ಪ್ರತಿಯೊಬ್ಬರೂ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು:- ಕರಡಿ ಸಂಗಣ್ಣ

ಕೊಪ್ಪಳ: ೧೫ : ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ನಾವೊಂದು ಕ್ಷಣ ಅವಲೋಕಿಸಿದಾಗ ಸಾವಿರಾರು ಸ್ವಾತಂತ್ರ್ಯ ಹೋರಾಟದ ಚಳುವಳಿಗಳು ನಮ್ಮ ಕಣ್ಮುಂದೆ ಸಾಗಿ ಹೋಗಿವೆ. ಸ್ವಾತಂತ್ರ್ಯದಲ್ಲಿ ಸಾವಿರಾರು ದೇಶ ಪ್ರೇಮಿಗಳ ತ್ಯಾಗ, ಬಲಿದಾನಗಳಾಗಿವೆ. ಹಲವಾರು ವೀರಮಾತೆಯರ ಸ್ವಾತಂತ್ರ್ಯ ಅಭಿಮಾನದ ಕಥೆಯಿದೆ. ಸ್ವಾತಂತ್ರ್ಯ ದಿನಾಚರಣೆ ಕೇವಲ ಔಪಚಾರಿಕವಾಗಿರದೆ ಅದರ ದಿವ್ಯ ಉದ್ಧೇಶದತ್ತ ಎಲ್ಲರ ಚಿತ್ತ ಸಾಗಬೇಕು. ಅಲ್ಲದೇ ಪ್ರತಿಯೊಬ್ಬರೂ ರಾಷ್ಟ್ರ ಪ್ರೇಮವನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಪಡೆದಿರುವ ಸ್ವಾತಂತ್ರ್ಯಕ್ಕೂ ಒಂದು ಅರ್ಥ ಬರುತ್ತದೆ ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಕರಡಿ ಸಂಗಣ್ಣ ಅವರು ಹೇಳಿದರು.
ಅವರು ನಗರದ ಕಿನ್ನಾಳ ರಸ್ತೆಯಲ್ಲಿರುವ ಬಿ.ಜಿ.ಪಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಾ ಸ್ವಾತಂತ್ರ್ಯ ಪಡೆದು ೬೬ ವಸಂತಗಳನ್ನು ಕಳೆದರೂ ಗಾಂಧೀಜಿಯವರು ಜಪಿಸುತ್ತಿದ್ದ ಒಬ್ಬ ಸ್ತ್ರೀ ನಡುರಾತ್ರಿ ದೇಶದಲ್ಲಿ ನಿರ್ಭಯವಾಗಿ ಸಂಚರಿಸುವಂತಹ ಅವಕಾಶ ಬಂದಾಗ ಮಾತ್ರ ನಿಜವಾದ ಸ್ವಾತಂತ್ರ್ಯವೆಂಬುದು ಇಂದಿಗೂ ಕನಸಾಗಿ ಉಳಿದಿದೆ ಎಂದರು.
ದೇಶದಲ್ಲಿ ಇಂದು ಸರಿಯಾದ ಆಂತರಿಕ ಭದ್ರತೆ ಇಲ್ಲ, ಗಡಿಭಾಗಗಳಲ್ಲಿ ನೇರೆಯ ರಾಷ್ಟ್ರಗಳ ತಂಟೆ ನಿರಂತರ ನಡೆದಿದ್ದು ಕೇವಲ ಭರವಸೆಗಳನ್ನು ನೀಡುವಲ್ಲಿ ಕೇಂದ್ರದ ಯು.ಪಿ.ಎ ಸರಕಾರ ತೊಡಗಿದೆ. ಭವಿಷ್ಯದಲ್ಲಿ ಉಜ್ವಲ ನವಭಾರತ ನಿರ್ಮಾಣವಾಗಬೇಕಾದರೆ ಅಭಿವೃದ್ಧಿಯ ಹರಿಕಾರ ಹಾಗೂ ಗುಜರಾತ್ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ ಅವರು ಪ್ರಧಾನಿಗಳಾಗಬೇಕೆಂದು ಎಂದು ನುಡಿದರು.
ಕೊಪ್ಪಳಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜ್, ಇಂಜಿನೀಯರಿಂಗ್ ಕಾಲೇಜ್ ಕೂಡಲೇ ಅನುಷ್ಠಾನಗೊಳ್ಳಬೇಕು ಅಲ್ಲದೇ ಹಿಂದಿನ ಸರಕಾರ ಮಂಜೂರಾತಿ ನೀಡಿರುವ ಆಶ್ರಯ ಮನೆಗಳನ್ನು ಗುಣಮಟ್ಟದಲ್ಲಿ ನಿರ್ಮಾಣ ಮಾಡಿ ಅರ್ಹ ಫಲಾನುಭವಿಗಳಿಗೆ ತಲುಪಬೇಕೆಂದು ಅವರು ಹೇಳಿದರು.
ಕಾಡಾ ಮಾಜಿ ಅಧ್ಯಕ್ಷರಾದ ಹೆಚ್.ಗಿರೇಗೌಡ್ರ ಅವರು ಮಾತನಾಡಿ ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ ಅಥವಾ ಮನಸ್ಸಿಗೆ ಬಂದಂತೆ ನಡೆಯುವುದಲ್ಲ ಎಂಬುದನ್ನು ನಮ್ಮ ಇಂದಿನ ಯುವ ಜನತೆ ಅರಿಯಬೇಕು. ಸ್ವಾತಂತ್ರ್ಯ ಸ್ವಾರ್ಥ ಸಾಧನೆಗೆ ಅವಕಾಶ ನೀಡದೆ ಸಹಕಾರ, ಸಹಬಾಳ್ವೆ, ಬ್ರಾತೃತ್ವ ಸಮರಸದ ಬಾಳ್ವೆಗೆ ನಾಂದಿಯಾಗಬೇಕೆಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಡಾ|| ಕೆ.ಜಿ.ಕುಲಕರ್ಣಿ, ಗವಿಸಿದ್ದಪ್ಪ ಕಂದಾರಿ, ಚಂದ್ರು ಕವಲೂರು, ನರಸಿಂಗ್‌ರಾವ್ ಕುಲಕರ್ಣಿ, ಸದಾಶಿವಯ್ಯ ಹಿರೇಮಠ, ರಾಜು ಬಾಕಳೆ, ಸಂಗಮೇಶ ಡಂಬಳ, ವಿರೇಶ ಲಕ್ಷಾಣಿ, ನಗರಸಭೆ ಸದಸ್ಯರಾದ ಜೀನಾಬಾಯಿ ಜಕ್ಕಲಿ, ನಿರ್ಮಲಾ ಕಾರಟಗಿ, ಸುವರ್ಣ ನೀರಲಗಿ, ಚಂದ್ರು ಹಲಗೇರಿ, ರಸೀದ್‌ಸಾಬ ಮಿಟಾಯಿ, ಪತ್ರೆಪ್ಪ ಪಲ್ಲೇದ, ಹಾಲೇಶ ಕಂದಾರಿ, ಮಹೇಶ ಅಂಗಡಿ, ದತ್ತುರಾವ್ ವೈದ್ಯ, ಪುಟ್ಟರಾಜ ಬೇವಿನಹಳ್ಳಿ, ನಾಸೀರ್, ಮುಜಾವರ್, ಬಸವರಾಜ ಬೋವಿ, ಅಮೀತ್, ಗವಿಸಿದ್ದಪ್ಪ ಬೆಲ್ಲದ ಮೊದಲಾದವರು ಉಪಸ್ಥಿತರಿದ್ದರು.

Leave a Reply