fbpx

ಶಾಂತ ಸ್ವಭಾವದ ಶಾಂತಾದೇವಿ ಹಿರೇಮಠ- ಅರುಣಾ ನರೇಂದ್ರ

(ಸಮ್ಮೇಳನಾಧ್ಯಕ್ಷರಾದ ನಿಮಿತ್ಯ) 
ಹಿರಿದಾದ ಸಂಸ್ಕೃತಿ, ಸಾಹಿತ್ಯದ ನೆಲೆಯಾದ ಕೊಪ್ಪಳ ನಾಡಿನ ಪವಿತ್ರ ನೆಲದ ಮಣ್ಣಿನ ಗುಣವನ್ನು ಮೈಗೂಡಿಸಿಕೊಂಡು ಸಾರ್ಥಕ ಬದುಕನ್ನು ಬಾಳುತ್ತಿರುವವರು ಶಾಂತಾದೇವಿ ಹಿರೇಮಠ. ಗೃಹಿಣಿಯಾಗಿ, ಪತಿಗೆ ತಕ್ಕ ಸತಿಯಾಗಿ, ಮಮತೆಯ ತಾಯಿಯಾಗಿ, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಕೊಪ್ಪಳ ಜನತೆಗೆ ಚಿರಪರಿಚಿತರಾಗಿದ್ದಾರೆ. ಹೆಸರಿಗೆ ತಕ್ಕಂತೆ ಶಾಂತಸ್ವಭಾವ, ನಗುಮುಖ, ಎಲ್ಲರೊಂದಿಗೆ ಹೊಂದಿಕೊಳ್ಳುವ ಮನೋಭಾವ ಪ್ರೀತಿಯನ್ನು ತುಂಬಿಕೊಂಡ ವಿಶಾಲ ಹೃದಯ ನನಗೆ ಬಹಳ ಮೆಚ್ಚಿಕೆಯಾಗಿದೆ. ನನಗೆ ಬಿಡುವು ಸಿಕ್ಕಾಗಲೆಲ್ಲಾ ಅವರ ಮನೆಗೆ ಹೋಗಿ ಅವರೊಂದಿಗೆ ಸಾಹಿತ್ಯದ ಬಗೆಗೆ ಮಾತನಾಡುತ್ತಾ ಸಮಯ ಕಳೆಯುತ್ತಿರುತ್ತೇನೆ. ನನ್ನ ಬರವಣಿಗೆ, ಪುಸ್ತಕಗಳ ಬಗೆಗೆ ಬಹಳ ಮೆಚ್ಚಿಕೊಂಡಿದ್ದಾರೆ ನನಗೆ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಾಗ ಫೋನ್ ಮೂಲಕ ನನ್ನೊಂದಿಗೆ ಮಾತನಾಡಿ ಸಂತೋಷ ಹಂಚಿಕೊಂಡರು.
     ಕೊಪ್ಪಳದ ಅಕ್ಕಮಹಾದೇವಿ ಮಹಿಳಾ ಮಂಡಲದ ಸದಸ್ಯೆಯರು ಸೇರಿ ಕಲ್ಯಾಣ ನಿರ್ಗಮನ ನಾಟಕ ಮಾಡಿದೆವು. ಅದರಲ್ಲಿ ನಾನು ಅಲ್ಲಮ ಪ್ರಭುವಿನ ಪಾತ್ರ ಮಾಡಿದ್ದೆ. ಈ ನಾಟಕವನ್ನು ನೋಡಲು ಶಾಂತಾದೇವಿಯವರೂ ಬಂದಿದ್ದರು. ನನ್ನ ಮಾವನವರಾದ ಎಚ್.ಎಸ್.ಪಾಟೀಲರು ನಮ್ಮ ನಾಟಕವನ್ನು ನೋಡಿ ಶಾಂತಾದೇವಿ ಹಿರೇಮಠರು ತಮ್ಮ ಶಾಲಾ ದಿನಗಳಲ್ಲಿ ನಾಟಕಗಳನ್ನು ಏಕಪಾತ್ರಾಭಿನಯಗಳನ್ನು ಮಾಡುತ್ತಿದ್ದರು. ಇವರ ಅಕ್ಕ ಲಕ್ಷ್ಮಿದೇವಿಯವರು ನಾಟಕ ಕಲಿಸಿ ಆಡಿಸುತ್ತಿದ್ದರು. ಶಾಂತಾದೇವಿಯವರು ಗಂಡು ಪಾತ್ರ ಮಾಡುತ್ತಿದ್ದರು. ಪ್ಯಾಂಟು, ಷರ್ಟ್ ಹಾಕಿಕೊಂಡು ಥೇಟ್ ಗಂಡು ಮಗನಂತೆ ಕಾಣುತ್ತಿದ್ದರು. ತುಂಬಾ ಚೆನ್ನಾಗಿ ಪಾತ್ರ ಮಾಡುತ್ತಿದ್ದರು ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು. ಶಾಂತಾದೇವಿಯವರ ಬಗೆಗೆ ಹೆಮ್ಮೆಯೂ ಮೂಡಿತು.
     ಒಬ್ಬ ವ್ಯಕ್ತಿ ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿ ಜನಮನದಲ್ಲಿ ನೆಲೆ ನಿಲ್ಲಬೇಕಾದರೆ ಆ ವ್ಯಕ್ತಿಮಾಡಿದ ಸಾಧನೆಯೆ ಬಹುಮುಖ್ಯವೆನಿಸುತ್ತದೆ. ಉತ್ತಮ ಸಾಧನೆಗಳ ಮೂಲಕ ಶ್ರೇಷ್ಠ ವ್ಯಕ್ತಿಯಾಗಿ ಬಾಳಬೇಕಾದರೆ ಆ ವ್ಯಕ್ತಿಯ ಕೌಟುಂಬಿಕ ವಾತಾವರಣ ನೆರೆ, ಹೊರೆ, ಉತ್ತಮ ಪರಿಸರ ಇವೆಲ್ಲವುಗಳೂ ಕೂಡ ಪರಿಗಣನೆಗೆ ಬರುತ್ತವೆ.
     ಶಾಂತಾದೇವಿ ಹಿರೇಮಠರು ಆಗಾಗ ಹೇಳುತ್ತಿರುತ್ತಾರೆ ಕೊಪ್ಪಳಕ್ಕೂ ನನಗೂ ಅವಿನಾಭಾವ ಸಂಬಂಧವಿದೆ ಎಂದು ಶಾಂತಾದೇವಿಯವರ ಅಕ್ಕ ಲಕ್ಷ್ಮಿದೇವಿ ಜಂಗಮ ಶೆಟ್ಟರು ಕೊಪ್ಪಳದ ಬಾಲಕಿಯರ ಸರಕಾರಿ ಮಿಡ್ಲ ಸ್ಕೂಲಿನ ಗ್ರ್ಯಾಜುಯೆಟ್ ಹೆಡ್‌ಮಾಸ್ಟರ್ (ಪದವೀಧರ ಮುಖ್ಯೋಪಾಧ್ಯಾಯಿನಿ) ರಾಗಿದ್ದರು. ಆಗ ಕೊಪ್ಪಳದಲ್ಲಿ ಏಕಮಾತ್ರ ಬಿ.ಎ. ಪದವೀಧರೆಯಾಗಿದ್ದರು. ಅಕ್ಕನೊಡನೆ ಕೊಪ್ಪಳಕ್ಕೆ ಬಂದಿದ್ದ ಶಾಂತಾ ಅವರು ೫, ೬ ಮತ್ತು ೭ ನೇ ತರಗತಿಗಳನ್ನು ಕೊಪ್ಪಳದಲ್ಲಿಯೇ ಮುಗಿಸಿದರು.
     ಲಕ್ಷ್ಮಿದೇವಿ ಜಂಗಮಶೆಟ್ಟರು ರಾಯಚೂರಿನ ಕವಿ ಶಾಂತರಸ ಅವರೊಡನೆ ಮದುವೆಯಾದರು. ಅವರ ಹಿರಿಯ ಮಗಳು ಕವಿಯತ್ರಿ ಮುಕ್ತಾಯಕ್ಕ ಜನಿಸಿದ್ದು ಕೊಪ್ಪಳದಲ್ಲಿಯೆ. ಕೊಪ್ಪಳ ನಾಡು ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿಯ ಬೀಡು, ಕರ್ನಾಟಕ ಏಕೀಕರಣದ ಉದ್ದೇಶದಿಂದ ದಸರಾ ನಾಡಹಬ್ಬ ೯ ದಿನಗಳವರೆಗೆ ರಾಷ್ಟ್ರೀಯ ಹಬ್ಬಂದಂತೆ ಮಹೇಶ್ವರ ದೇವಸ್ಥಾನದಲ್ಲಿದ್ದ ವೀರಶೈವ ಪ್ರಗತಿಶೀಲ ಸಂಘದ ಮೂಲಕ ಯಜಮಾನ್ ಬಳ್ಳೊಳ್ಳಿ ವೀರಭದ್ರಪ್ಪನವರ ಜಿನ್ನಿಂಗ ಫ್ಯಾಕ್ಟ್ರಿಯಲ್ಲಿ ನಡೆಯುತ್ತಿತ್ತು. ಕೋಟೆಯ ವೆಂಕಟೇಶ್ವರ ದೇವಸ್ಥಾನದ ಗಜಾನನ ವಾಚನಾಲಯದ ಆಶ್ರಯದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತಿತ್ತು. ನಾಡಹಬ್ಬ ಕಾರ್ಯಕ್ರಮಕ್ಕಾಗಿ ಪ್ರಸಿದ್ದ ಸಾಹಿತಿಗಳಾದ ಶಿವರಾಮ ಕಾರಂತರು, ಬಳ್ಳಾರಿ ಬೀಚಿಯವರು, ಸರೋಜಿನಿ ಮಹಿಷಿಯವರು ಮುಂತಾದವರನ್ನು ಕರೆಯಿಸುತ್ತಿದ್ದರು. ಶಾಂತಾದೇವಿಯವರ ಮನೆಯ ಎದುರಿನ ಸಾಲಿನಲ್ಲಿದ್ದ ಇನಾಮತಿಗೌಡರ ಮನೆಯಲ್ಲಿ ಇವರೆಲ್ಲ ಇಳಿದುಕೊಳ್ಳುತ್ತಿದ್ದರು. ಚೂಟಿಯಾಗಿದ್ದ ಶಾಂತಾ ಅವರ ಮನೆಗೆ ಹೋಗಿ, ಬಂದಿರುವ ಅತಿಥಿಗಳಿಗೆ ಸಾಹಿತಿಗಳಿಗೆ ಉಪಹಾರ ಸರಬರಾಜು ಮಾಡಿ, ನಿರ್ಭೀತಿಯಿಂದ ಮಾತನಾಡಿ ಹಾಸ್ಯ ಪೂರಿತ ಮಾತುಗಳಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸುತ್ತಿದ್ದರು.
     ಕೆಲವು ವರ್ಷಗಳ ನಂತರ ಅಕ್ಕ ಲಕ್ಷ್ಮಿದೇವಿಯವರೊಂದಿಗೆ ಶಾಂತಾ ಅವರು ರಾಯಚೂರಿಗೆ ಹೋಗಿ ಅಕ್ಕನೊಂದಿಗೆ ಇರಬೇಕಾಯಿತು ಭಾವ ಶಾಂತರಸರ ಸಾಹಿತ್ಯ ರಚನೆಯ ಪ್ರಭಾವವೂ ಇವರ ಮೇಲಾಯಿತು. ಸಾಹಿತಿಗಳಾದ ಡಾ|| ಕೆ. ಮುದ್ದಣ್ಣ, ಚಂದ್ರಕಾಂತ ಕುಸನೂರು, ದೇವೇಂದ್ರಕುಮಾರ ಹಕಾರಿ, ಚೆನ್ನಣ್ಣ ವಾಲೀಕಾರ, ಪೂಜ್ಯ ಜಯದೇವಿ ತಾಯಿ ಲಗಾಡೆ ಮುಂತಾದ ಹಿರಿಯ ಸಾಹಿತಿಗಳಲ್ಲದೇ ಚೆನ್ನಬಸವಪ್ಪ ಬೆಟ್ಟದೂರು, ಸಿದ್ದರಾಮ ಜಂಬಲದಿನ್ನಿ, ಶಂಕರಗೌಡ ಬೆಟ್ಟದೂರು (ಚಿತ್ರಕಲಾವಿದರು) ಮುಂತಾದವರು ಶಾಂತರಸರ ಬಳಿ ಬರುತ್ತಿದ್ದರು. ಸಾಹಿತ್ಯಿಕ ಚರ್ಚೆ, ಮಾತುಕತೆಗಳು ನಡೆಯುತ್ತಿದ್ದವು. ಓದಲು ಸಾಕಷ್ಟು ಪುಸ್ತಕಗಳೂ ದೊರೆಯುತ್ತಿದ್ದವು. ಇಂಥ ಸಾಹಿತ್ಯಿಕ ವಾತಾವರಣದ ಪ್ರಭಾವ ಶಾಂತಾದೇವಿ ಹಿರೇಮಠರ ಮೇಲೆ ಪ್ರಭಾವ ಬೀರಿ ಸಾಹಿತ್ಯ ರಚೆನೆಗೆ ಕಾರಣವಾಯಿತು.
     ೧೯೬೧ ರಲ್ಲಿ ಎಚ್.ಎಸ್.ಸಿ. ಪಾಸಾದರು ಸರಕಾರಿ ಶಿಕ್ಷಕಿಯಾಗಿ ಸೇರಿದರು. ಕುಷ್ಟಗಿಯ ಕವಿಯಾಗಿದ್ದ ಶ್ರೀ ಜಿ.ಆರ್. ಹಿರೇಮಠರೊಂದಿಗೆ ಇವರ ಮದುವೆಯಾಯಿತು ಮದುವೆಯಲ್ಲಿ ಗೋಣಿಚೀಲ ತುಂಬುವಷ್ಟು ಪುಸ್ತಕಗಳು ಉಡುಗೊರೆಯಾಗಿ ಬಂದಿದ್ದೊಂದು ವಿಶೇಷ.
     ೧೯೭೫ ರಲ್ಲಿ ಪತಿ ಜಿ.ಆರ್. ಹಿರೇಮಠರಿಗೆ ಕೊಪ್ಪಳಕ್ಕೆ ವರ್ಗಾವಣೆಯಾಯಿತು. ರಾಯಚೂರಿನಿಂದ ಕೊಪ್ಪಳಕ್ಕೆ ಬಂದರು ಸಿದ್ದರಾಮ ಮತ್ತು ಅಲ್ಲಮಪ್ರಭು ಇಬ್ಬರು ಮಕ್ಕಳು ಸಿದ್ದರಾಮ ಹಿರೇಮಠರು ಕೂಡ ಕವಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕೂಡ್ಲಿಗಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
     ಶಾಂತಾದೇವಿಯವರು ತಮ್ಮ ಪತಿ ಹಾಗೂ ತಾವು ಬರೆದ ಕವನಗಳನ್ನು ಸೆರಿಸಿ  ನೀನೇ ನಾನು ನಾನೇ ನೀನು ಎಂಬ ಕವನಸಂಕಲನ ಮತ್ತು ಶಾಂತಾದೇವಿಯವರ ಸ್ವತಂತ್ರ ಕೃತಿ ನೀನಾರು ಚಲುವೆ ಕವನಸಂಕಲನ ಮಾತು  ಕತೆ ಹರಟೆ (ನಗೆಬರಹ) ನೆನಪಿನ ಬುತ್ತಿ ಎಂಬ ಜೀವನಾನುಭವದ ಬುತ್ತಿಯನ್ನು ಕಟ್ಟಿಕೊಟ್ಟಿದ್ದಾರೆ.
     ತಮ್ಮ ಸಾಹಿತ್ಯಕ್ಕೆ ಕೊಪ್ಪಳದ ಸಾಹಿತ್ಯ ಬಳಗವೇ ಮೂಲ ಪ್ರೇರಣೆ ಎಂದು ಎದೆತುಂಬಿ ಹೇಳುವ ಶಾಂತಾದೇವಿಯವರ ಕೃತಿಗಳಿಗೆ ಹಲವಾರು ಪುಸ್ಕಾರಗಳು ದೊರೆತಿವೆ ಇಂತಹ ಹಿರಿಯ ಸಾಹಿತಿ ಅದರಲ್ಲೂ ಮಹಿಳಾ ಸಾಹಿತಿಗೆ ಕೊಪ್ಪಳ ತಾಲೂಕು ೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ದೊರೆತಿರುವುದು ಹೆಮ್ಮೆಯ ವಿಷಯ ಹಾಗೂ ಮಹಿಳೆಯರಿಗೆ ಸಂದಿರುವ ಗೌರವವೂ ಆಗಿದೆ.
Please follow and like us:
error

Leave a Reply

error: Content is protected !!