‘ಕಿಸ್ ಆಫ್ ಲವ್’ಗೆ ಅನುಮತಿ ಇಲ್ಲ: ರೆಡ್ಡಿ ಮುತಾಲಿಕ್‌ಗೆ ಪೊಲೀಸ್ ಇಲಾಖೆ ಎಚ್ಚರಿಕೆ

 ನಗರದಲ್ಲಿ ‘ಕಿಸ್ ಆಫ್ ಲವ್’ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಚಿತಾ ತನೇಜಾ ಎಂಬವರು ‘ಕಿಸ್ ಆಫ್ ಲವ್’ಗೆ ಅನುಮತಿ ಕೋರಿ ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರಿಗೆ ಅರ್ಜಿ ನೀಡಿದ್ದು, ಅದನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದರು. ಅರ್ಜಿಯಲ್ಲಿ ಸರಿಯಾದ ಮಾಹಿತಿ ಇರಲಿಲ್ಲ. ಕೆಲವು ಸ್ಪಷ್ಟೀಕರಣಗಳನ್ನು ಕೇಳಿದ್ದೆವು. ಅದಕ್ಕೂ ಸಹ ಸರಿಯಾದ ಮಾಹಿತಿಯನ್ನು ಆಯೋಜಕರು ನೀಡಿರಲಿಲ್ಲ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಎಷ್ಟು ಜನ ಬರುತ್ತಾರೆ, ಎಲ್ಲೆಲ್ಲಿಂದ ಬರುತ್ತಾರೆ, ಕಾರ್ಯಕ್ರಮದ ಮುಂದಾಳತ್ವವನ್ನು ಯಾರು ವಹಿಸುತ್ತಾರೆ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡಿರಲಿಲ್ಲ ಎಂದು ಆಯುಕ್ತರು ತಿಳಿಸಿದರು.
ಕೇರಳ ರಾಜ್ಯ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ‘ಕಿಸ್ ಆಫ್ ಲವ್’ ಕಾರ್ಯಕ್ರಮಕ್ಕೆ ಭಾರೀ ವಿರೋಧವಿದ್ದು, ಇದರಿಂದ, ಅಲ್ಲಲ್ಲಿ ಅಹಿತಕರ ಘಟನೆಗಳು ನಡೆದಿವೆ. ಹೀಗಾಗಿ, ನವೆಂಬರ್ 30ರಂದು ಬೆಂಗಳೂರಿನ ಪುರಭವನದ ಎದುರು ‘ಕಿಸ್ ಆಫ್ ಲವ್’ ಕಾರ್ಯಕ್ರಮ ನಡೆಸುತ್ತೇವೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಎಂ.ಎನ್.ರೆಡ್ಡಿ ತಿಳಿಸಿದರು.
ಸಾರ್ವಜನಿಕವಾಗಿ ‘ಕಿಸ್ ಆಫ್ ಲವ್’ ಕಾರ್ಯಕ್ರಮ ನಡೆಸಿದ್ದು, ಕಂಡು ಬಂದರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ. ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್‌ಗೆ ‘ಕಿಸ್ ಆಫ್ ಲವ್’ ಕಾರ್ಯಕ್ರಮದ ಮೇಲೆ ದಾಳಿ ಮಾಡದಂತೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

Leave a Reply