ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಅಗತ್ಯ- ಅಮರನಾಥ ಪಾಟೀಲ್

ಕೊಪ್ಪಳ ನ. : ಸಮಾಜದ ಏಳಿಗೆ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ್ ಅವರು ಹೇಳಿದ್ದಾರೆ.
ಗಂಗಾವತಿಯ ಐಎಂಎ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹೈದ್ರಾಬಾದ್-ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿದಿದೆ ಎನ್ನುವುದಕ್ಕೆ ಮುಖ್ಯವಾಗಿ ಮೂಲ ಸೌಕರ್ಯದ ಕೊರತೆಯೂ ಕಾರಣಗಳಲ್ಲೊಂದಾಗಿದೆ. ಶಾಲಾ ಮಕ್ಕಳು ಹಸಿವಿನಿಂದ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕಾಗಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ಮಧ್ಯಾಹ್ನದ ಉಪಹಾರ ಯೋಜನೆ ಅಲ್ಲದೆ ಪ್ರತಿ ವಿದ್ಯಾರ್ಥಿಗೆ ಸರ್ಕಾರ ಒಂದು ವರ್ಷಕ್ಕೆ ಹತ್ತು ಸಾವಿರಗಳಷ್ಟು ಖರ್ಚು ಮಾಡುತ್ತಿದೆ. ಆದಾಗ್ಯೂ ನಮ್ಮ ಶಾಲೆಗಳ ಎಸ್.ಎಸ್.ಎಲ್.ಸಿ. ಫಲಿತಾಂಶ ತೀರ ಕೆಳಮಟ್ಟದಲ್ಲಿದೆ. ಕೊಪ್ಪಳ ಜಿಲ್ಲೆಯ ಫಲಿತಾಂಶ ೩೧ ನೇ ಸ್ಥಾನದಲ್ಲಿದೆ. ಹೈ-ಕ ಶೈಕ್ಷಣಿಕವಾಗಿ ಹಿಂದುಳಿದೆ ಎಂದು ಹೇಳುವ ಬದಲಾಗಿ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕಿದೆ. ಗುಲಬರ್ಗಾ ವಿಭಾಗದ ಕೆಲವು ಶಾಲೆಗಳಲ್ಲಿ ಶೌಚಾಲಯ ಕೊರತೆ, ಆಟದ ಮೈದಾನ, ಕುಡಿಯುವ ನೀರು, ಕಾಂಪೌಂಡ್ ಗೋಡೆ, ಶಿಕ್ಷಕರ ಕೊರತೆ, ಗ್ರಂಥಾಲಯ, ಕಂಪ್ಯೂಟರ್ ಇಂತಹ ಹಲವು ಕೊರತೆಗಳ ನಡುವೆಯೂ ಉತ್ತಮ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದೇವೆ. ಫಲಿತಾಂಶದ ಕೊರತೆ ಕಂಡುಬಂದಾಗ ಆಯಾ ಶಾಲಾ ಮುಖ್ಯೋಪಾಧ್ಯಾಯರನ್ನು, ಜಿಲ್ಲಾ ಉಪನಿರ್ದೇಶಕರನ್ನು ಜವಾಬ್ದಾರರನ್ನಾಗಿ ಮಾಡಬೇಕಾಗುತ್ತದೆ. ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳನ್ನು ಆಯಾ ವಿಷಯವಾರು ತಿದ್ದುವ ಅಲ್ಲದೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರು ತಮ್ಮ ಜವಾಬ್ದಾರಿಯನ್ನರಿತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಅಗತ್ಯ ಕಾರ್ಯ ಯೋಜನೆಗಳನ್ನು ರೂಪಿಸಬೇಕಾಗಿದೆ. ಹಿಂದುಳಿದಿರುವ ಹೈ-ಕ ಸಮಗ್ರ ಅಭಿವೃದ್ಧಿಗಾಗಿ ಡಾ: ನಂಜುಂಡಪ್ಪ ವರದಿ ಆಧಾರಿತ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಶೈಕ್ಷಣಿಕ ಸೌಲಭ್ಯಗಳನ್ನು ಹೆಚ್ಚಿಸುವುದು, ಅಲ್ಲದೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸಲುವಾಗಿ ಸಂವಿಧಾನದ ೩೭೦ ಕಲಂ ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಅಮರನಾಥ ಪಾಟೀಲ್ ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಜಿ.ಪಂ. ಉಪಾಧ್ಯಕ್ಷ ಬಿ. ಬಸವರಾಜಪ್ಪ ಅವರು ಕಾರ್ಯಾಗಾರ ಕುರಿತು ಮಾತನಾಡಿದರು. ಶಾಸಕ ಪರಣ್ಣ ಮುನವಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಎ.ಪಿ.ಎಂ.ಸಿ ಅಧ್ಯಕ್ಷ ಅಮರೇಗೌಡ, ತಾ.ಪಂ. ಅಧ್ಯಕ್ಷ ಪಾಂಡುರಂಗ ರಾಥೋಡ್, ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ ನಾಗನಗೌಡ, ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಮೂರ್ತಿ, ಗುಲಬರ್ಗಾ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿಯ ಜಂಟಿನಿರ್ದೇಶಕರಾದ ಕುಡದಿನ್ನಿ ಬೈರಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಸಪ್ಪ ನೀರಲಕೇರಿ ಸ್ವಾಗತಿಸಿ, ವಂದಿಸಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
Please follow and like us:
error