ರಂಗೇರಿದ ಬಳ್ಳಾರಿ ಕಣ

ಬೆಂಗಳೂರು, ನ.: ಬಳ್ಳಾರಿ ಉಪ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿಯ ಅಭ್ಯರ್ಥಿ ಗಾದಿ ಲಿಂಗಪ್ಪ, ಕಾಂಗ್ರೆಸಿನ ರಾಮ್ ಪ್ರಸಾದ್ ಹಾಗೂ ಸ್ವತಂತ್ರ ಅಭ್ಯರ್ಥಿ ಶ್ರೀರಾಮುಲು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡೆಸಿ ಮತ ಯಾಚಿಸುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿ ಶ್ರೀರಾಮುಲು ಕ್ಷೇತ್ರ ವ್ಯಾಪ್ತಿಯ ಕಪ್ಪಗಲ್, ಸಂಗನಕಲ್ಲು ಮತ್ತು ಸಿರಿವಾರ ಗ್ರಾಮ ಸೇರಿದಂತೆ ವಿವಿಧೆಡೆ ತನ್ನ ಅಭಿಮಾನಿಗಳೊಂದಿಗೆ ಅಬ್ಬರದ ಪ್ರಚಾರ ನಡೆಸಿ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಶ್ರೀರಾಮುಲು ಜೊತೆ ಅವರ ಪತ್ನಿ ಭಾಗ್ಯಲಕ್ಷ್ಮಿ ಕೂಡ ಮತ ಯಾಚಿಸಿದ್ದು ವಿಶೇಷವಾಗಿತ್ತು.
ಈ ಮಧ್ಯೆ ಕ್ಷೇತ್ರದಲ್ಲೇ ಬಿಡು ಬಿಟ್ಟಿರುವ ರಾಜ್ಯಸಭಾ ಸದಸ್ಯ ಅನಿಲ್‌ಲಾಡ್ ಮತ್ತು ಹಿರಿಯ ಮುಖಂಡ ಎನ್.ವೈ.ಹನುಮಂತಪ್ಪ ಕಾಂಗ್ರೆಸ್ ಅಭ್ಯರ್ಥಿ ರಾಮ್ ಪ್ರಸಾದ್ ಪರ ಪ್ರಚಾರ ನಡೆಸಿ ಮತ ಯಾಚಿಸಿದರು. ಮೂರು ವರ್ಷಗಳಲ್ಲಿ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಜನತೆ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ಸಚಿವ ಸುರೇಶ್ ಕುಮಾರ್ ಕ್ಷೇತ್ರದ ವ್ಯಾಪ್ತಿಯ ಕೌಲ್ ಬಝಾರ್‌ನಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ, ಮಾಜಿ ಸಚಿವ ಶ್ರೀರಾಮುಲು ಪಕ್ಷ ಕಷ್ಟದಲ್ಲಿದ್ದ ಸಂದರ್ಭದಲ್ಲಿ ಸಹಾಯ ಮಾಡಿದ್ದು, ಅದರ ಅನುಕೂಲವನ್ನು ಕೂಡ ಅವರು ಪಡೆದುಕೊಂಡಿದ್ದಾರೆ. ಆದರೆ, ಪಕ್ಷವನ್ನು ನಿರ್ನಾಮ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಗುಡುಗಿದರು.
ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತಿದ್ದು, ಜನಾಭಿಪ್ರಾಯ ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪನವರ ಪರವಾಗಿದೆ. ಚುನಾವಣೆಯಲ್ಲಿ ಬಿಜೆಪಿಯ ಗೆಲುವು ನಿಶ್ಚಿತ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಚಿವ ಸುರೇಶ್ ಕುಮಾರ್ ಮಾತನಾಡಿ, ಪಕ್ಷಕ್ಕೆ ದ್ರೋಹ ಬಗೆದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಬಿಜೆಪಿ ಶ್ರೀರಾಮುಲು ಅವರನ್ನು ರಾಜಕೀಯವಾಗಿ ಮೇಲಕ್ಕೆ ತಂದಿದ್ದು, ಅದಕ್ಕೆ ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು. ಶ್ರೀರಾಮುಲು ಅವರಿಗೆ ಪಕ್ಷ ಸೂಕ್ತ ಸ್ಥಾನ ನೀಡಿದೆ. ಈಗ ಅವರು ಬಿಜೆಪಿಯ ವಿರುದ್ಧ ಮಾತನಾಡುವುದು ಸರಿಯಲ್ಲ. ಬಳ್ಳಾರಿ ಜಿಲ್ಲಾ ಘಟಕದ ಎಲ್ಲ ಮುಖಂಡರು, ಕಾರ್ಯಕರ್ತರು ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು. ರಾಜಕಾರಣ ಹುಡುಗಾಟವಲ್ಲ. ಗಾಂಭೀರ್ಯತೆ ಇರಬೇಕು. ಹುಡುಗಾಟ ಮಾಡುವವರಿಗೆ ಮತದಾರರು ಸೂಕ್ತ ಪಾಠ ಕಲಿಸಬೇಕು ಎಂದು ಅವರು ಕೋರಿದರು. ಮೂರು ವರ್ಷಗಳಲ್ಲಿ ಬಳ್ಳಾರಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅಭಿವೃದ್ಧಿಗೆ ಆದ್ಯತೆ ನೀಡಿ ಬಳ್ಳಾರಿಯ ಮತದಾರರು ಬಿಜೆಪಿಗೆ ಮತ ನೀಡಿದರೆ ಪಕ್ಷದ ಅಭ್ಯರ್ಥಿ ಗಾದಿ ಲಿಂಗಪ್ಪ ಗೆಲುವು ನಿಶ್ಚಿತ ಎಂದು ಸುರೇಶ್ ಕುಮಾರ್ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಚಾರಕ್ಕೆ ಯಡಿಯೂರಪ್ಪ ಬೇಡ: ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣಾ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬರುವುದು ಬೇಡ ಎಂದು ಬಳ್ಳಾರಿಯ ಮಹಾ ನಗರ ಪಾಲಿಕೆ ಸದಸ್ಯರು ಹಾಗೂ ಶಾಸಕರು ಮನವಿ ಮಾಡಿದ್ದಾರೆ. ಈ ಸಂಬಂಧ ನಾಳೆ (ನ.19) ಬಳ್ಳಾರಿಯ ಮುಖಂಡರ ನಿಯೋಗವೊಂದು ಬೆಂಗಳೂರಿಗೆ ಬಂದು ಪಕ್ಷದ ಮುಖಂಡರಿಗೆ ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.
ಓರ್ವನ ಸೆರೆ: ಬಳ್ಳಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದ ಆಪಾದನೆಯ ಮೇಲೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಹ್ಲಾದ್ ಎಂಬ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು ಆರೋಪಿಯಿಂದ ಸುಮಾರು 9.50 ಲಕ್ಷ ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply