ಸಂಭ್ರಮದ ಬಸವ ಜಯಂತಿ ಶತಮಾನೋತ್ಸವಕ್ಕೆ ಭರದ ಸಿದ್ಧತೆ

ಬಸವ ಜಯಂತ್ಯೋತ್ಸವ ಸಮಿತಿ ಮತ್ತು ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ, ವಿವಿಧ ಬಸವ ಆನುಯಾಯಿಗಳ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ, ಬಸವ ಜಯಂತಿ ಶತಮಾನೋತ್ಸವ ಸಮಾರಂಭವನ್ನು ಇದೇ ೨೪-೦೪-೨೦೧೨ ರ, ಮಂಗಳವಾರ, ಶ್ರೀ ಗವಿಸಿದ್ಧೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡದ ನೆಲದಲ್ಲಿ ಬಸವ ಜಯಂತಿ ಆಚರಣೆ ಮಾಡುತ್ತ ಬಂದು, ಈ ವರ್ಷ ೧೦೦ ವರ್ಷ ತುಂಬುತ್ತಿರುವ ಸವಿನೆನಪಿನಲ್ಲಿ, ಈ ಸಲ ಶತಮಾನೋತ್ಸವದ ಆಚರಣೆ ನಡೆಯುತ್ತಲಿದೆ.
ಆ ದಿನ ಬೆಳಿಗ್ಗೆ ೯.೦೦ ಗಂಟೆಗೆ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಮತ್ತು ಪ್ರಾರ್ಥನೆಯನ್ನು, ಸಂಜೆ ೪.೦೦ ಗಂಟೆಗೆ ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದಿಂದ – ಜವಾಹರ ರಸ್ತೆಯ ಮೂಲಕ – ಶ್ರೀ ಗವಿಮಠದ ಆವರಣದವರೆಗೆ ಮೆರವಣಿಗೆಯನ್ನು, ತದನಂತರ ಸಂಜೆ ೬.೦೦ ಗಂಟೆಗೆ ಶ್ರೀ ಗವಿಮಠದ ಆವರಣದಲ್ಲಿ ಬಸವಗೋಷ್ಠಿಯನ್ನು ಆಯೋಜಿಸಲಾಗಿದೆ. ಈ ಗೋಷ್ಠಿಯ ದಿವ್ಯಸಾನಿಧ್ಯವನ್ನು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ, ಕೊಪ್ಪಳ ಶ್ರೀಗಳು, ಪಾವನ ಸಾನಿಧ್ಯವನ್ನು ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು, ನಿಷ್ಕಲ ಮಂಟಪ, ಬೈಲೂರು ಶ್ರೀಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಶರಣೆ ಡಾ. ಜಯಶ್ರೀ ವೀರಣ್ಣ ದಂಡೆಯವರು ಆಗಮಿಸಲಿದ್ದಾರೆ. ವಚನ ಸಂಗೀತವನ್ನು ಸದಾಶಿವ ಪಾಟೀಲ ಮತ್ತು ಸಂಗಡಿಗರು ನೆರವೇರಿಸಿಕೊಡಲಿದ್ದಾರೆ.
ಇದೇ ಸಮಾರಂಭದಲ್ಲಿ ತಮ್ಮ ನಿಷ್ಠೆ-ಪ್ರಾಮಾಣಿಕತೆಯಿಂದ, ಎಲೆಮರೆಯ ಕಾಯಿಯಂತೆ ಕಾಯಕ ಮಾಡುತ್ತ ಬಂದಿರುವ ೪ ಜನ ಕಾಯಕಯೋಗಿಗಳಿಗೆ ’ಬಸವ ಕಾರುಣ್ಯ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ೧) ಶ್ರೀ ಗವಿಮಠದಲ್ಲಿ ಕಸಗೂಡಿಸುವ ಕಾಯಕದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶಿವಮ್ಮ ಗವಿಸಿದ್ಧಪ್ಪ ಹೊಸಮನಿ, ೨) ಶಿಲ್ಪಕಲಾ ಕಲಾವಿದರಾದ ಶ್ರೀ ಮಲ್ಲಪ್ಪ ಬಡಿಗೇರ, ೩) ಶಿಕ್ಷಕರಾದ ಶ್ರೀ ಮಲಿಕ್‌ಸಾಬ್ ನೂರಬಾಷಾ, ೪) ರೈಲ್ವೆ ಇಲಾಖೆಯಲ್ಲಿ ಕಾರ್ಮಿಕ ಕೆಲಸದಲ್ಲಿರುವ ಶ್ರೀ ಹುಲಿಗೆಪ್ಪ ಓಜಿನಹಳ್ಳಿ, ಇವರಿಗೆ ’ಬಸವ ಕಾರುಣ್ಯ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇದಲ್ಲದೇ, ಬಸವ ಪುತ್ಥಳಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ, ನಗರಸಭೆಯ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು ಮತ್ತು ಪ್ರಸ್ತುತ ಅಧ್ಯಕ್ಷ ಸುರೇಶ ದೇಸಾಯಿಯವರನ್ನು ಸನ್ಮಾನಿಸಲಾಗುತ್ತಿದೆ.
ನೃತ್ಯರೂಪಕಗಳ ಪ್ರದರ್ಶನ, ಬಹುಮಾನ ವಿತರಣೆಯ ಜೊತೆಗೆ ವಿಶೇಷ ಬಸವ ಚಿಂತನೆಯ ಗೋಷ್ಠಿ ನಡೆಯಲಿದೆ. ಜಿಲ್ಲಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ, ಶಾಸಕ ಸಂಗಣ್ಣ ಕರಡಿ ಮತ್ತು ಎಲ್ಲ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಎಲ್ಲ ಬಸವಾಭಿಮಾನಿಗಳು ಈ ಶತಮಾನೋತ್ಸವ     ಸಮಾರಂಭದ ಯಶಸ್ಸಿನಲ್ಲಿ ಭಾಗಿಯಾಗಬೇಕೆಂದು, ಬಸವ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error