You are here
Home > Koppal News > ವಿಜೃಂಭಣೆಯ ಗವಿಸಿದ್ದೇಶ್ವರ ಜಾತ್ರೆಗೆ ಸಕಲ ಸಹಕಾರ- ಡಿಸಿ ಆರ್.ಆರ್. ಜನ್ನು

ವಿಜೃಂಭಣೆಯ ಗವಿಸಿದ್ದೇಶ್ವರ ಜಾತ್ರೆಗೆ ಸಕಲ ಸಹಕಾರ- ಡಿಸಿ ಆರ್.ಆರ್. ಜನ್ನು

ಕೊಪ್ಪಳದಲ್ಲಿ ಜ. ೦೭ ರಿಂದ ಜರುಗಲಿರುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಹಾಗೂ ಸುಗಮವಾಗಿ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು.

  ಗವಿಸಿದ್ದೇಶ್ವರ ಜಾತ್ರೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕೊಪ್ಪಳದಲ್ಲಿ ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ಜಾತ್ರೆ ಇಡೀ ರಾಜ್ಯಕ್ಕೆ ಸಂಭ್ರಮ ತರುವಂತಾಗಬೇಕು ಅಲ್ಲದೆ ಧಾರ್ಮಿಕ ಉತ್ಸವವಾಗಬೇಕು.  ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೩ ರಿಂದ ೫ ಲಕ್ಷ ಭಕ್ತಾದಿಗಳು ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದೆ.  ಜ. ೦೭ ರಂದು ಮಹಾರಥೋತ್ಸವ ನಡೆಯಲಿದ್ದು, ಜಾತ್ರೆ ಶಾಂತಿಯುತವಾಗಿ ಹಾಗೂ ಸುಗಮವಾಗಿ ಜರುಗುವಂತೆ ಜಿಲ್ಲಾಡಳಿತದಿಂದ ಸಕಲ ರೀತಿಯ ಸಹಕಾರ ನೀಡಲಾಗುವುದು.  ಗವಿಮಠದ ಸಂಪರ್ಕ ರಸ್ತೆಗಳನ್ನು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.  ಜಾತ್ರೆಯ ಸಂದರ್ಭದಲ್ಲಿ, ಮಠದ ಆವರಣದಿಂದ ನಗರ ಸಾರಿಗೆ ಬಸ್ ವ್ಯವಸ್ಥೆಯನ್ನು ರಾತ್ರಿ ೧೦ ರವರೆಗೂ ಕೈಗೊಳ್ಳಲಾಗುವುದು.  ರಥೋತ್ಸವದ ದಿನದಂದು ಟ್ರಾಫಿಕ್ ಜಾಮ್ ಆಗದಂತೆ ಎಚ್ಚರ ವಹಿಸಲು ಈಗಾಗಲೆ ಪೊಲೀಸ್ ಇಲಾಖೆ ಯೋಜನೆಯನ್ನು ರೂಪಿಸಿದೆ.  ಜಾತ್ರೆಯ ಯಶಸ್ವಿಗೆ ಜಿಲ್ಲಾಡಳಿತದಿಂದ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದರು.
ಸ್ವಚ್ಛತೆಗೆ ಆದ್ಯತೆ : ಗವಿಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ನಗರದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.  ಸಾರ್ವಜನಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ದೊರೆಯಬೇಕು.  ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗದಂತೆ ಎಚ್ಚರಿಕೆ ವಹಿಸಬೇಕು.  ತುರ್ತು ಆರೋಗ್ಯ ಸೇವೆ, ಮುಂಜಾಗ್ರತೆಯ ಕ್ರಮವಾಗಿ ಗವಿಮಠದ ಬಳಿ ಅಗ್ನಿಶಾಮಕ ವಾಹನವನ್ನು ಸಿದ್ಧವಾಗಿರಿಸಿಕೊಳ್ಳಬೇಕು.  ಜಾತ್ರೆಯ ಅಂಗವಾಗಿ  ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೊಲೀಸ್ ಬಂದೋಬಸ್ತ್ : ಸಭೆಯಲ್ಲಿ ಉಪಸ್ಥಿತರಿದ್ದ  ಪೊಲೀಸ್ ಇಲಾಖೆ ನಗರಠಾಣೆಯ ಸಿಪಿಐ ಮೋಹನ ಪ್ರಸಾದ್ ಅವರು ಮಾತನಾಡಿ, ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು.  ಇದಕ್ಕಾಗಿ ಹೊರ ಜಿಲ್ಲೆಯಿಂದ  ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.  ವಿವಿಧ ಜಿಲ್ಲೆಗಳಿಂದ ಕ್ರೈಂ ಸ್ಕ್ವಾಡ್‌ಗಳನ್ನು ಕರೆಸಲಾಗುವುದು. ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಲಾರಿ, ಜೀಪ್, ಕಾರು ಮುಂತಾದ ವಾಹನಗಳ ಪಾರ್ಕಿಂಗ್ ಮಾಡಲು ಈಗಾಗಲೆ ಸ್ಥಳಗಳನ್ನು ಗುರುತಿಸಲಾಗಿದೆ.  ಜಾತ್ರೆ ಸಂದರ್ಭದಲ್ಲಿ ಜೇಬುಗಳ್ಳತನ ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು.  ಜಾತ್ರೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ  ವಿವಿಧೆಡೆಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ.  ಟ್ರಾಫಿಕ್ ಜಾಮ್ ತಡೆಗಟ್ಟಲು ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಗಿಣಿಗೇರಾ ಕ್ರಾಸ್ ಹಾಗೂ ಹಲಗೇರಾ ಕ್ರಾಸ್ ಬಳಿ ಮಾರ್ಗಗಳ ಬದಲಾವಣೆ ಮಾಡಲಾಗುವುದು ಎಂದರು. 
  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಲಷ್ಕರಿನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ, ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ವಿ. ಪತ್ತಾರ್, ಸೇರಿದಂತೆ ಗಣ್ಯರಾದ ಮಲ್ಲಿಕಾರ್ಜುನ ಸೋಮಲಾಪುರ, ಗವಿಮಠದ ಶರಣು, ಸಂಜಯ್, ಕೊಪ್ಪಳ ತಹಸಿಲ್ದಾರ್ ಪುಟ್ಟರಾಮಯ್ಯ ಮುಂತಾದವರು ಭಾಗವಹಿಸಿದ್ದರು.

Leave a Reply

Top