You are here
Home > Koppal News > ನಿಂತ ನೆಲ ಜಾರಿದಾಗ ನೆಹರೂ ನೆನಪು

ನಿಂತ ನೆಲ ಜಾರಿದಾಗ ನೆಹರೂ ನೆನಪು

ಲೋಕಸಭಾ ಚುನಾವಣೆ ಸೋಲಿನ ನಂತರ ಕಾಂಗ್ರೆಸ್‌ಗೆ ದಿಢೀರನೇ ನೆಹರೂ ನೆನಪಾಗಿದೆ. ಕಾರಣ ಈ ಸೋಲು ಅಂತಿಂಥ ಸೋಲಲ್ಲ. ಸಂಸತ್ತಿನ ಪಕ್ಷದ ಸದಸ್ಯ ಬಲ 206ರಿಂದ 44ಕ್ಕೆ ಕುಸಿಯುವಂಥ ಅತ್ಯಂತ ಅವಮಾನಕಾರಿ ಯಾದ ಸೋಲು. ಈಗ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಪ್ರತಿಪಕ್ಷ ಸ್ಥಾನಮಾನವೂ ತಪ್ಪಿದೆ. ಹೀಗೆ ಕಾಲ ಕೆಳಗಿನ ನೆಲವೇ ಕುಸಿದಾಗ ಮತ್ತೆ ಜವಾಹರಲಾಲ್ ನೆನಪಾಗಿದ್ದಾರೆ. ನೆಹರೂ ಸಿದ್ಧಾಂತ ಪರಂಪರೆಯನ್ನು ಜನರಿಗೆ ತಲುಪಿ ಸಲು ಸಮೂಹ ಸಂಪರ್ಕ ಕಾರ್ಯಕ್ರಮ ನಡೆಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಇದಕ್ಕಾಗಿ ವರ್ಷವಿಡೀ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆಧುನಿಕ ಭಾರತವನ್ನು ರೂಪಿಸಿದ ನಾಲ್ವರು ಪ್ರಮುಖರಲ್ಲಿ ಒಬ್ಬರಾದ ಜವಾಹರಲಾಲ್ ನೆಹರೂ ಅವರನ್ನು ಖಳನಾಯಕನಂತೆ ಬಿಂಬಿಸುವ ಹುನ್ನಾರವೊಂದು ಈ ದೇಶದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ‘‘ದೇಶದ ದುಸ್ಥಿತಿಗೆ ನೆಹರೂ ಕಾರಣ, ಸರ್ದಾರ ಪಟೇಲ್ ಪ್ರಧಾನಿಯಾಗಿದ್ದರೆ ಭಾರತದ ಚಿತ್ರಣವೇ ಬದಲಾಗಿರುತ್ತಿತ್ತು. ನೆಹರೂ ಸಮಾಜವಾದ ಎಂಬ ವಿದೇಶಿ ಸಿದ್ಧಾಂತವನ್ನು ದೇಶದ ಮೇಲೆ ಹೇರಿದರು’’ ಹೀಗೆ ತರಾವರಿ ಟೀಕೆಗಳನ್ನು ಆರೆಸ್ಸೆಸ್ ಅತ್ಯಂತ ಯೋಜನಾ ಬದ್ಧ ವಾಗಿ ನಡೆಸಿದೆ. ಸಾಮಾಜಿಕ ಜಾಲತಾಣ ಗಳನ್ನು ಇದಕ್ಕಾಗಿ ಬಳಸಿ ಕೊಳ್ಳಲಾಗುತ್ತಿದೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ತೀವ್ರಗೊಂಡ ಈ ನೆಹರೂ ವಿರೋಧಿ ಪ್ರಚಾರವನ್ನು ಚರಿತ್ರೆ ಗೊತ್ತಿಲ್ಲದ ಹೊಸ ಪೀಳಿಗೆಯ ಯುವಕರು ನಂಬುವಂತೆ ಮಾಡಲಾಗು ತ್ತಿದೆ. ಇತಿಹಾಸವನ್ನು ಓದುವ ವ್ಯವಧಾನ ವಿಲ್ಲದ ವಿದ್ಯಾವಂತ ಯುವಕರು ಇಂರ್ಟನೆಟ್‌ನಲ್ಲಿ ಗೂಗಲ್‌ಗೆ ಹೋಗಿ ಅಲ್ಲಿ ಸಿಗುವ ನೆಹರೂ ಬಗೆಗಿನ ಮಾಹಿತಿ ತಿಳಿದುಕೊಳ್ಳುತ್ತಾರೆ. ಚರ್ಚೆಯೇ ಇಲ್ಲದೇ ನೆಹರೂವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಲ್ಲಿ ಸಂಘ ಪರಿವಾರದ ಫ್ಯಾಸಿಸ್ಟರು ಯಶಸ್ವಿಯಾಗುತ್ತಿದ್ದಾರೆ. 

ನೆಹರೂ ಕುರಿತ ಆರೆಸ್ಸೆಸ್ ಅಪಪ್ರಚಾರ ಇದೇನು ಹೊಸದಲ್ಲ. ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದ ಈ ರೀತಿ ಕುಚೇಷ್ಟೇ ನಡೆದಿದೆ. ಭಾರತವನ್ನು ‘ಹಿಂದೂರಾಷ್ಟ್ರ’ವನ್ನಾಗಿ ಮಾಡಬೇಕೆಂಬ ಹುನ್ನಾರವನ್ನು ನೆಹರೂ, ಡಾ.ಅಂಬೇಡ್ಕರ್ ಜೊತೆಗೆ ಸೇರಿ ವಿಫಲಗೊಳಿಸಿದರು. ಖಾಸಗಿ ಬಂಡವಾಳಕ್ಕೆ ಸರಿಸಾಟಿಯಾಗಿ ಸಾರ್ವಜನಿಕ ಉದ್ಯಮ ರಂಗವನ್ನು ಕಟ್ಟಿ ಬೆಳೆಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಜಾತ್ಯತೀತ ಜನತಾಂತ್ರಿಕ ಭಾರತಕ್ಕೆ ಭದ್ರ ಅಡಿಪಾಯ ಹಾಕಿದರು. ಈ ಎಲ್ಲ ಕಾರಣಗಳಿಂದ ನೆಹರೂರನ್ನು ದ್ವೇಷಿಸುವ ಪ್ರತಿಗಾಮಿ ಕೂಟವೊಂದು ಈ ದೇಶದಲ್ಲಿದೆ. ಇತ್ತೀಚೆಗೆ ಹಿರಿಯ ಚಿಂತಕ ಕೆ.ಮರುಳಸಿದ್ದಪ್ಪ ಅವರ ಜೊತೆ ಮಾತನಾಡುತ್ತಿದ್ದಾಗ ನೆಹರೂ ಕೊಡುಗೆಯನ್ನು ಸ್ಮರಿಸಿಕೊಂಡರು. ‘‘ಸ್ವಾತಂತ್ರ ನಂತರ ಮೊದಲ ಹದಿನೇಳು ವರ್ಷ ನೆಹರೂ ಪ್ರಧಾನಿಯಾಗಿರದಿದ್ದರೆ ದೇಶದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ’’ ಅಂದರು. ಫ್ಯಾಸಿಸ್ಟ್ ಕೋಮುವಾದಿಗಳ ಇಷ್ಟೆಲ್ಲ ಅಬ್ಬರದ ನಡುವೆಯೂ ಒಂದಿಷ್ಟು ಉಸಿರಾಡುವಂಥ ವಾತಾವರಣ ಎಂಬುದಿದ್ದರೆ ಅದು ನೆಹರೂ ಕೊಡುಗೆ ಎಂಬುದರಲ್ಲಿ ಎರಡು ಮಾತಿಲ್ಲ. ರಾಮಚಂದ್ರಾ ಗುಹಾ ಅವರು ಸಹ ಇದನ್ನು ದಾಖಲಿಸಿದ್ದಾರೆ. ಇಂಥ ನೆಹರೂ ವಿರುದ್ಧ ಅಪಪ್ರಚಾರ ತೀವ್ರಗೊಂಡಾಗ ಕಾಂಗ್ರೆಸ್ಸಿನಿಂದ ಕನಿಷ್ಠ ಪ್ರತಿಕ್ರಿಯೆಯಾದರೂ ಬರುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ ನೆಹರೂ ಪರಂಪರೆ ಯನ್ನು ಎತ್ತಿ ಹಿಡಿಯುವ ಸಮರ್ಥಿಸಿಕೊಳ್ಳುವ ಒಂದೇ ಒಂದು ಹೇಳಿಕೆ ಕಾಂಗ್ರೆಸ್ ನಾಯಕತ್ವದಿಂದ ಬರಲಿಲ್ಲ. ಇವರಿಗೆ ನೆಹರೂ ಬಗ್ಗೆ ಗೊತ್ತಿಲ್ಲವೋ ಇಲ್ಲವೇ ಬೇಕಂತಲೇ ವೌನ ತಾಳಿದ್ದಾರೋ ಒಂದು ಅರ್ಥವಾಗಲಿಲ್ಲ. ಆದರೆ ಪಕ್ಷವೇ ಮುಳುಗಿ ಹೋಗುತ್ತಿರುವಾಗ 85 ನಿಗಮ ಮಂಡಳಿ ಹುದ್ದೆಗಾಗಿ ಪ್ರಾಣ ಹೋದವರಂತೆ ಪರದಾಡುತ್ತಿರುವ ಕರ್ನಾಟಕದ ಕಾಂಗ್ರೆಸ್ಸಿ ನವರನ್ನು ನೋಡಿದಾಗ ಇವರ ಹಣೆಬರಹ ಇಷ್ಟೇ ಎನಿಸಿತು. ಇತ್ತೀಚೆಗೆ ನನ್ನ ತವರು ಜಿಲ್ಲೆ ವಿಜಾಪುರಕ್ಕೆ ಹೋಗಿದ್ದೆ. ಗೆಳೆಯ ಅನಿಲ ಹೊಸಮನಿ ಅವರ ‘‘ಬಹುಜನ ನಾಯಕ’’ ದಿನಪತ್ರಿಕೆಯ ಮೂರನೆ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಅವರು ಆಹ್ವಾನಿಸಿದ್ದರು. ತಂದೆ ಚಂದ್ರಶೇಖರ ಹೊಸಮನಿಯವರಂತೆ ಕಟ್ಟಾ ಅಂಬೇಡ್ಕರ್‌ವಾದಿಯಾದ ಅನಿಲ್ ಹೊಸಮನಿ ಇಂಡಿ ಎಂಬ ತಾಲೂಕು ಕೇಂದ್ರದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದರು. ಆ ಕಾರ್ಯಕ್ರಮದಲ್ಲಿ ಇಬ್ಬರು ಸ್ಥಳೀಯ ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದರು. ನಾನು ದೇಶಕ್ಕೆ ‘‘ನೆಹರೂ, ಅಂಬೇಡ್ಕರ್, ಗಾಂಧಿ, ವೌಲಾನಾ ಆಝಾದ್ ನೀಡಿದ ಕೊಡುಗೆ ಬಗ್ಗೆ ಮಾತಾಡಿದೆ. ಆದರೆ ಈ ಶಾಸಕರಿಗೆ ನೆಹರೂ ನೆನಪಾಗಲೇ ಇಲ್ಲ. ಆ ಬಗ್ಗೆ ಅವರು ಮಾತಾಡಲೇ ಇಲ್ಲ. ಇದು ಇವರಿಬ್ಬರ ಮಾತಲ್ಲ. ಕಾಂಗ್ರೆಸ್‌ನಲ್ಲಿ ಈಗ ಇರುವ ಬಹುತೇಕ ನಾಯಕರು ಗಾಂಧಿ, ನೆಹರೂ ಸಿದ್ಧಾಂತ ಓದಿ ತಿಳಿದುಕೊಂಡು ಕಾಂಗ್ರೆಸ್ಸಿಗೆ ಬಂದವರಲ್ಲ. ಅವರಿಗೆ ಸಿದ್ಧಾಂತ ತಿಳಿಸುವ ಕೆಲಸವನ್ನು ಪಕ್ಷವೂ ಮಾಡಿಲ್ಲ. ಅಂತಲೇ ಅಧಿಕಾರಕ್ಕಾಗಿ, ಹಣಕ್ಕಾಗಿ, ಇವರೆಲ್ಲ ಕಾಂಗ್ರೆಸ್ ಸೇರಿದ್ದಾರೆ. ಇವರಲ್ಲಿ ಅನೇಕರು ತಮ್ಮ ಕ್ಷೇತ್ರಗಳಲ್ಲಿ ವಿಶ್ವಹಿಂದೂ ಪರಿಷತ್ತಿನ ಪದಾಧಿಕಾರಿಗಳಾಗಿರುತ್ತಾರೆ, ಇಲ್ಲವೇ ದೇಣಿಗೆಯನ್ನಾದರೂ ನೀಡು ತ್ತಿರುತ್ತಾರೆ. ಕಾಂಗ್ರೆಸ್ಸಿನ ಕೆಳಹಂತದ ನಾಯಕರ ಮನಸ್ಥಿತಿ ಇದಾದರೆ ಕಾಂಗ್ರೆಸ್ಸಿನ ಉನ್ನತ ನಾಯಕತ್ವ 2001ರಲ್ಲಿ ನೆಹರೂ ತತ್ವಕ್ಕೆ ತಿಲಾಂಜಲಿ ನೀಡಿತು. ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಜಾಗತೀಕರಣದ ಬಲೆಗೆ ತಾನು ಸಿಲುಕಿ ದೇಶವನ್ನು ಪ್ರಪಾತಕ್ಕೆ ತಳ್ಳಿದ ಕಾಂಗ್ರೆಸ್ ವಿದೇಶಿ ಮತ್ತು ಖಾಸಗಿ ಬಂಡವಾಳಕ್ಕೆ ರತ್ನಗಂಬಳಿ ಹಾಸಿತು. ಮನಮೋಹನ ಸಿಂಗ್, ಚಿದಂಬರಂ ರಂಥ ವಿಶ್ವಬ್ಯಾಂಕ್ ಏಜೆಂಟರು ಸಾರ್ವಜನಿಕ ಉದ್ಯಮರಂಗದ ನಾಶಕ್ಕೆ ನಾಂದಿ ಹಾಡಿದರು. ಅದೇ ಕಾಲಘಟ್ಟದಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಳ್ಳಲು ಜಾತಿವಾದಿ ಬ್ರಾಹ್ಮಣ ಪ್ರಧಾನಿ ನರಸಿಂಹ ರಾವ್ ಹಸಿರು ನಿಶಾನೆ ತೋರಿಸಿದರು. ನೆಹರೂ ಕೂಡ ಬ್ರಾಹ್ಮಣ ಜಾತಿಯಲ್ಲಿ ಜನಿಸಿದರೂ ಆಧುನಿಕ ಜಾತ್ಯತೀತ ಸಮಾಜ ವಾದಿ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದರು. ಅಂತಲೇ ನೆಹರೂ, ಅನಂತಮೂರ್ತಿಯಂಥ ‘‘ಬ್ರಾಹ್ಮಣ’’ರನ್ನು ಮನುವಾದಿಗಳು ಇಷ್ಟಪಡುವುದಿಲ್ಲ. ಸಂಘಪರಿವಾರಕ್ಕೆ ನರಸಿಂಹ ರಾವ್ ಅವರಂಥ ಬ್ರಾಹ್ಮಣರು ಬೇಕು, ಈ ಮೋದಿ ಈಶ್ವರಪ್ಪನಂಥ ಶೂದ್ರರು ಬೇಕು. ಅಂತಲೇ ‘‘800 ವರ್ಷಗಳ ನಂತರ ದಿಲ್ಲಿ ಸಿಂಹಾಸನ ಹಿಂದೂಗಳ ಕೈಗೆ ಸಿಕ್ಕಿದೆ’’ ಎಂದು ಅಶೋಕ ಸಿಂಘಾಲ ಸಂಭ್ರಮಿಸಿದ್ದಾರೆ. ಹಾಗೆಂದು ನೆಹರೂ ಕಟ್ಟಾ ಸಮಾಜವಾದಿ ಯಾಗಿದ್ದರು ಎಂದು ಹೇಳಿದರೆ ಕಮ್ಯುನಿಸ್ಟರು, ಸೋಷಲಿಸ್ಟರು ಒಪ್ಪಿಕೊಳ್ಳುವುದಿಲ್ಲ. ಆದರೆ ನೆಹರೂ ಎಡ ಒಲವಿನ ಪ್ರಜಾಪ್ರಭುತ್ವವಾದಿ ಯಾಗಿದ್ದರು. ಸಮಾಜವಾದಿ ಭಾರತ ಅವರ ತಕ್ಷಣದ ಗುರಿಯಾಗಿರಲಿಲ್ಲ. ಶತಮಾನಗಳ ಹಿಂದುಳಿದಿರುವಿಕೆ ಪಾಳೆಗಾರಿಕೆಗಳನ್ನು ಹಿಮ್ಮೆಟ್ಟಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಅವರ ತಕ್ಷಣದ ಕಾರ್ಯಕ್ರಮ ವಾಗಿತ್ತು. ಅಂತಲೇ ಸಮ್ಮಿಶ್ರ ಆರ್ಥಿಕ ವ್ಯವಸ್ಥೆಗೆ ಅವರು ಅಡಿಪಾಯ ಹಾಕಿದರು. ನೆಹರೂ ಎಷ್ಟು ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿಯಾಗಿದ್ದಾರೆಂದರೆ ದೇಶಕ್ಕೆ ಸ್ವಾತಂತ್ರ ಬಂದಾಗ ಪ್ರಧಾನಿ ಯಾರಾಗಬೇಕೆಂಬ ಪ್ರಶ್ನೆ ಎದುರಾದಾಗ ತನ್ನ ಆಶ್ರಮದ ಪ್ರಾರ್ಥನೆಯಲ್ಲಿ ಎಂದೂ ಭಾಗವಹಿಸಿದ ನಾಸ್ತಿಕ ನೆಹರೂ ಹೆಸರನ್ನು ಗಾಂಧಿ ಸೂಚಿಸಿದರು. ಯಾಕೆಂದರೆ, ಭಾರತದಂಥ ಬಹುಜಾತಿಗಳ, ಬಹುಧರ್ಮಗಳ, ಬಹು ಭಾಷೆಗಳ ಮತ್ತು ಬಹು ರಾಷ್ಟ್ರೀಯತೆಗಳ ದೇಶಕ್ಕೆ ಜಾತ್ಯತೀತ ಆಧುನಿಕ ಮನೋಧರ್ಮದ ನೆಹರೂ ಸೂಕ್ತ ಎಂಬುದು ಬಾಪೂಜಿ ತೀರ್ಮಾನವಾಗಿತ್ತು.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ನೆಹರೂ ಎಷ್ಟು ಗೌರಿಸುತ್ತಿದ್ದರೆಂದರೆ ತಮ್ಮ ಕಟುಟೀಕಾ ಕಾರರಾಗಿದ್ದ ಸಮಾಜವಾದಿ ನಾಯಕ ಡಾ.ರಾಮಮನೋಹರ ಲೋಹಿಯಾ ಅವರು ಲೋಕಸಭೆಗೆ ಗೆದ್ದು ಬರಲೆಂದು ಅವರು ವಿರುದ್ಧ ಕಾಂಗ್ರೆಸ್ಸಿನಿಂದ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸುತ್ತಿದ್ದರು. ತಮ್ಮ ಸರಕಾರವನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಕಮ್ಯುನಿಸ್ಟ್ ನಾಯಕರಾದ ಭೂಪೇಶಗುಪ್ತ ಮತ್ತು ಎ.ಕೆ.ಗೋಪಾಲನ್ ಮಾತಾಡುವ ದಿನ ಸದನದ ಕಲಾಪಗಳಿಗೆ ತಪ್ಪದೇ ಹಾಜರಿರುತ್ತಿದ್ದರು. ಇಂಥ ನೆಹರೂ ವಿಚಾರಗಳನ್ನು ದೇಶದ ಜನರಿಗೆ ತಲುಪಿಸುವ ಮೊದಲು ಕಾಂಗ್ರೆಸ್ ತನ್ನ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಆ ಬಗ್ಗೆ ತಿಳುವಳಿಕೆ ನೀಡಲಿ. ನೆಹರೂ ಬರೆದ ‘‘ಡಿಸ್ಕವರಿ ಆಫ್ ಇಂಡಿಯಾ’’, ‘‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’’ ಪುಸ್ತಕಗಳ ಬಗ್ಗೆ ಪಕ್ಷಕ್ಕೆ ಬರುವ ಯುವಕರಿಗೆ ಅಧ್ಯಯನ ಶಿಬಿರ ಏರ್ಪಡಿಸಲಿ. ಈ ಉದ್ಗ್ರಂಥಗಳು ಅರ್ಥವಾಗದಿದ್ದರೆ ನೆಹರೂ ಜೈಲಿನಲ್ಲಿದ್ದಾಗ ಪುತ್ರಿ ಇಂದಿರಾ ಗಾಂಧಿಗೆ ಬರೆದ ಪತ್ರಗಳ ಸಂಗ್ರಹವನ್ನು ಮರು ಮುದ್ರಿಸಿ ಕಾರ್ಯಕರ್ತರಿಗೆ ತಲುಪಿಸಲಿ. ಎಲ್ಲಕ್ಕಿಂತ ಮೊದಲು ಅಧಿಕಾರಕ್ಕಾಗಿ ಪಕ್ಷಕ್ಕೆ ಬರುವವರಿಗೆ ಬಾಗಿಲು ಬಂದ್ ಮಾಡಲಿ. ಇದೆಲ್ಲಕ್ಕಿಂತ ಮೊದಲು ನರಸಿಂಹ ರಾವ್ ಕಾಲದಲ್ಲಿ ಮೈಗೆ ಅಂಟಿಕೊಂಡ ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳೆಂಬ ಹೊಲಸನ್ನು ಜಾಡಿಸಿ ಬಿಸಾಡಿ ನೆಹರೂ ನೀಡಿದ ವಿಚಾರಗಳ ಬೆಳಕಿನಲ್ಲಿ ಮುನ್ನಡೆಯಲಿ. ಆಗ ಮಾತ್ರ ಫ್ಯಾಸಿಸ್ಟ್ ಪಿಡುಗನ್ನು ಎದುರಿಸಿ ಹಿಮ್ಮೆಟ್ಟಿಸಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಪುನಶ್ಚೇತನ ಪಡೆಯುತ್ತದೆ.

-courtesy: varthabharati

Leave a Reply

Top