ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ: ಸಚಿವ ಶಿವರಾಜ್ ತಂಗಡಗಿ ತಾಕೀತು

 ಸಿಂಗಟಾಲೂರು ಏತನೀರಾವರಿ ಯೋಜನೆ ೦೨ ವರ್ಷದೊಳಗೆ, ಕೊಪ್ಪಳ ಏತ ನೀರಾವರಿ (ಕೃಷ್ಣ- ಬಿ ಸ್ಕೀಂ) ಯೋಜನೆಯ ಎರಡನೇ ಹಂತದ ಸರ್ವೆ ಕಾರ್ಯ ೨೦೧೫ ರ ಫೆಬ್ರವರಿಯೊಳಗೆ.  ಹಿರೇಹಳ್ಳ ಯೋಜನೆಯಡಿ ಎಲ್ಲ ಕಾಮಗಾರಿಗಳು ೦೧ ವರ್ಷದೊಳಗೆ ಪೂರ್ಣಗೊಳಿಸಬೇಕು.  ಇದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ

ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಡಿದ ತಾಕೀತು.

  ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಸಚಿವರು, ಅಧಿಕಾರಿಗಳಿಗೆ ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
  ಜಿಲ್ಲೆಗೆ ಕೃಷ್ಣ ಬಿ-ಸ್ಕೀಂ ಅಡಿ ನಾರಾಯಣಪುರ ಅಣೆಕಟ್ಟಿನ ಹಿನ್ನೀರಿನಿಂದ ಕೊಪ್ಪಳ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಡಿ ನೀರಾವರಿ ಸೌಲಭ್ಯ ಕಲ್ಪಿಸುವಂತಹ ಮಹತ್ವದ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.  ಇದರಲ್ಲಿ ೧೨. ೮೧೫ ಟಿಎಂಸಿ ನೀರು ಬಳಸಿ, ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆಯ ಬದಲಿಗೆ ತುಂತುರು ನೀರಾವರಿ ವ್ಯವಸ್ಥೆಯನ್ನು ಅಳವಡಿಸಿ, ಸುಮಾರು ೨. ೮೫ ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. ಮೊದಲ ಹಂತದಲ್ಲಿ ಯೋಜನೆ ಪ್ರಾರಂಭವಾಗುವ ಮುಖ್ಯ ಸ್ಥಾವರ ಇರುವ ಹುನಗುಂದ ತಾಲೂಕಿನ ಮರೋಳ ಗ್ರಾಮದ ಬಳಿಯಿಂದ ಕೊಪ್ಪಳ ಜಿಲ್ಲೆಯ ಕಲಾಲಬಂಡಿವರೆಗಿನ  ಯೋಜನೆಗೆ ಸಂಬಂಧಿತ ಡೆಲಿವರಿ ಚೇಂಬರ್, ರೈಸಿಂಗ್ ಮೇನ್ ಕಾಮಗಾರಿ ಜಾರಿಯಲ್ಲಿದೆ.  ಮೊದಲ ಹಂತದಲ್ಲಿ ೩೮೬ ಕೋಟಿ ರೂ.ಗಳ ಕಾಮಗಾರಿಯ ಗುತ್ತಿಗೆಯನ್ನು ಜಿ. ಶಂಕರ್ ಎಂಬುವವರ ಕಂಪನಿ ಪಡೆದುಕೊಂಡಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಬೇಕಿದೆ.  ಉಳಿದಂತೆ ಎರಡನೆ ಹಂತದ ಕಾಮಗಾರಿಗೆ ಇದುವರೆಗೂ ಸರ್ವೆ ಕಾರ್ಯ ಪ್ರಾರಂಭಗೊಂಡಿಲ್ಲದೇ ಇರುವುದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಕೊಪ್ಪಳ ಏತ ನೀರಾವರಿ ಯೋಜನೆ ಕುಷ್ಟಗಿ ವಿಭಾಗದ ಸಹಾಯಕ ಇಂಜಿನಿಯರ್ ಹರೀಶ್ ಅವರು, ಎರಡನೆ ಹಂತದ ಸರ್ವೆ ಕಾರ್ಯಕ್ಕೆ ಈಗಾಗಲೆ ಟೆಂಡರ್ ಮುಗಿದು, ಏಜೆನ್ಸಿಯನ್ನು ನಿಗದಿಪಡಿಸಲಾಗಿದೆ.  ಸರ್ವೆ ಕಾರ್ಯಕ್ಕೆ ಉಪಗ್ರಹದ ನೆರವನ್ನು ಪಡೆದು, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಉಪಗ್ರಹವು ಅಕ್ಟೋಬರ್ ವೇಳೆಗೆ ಈ ಭಾಗದಲ್ಲಿ ಹಾದುಹೋಗುವುದರಿಂದ, ಈ ಸಂದರ್ಭದಲ್ಲಿ ಉಪಗ್ರಹದಿಂದ ನೂತನ ತಂತ್ರಜ್ಞಾನದಲ್ಲಿ ಮಾಹಿತಿಯನ್ನು ಪಡೆದು, ನಂತರವೇ ಗುಣಮಟ್ಟದ ಸರ್ವೆ ಕಾರ್ಯ ನಡೆಸಲು ನಿರ್ಧರಿಸಲಾಗಿದೆ ಎಂದರು.  ಇದಕ್ಕೆ ಕಾರ್ಯಪಾಲಕ ಇಂಜಿನಿಯರ್ ಮೃತ್ಯುಂಜಯ ಅವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.  ೨೦೧೫ ರ ಫೆಬ್ರವರಿ ಅಂತ್ಯದೊಳಗೆ ಸರ್ವೆ ಕಾರ್ಯ ಪೂರ್ಣಗೊಳಿಸಿ, ಕಾಮಗಾರಿಗೆ ಚಾಲನೆ ನೀಡಬೇಕು.  ಇದೇ ಜೂ. ೧೫ ರಂದು ಕಲಾಲಬಂಡಿ ಗ್ರಾಮದ ಬಳಿಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಸಚಿವರು ಸೂಚನೆ ನೀಡಿದರು.
ಸಿಂಗಟಾಲೂರು ಏತನೀರಾವರಿ : ಈ ಯೋಜನೆಯಡಿ ಈಗಾಗಲೆ ಬಲದಂಡೆ ಕಾಮಗಾರಿ ಪೂರ್ಣಗೊಂಡು ಕಾಲುವೆಗೆ ಈಗಾಗಲೆ ನೀರು ಹರಿಸಲಾಗುತ್ತಿದೆ.  ಆದರೆ ಕೊಪ್ಪಳ ಭಾಗದ ಎಡದಂಡೆ ಕಾಲುವೆಯ ಕಾಮಗಾರಿ ೨೦೧೧ ರಲ್ಲಿ ಪ್ರಾರಂಭಗೊಂಡಿದ್ದರೂ ಮಂದಗತಿಯಲ್ಲಿ ಸಾಗುತ್ತಿದೆ.  ಭೂಮಿ ಕಳೆದುಕೊಂಡ ಸಿಂಗಟಾಲೂರು ಏತ ನೀರಾವರಿ ಯೋಜನೆ ಎಂಬ ಹೆಸರು ಹೇಳಿಕೊಂಡು ಬರಲಾಗುತ್ತಿದೆ ಅಷ್ಟೇ.  ಈ ರೀತಿಯಾದಲ್ಲಿ ಜನರಿಗೆ ನಾವು ಉತ್ತರಿಸುವುದು ಕಷ್ಟವಾಗುತ್ತದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.  ಮುಂಡರಗಿ-ಕೊಪ್ಪಳ ವರೆಗಿನ ೭೨ ಕಿ.ಮೀ. ವರೆಗಿನ ಏತ ನೀರಾವರಿ ಯೋಜನೆ ಕುಂಟುತ್ತಾ ಸಾಗಿದೆ.  ೦-೧೦ ಕಿ.ಮೀ. ವರೆಗಿನ ೧೮ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.  ಆದರೆ ೧೦ ರಿಂದ ೩೩ ಕಿ.ಮೀ. ವರೆಗಿನ ೬೪ ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಕರೆದಿದ್ದು, ೨೭೭ ಎಕರೆ ಭೂ-ಸ್ವಾಧೀನ ಮಾಡಿಕೊಳ್ಳಲಾಗಿದೆ.  ಇನ್ನೂ ಕಾಮಗಾರಿ ಪ್ರಾರಂಭಗೊಂಡಿಲ್ಲ.  ೩೩ ರಿಂದ ೫೦ ಕಿ.ಮೀ. ವರೆಗಿನ ೪೦ ಕೋಟಿ ರೂ. ವೆಚ್ಚದ ಕಾಮಗಾರಿ ನಡೆದಿದ್ದರೂ, ವೇಗವಾಗಿ ಸಾಗುತ್ತಿಲ್ಲ.  ೫೦ ರಿಂದ ೭೨ ಕಿ.ಮೀ. ವರೆಗಿನ ಕಾಮಗಾರಿಗೆ ಇದೀಗ ಟೆಂಡರ್ ಕರೆಯಲಾಗಿದೆ.  ಇನ್ನಾದರೂ ಕಾಮಗಾರಿಗಳು ತ್ವರಿತವಾಗಿ ಸಾಗಬೇಕು.  ಯಾವುದೇ ಕಾರಣಕ್ಕೂ ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ, ಕಾಲುವೆಗೆ ನೀರು ಹರಿಸುವಂತಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಿರೇಹಳ್ಳ ಯೋಜನೆ : ಹಿರೇಹಳ್ಳ ಯೋಜನೆಯಡಿ, ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ.  ವದಗನಾಳ, ಕೊಪ್ಪಳ ಮುಂತಾದೆಡೆ ಕಾಲುವೆಗಳಿಗೆ ಇದುವರೆಗೂ ನೀರು ಸುಳಿದಿಲ್ಲ.  ಸುಮಾರು ೨೦ ಸಾವಿರ ಎಕರೆಗೂ ಹೆಚ್ಚು ಜಮೀನಿಗೆ ನೀರು ಒದಗಿಸಬೇಕಾದ ಯೋಜನೆಯಡಿ ಕೇವಲ ೧೦ ಸಾವಿರ ಎಕರೆಗೆ ಮಾತ್ರ ಇದುವರೆಗೂ ನೀರು ಪೂರೈಕೆಯಾಗುತ್ತಿದೆ.  ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಯೋಜನೆ ವೈಫಲ್ಯ ಕಾಣುತ್ತಿದೆ.  ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಇನ್ನೂ ಒಂದು ವರ್ಷವಾದರೂ ಸರಿಯೇ.  ಈ ಯೋಜನೆಯಡಿ ಟೇಲೆಂಡ್ ವರೆಗಿನ ಕಾಲುವೆಗೂ ಸಮರ್ಪಕವಾಗಿ ನೀರು ಹರಿಯುವಂತಾಗಬೇಕು.  ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.  ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ, ಕ್ರಮ ಜರುಗಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಕಾರ್ಯಪಾಲಕ ಇಂಜಿನಿಯರ್ ಗಂಗಪ್ಪ ಅವರಿಗೆ ಎಚ್ಚರಿಕೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆ ರೂಪಿಸಿದ್ದು, ಇದರಿಂದ ೫ ಸಾವಿರ ಎಕರೆ ಜಮೀನಿಗೆ ನೀರಾವರಿ ಒದಗಿಸಬಹುದಾಗಿದೆ.  ಯೋಜನೆಯ ಡಿಪಿಆರ್ ಅನ್ನು ತಯಾರಿಸಿ, ಈಗಾಗಲೆ ಸಲ್ಲಿಸಲಾಗಿದೆ.  ಅದೇ ರೀತಿ ಬಹದ್ದೂರಬಂಡಿ ಏತನೀರಾವರಿ ಯೋಜನೆಯನ್ನು ಸಹ ಅನುಮೋದನೆಗೊಂಡಿದ್ದು, ಸರ್ಕಾರಿ ಆದೇಶ ಆಗಬೇಕಿದೆ.  ಅಧಿಕಾರಿಗಳು ಯಾವುದೇ ಸಮಸ್ಯೆಗಳಿದ್ದಲ್ಲಿ, ಶಾಸಕರು ಹಾಗೂ ಸಚಿವರ ಗಮನಕ್ಕೆ ತಂದು, ಯೋಜನೆಗಳು ತ್ವರಿತವಾಗಿ ಪ್ರಾರಂಭವಾಗುವಂತೆ ನೋಡಿಕೊಳ್ಳಬೇಕು ಎಂದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಸೇರಿದಂತೆ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error