ಗೂಗ್ಲಿ ಚಿತ್ರ ವಿಮರ್ಶೆ

ಮಾತು ಮಾತಿನಲ್ಲೂ ಗೂಗ್ಲಿ ಎಸೆತ, ಸೆಂಚುರಿ ಖಚಿತ
        ರ್‍ಯಾಂಕ್ ಸ್ಟೂಡೆಂಟ್ ಆದರೂ ತುಂಬಾ ತರ್‍ಲೆ. ಹುಡುಗೀರೆಂದರೆ ಮಾರುದ್ದ ದೂರ ನಿಲ್ಲೋ ಹುಡುಗ ಅಚಾನಕ್ಕಾಗಿ ಲವ್ವಲ್ಲಿ ಬಿದ್ದು ಒದ್ದಾಡಿ, ಬದುಕಲ್ಲಿ, ಲವ್ವಲ್ಲಿ ಮೇಲೆದ್ದು ಬರುವ ಕಥೆಯನ್ನು ಪವನ್ ಒಡೆಯರ್ ಇಂಟರೆಸ್ಟಿಂಗ್ ಆಗಿ, ಕ್ಯಾಚಿ ಡೈಲಾಗ್‌ಗಳಿಂದ, ಗೂಗ್ಲಿಯಂಥ ಮಾತಿನ ಎಸೆತಗಳಿಂದ, ಬೌಂಡರಿ ಬಾರಿಸುವಂಥ ಹಾಡುಗಳಿಂದ, ಸಿಕ್ಸರ್ ಹೊಡೆಯುವಂಥ ಫೈಟ್‌ಗಳಿಂದ ಎರಡೂವರೆ ಗಂಟೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ.
      ಪ್ಯಾರ್‌ಗೆ ಆಗ್ ಬುಟೈತೆ ಹಾಡಿನಿಂದಲೇ ಸದ್ದುಮಾಡಿದ್ದ ಗೋವಿಂದಾಯನಮಃ ಸಿನಿಮಾ ಕಥೆಯ ನಿರೂಪಣೆಯೂ ಗೆದ್ದಿತ್ತು. ಆ ಮೂಲಕ ಪವನ್ ಒಡೆಯರ್ ಭರವಸೆ ಮೂಡಿಸಿದ್ದರು. ಲೋ ಬಜೆಟ್ ಆಗಿದ್ದರೂ ಸಿನಿಮಾ ಸೂಪರ್‌ಹಿಟ್ ಆಗಿತ್ತು. ಈಗ ಪವನ್ ಒಡೆಯರ್ ಬಿಗ್ ಬಜೆಟ್ ಸಿನಿಮಾವನ್ನು ತುಂಬಾ ರಿಚ್ ಆಗಿ,   ಸ್ಟೈಲಿಶ್ ಆಗಿ ತೆರೆಗೆ ತಂದು ಜನರಿಗೆ ರೀಚ್ ಆಗಿದ್ದಾರೆ.
       ಅನಾಥ ಯುವತಿಗೆ ಡಾಕ್ಟರ್ ಆಗುವ ಕನಸು. ಗೊತ್ತು ಗುರಿ ಇಲ್ಲದ ಆತನಿಗೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವ ಯೋಚನೆ-ಯೋಜನೆ ಇದ್ದರೂ ಮಹಾನ್ ಕಿರಾತಕ. ಕಾಲೇಜಿನ ಪ್ರಿನ್ಸಿಯನ್ನೇ ಬಿಡದ ಶರತ್ ಹುಡುಗೀರನ್ನ ಬಿಡ್ತಾನಾ? ಅದಕ್ಕೆ ಕಾಲೇಜಿನಲ್ಲಿ ಯಾರೂ ಆತನ ತಂಟೆಗೆ ಹೋಗಲ್ಲ, ಮಾತನಾಡಿಸಲ್ಲ. ಇವನು ಅಷ್ಟೇ. ಯಾರೂ ತಂಟೆಗೆ ಹೋಗಲ್ಲ ಆದರೆ ಯಾರಾದರೂ ಹುಡುಗಿರನ್ನ ಚುಡಾಯಿಸಿದರೆ ಗುನ್ನಾ ಗ್ಯಾರಂಟಿ.
        ಆದರೂ ಶರತ್ ರ್‍ಯಾಂಕ್ ಸ್ಟೂಡೆಂಟ್. ಶರತ್‌ನ ಮಾತಿನ ಮೋಡಿಗೆ, ಜಾಣತನಕ್ಕೆ ಸ್ವಾತಿ ಫೀದಾ. ಸ್ವಾತಿಯ ನಗು, ಮುಂಗುರುಳು, ಕೇರ್‌ನೆಸ್‌ನಿಂದಾಗಿ ಲವ್ ಎಂದರೆ ಮೂಗು ಮುರಿಯುವ ಶರತ್ ಸ್ವಾತಿಗೆ ಮನಸು ಕೊಡುತ್ತಾನೆ. ಆದರೆ ಇಬ್ಬರಿಗೂ ಇಷ್ಟವಿದ್ದರೂ ಫಸ್ಟ್ ಪ್ರಪೋಸ್‌ಗಾಗಿ ಕಾಯುವಾಟ. ಇನ್ನೇನು ಪ್ರಪೋಸ್ ಮಾಡಬೇಕು ಎನ್ನುವಷ್ಟರಲ್ಲಿ ಸ್ವಾತಿಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿರುತ್ತಾಳೆ. ಅಲ್ಲಿ ಸಹಪಾಠಿಯೊಬ್ಬ ಆಕೆಯನ್ನು ಉಪಚರಿಸುತ್ತಿದ್ದಾನೆ. ಇದನ್ನ ಕಂಡ ಶರತ್ ರಂಪಾಟ ಅಷ್ಟೇ ಅಲ್ಲ ಲವ್‌ನ್ನೇ ಕಟ್ ಮಾಡಿ ಹೊರಟು ಬಿಡುತ್ತಾನೆ.
       ಎಷ್ಟೇ ಆದರೂ ಫಸ್ಟ್ ಲವ್ ಅಲ್ವಾ ಮರೆಯೋಕೆ ಆಗಲ್ಲ. ಘಟನೆ ನಡೆದು ಎರಡು ವರ್ಷಗಳೇ ಉರುಳಿ, ಶರತ್ ದೇಶದ ಮಹಾನ್ ವಾಣಿಜ್ಯೋದ್ಯಮಿಯಾದರೂ ಸ್ವಾತಿಯ ಪ್ರೀತಿಯ ಸೆಳೆತ ಇದ್ದೇ ಇರುತ್ತೆ. ಸ್ವಾತಿಯ ಜನುಮ ದಿನದಂದು ಫೊನ್‌ನಲ್ಲಿ ಪ್ರಪೋಸ್ ಮಾಡಿದರೂ ಆಕೆ ಪ್ರೀತಿ ನಿರಾಕರಿಸುತ್ತಾಳೆ. ಅಲ್ಲಿಗೆ ಭಗ್ನಪ್ರೇಮಿಯಂಥಾದ ಶರತ್ ವಿದೇಶದಿಂದ ಮರಳಿ ಭಾರತಕ್ಕೆ ಬಂದು ಹೆತ್ತವರ ಅಣತಿಯಂತೆ ಮದುವೆಯಾಗಲು ಸಿದ್ಧನಾಗುತ್ತಾನೆ.
         ಆಕಸ್ಮಿಕವಾಗಿ ಮತ್ತೇ ಶರತ್‌ಗೆ ಕಾಣುವ ಸ್ವಾತಿ ಮತ್ತೇ ಆತನಿಗೆ ಸಿಗ್ತಾಳಾ. ಇಬ್ಬರೂ ಹೇಗೆ ಭೇಟಿಯಾಗ್ತಾರೆ. ಒಂದಾಗ್ತಾರಾ ಎನ್ನುವುದನ್ನು ತುಂಬಾ ನೀಟಾಗಿ ಪವನ್ ಒಡೆಯರ್ ಹೇಳಿದ್ದಾರೆ. ಆದರೆ ಇಬ್ಬರ ಮುನಿಸಿಗೆ ಅಂಥ ಗಾಢವಾದ ಕಾರಣ ಎಲ್ಲೂ ಕಾಣಲ್ಲ. ಅದರ ಬಗ್ಗೆ ಪವನ್ ಕೊಂಚ ವರ್ಕ್‌ಔಟ್ ಮಾಡಬೇಕಿತ್ತು ಎನಿಸುತ್ತದೆ. ಇದೊಂದನ್ನ ಬಿಟ್ಟರೆ ಪವನ್ ಮತ್ತೆಲ್ಲೂ ಸೋತಿಲ್ಲ.
         ಸ್ಟೈಲಿಶ್ ಹುಡುಗನಾಗಿ, ಬಿಸಿನೆಸ್‌ಮ್ಯಾನ್ ಆಗಿ, ತರ್‍ಲೆಯಾಗಿ, ವಿರಹಪ್ರೇಮಿಯಾಗಿ ಯಶ್ ಇಷ್ಟವಾಗುತ್ತಾರೆ. ಡ್ಯಾನ್ಸನಲ್ಲಿ, ಫೈಟ್‌ನಲ್ಲೂ ಯಶ್ ರಾಕಿಂಗ್ ಸ್ಟಾರ್. ನವಿರಾಗಿರುವ ಪ್ರೇಮಕಥೆಯಾಗಿದ್ದರೆ ಬಹುಶಃ ಗೂಗ್ಲಿ ಬೋರ್ ಆಗುತ್ತಿತ್ತು. ಮೊನಚಾದ ಡೈಲಾಗ್‌ಗಳಿಂದ ಹುಡುಗಿಯರನ್ನ ಬತಾ ಪಡ್ಡೆಗಳ ಮನಸು ಗೆಲ್ಲುವ ಮಾತುಗಳೇ ಚಿತ್ರದ ನಿಜವಾದ ಜೀವಾಳ. ಪವನ್ ಒಡೆಯರ್ ಚಿತ್ರಕಥೆ, ಸಂಭಾಷಣೆಯಲ್ಲಿ ಕೈ ಚಳಕ ತೋರಿಸಿದ್ದಾರೆ. ಕೃತಿ ಕರಬಂಧ ಪಾತ್ರಕ್ಕೆ ನ್ಯಾಯವೊದಗಿಸಿದ್ದಾರೆ. ಸಾಧುಕೋಕಿಲಾ ಓ ಮಲ್ಲಿಗೆಯ ಫೋಟೋಗ್ರಾಫರ್ ಮುಸ್ತಫಾ ಆಗಿ ಕೆಲವೇ ಹೊತ್ತಿದ್ದರೂ ನೆನಪಲ್ಲುಳಿಯುತ್ತಾರೆ. ಅನಂತ್‌ನಾಗ್ ಅಪ್ಪನಾಗಿ ಮತ್ತೊಮ್ಮೆ ಗೆದ್ದಿದ್ದಾರೆ. ಜೋಶ್ವಾ ಶ್ರೀಧರ್ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಜಯಣ್ಣ ಹಾಗೂ ಭೋಗೆಂದ್ರ ಸಿನಿಮಾದ ಅದ್ಧೂರಿಗೆ ಬೇಕಾದ್ದನ್ನೆಲ್ಲ ಕೊಟ್ಟಿರುವುದು ಎದ್ದು ಕಾಣುತ್ತದೆ. ಚಿತ್ರ ನೋಡಿ ಹೊರಬಂದ ಪ್ರೇಕ್ಷಕ ಮತ್ತೊಮ್ಮೆ ಸಿನಿಮಾ ನೋಡಬೇಕು ಎನ್ನುವಂಥ ಪ್ರತಿಕ್ರಿಯೆ ಕೊಟ್ಟಿರುವುದನ್ನು ಗಮನಿಸಿದರೆ ಬಂಡವಾಳ ವಾಪಸ್ ಬರುವುದಂತೂ ಖಚಿತ. ಗೂಗ್ಲಿಗೆ ಶತಕ ಬಾರಿಸುವ ಎಲ್ಲ ಲಕ್ಷಣಗಳು ಇವೆ. ನೋಡಣ ಏನಾಗತ್ತೆ.
-ಚಿತ್ರಪ್ರಿಯ ಸಂಭ್ರಮ್.
ಪ್ರದರ್ಶನ : ಶಾರದಾ ಚಿತ್ರಮಂದಿರ, ಕೊಪ್ಪಳ.
Please follow and like us:
error