ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆಗೆ ತೀವ್ರ ಸ್ಪಂದನೆ ನೀಡಿ- ಶಿವರಾಜ ಎಸ್. ತಂಗಡಗಿ.

ಕೊಪ್ಪಳ ಮಾ. ೦೮  ಜಿಲ್ಲೆಯಲ್ಲಿ ಈಗಾಗಲೆ ಬೇಸಿಗೆ ಆರಂಭಗೊಂಡಿದ್ದು, ನಗರ, ಪಟ್ಟಣ, ಗ್ರಾಮೀಣ ಸೇರಿದಂತೆ ಜಿಲ್ಲೆಯ ಯಾವುದೇ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆ ತಲೆದೋರದಂತೆ, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಈಗಲೇ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
     ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ, ಬರ ಪರಿಹಾರ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಡಿಯುವ ನೀರು : ಸದ್ಯ ಬೇಸಿಗೆ ಆರಂಭಗೊಂಡಿದ್ದು, ಜಿಲ್ಲೆಯ ಎಲ್ಲೆಡೆ ಅಂತರ್ಜಲ ಮಟ್ಟ ಕುಸಿದು, ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಬೋರ್‌ವೆಲ್ ನೀರನ್ನು ಅವಲಂಬಿತವಾಗಿರುವ ಜನರು ತೀವ್ರ ತೊಂದರೆ ಎದುರಿಸುವ ಸಾಧ್ಯತೆಗಳಿರುತ್ತವೆ.  ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುವಂತೆ ಪ್ರತಿ ತಾಲೂಕು ಮಟ್ಟದಲ್ಲಿಯೂ ಸಹಾಯವಾಣಿಯನ್ನು ಪ್ರಾರಂಭಿಸಿ, ದೂರವಾಣಿ ಕರೆಗಳಿಗೆ ಕೂಡಲೆ ಸ್ಪಂದಿಸುವಂತಹ ಕಾರ್ಯ ಆರಂಭವಾಗಬೇಕು.  ಈಗಾಗಲೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಬಹುದಾದ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಿದ್ಧಪಡಿಸಿದ್ದು, ಇದರನ್ವಯ, ಅಂತಹ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಲು ಹೊಸ ಬೋರ್‌ವೆಲ್ ಕೊರೆಯಿಸುವುದು, ಅಥವಾ ಖಾಸಗಿ ಬೋರ್‌ವೆಲ್‌ಗಳ ನೀರನ್ನು ಪಾವತಿ ಆಧಾರದಲ್ಲಿ ಪಡೆಯುವುದು ಸೇರಿದಂತೆ ಪರ್ಯಾಯ ಯೋಜನೆಗಳಿಗೆ ಕ್ರಿಯಾ ಯೋಜನೆ ರೂಪಿಸಿ, ಅದಕ್ಕೆ ಅನುಮೋದನೆ ಪಡೆದು, ಶೀಘ್ರ ಕಾರ್ಯರೂಪಕ್ಕೆ ತರಬೇಕು.  ತುರ್ತು ಕುಡಿಯುವ ನೀರು ಯೋಜನೆಗಳಿಗೆ ಸರ್ಕಾರ ಈಗಾಗಲೆ ಜಿಲ್ಲಾ ಪಂಚಾಯತಿಗೆ ೦೨ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.  ಅಲ್ಲದೆ ಜಿಲ್ಲಾಧಿಕಾರಿಗಳೂ ಸಹ ಪ್ರತಿ ತಾಲೂಕಿಗೆ ತಲಾ ೫೦ ಲಕ್ಷ ರೂ. ಗಳನ್ನು ಇದೇ ಉದ್ದೇಶಕ್ಕೆ ಬಿಡುಗಡೆ ಮಾಡಿದ್ದಾರೆ.  ಉಳಿದಂತೆ ಸರ್ಕಾರವೂ ಸಹ ಪ್ರತಿ ತಾಲೂಕಿಗೆ ತಲಾ ೫೦ ಲಕ್ಷ ರೂ. ಗಳ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲಿದೆ.  ಅನುಷ್ಠಾನ ಹಂತದಲ್ಲಿರುವ ಕುಡಿಯುವ ನೀರು ಯೋಜನೆ ಕಾಮಗಾರಿ, ಪೈಪ್‌ಲೈನ್, ಮೋಟಾರ್ ಅಳವಡಿಕೆ, ವಿದ್ಯುತ್ ಸಂಪರ್ಕ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ನೀರು ಪೂರೈಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕುಷ್ಟಗಿ ತಾಲೂಕಿನಲ್ಲಿ ಗುಡ್ಡದ ದೇವಲಾಪುರ, ಬಿಳೇಕಲ್ ಸೇರಿದಂತೆ ೨೯ ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ.  ಅದೇ ರೀತಿ ಯಲಬುರ್ಗಾ ತಾಲೂಕಿನಲ್ಲಿ ೦೯ ಗ್ರಾಮಗಳನ್ನು ತೀವ್ರ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿದೆ.  ಗಂಗಾವತಿ ತಾಲೂಕಿನಲ್ಲಿ ೫೩ ಸಮಸ್ಯಾತ್ಮಕ ಗ್ರಾಮಗಳಿವೆ.  ಕೊಪ್ಪಳ ತಾಲೂಕಿನಲ್ಲಿ ೨೩ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿದ್ದು, ಸಮಸ್ಯಾತ್ಮಕ ಗ್ರಾಮಗಳಲ್ಲಿನ ನೀರು ಪೂರೈಕೆ ಸಮಸ್ಯೆ ನೀಗಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಸಂಪರ್ಕ ಬಾಕಿ ಇರುವ ಯಾವುದೇ ಯೋಜನೆಗಳಿಗೆ ೦೮ ದಿನಗಳ ಒಳಗಾಗಿ ವಿದ್ಯುತ್ ಸಂಪರ್ಕ ನೀಡಬೇಕು.  ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸಿಲ್ದಾರರು, ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅವಲೋಕನ ನಡೆಸಬೇಕು.  ಕೊಪ್ಪಳ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿಯೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉದ್ಯೋಗ ನೀಡಿ : ಈ ಬಾರಿ ರಾಜ್ಯದೆಲ್ಲೆಡೆ ಮಳೆಯ ಕೊರತೆ ಕಂಡುಬಂದಿದ್ದರಿಂದ, ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿದಿದೆ.  ಇದರಿಂದಾಗಿ ಕೇವಲ ಒಂದು ಬೆಳೆ ಮಾತ್ರ ಬಂದಿದ್ದು, ಎರಡನೆ ಬೆಳೆಗೆ ಅವಕಾಶವಿಲ್ಲದಿರುವುದರಿಂದ ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ತಾಲೂಕಿನಲ್ಲಿ ಬಹಳಷ್ಟು ಕೂಲಿಕಾರರಿಗೆ ಕೆಲಸ ಇಲ್ಲದಂತಾಗಿದೆ.  ಅದೇ ರೀತಿ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬೆಳೆ ವಿಫಲವಾಗಿ, ಕೃಷಿ ಕಾರ್ಮಿಕರಿಗೆ ಸದ್ಯ ಉದ್ಯೋಗದ ತೀವ್ರ ಅಗತ್ಯವಿದೆ.  ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವುದು, ಪ್ರತಿ ಗ್ರಾಮದಲ್ಲಿ ಕನಿಷ್ಟ ೦೨ ಸಿ.ಸಿ. ರಸ್ತೆ ನಿರ್ಮಿಸುವುದು ಸೇರಿದಂತೆ ಹೆಚ್ಚು ಉದ್ಯೋಗ ನೀಡಿದಲ್ಲಿ, ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಿದಂತಾಗುತ್ತದೆ.  ಅದೇ ರೀತಿ ಯೋಜನೆಯಡಿ ಕೆಲಸ ಮಾಡಿದವರಿಗೆ ವೇತನ ಪಾವತಿ ಕಾರ್ಯ ತ್ವರಿತವಾಗಿ ಆಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೇವು ಸಂಗ್ರಹಿಸಿ : ಜಿಲ್ಲೆಯಲ್ಲಿ ಈ ಬಾರಿ ಮಳೆ ವಿಫಲವಾಗಿದ್ದರಿಂದ, ಜಾನುವಾರುಗಳಿಗೆ ಮೇವಿನ ಕೊರತೆಯಾಗುವ ಸಾಧ್ಯತೆಗಳಿವೆ.  ಜಿಲ್ಲೆಯಲ್ಲಿ ಸದ್ಯ ಆರು ವಾರಕ್ಕೆ ಆಗುವಷ್ಟು ಮಾತ್ರ ಮೇವು ಸಂಗ್ರಹವಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.  ಜಿಲ್ಲೆಯಲ್ಲಿ ಈಗಿನಿಂದಲೇ ಪ್ರತಿ ತಾಲೂಕಿನಲ್ಲಿ ಒಂದು ಮೇವು ನಿಧಿಯನ್ನು ಸ್ಥಾಪಿಸಿ, ಮೇವು ಸಂಗ್ರಹಿಸಲು ಅಧಿಕಾರಿಗಳು ಮುಂದಾಗಬೇಕು.  ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ, ಮೇವು ಪೂರೈಕೆಯ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವರು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಈಗಾಗಲೆ ಮೇವು ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೇವು ನಿಧಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.  ವಾರದೊಳಗೆ ಪ್ರತಿ ತಾಲೂಕಿನಲ್ಲಿ ಒಂದು ಮೇವು ನಿಧಿ ಪ್ರಾರಂಭವಾಗಲಿದೆ ಎಂದರು.
ಬೆಳೆ ಹಾನಿ ಪರಿಹಾರ : ಜಿಲ್ಲೆಯಲ್ಲಿ ಮುಂಗಾರು ಮಳೆ ವಿಫಲಗೊಂಡಿದ್ದರಿಂದ, ನಷ್ಟ ಅನುಭವಿಸಿದ ರೈತರಿಗೆ ಇನ್‌ಪುಟ್ ಸಬ್ಸಿಡಿ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿದೆ.  ಜಿಲ್ಲೆಗೆ ೬೪. ೪೪ ಕೋಟಿ ರೂ. ಅನುದಾನವನ್ನು ಸರ್ಕಾರ ಒದಗಿಸಿದ್ದು, ಒಟ್ಟು ೧೬೫೦೭೭ ರೈತರಿಗೆ ಪರಿಹಾರ ವಿತರಿಸಬೇಕಾಗಿದೆ.  ಮಾರ್ಚ್ ೧೧ ರೊಳಗಾಗಿ ಎಲ್ಲ ರೈತರಿಗೆ ಪರಿಹಾರ ಹಣ ಪಾವತಿಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಈಗಾಗಲೆ ೩೮. ೬೯ ಕೋಟಿ ರೂ.ಗಳನ್ನು ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗಳಿಗೆ ಜಮ ಮಾಡಿದ್ದು, ಶೇ. ೬೦. ೫ ರಷ್ಟು ವಿತರಣೆಯಾಗಿದೆ.  ೬೯೫೬೦ ರೈತರಿಗೆ ಪರಿಹಾರ ವಿತರಿಸುವುದು ಬಾಕಿ ಇದ್ದು, ಜಂಟಿ ಬ್ಯಾಂಕ್ ಖಾತೆ ಹೊಂದಿರುವುದು, ಮೃತ ರೈತರ ಹೆಸರಿನಲ್ಲಿ ಜಮೀನಿದ್ದು, ಮಕ್ಕಳ ಹೆಸರಿಗೆ ಮುಟೇಷನ್ ಆಗದೆ ಇರುವುದು, ಕೆಲವರು ಊರಲ್ಲಿ ಇಲ್ಲದಿರುವುದು, ಹೀಗೆ ವಿವಿಧ ಕಾರಣಗಳಿಂದ ಪರಿಹಾರ ವಿತರಣೆ ಕಾರ್ಯ ಬಾಕಿ ಉಳಿದಿದೆ.  ಶೀಘ್ರದಲ್ಲಿಯೇ ಪರಿಹಾರ ಹಣ ವಿತರಿಸಲಾಗುವುದು ಎಂದರು.
ಹಿಂಗಾರು ಕೂಡ ವಿಫಲ : ಸಭೆಯಲ್ಲಿ ಭಾಗವಹಿಸಿದ್ದ ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಉತ್ಸಾಹದಲ್ಲಿ ಬಿತ್ತನೆ ಮಾಡಿದರು.  ಆದರೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಮಳೆ ಸಂಪೂರ್ಣ ಬಾರದಿದ್ದರಿಂದ, ಜಿಲ್ಲೆಯಲ್ಲಿ ಬಿತ್ತನೆಯಾದ ೧. ೫೯ ಲಕ್ಷ ಹೆ. ಪ್ರದೇಶದ ಪೈಕಿ ೧. ೪೪ ಲಕ್ಷ ಹೆ. ನಲ್ಲಿ ಶೇ. ೩೩ ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾಗಿದೆ.  ಈಗಾಗಲೆ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷಾ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು, ಬೆಳೆ ಹಾನಿ ಪರಿಹಾರಕ್ಕಾಗಿ ಸುಮಾರು ೭೫ ಕೋಟಿ ರೂ. ಅನುದಾನ ಜಿಲ್ಲೆಗೆ ಬೇಕಾಗಬಹುದು ಎಂದರು.  ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳುವಾಗ ಸಮರ್ಪಕವಾಗಿ ಕೈಗೊಳ್ಳಬೇಕು.  ಇಲ್ಲದಿದ್ದಲ್ಲಿ, ಈ ಕುರಿತು ರೈತರಿಂದ ಬರುವ
ದೂರುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ ಎಂದು ಸಚಿವರು ಕೃಷಿ ಇಲಾಖೆ
ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ ಜಿ.ಎಲ್., ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೆಬ್ ಶಿರಹಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸಿಲ್ದಾರರು ಪಾಲ್ಗೊಂಡಿದ್ದರು.

Please follow and like us:
error