ಸಾಮರಸ್ಯ ಜೀವನಕ್ಕೆ ಸಂಗೀತ ಮದ್ದು ಶ್ರೀನಿವಾಸ ಗುಪ್ತಾ.

ಕೊಪ್ಪಳ, ಜೂ.- ೨೯ ಪ್ರತಿಯೊಂದು ನೋವಿನಿಂದ ಹಿಡಿದು ಜೀವನದ ಪ್ರತಿ ಸಮಸ್ಯೆ ಹಾಗೂ ನೋವಿಗೆ ಸಂಗೀತದಲ್ಲಿದೆ ಮಲಾಮು. ಸಾಮರಸ್ಯ ಜೀವನಕ್ಕೆ ಸಂಗೀತ ಮದ್ದು ಎಂದು ಖ್ಯಾತ ಉದ್ಯಮಿ ಶ್ರೀನಿವಾಸ ಗುಪ್ತ ಹೇಳಿದರು.
ಅವರು ರವಿವಾರ ಸಂಜೆ ಸಮೀಪದ ಭಾಗ್ಯನಗರದ ಶ್ರೀ ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆ ಹಾಗೂ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಸಹಯೋಗದಲ್ಲಿ ಸಂಗೀತ ಸಾಮ್ರಾಟ ದಿ. ವಿರುಪಾಕ್ಷಪ್ಪ ಎಲಿಗಾರ ವೇದಿಕೆಯಲ್ಲಿ  ಶ್ರೀ ಗುರು ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಹಾಗೂ ಶ್ರೀ ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆಯ ೧೧ ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು, ಸ್ಥಳೀಯವಾಗಿ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನ ಧಾರೆಯೆರೆಯುತ್ತಿರುವ ರಾಮಚಂದ್ರಪ್ಪ ಉಪ್ಪಾರ ಸೇವೆ ಅತ್ಯಂತ ಶ್ಲಾಘನೀಯವೆಂದರು. ಮುಖ್ಯ ಆತಿಥ್ಯವಹಿಸಿದ್ದ ಗ್ರಾ.ಪಂ. ಮಾಜಿ ಅಧ್ಯಕ್ಷ ಹೊನ್ನಾರಸಾಬ ಬೈರಾಪೂರ ಮಾತನಾಡಿ, ಒತ್ತಡದ ಬದುಕಿನಿಂದ ಮಕ್ತವಾಗಿ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಂಗೀತ ಅತ್ಯವಶ್ಯವೆಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಜಗದ್ಗುರು ಶಂಕರಾಚಾರ್ಯಮಠದ ಪರಮಹಂಸ ಶಿವಪ್ರಕಾಶನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಂಗೀತವು ಮನುಷ್ಯನಿಗಷ್ಟೇ ಅಲ್ಲ ಪ್ರಾಣಿ, ಪಕ್ಷಿ, ಸಸ್ಯಗಳಿಗೂ ಇಷ್ಟವಾಗುತ್ತದೆ. ಶಿಶುಗಳು ಸಂಗೀತವನ್ನು ಆಲಿಸುತ್ತವೆಂದು ಉದಾಹರಣೆಯೊಂದಿಗೆ ವಿವರಿಸಿದರು. ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಂತೋಷ, ನೆಮ್ಮದಿಯನ್ನು ಉಂಟು ಮಾಡಿ ಸಮೃದ್ಧ ಜೀವನವನ್ನು ಸಾರ್ಥಕ ಬದುಕನ್ನಾಗಿಸಿಕೊಳ್ಳಬಹುದೆಂದು ತಿಳಿಸಿದರು.
ಇದೇ ವೇಳೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ರಾಮಚಂದ್ರಪ್ಪ ಉಪ್ಪಾರವರ ಶಿಷ್ಯರಾದ ನಾಗರಾಜ ಶ್ಯಾವಿ  ಬಾನ್ಸುರಿವಾದಕರು ಹಾಗೂ ಆನಂದ ಉಪ್ಪಾರ ಗಾಯಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿ, ಮಲ್ಲಯ್ಯ ಕೋಮಾರಿ ಮಾತನಾಡಿ, ಸಂಗೀತ ಕಾರ್ಯಕ್ರಮಕ್ಕೆ ಸಮಾಜದ ಪ್ರೋತ್ಸಾಹ ಅತ್ಯಗತ್ಯವಾಗಿದೆ. ಪ್ರತಿಯೊಬ್ಬರ ಪ್ರೋತ್ಸಾಹ ಅವಶ್ಯವೆಂದು ತಿಳಿಸಿದರು.ಆರಂಭದಲ್ಲಿ ಸಂಗೀತ ಶಿಕ್ಷಕ ಮಾರುತಿ ಬಿನ್ನಾಳ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮಂಗಲವಾದ್ಯ ಹಾರ್‍ಮೋನಿಯಂ ಸೋಲೋ ಗೋವಿಂದರಾಜ ಬೊಮ್ಮಲಾಪುರ ನೇರವೇರಿಸಿದರು. ಗಾಯಕರಾದ ಹಿರಿಯ ಕಲಾವಿದ ಸದಾಶಿವಪಾಟೀಲ್, ಸಂಜಯ ಹಂದ್ರಾಳ ಗಂಗಾವತಿ, ಆನಂದ ಉಪ್ಪಾರ, ಯುವ ಪ್ರತಿಭೆಗಳಾದ  ಶಕುಂತಲಾ ಬೇನಾಳ, ಯುವರಾಜ ಹಂಚಿನಾಳ, ಪ್ರವೀಣ ಉಪ್ಪಾರವರ ಸಹಯೋಗದಲ್ಲಿ ಸಂಗೀತ ಕಾರ್ಯಕ್ರಮ ಸಂಜೆ ೬ ರಿಂದ ರಾತ್ರಿ ೧೨ ಗಂಟೆಯವರೆಗೆ ನಡೆಸಿಕೊಡಲಾಯಿತು. ಕಾರ್ಯಕ್ರಮಕ್ಕೆ ಪ್ರಾಚಾರ್ಯರಾದ ರಾಮಚಂದ್ರಪ್ಪ ಉಪ್ಪಾರರ ಕೀಬೋರ್ಡ, ನಾಗರಾಜ ಶ್ಯಾವಿ ಬಾನ್ಸೂರಿ, ರಾಘವೇಂದ್ರ ಗಂಗಾವತಿ ಹಾಗೂ ಮಾರುತಿ ಬಿನ್ನಾಳ ತಬಲಾ ಸಾಥ ನೀಡಿದರು. ನಂತರ ಸಂಸ್ಥೆ ಮೂಲಕ ಎಲ್ಲಾ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಪಾಠ ಶಾಲಾ ವಿಧ್ಯಾರ್ಥಿಗಳ ತಂಡದಿಂದ ಪ್ರಾರ್ಥಿಸಿದರು. ಬಿ.ಪಿ. ಮರೇಗೌಡರ ಹಾಗೂ ಮಲ್ಲಿಕಾ ಮಹಾಂತಗೊಂಡ ನಿರೂಪಿಸಿದರು. ಪ್ರಾಚಾರ್ಯರಾದ ರಾಮಚಂದ್ರಪ್ಪ ಉಪ್ಪಾರ ಕೊನೆಯಲ್ಲಿ ವಂದಿಸಿದರು.

Please follow and like us:
error