ಮಹಿಳೆಯ ಕೊರಳಿಗೆ ಮನುವ್ಯಾಧಿಗಳ ಉರುಳು

– ಸನತ್‌ಕುಮಾರ ಬೆಳಗಲಿ
ಕೋಮುವಾದಿ, ಫ್ಯಾಸಿಸ್ಟ್ ಸಂಘಟನೆ ಯೊಂದರಲ್ಲಿ ಬೆಳೆದ ವ್ಯಕ್ತಿ ಹೇಗಿರುತ್ತಾನೆ? ಆತನ ಆಲೋಚನಾ ಕ್ರಮ ಹೇಗಿರುತ್ತದೆ? ಸುತ್ತಲಿನ ವಿದ್ಯಮಾನಗಳನ್ನು ನೋಡುವ ಆತನ ದೃಷ್ಟಿಕೋನ ಎಂಥದು ಎಂಬುದಕ್ಕೆ ಆರೆಸ್ಸೆಸ್ ಸರಸಂಘಚಾಲಕ ಮೋಹನ ಭಾಗವತ್ ಮಧ್ಯಪ್ರದೇಶದ ಬಿಜೆಪಿ ಮಂತ್ರಿ ಕೈಲಾಸ ವಿಜಯ ವರ್ಗಿಯಾ, ಛತ್ತೀಸಗಡದ ಮಹಿಳಾ ಆಯೋಗದ ಅಧ್ಯಕ್ಷೆ ವಿಭಾ ರಾವ್ ಮತ್ತು ಪ್ರಮೋದ ಮುತಾಲಿಕ್ ಇತ್ತೀಚೆಗೆ ಬಹಿರಂಗವಾಗಿ ನೀಡಿರುವ ಹೇಳಿಕೆಗಳು ಸಾಕ್ಷಿಯಾಗಿವೆ. ಒಬ್ಬ ಸಹಜ ಮನುಷ್ಯನನ್ನು ಇಷ್ಟೊಂದು ಮತಾಂಧನನ್ನಾಗಿ, ಅವಿವೇಕಿಯನ್ನಾಗಿ, ನೀಚನನ್ನಾಗಿ ಮಾರ್ಪಡಿಸಿದ ಈ ಫ್ಯಾಸಿಸ್ಟ್ ಸಂಘಟನೆಯ “ಸಾಧನೆ” ಅಗಾಧವಾದುದು. ಗೋಡ್ಸೆಯಂಥವರನ್ನೆ ಸೃಷ್ಟಿಸಿದ ಸಂಘಟನೆಗೆ ಇದು ಅಸಾಧ್ಯವಾದ ಸಂಗತಿಯೂ ಅಲ್ಲ. ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಅತ್ಯಾಚಾರ- ಕೊಲೆ ಪ್ರಕರಣದಿಂದ ಇಡೀ ದೇಶವೇ ತಲ್ಲಣಿಸಿ ಕೋಪದಿಂದ ಕುದಿಯುತ್ತಿರುವಾಗ ಮೋಹನ ಭಾಗವತ್ ಬಾಯಿ ಬಿಟ್ಟು ಉಗಿಸಿಕೊಳ್ಳುತ್ತಿದ್ದಾನೆ. ಬಹಿರಂಗ ಸಭೆಯೊಂದರಲ್ಲಿ ಮಾತಾಡಿದ ಆತ, “ಅತ್ಯಾಚಾರ ನಡೆಯುತ್ತಿರುವುದು ಇಂಡಿಯದಲ್ಲಿ, ಭಾರತದಲ್ಲಲ್ಲ” ಎಂದಿದ್ದಾರೆ.
ಭಾಗವತ್ ದೃಷ್ಟಿಯಲ್ಲಿ ಇಂಡಿಯಾ ಅಂದರೆ ನಗರಪ್ರದೇಶ, ಭಾರತ ಅಂದರೆ ಗ್ರಾಮೀಣ ಪ್ರದೇಶ. “ಪ್ಯಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಇರುವ ದೇಶದ ನಗರ ಪ್ರದೇಶದಲ್ಲಿ ಅತ್ಯಾಚಾರಗಳು ಹೆಚ್ಚಾಗಿ ನಡೆಯುತ್ತವೆ. ಗ್ರಾಮೀಣ ಭಾರತದಲ್ಲಿ ಯಾವುದೇ ಅತ್ಯಾಚಾರ ನಡೆ ಯುವುದಿಲ್ಲ. ಅಲ್ಲಿ ಮಹಿಳೆಯು ಸುರಕ್ಷಿತವಾಗಿದ್ದಾಳೆ” ಎಂಬುದು ಅವರ ಇಂಗಿತ.
ಭಾಗವತ್ ಹೇಳಿಕೆ ನೀಡಿದ ದಿನವೇ ಅವರದೇ ಪರಪೀಡಕ ಪರಿವಾರದಲ್ಲಿ ವ್ಯಕ್ತಿತ್ವ ರೂಪಿಸಿಕೊಂಡ ಮಧ್ಯಪ್ರದೇಶದ ಕೈಗಾರಿಕಾ ಮಂತ್ರಿ ಕೈಲಾಸ ವಿಜಯ ವರ್ಗಿಯಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಮಹಿಳೆ ಮೇಲೆ ನಡೆಯುವ ಅತ್ಯಾಚಾರಕ್ಕೆ ಆಕೆಯೇ ಕಾರಣ. ಅಂಕೆಯಲ್ಲಿರದ ಹೆಂಗಸರ ಮೇಲೆ ಸಹಜವಾಗಿ ಅತ್ಯಾಚಾರ ನಡೆಯುತ್ತದೆ. ಲಕ್ಷ್ಮಣರೇಖೆಯನ್ನು ದಾಟಿದ ಹೆಣ್ಣಿಗೆ ಸೀತೆಗಾದಂತೆ ಶಿಕ್ಷೆ ಆಗುತ್ತದೆ” ಎಂದು ಹೇಳಿದ್ದಾರೆ. ಇಂಥ ಹೇಳಿಕೆಯನ್ನು ಈತ ನೀಡಿರುವುದು ಇದೇ ವೊದಲ ಬಾರಿಯಲ್ಲ. ಈ ಹಿಂದೆಯೂ ಈತ “ಭಾರತೀಯ ಸಂಸ್ಕೃತಿಯ ಉಡುಪು ಧರಿಸಿದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳವಾಗುವುದಿಲ್ಲ” ಎಂದು ಹೇಳಿದ್ದ.
ಇವರಿಬ್ಬರ ಹೇಳಿಕೆಗೆ ಪೂರಕವಾಗಿ ಸಲ್ವಾ ಜುಡಂ ಮೂಲಕ ಆದಿವಾಸಿ ಮಹಿಳೆಯರ ಮೇಲೆ ಹಲ್ಲೆ ಮಾಡಿಸುವ ಛತ್ತೀಸಗಡದ ಬಿಜೆಪಿ ಸರಕಾರದ ಮಹಿಳಾ ಆಯೋಗದ  ಅಧ್ಯಕ್ಷೆ ವಿಭಾ ರಾವ್ ಹೇಳಿಕೆಯೊಂದನ್ನು ನೀಡಿ, “ಮಹಿಳೆಯ ಮೇಲೆ ನಡೆಯುವ ಅತ್ಯಾಚಾರಕ್ಕೆ ಆಕೆಯೇ ಕಾರಣ. ಪಾಶ್ಚಿಮಾತ್ಯ ಪ್ರಭಾವಕ್ಕೊಗಾಗುವ ಮಹಿಳೆ ಧರಿಸುವ ಉಡುಪು ಪುರುಷರಿಗೆ ಪ್ರಚೋದನೆ ನೀಡುತ್ತದೆ” ಎಂದು ಸಮರ್ಥಿಸಿದ್ದಾರೆ.
ಈ ಮೂವರ ಹೇಳಿಕೆಗಳನ್ನು ಒಟ್ಟಿಗೆ ಇಟ್ಟುಕೊಂಡು ನೋಡಿದಾಗ ಇವರು ಕಟ್ಟಲು ಹೊರಟಿರುವ ‘ಹಿಂದೂರಾಷ್ಟ್ರ’ದಲ್ಲಿ ಮಹಿಳೆಯ ಸ್ಥಿತಿ ಹೇಗಿರಬಹುದು ಎಂದು ಎದೆ ನಡುಗಿತು. ಮೋಹನ್ ಭಾಗವತ್ ಹೇಳಿಕೆ ವಾಸ್ತವ ಸಂಗತಿಗೆ ಸಂಪೂರ್ಣ ತದ್ವಿರುದ್ಧವಾಗಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಮಹಿಳೆಯರ ಮೇಲೆ ಶೇ.75ರಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು ಭಾಗವತರ ಗ್ರಾಮೀಣ ಭಾರತಕ್ಕೆ ಸೇರಿದವರಾಗಿದ್ದಾರೆ. ಕಳೆದ 25 ವರ್ಷಗಳ ನ್ಯಾಯಾಲಯದ ದಾಖಲೆಗಳ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಮಹಿಳೆ ಸುರಕ್ಷಿತವಾಗಿಲ್ಲ. ವಿಜಯ ವರ್ಗಿಯಾ ಪ್ರಕಾರ ಲಕ್ಷ್ಮಣ ರೇಖೆ ಉಲ್ಲಂಘಿಸಿದ ಆಕೆಗೆ ಅತ್ಯಾಚಾರ ಶಿಕ್ಷೆಯಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಅತ್ಯಾಚಾರಗಳು ನಡೆದರೂ ಅವು ಮಾಧ್ಯಮಗಳಲ್ಲಿ ವರದಿ ಯಾಗುವುದಿಲ್ಲ. ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುವುದಿಲ್ಲ. ಹಳ್ಳಿ ಗಾಡಿನ ಭೂಮಾಲಕ ಪಾಳೆಯಗಾರಿ ಶಕ್ತಿಗಳು ಎಷ್ಟು ಪ್ರಬಲವಾಗಿರುತ್ತವೆ ಅಂದರೆ ಪ್ರತಿಭಟನೆಯ ಅಲೆ ಏಳದಂತೆ ಹತ್ತಿಕ್ಕುತ್ತಾರೆ. ಇಂಥ ಗ್ರಾಮೀಣ ಭಾರತ ಭಾಗವತರ ದೃಷ್ಟಿಯಲ್ಲಿ ಅತ್ಯಾಚಾರಗಳೇ ನಡೆಯದ ಪುಣ್ಯಭೂಮಿಯಾಗಿದೆ.
ನ್ಯಾಯಾಲಯದ ಅಂಕಿ-ಅಂಶಗಳು ಒತ್ತಟ್ಟಿಗಿರಲಿ. ನಮ್ಮ ಕಣ್ಣ ಮುಂದೆಯೂ ಇತ್ತೀಚೆಗೆ ನಡೆದ ಕೆಲ ಬೀಭತ್ಸ ಅತ್ಯಾಚಾರ ಪ್ರಕರಣಗಳು ಭಾಗವತರ ಭಾರತದ ನೈಜ ಚಿತ್ರಣಕ್ಕೆ ಸಾಕ್ಷಿಯಾಗಿವೆ. ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ದಲಿತ ಹೆಣ್ಣು ಮಕ್ಕಳಾದ ಸುರೇಖಾ ಭೂತಮಾಂಗೆ ಮತ್ತು ಪ್ರಿಯಾಂಕಾ ಭೂತಮಾಂಗೆ ಮೇಲೆ ಮೇಲ್ಜಾತಿಯ ಹಿಂದೂಗಳು ಹಾಡ ಹಗಲಲ್ಲೆ ನಡುರಸ್ತೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದರು. ಅತ್ಯಾಚಾರ ನಡೆಸಿದ್ದು ಮಾತ್ರವಲ್ಲ, ಅಷ್ಟೇ ವಿಕೃತವಾಗಿ ಅವರ ದೇಹದ ಮೇಲೆ ಹಿಂಸೆ ನಡೆಸಿ ಕೊಂದು ಹಾಕಿದರು. ಈ ಪ್ರಕರಣದಲ್ಲಿ ಸ್ಥಳೀಯ ಬಿಜೆಪಿ ನಾಯಕರೂ ಶಾಮೀಲಾಗಿದ್ದರು. ಭಾಗವತ್ ನೆಲೆಸಿರುವ ನಾಗಪುರಕ್ಕೆ ಹತ್ತಿರದಲ್ಲಿರುವ ಖೈರ್ಲಾಂಜಿಯ ಅತ್ಯಾಚಾರ-ಕೊಲೆಗಳು ಸುದ್ದಿ ಕಣ್ಣಿಗೆ ಕಾಣದಂತೆ ಹಿಂದುತ್ವ ಈತನನ್ನು ಅಂಧವನ್ನಾಗಿ ಮಾಡಿದೆ.
ದಲಿತರ ಮೇಲಿನ ದೌರ್ಜನ್ಯಗಳ ಕುರಿತು ರಾಷ್ಟ್ರೀಯ ವಿಚಾರಗೋಷ್ಠಿಗೆ ನಾನು ದಿಲ್ಲಿಗೆ ಹೋಗಿದ್ದಾಗ (2006 ಡಿಸೆಂಬರ್) ಖೈರ್ಲಾಂಜಿಯಿಂದ ಅತ್ಯಾಚಾರಕ್ಕೊಳಗಾದ ಸುರೇಖಾಳ ಸೋದರ ಅಲ್ಲಿ ಬಂದಿದ್ದ. ಖೈರ್ಲಾಂಜಿಯಲ್ಲಿ ಆತನ ಅಕ್ಕನ ಮೇಲೆ ಹಾಗೂ ಅಕ್ಕನ ಮಗಳ ಮೇಲೆ ನಡೆದ ಅತ್ಯಾಚಾರದ ಘಟನೆಯನ್ನು ಹೇಳುವಾಗ ಆತನ ಮಾತುಗಳು ನಿಂತು ಹೋದವು. ಕಣ್ಣಿನಲ್ಲಿ ಧಾರಾಕಾರವಾಗಿ ಇಳಿಯುತ್ತಿದ್ದ ನೀರು ಆ ಹೃದಯ ವಿದ್ರಾವಕ ಘಟನೆಯ ಭಯಾನಕತೆ ಯನ್ನು ಸಾರಿ ಹೇಳುತ್ತಿತ್ತು. ‘ಉಪೇಕ್ಷಿತ ಬಂಧುಗಳು’ ಎಂದು ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಯಾವ ಆರೆಸ್ಸೆಸ್ ನಾಯಕನೂ ಅಲ್ಲಿ ಹೋಗಿರಲಿಲ್ಲ.
ಖೈರ್ಲಾಂಜಿಯಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ನಡೆದ ಈ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ ಈ ಎಲ್ಲ ಪಕ್ಷಗಳ ನಾಯಕರ ನಾಲಿಗೆಗೆ ಲಕ್ವಾ ಹೊಡೆದಿತ್ತು. ಯಾರೂ ಮಾತಾಡಲಿಲ್ಲ. ಬದಲಾಗಿ ತೆರೆಮರೆ ಯಲ್ಲಿ ನಿಂತು ಅತ್ಯಾಚಾರ ಎಸಗಿದ ಪಾತಕಿಗಳ ರಕ್ಷಣೆಗೆ ಮುಂದಾದರು. ಆದರೆ ಘಟನೆ ನಡೆದ ಮಾರನೆ ದಿನ ಸಿಪಿಎಂ ನಾಯಕಿ ಬೃಂದಾಕಾರಟ್ ಮಾತ್ರ ಖೈರ್ಲಾಂಜಿಗೆ ಧಾವಿಸಿದರು. ಅಲ್ಲಿಂದ ಅವರು ಪ್ರಧಾನಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಳ್ಳುವವರೆಗೆ ಅಪರಾಧಿಗಳ ಬಂಧನವಾಗಿರಲಿಲ್ಲ. ಬೃಂದಾರನ್ನು ಹೊರತುಪಡಿಸಿದರೆ ಮಾವೊವಾದಿಗಳು ಈ ದುಷ್ಕೃತ್ಯ ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆಗೆ ಪ್ರೇರಣೆ ನೀಡಿದರು. ಆಗ ಎಚ್ಚೆತ್ತ ಮಹಾರಾಷ್ಟ್ರ ಸರಕಾರ ಪ್ರತಿಭಟನೆಯ ಹಿಂದೆ ನಕ್ಸಲರು ಇದ್ದಾರೆ ಎಂದು ರೋದಿಸತೊಡಗಿತು.
ಬರೀ ಒಂದು ಖೈರ್ಲಾಂಜಿಯಲ್ಲ, ಜಾತಿ ವ್ಯವಸ್ಥೆ ಪಾಳೆಯಗಾರಿಕೆ ಇನ್ನೂ ಭದ್ರವಾಗಿ ಬೇರೂರಿರುವ ಗ್ರಾಮೀಣ ಭಾರತದಲ್ಲಿ ಮಹಿಳೆ ಎಂದಿಗೂ ಸುರಕ್ಷಿತವಾಗಿಲ್ಲ. ಉತ್ತರ ಪ್ರದೇಶದ ಹಳ್ಳಿಯೊಂದರ ಹಿಂದುಳಿದ ಜಾತಿಯ ಪೂಲನ್ ದೇವಿ ಡಕಾಯಿತಳಾಗಲು ಯಾರು ಕಾರಣ? ಆಕೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಆಕೆಯನ್ನು ಡಕಾಯಿತಳನನ್ನಾಗಿ ಮಾಡಿತು. ಪೊಲೀಸರಿಂದ ರಕ್ಷಣೆ ಸಿಗದಿದ್ದಾಗ ತನ್ನ ರಕ್ಷಣೆಗೆ ಆಕೆ ಬಂದೂಕನ್ನೆತ್ತಿಕೊಂಡಳು. ತನ್ನ ಮೇಲೆ ಅತ್ಯಾಚಾರ ನಡೆಸಿದವರನ್ನು ಸಾಲಾಗಿ ನಿಲ್ಲಿಸಿ ಕೊಂದು ಹಾಕಿದಳು. ಫೂಲನ್ ಮಾತ್ರವಲ್ಲ, ಬನ್ವಾರಿದೇವಿ ಪ್ರಕರಣ, ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಚಿಂಚೋಳಿಯಲ್ಲಿ ದನ ಕಾಯುವ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಇವಕ್ಕೆಲ್ಲ ಯಾರು ಕಾರಣ?
ಗ್ರಾಮೀಣ ಭಾರತದಲ್ಲಿ ಮೇಲ್ಜಾತಿಯ ಹೆಂಗಸರು ಪುರುಷಪ್ರಧಾನ ವ್ಯವಸ್ಥೆಯ ಕ್ರೌರ್ಯ ಸಹಿಸಿ ನಾಲ್ಕು ಗೋಡೆಯ ನಡುವೆ ಸುರಕ್ಷಿತವಾಗಿರಬಹುದು. ಆದರೆ ದಲಿತ, ಆದಿವಾಸಿ, ಕೂಲಿಕಾರ ಹೆಣ್ಣು ಮಕ್ಕಳ ಪರಿಸ್ಥಿತಿ ಹೇಗಿದೆ? ನಿತ್ಯವೂ ಅತ್ಯಾಚಾರಕ್ಕೆ ಬಲಿ ಯಾಗುತ್ತಿರುವವರು ಅವರೇ ಅಲ್ಲವೇ? ಭಾಗವತರ ಇಂಥ ಹೇಳಿಕೆ ಈ ಅತ್ಯಾಚಾರಗಳನ್ನು ಮುಚ್ಚಿ ಹಾಕಿ ಗ್ರಾಮೀಣ ಭಾರತದ ವೈಭಕರಣ ಮಾಡುವುದಲ್ಲದೆ ಬೇರೇನೂ ಅಲ್ಲ. ಇದು ಭಾಗವತರ ವೈಯಕ್ತಿಕ ತಪ್ಪಲ್ಲ. ಅವರು ಓದಿದ ಗೋಳ್ವಲಕರ ಸಾಹಿತ್ಯ, ಬಾಲ್ಯದಲ್ಲಿ ಬೆಳೆದು ಬಂದ ಆರೆಸ್ಸೆಸ್ ನೀಡಿದ ಸಂಸ್ಕಾರ ಇದಕ್ಕೆ ಕಾರಣ.
ಆರೆಸ್ಸೆಸ್ ಎಂಬ ಫ್ಯಾಸಿಸ್ಟ್ ಸಂಘಟನೆಗೆ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಸಮಾನತೆ ಎಂಬ ಶಬ್ದವೇ ಅದಕ್ಕೆ ಅಪಥ್ಯ. ಇಂದಿಗೂ ಅದು ನಂಬುವುದು ಮನುಸ್ಮತಿಯನ್ನು. ಅದು ಕಟ್ಟಲು ಹೊರಟ ಹಿಂದೂ ರಾಷ್ಟ್ರಕ್ಕೆ ಮನುವಾದವೇ ಆಧಾರ ಸ್ತಂಭ. ಮಹಿಳೆಯ ಬಗ್ಗೆ ಮನು ಏನು ಹೇಳಿದ್ದಾನೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. “ಬಾಲಕಿಯಿದ್ದಾಗಲೂ, ಯುವತಿಯಾದಾಗಲೂ, ಮುದುಕಿಯಾದಾಗಲೂ ಸ್ವತಂತ್ರವಾಗಿ ಮಹಿಳೆಯ ಯಾವ ಕಾರ್ಯವನ್ನು ಮಾಡಕೂಡದು. ಆಕೆ ಎಂದಿದ್ದರೂ ಪುರುಷನ ಸೊತ್ತು” ಎಂದು ಮನು ಹೇಳುತ್ತಾನೆ.
ಭಾಗವತ ಮತ್ತು ವಿಜಯ ವರ್ಗಿಯಾ ಎಂಬ ಮೃಗಗಳು ಹೇಳಿರುವುದು ಮನುಸ್ಮತಿಯ ಸಿದ್ಧಾಂತ ವನ್ನು. ಅಂದರೆ “ಮಹಿಳೆ ಮನೆ ಬಿಟ್ಟು ಹೊರಗೆ ಬರಬಾರದು. ಸೀರೆಯನ್ನು ಹೊರತುಪಡಿಸಿ ಆಧುನಿಕ ಉಡುಪು ಧರಿಸಬಾರದು, ವಿದ್ಯೆ ಆಕೆಗೆ ನಿಷಿದ್ಧ, ಆಕೆ ಪುರುಷನ ಅಧೀನದಲ್ಲಿದ್ದರೆ ಆಕೆಯ ಮೇಲೆ ಅತ್ಯಾಚಾರ ನಡೆಯುವುದಿಲ್ಲ. ಲಕ್ಷ್ಮಣರೇಖೆ ದಾಟಿದರೆ
ಅತ್ಯಾಚಾರ ಅನಿವಾರ್ಯ”. ಇದು ಈ ರೋಗಗ್ರಸ್ಥ ಮನುವ್ಯಾಧಿಗಳ, ಮನೋವ್ಯಾಧಿಗಳ ವಾದ. ಈ ಮನೋವ್ಯಾಧಿಗಳಿಗೆ ಮಾತ್ರವಲ್ಲ, ಇವರನ್ನು ರೂಪಿಸಿದ ಸಂಘಪರಿವಾರ ಎಂಬ ವ್ಯಾಧಿಯ ಮೂಲಕ್ಕೂ ಚಿಕಿತ್ಸೆ ನೀಡಬೇಕಾಗಿದೆ.
ಆರೆಸ್ಸೆಸ್ ಎಂಬುದು ಒಂದು ನಮ್ಮ ಸಾಮಾಜಿಕ ಬದುಕಿನ ಕ್ಯಾನ್ಸರ್ ಹುಣ್ಣಿದ್ದಂತೆ. ಅದಕ್ಕೆ ಔಷಧಿ ಇಲ್ಲ. ಆದರೆ ಶಸ್ತ್ರಚಿಕಿತ್ಸೆಯನ್ನು ಮಾಡಿ ಆ ವೃಣವನ್ನು ಕಿತ್ತು ಬಿಸಾಡಬೇಕಾಗಿದೆ. ಇಂಥ ಶಸ್ತ್ರಚಿಕಿತ್ಸೆಗೆ ಈ ದೇಶದ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮುಂದಾಗಬೇಕಾಗಿದೆ. ಇಂದಲ್ಲ, ನಾಳೆ ಈ ಶಸ್ತ್ರಚಿಕಿತ್ಸೆ ಕ್ರಿಯೆಯನ್ನು ಅವರು ಮಾಡುತ್ತಾರೆ. ಅದು ಅವರಿಗೆ ಅನಿವಾರ್ಯ ಕೂಡ.
ಈ ಭಾಗವತ್, ಕೈಲಾಸ ಬಗ್ಗೆ ಬರೆಯುತ್ತಾ ನಮ್ಮದೇ ರಾಜ್ಯದ ಪ್ರಮೋದ ಮುತಾಲಿಕ್ ಎಂಬ ‘ಮಾಧ್ವ ಬ್ರಾಹ್ಮಣ’ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನೀಡಿದ ಹೇಳಿಕೆ ನೆನಪಿಗೆ ಬಂತು. ಧಾರವಾಡ ಜಿಲ್ಲೆಯ ಬ್ರಾಹ್ಮಣ ಸಮ್ಮೇಳನದಲ್ಲಿ ಅತಿಥಿಯಾಗಿ ಭಾಷಣ ಮಾಡಿದ ಮುತಾಲಿಕ್, “ಬ್ರಾಹ್ಮಣ ಹೆಣ್ಣು ಮಕ್ಕಳು ಕನಿಷ್ಠ ಒಂದು ಡಜನ್ ಮಕ್ಕಳನ್ನು ಹಡೆಯಬೇಕು. ಬ್ರಾಹ್ಮಣ ಹಿಂದುತ್ವದ ರಕ್ಷಾ ಕವಚ. ಅದಕ್ಕಾಗಿ ಬ್ರಾಹ್ಮಣರ ಸಂಖ್ಯೆ ಹೆಚ್ಚಾಗಬೇಕು ಎಂದು ಕರೆ ನೀಡಿದ್ದಾನೆ.
ಈ ಮುತಾಲಿಕ್ ಕೂಡ ಬಾಲ್ಯದಿಂದಲೂ ಆರೆಸ್ಸೆಸ್ ಶಾಖೆಯಲ್ಲಿ ವ್ಯಕ್ತಿತ್ವ ರೂಪಿಸಿಕೊಂಡ ಅನಾಹುತಕಾರಿ ಬ್ರಾಹ್ಮಣಶಾಹಿ. ಈತನ ದೃಷ್ಟಿಯಲ್ಲಿ ಹೆಣ್ಣೆಂದರೆ ಹಡೆಯುವ ಯಂತ್ರ ಮಾತ್ರ. ಹೆರಿಗೆಯ ನೋವು ಸಂಕಟಗಳು ಈತನಿಗೆ ಗೊತ್ತಿಲ್ಲ. ಬ್ರಾಹ್ಮಣರ ಸಂಖ್ಯೆ ಹೆಚ್ಚಿಸಲು ಬ್ರಾಹ್ಮಣ ಮಹಿಳೆ ಎಷ್ಟು ನೋವು ತಿಂದಾದರೂ ಡಜನ್ ಮಕ್ಕಳನ್ನು ಹಡೆಯಬೇಕೆಂಬುದಷ್ಟೇ ಈತನ ವಾದ. ಬ್ರಾಹ್ಮಣರ ಸಂಖ್ಯೆ ಹೆಚ್ಚಿಸುವ ಕಾಳಜಿ ಇದ್ದರೆ ಇಂಥವರು ತಾವೇ ಲಿಂಗ ಪರಿವರ್ತನೆ ಮಾಡಿಸಿಕೊಂಡು ಡಜನ್‌ಗಟ್ಟಲೇ ಮಕ್ಕಳನ್ನು ಹಡೆಯಲಿ. ಆಗ ಇವರಿಗೆ ಹೆರಿಗೆಯ ನೋವು ಗೊತ್ತಾಗುತ್ತದೆ.
ಈ ಭಾಗವತ್, ವಿಜಯ ವರ್ಗಿಯಾ, ಮುತಾಲಿಕ್ ಇವರೆಲ್ಲರ ಚಿಂತನೆಯನ್ನು ಬೆಳೆಸಿದ್ದು ಆರೆಸ್ಸೆಸ್. 1925ರಲ್ಲಿ ಹುಟ್ಟಿಕೊಂಡ ಈ ಫ್ಯಾಸಿಸ್ಟ್ ಸಂಘಟನೆ ರೂಪುಗೊಂಡುದು ಮನುವಾದ ಹಾಗೂ ಹಿಟ್ಲರ್‌ನ ನಾಝಿ ಸಿದ್ಧಾಂತದ ನೆಲೆಗಟ್ಟಿನಲ್ಲಿ. ಅಂತಲೇ ಈ ಸಂಘಟನೆಯಲ್ಲಿ ಬೆಳೆದವರು ಇದೇ ರೀತಿ ಅವಿವೇಕಿಗಳಂತೆ ಮಾತಾಡುತ್ತಾರೆ. ಅವಕಾಶ ಸಿಕ್ಕರೆ ಗುಜರಾತಿನಂತೆ ಗರ್ಭಿಣಿಯ ಹೊಟ್ಟೆಯನ್ನು ಸೀಳುತ್ತಾರೆ. ಅಂತಲೇ ಆಧುನಿಕ ಭಾರತದ ಮೊದಲ ಶತ್ರು ಸಂಘಪರಿವಾರ ಎಂಬುದನ್ನು ಮರೆಯಬಾರದು.
ಮೋಹನ್ ಭಾಗವತ್, ವಿಜಯ ವರ್ಗಿಯಾ, ಮುತಾಲಿಕ್ ಹೇಳಿಕೆಗಳು ಮಹಿಳೆ ಸಮಾನತೆಗೆ ಅರ್ಹಳಲ್ಲ ಎಂಬ ಸಂದೇಶವನ್ನು ನೀಡುತ್ತವೆ. ಅತ್ಯಾಚಾರಕ್ಕೊಳಗಾಗುವ ಮಹಿಳೆ ಲಕ್ಷ್ಮಣರೇಖೆ ದಾಟಿ ಹೋದ ಪರಿಣಾಮವಾಗಿ ಹೀಗಾಗಿದೆ ಎಂದು ಪರೋಕ್ಷವಾಗಿ ಅತ್ಯಾಚಾರಿಗಳನ್ನು ಸಮರ್ಥಿಸುತ್ತವೆ. ಈ ಸಂದರ್ಭದಲ್ಲಿ ಈ ರೀತಿ ಹೇಳಿಕೆಗಳನ್ನು ನೀಡುವುದು ಅತ್ಯಾಚಾರ ಎಸಗಿದವರು ಮಾಡಿದಷ್ಟೇ ಸಮಾನ ಅಪರಾಧವಾಗಿದೆ.
Please follow and like us:
error