ಬಳ್ಳಾರಿ ಜಿಲ್ಲಾ ಯುವ ಸಾಂಸ್ಕೃತಿಕೋತ್ಸವ-೨೦೧೫

ಹೊಸಪೇಟೆ: ಸರ್ಕಾರ ಕಲೆಯ

ನ್ನು ಉಳಿಸಲು ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಕಲಾ ಪ್ರದರ್ಶನಕ್ಕೆ ಗೌರವ ಧನವನ್ನು ನೀಡುವ ಜೊತೆಗೆ ಪ್ರಯಾಣ ಭತ್ಯೆಯನ್ನು ನೀಡುವ ಮೂಲಕ ಕಲೆಯನ್ನು ಪ್ರದರ್ಶಿಸಲು ಸಹಕಾರ ನೀಡಿದಾಗ ಮಾತ್ರ ಕಲಾವಿದರ ಕಲೆ ಉಳಿಯಲು ಸಾಧ್ಯವಾಗಲಿದೆ ಎಂದು ಮಂಡಲ ಪಂಚಾಯಿತಿ ಮಾಜಿ ಪ್ರದಾನ ಹಾಗೂ ಉದ್ಯಮಿ ಎಂ. ವಿಶ್ವನಾಥ ಶೆಟ್ಟಿ ಹೇಳಿದರು.

ಮರಿಯಮ್ಮನಹಳ್ಳಿ ದುರ್ಗಾದಾಸ್ ಕಲಾಮಂದಿರದಲ್ಲಿ ಬಳ್ಳಾರಿಯ ನೆಹರು ಯುವ ಕೇಂದ್ರ ಮತ್ತು ಮರಿಯಮ್ಮನಹಳ್ಳಿಯ ಲಲಿತ ಕಲಾರಂಗದ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಬಳ್ಳಾರಿ ಜಿಲ್ಲಾ ಯುವ ಸಾಂಸ್ಕೃತಿಕೋತ್ಸವ-೨೦೧೫ ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಒಂದು ಊರಿನ ಕೀರ್ತಿ ಹೆಚ್ಚಾಗಬೇಕಾಗದರೆ ಆ ಊರಿನಲ್ಲಿರುವ ಕಲೆ ಮತ್ತು ಕಲಾವಿದರಿಂದಲೇ ಊರಿನ ಕೀರ್ತಿ ಹೆಚ್ಚಾಗುತ್ತದೆ. ಮರಿಯಮ್ಮನಹಳ್ಳಿಯಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಈ ಊರಲ್ಲಿ ತಿಂಗಳಗಟ್ಟಲೆ ನಾಟಕಗಳ ಪ್ರದರ್ಶನಗಳು ನಡೆಯುತ್ತವೆ. ಸಾಂಸ್ಕೃತಿಕ ಕಲೆಗಳಿಗೆ ಸದಾ ಬೆಲೆ ನೀಡುತ್ತಾರೆ. ಮರಿಯಮ್ಮನಹಳ್ಳಿಯ ಸಾಕಷ್ಟು ಕಲಾವಿದರು ನಾಡಿನಾದ್ಯಂತ ಕೀರ್ತಿಯನ್ನು ಪಡೆದುಕೊಂಡಿದ್ದಾರೆ. ಚಲನಚಿತ್ರ ರಂಗಕ್ಕೂ ಮತ್ತು ಕಿರುಚಿತ್ರಗಳಿಗೆ ಮತ್ತು ನೀನಾಸಂ, ಸಾಣೇಹಳ್ಳಿ ಶಿವಸಂಚಾರ ಸೇರಿದಂತೆ ನಾಡಿನ ಪ್ರತಿಷ್ಠಿತ ಕಲಾ ಸಂಸ್ಥೆಗಳಲ್ಲಿ ಮರಿಯಮ್ಮನಹಳ್ಳಿಯ ಕಲಾವಿದರ ಕೊಡುಗೆ ಆಪಾರವಾಗಿದೆ. ಇಂಥಹ ಕೀರ್ತಿಗೆ ಪಾತ್ರರಾಗಿರುವ ಲಲಿತ ಕಲಾರಂಗವು ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪ್ರತಿಯೊಬ್ಬರಲ್ಲಿಯೂ ಸಾಂಸ್ಕೃತಿಕ ಪ್ರಜ್ಞೆ ಮತ್ತು ಜಾಗೃತಿಯನ್ನು ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಸ್ಥಳೀಯ ವೈದ್ಯ ಡಾ. ಜಿ.ಎಂ. ಸೋಮೇಶ್ವರ ಮುಖ್ಯಅತಿಥಿಗಳಾಗಿ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಲಾವಿದರು ಸದಾ ಕ್ರಿಯಾಶೀಲ ವ್ಯಕ್ತಿಗಳಾಗಿ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕಾರರಾಗಿದ್ದಾರೆ. ಆದರೆ ಇತ್ತಿಚಿನ ದಿನಗಳಲ್ಲಿ ಕಲೆಗೆ ಮತ್ತು ಕಲಾವಿದರಿಗೆ ಸರ್ಕಾರದಿಂದ ಸರಿಯಾದ ಪ್ರೋತ್ಸಾಹವಿಲ್ಲದ ಕಾರಣ ಕಲಾವಿದರು ತಮ್ಮ ಕಲೆಯಲ್ಲಿ ಹೆಚ್ಚಾಗಿ ತೊಡಗಿಕೊಳ್ಳದೇ ದಿನದ ಬದುಕು ಸಾಗಿಸುವ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಇದು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಕಲಾವಿದರಲ್ಲಿರುವ ಕಲೆ ಉಳಿಸಿಕೊಳ್ಳಲು ಮುಂದಾಗಬೇಕು. ಕಲಾವಿದರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಅಗತ್ಯವಾಗಿದೆ ಎಂದರು. ರಂಗತಜ್ಞ ಮ.ಬ. ಸೋಮಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಸರ್ಕಾರದ ಕಲೋತ್ಸವ ಹಾಗೂ ಯುವಜನೋತ್ಸವ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಬ್ಯಾನರ್ ಮತ್ತು ಕರಪತ್ರಗಳಿಗೆ ಮಾತ್ರ ಸೀಮಿತವಾಗದೆ, ಕಲೆಯನ್ನು ಪ್ರದರ್ಶಿಸುವ ಕಲಾವಿದರಿಗೆ ಒಂದು ದಿನದ ಭತ್ಯ ಮತ್ತು ಪ್ರಯಾಣ ಭತ್ಯೆಯನ್ನು ನೀಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಆದರೆ ನೆಹರು ಯುವ ಕೇಂದ್ರದವರು ಹಮ್ಮಿಕೊಂಡಿರುವ ಜಿಲ್ಲಾ ಯುವ ಸಾಂಸ್ಕೃತಿಕೋತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಜೊತೆಗೆ ಕಲಾವಿದರಿಗೆ ದಿನ ಭತ್ಯೆ ಮತ್ತು ಪ್ರಯಾಣ ಭತ್ಯೆ ನೀಡುವ ಮೂಲಕ ಅವರಲ್ಲಿರುವ ಕಲೆಯನ್ನು ಪ್ರದರ್ಶಿಸಲು ಪ್ರೋತ್ಸಾಹ ನೀಡಬೇಕು. ಕೂಲಿಕಾರರಲ್ಲಿಯೇ ಹೆಚ್ಚಿನ ಕಲೆ ಉಳಿದುಕೊಂಡಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು. ಲಲಿತ ಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ, ಬಳ್ಳಾರಿ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಡಿ. ಪ್ರಕಾಶ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಕಲಾವಿದ ಎಲ್. ಉದಯ್ ಪ್ರಾರ್ಥಿಸಿದರು. ಲಲಿತ ಕಲಾರಂಗದ ಸಹ ಕಾರ್ಯದರ್ಶಿ ಸಿ.ಕೆ. ನಾಗರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಎಂ.ಎಸ್. ಮೃತ್ಯುಂಜಯ ನಿರೂಪಿಸಿ, ವಂದಿಸಿದರು. 
Please follow and like us:
error

Related posts

Leave a Comment