರ್ಕಾರಿ ಪ.ಪೂ. ಕಾಲೇಜು.  ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯ ನಡೆಯಲಿದೆ.  ಮತದಾನ ಮೇ. ೦೫ ರಂದು ಬೆಳಿಗ್ಗೆ ೦೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೂ ನಡೆಯಲಿದೆ.  ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತ ಎಣಿಕಾ ಕಾರ್ಯ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೇ.೦೮ ರಂದು ನಡೆಯಲಿದೆ .

Leave a Reply

Top