You are here
Home > Koppal News > ಭ್ರಷ್ಠ ಸಿ.ಇ.ಓ. ಕೃಷ್ಣ ಉದುಪುಡಿ ರವರನ್ನು ಅಮಾನತ್ತುಗೊಳಿಸಲು ಒತ್ತಾಯ.

ಭ್ರಷ್ಠ ಸಿ.ಇ.ಓ. ಕೃಷ್ಣ ಉದುಪುಡಿ ರವರನ್ನು ಅಮಾನತ್ತುಗೊಳಿಸಲು ಒತ್ತಾಯ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಪಟ್ಟಂತೆ ಹತ್ತು ಹಲವಾರು ಯೋಜನೆಗಳಲ್ಲಿ ದೊಡ್ಡಪ್ರಮಾಣದ ಭ್ರಷ್ಠಾಚಾರ ನಡೆದಿದ್ದು, ಈ ಕುರಿತಂತೆ ಕ್ರಮಕೈಗೊಳ್ಳುವಂತೆ ಹಲವಾರು ಭಾರಿ ಕೊಪ್ಪಳ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದುಪುಡಿ ರವರಿಗೆ ಮನವಿ ಮಾಡಿಕೊಂಡರು, ಅವರು ಈವರೆಗೂ ಯಾವುದೇ ಕ್ರಮಕೈಗೊಳ್ಳದಿರುವದು ಅನುಮಾನಗಳನ್ನು ಹುಟ್ಟಿಸಿದೆ. ಈ ಭ್ರಷ್ಠಾಚಾರದಲ್ಲಿ ಸಿ.ಇ.ಓ. ರವರು ಪ್ರಮುಖವಾಗಿದ್ದು, ಅವರನ್ನು ಅಮಾನತ್ತುಗೊಳಿಸುವದರ ಜೊತೆಗೆ, ಎಲ್ಲಾ ಹಗರಣಗಳ ಕುರಿತಂತೆ ಉನ್ನತಮಟ್ಟದ ತನಿಖೆಯನ್ನು ನಡೆಸಬೇಕಾಗಿ ವಿನಂತಿ. 
೦೬-೦೬-೨೦೧೨ ರಂದು ಹಿಂದಿನ ಜಿಲ್ಲಾಧಿಕಾರಿ ತುಳಸಿ ಮದ್ದನೇನಿ ರವರು ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗಾಗಿ ರೇಶನ್ ಖರೀದಿಗೆ ಸಂಬಂಧಪಟ್ಟಂತೆ ದರಪಟ್ಟಿಯನ್ನು ಹೊರಡಿಸಿದ್ದರು. ಆಯಾ ತಾಲೂಕಿನ ಭ್ರಷ್ಠ ಸಿ.ಡಿ.ಪಿ.ಓ.ಗಳು ಮದ್ದೇನೇನಿಯವರು ಆದೇಶಿಸಿದ ದರಪಟ್ಟಿಯ ಪ್ರಕಾರ ಒಂದು ತಿಂಗಳ ಮಾತ್ರ ರೇಶನ್ ಖರೀದಿಸಿ, ನಂತರ ಸುಮಾರು ೧೭ ತಿಂಗಳುಗಳ ಕಾಲ ಕೊಪ್ಪಳದ ಎ.ಪಿ.ಎಂ.ಸಿ. ಕಾರ್ಯದರ್ಶಿಯವರ ಮೂಲಕ ಬೇಕಾಬಿಟ್ಟಿ (ದುಬಾರಿ) ದರಪಟ್ಟಿಯನ್ನು ಪಡೆದು ನಿಯಮಬಾಹಿರವಾಗಿ ರೇಶನ್ ಖರೀದಿಸಿದ್ದಾರೆ, ಹೀಗೆ ರೇಶನ್ ಖರೀದಿಸಿದ ಸಿ.ಡಿ.ಪಿ.ಓ.ಗಳು ಆಯಾ ತಾಲೂಕಿನ ಎಂ.ಎಸ್.ಪಿ.ಟಿ.ಸಿ.ಗಳಿಗೆ ಹೆಚ್ಚುವರಿಯಾಗಿ ಹಣವನ್ನು ಪಾವತಿಸಿದ್ದಾರೆ. ಇದು ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ವಿಚಾರಣಾ ವರದಿಯಲ್ಲಿ ಸಾಭಿತಾಗಿದೆ. 
ಅದೇ ರೀತಿ ಹೆಚ್ಚುವರಿ ಹಣವು ಎಂ.ಎಸ್.ಪಿ.ಟಿ.ಸಿ.ಗಳಿಗೆ ಪಾವತಿಯಾಗಿರುವದನ್ನು ಖಾತರಿಪಡಿಸಿಕೊಂಡ ಜಿಲ್ಲಾ ಪಂಚಾಯತಿಯ ಸಿ.ಇ.ಓ., ಎಂ.ಎಸ್.ಪಿ.ಟಿ.ಸಿ.ಗಳಿಗೆ ಹೆಚ್ಚುವರಿಯಾಗಿ ಪಾವತಿಯಾಗಿರುವ ಹಣವನ್ನು, ಆಯಾ ಎಂ.ಎಸ್.ಪಿ.ಟಿ.ಸಿ.ಗಳಿಂದ ವಸೂಲಿ (ರಿಕವರಿ) ಮಾಡುವಂತೆ ಆಯಾ ತಾಲೂಕಿನ ಸಿ.ಡಿ.ಪಿ.ಓ.ಗಳಿಗೆ ೧೪-೧೦-೨೦೧೪ ರಂದು ಆದೇಶಿಸಿದರು. ಭ್ರಷ್ಠ ಸಿ.ಇ.ಓ. ಆದೇಶವನ್ನು ಪರಿಗಣಿಸದ ಆಯಾ ತಾಲೂಕಿನ ಸಿ.ಡಿ.ಪಿ.ಓ.ಗಳು ಇದುವರೆಗೂ ಪಾವತಿಸಲಾದ ಹೆಚ್ಚುವರಿ ಹಣವನ್ನು ಎಂ.ಎಸ್.ಪಿ.ಟಿ.ಸಿ.ಗಳಿಂದ ವಸೂಲಿ ಮಾಡಿರುವುದಿಲ್ಲ. ೨೦೧೨-೧೩ ರಿಂದ ಇಂದಿನವರೆಗೆ ಲೆಕ್ಕ ಹಾಕಲಾಗಿ ಸುಮಾರು ೧೦ ಕೋಟಿಗೂ ಹೆಚ್ಚುವರಿ ಹಣ ಎಂ.ಎಸ್.ಪಿ.ಟಿ.ಸಿ.ಗಳಿಗೆ ಪಾವತಿಯಾಗಿರಬಹುದೆಂಬ ಅಂದಾಜು ಇದೆ. ಇಲ್ಲಿ ಗುತ್ತಿಗೆದಾರರು ಎಂ.ಎಸ್.ಪಿ.ಟಿ.ಸಿ.ಯ ಮುಖ ಮುಂದಿಟ್ಟು ದೊಡ್ಡಪ್ರಮಾಣದಲ್ಲಿ ಲೂಟಿ ಮಾಡಿರುವದನ್ನು ಸರಕಾರವು ಗಂಭಿರವಾಗಿ ಪರಿಗಣಿಸಬೇಕು. ಇದಕ್ಕೆಲ್ಲಾ ಸಿ.ಇ.ಓ. ರವರ ಕುಮ್ಮಕ್ಕು ಇದೆ ಅನ್ನುವದನ್ನು ಪರಿಗಣಿಸಬೇಕು. 
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ೨೦೧೩-೧೪ ರಲ್ಲಿ ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು ಪೂರೈಕೆ ಕುರಿತಂತೆ ಕಾಮಗಾರಿಯನ್ನು ಕೈಗೊಳ್ಳಲಾಯಿತು. ಕಾಮಗಾರಿಯು ಸುಮಾರು ೧೦೫೦ ಪೂರಾ ಕಳಪೆಯಾಗಿದ್ದು, ಕಾಮಗಾರಿ ಕುರಿತಂತೆ ೮-೧೦ ಸಾವಿರ ರೂಪಾಯಿಯಷ್ಟು ಹಣವನ್ನು ಕೂಡಾ ಖರ್ಚುಮಾಡಿರುವುದಿಲ್ಲ. ಆದರೆ ಗುತ್ತಿಗೆದಾರರು ಹಾಗೂ ಭ್ರಷ್ಠ ಅಧಿಕಾರಿಗಳು ಪ್ರತಿ ಕೇಂದ್ರದ ಹೆಸರಿನಲ್ಲಿ ೫೦ ಸಾವಿರ ರೂಪಾಯಿಗಳನ್ನು ಎತ್ತಿರುತ್ತಾರೆ. ಕೋಟಿಗಟ್ಟಲೇ ಹಣವನ್ನು ಈ ಯೋಜನೆಗೆ ಬಳಕೆ ಮಾಡಿದ್ದರೂ ಯಾವ ಮಗುವಿಗೂ ಇದುವರೆಗೂ ಒಂದು ಹನಿ ನೀರು ಕೂಡಾ ಸಿಕ್ಕಿರುವುದಿಲ್ಲ. ಈ ಕುರಿತಂತೆ ಸಮಗ್ರ ತನಿಖೆ ನಡೆಯಬೇಕು.
ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿ ಕಟ್ಟಡಗಳಿಗೆ ಸುಣ್ಣ-ಬಣ್ಣ ಬಳಿಯಲೆಂದು ಸರಕಾರವು ಪ್ರತಿ ಕೇಂದ್ರಕ್ಕೂ ೭೫೦೦/- ಗಳಂತೆ ಬಿಡುಗಡೆಮಾಡಿತು. ಜಿಲ್ಲೆಯಲ್ಲಿನ ಸುಮಾರು ೧೦೫೦ ಕಟ್ಟಡಗಳಿಗೆ ಕೇವಲ ಸುಣ್ಣವನ್ನಷ್ಟೆ ಬಳಿದು ಒಂದು ಸಾವಿರ ರೂಪಾಯಿಯಷ್ಟು ಹಣವನ್ನು ಖರ್ಚು ಮಾಡಿ, ಗುತ್ತಿಗೆದಾರರು ಭ್ರಷ್ಟ ಅಧಿಕಾರಿಗಳೊಂದಿಗೆ ಶ್ಯಾಮಿಲಾಗಿ ಯೋಜನೆಗಿಟ್ಟ ಹಣವನ್ನೆಲ್ಲಾ ಎತ್ತಿಬಡೆದಿರುವದರಿಂದ ಕಾಮಗಾರಿಯು ಪೂರ್ತಿ ಕಳಪೆಯಾಗಿರುತ್ತದೆ.   
ಹೀಗೆ ಅಂಗನವಾಡಿ ಕಟ್ಟಡಗಳ ಹಾಗೂ ಮಕ್ಕಳ ಹೆಸರಿನಲ್ಲಿ ರೂಪಗೊಂಡ ಯೋಜನೆಗಳಲ್ಲಿ ಭ್ರಷ್ಠ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಬಾಯಾಡಿಸಿ ದೊಡ್ಡಪ್ರಮಾಣದಲ್ಲಿ ಭ್ರಷ್ಠಾಚಾರವನ್ನು ನಡೆಸಿ, ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಾದ ಮಕ್ಕಳು ಮತ್ತು ಮಹಿಳೆಯರಿಗೆ ಹಾಗೂ ಸರಕಾರಕ್ಕೆ ವಂಚನೆ ಮಾಡಿದ್ದರ ಕುರಿತಂತೆ ಸಂಘಟನೆಯು ಹೋರಾಟವನ್ನು ರೂಪಿಸಿ ಕೊಪ್ಪಳ ಜಿಲ್ಲಾ ಪಂಚಾಯತಿ ಸಿ.ಇ.ಓ., ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಸಚಿವರಿಗೆ ಮನವಿಗಳನ್ನು ಅರ್ಪಿಸಿದ್ದಾಗ್ಯೂ ಇದುವರೆಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಈ ಎಲ್ಲಾ ಭ್ರಷ್ಠಾಚಾರಗಳ ಕುರಿತಂತೆ ತನಿಖೆಯನ್ನು ನಡೆಸುವುದಾಗಿ ಹೇಳಿದ ಜಿಲ್ಲಾ ಪಂಚಾಯತಿಯ ಸಿ.ಇ.ಓ. ಭ್ರಷ್ಠಾಚಾರ ಕುರಿತಂತೆ ಗಂಭಿರವಾಗಿ ತನಿಖೆಗೆ ಅವಕಾಶ ಮಾಡಿಕೊಡದಿರುವ ಬಗ್ಗೆ ಅನುಮಾನಗಳಿದ್ದು, ಅವರನ್ನು ತಕ್ಷಣ ಅಮಾನತ್ತುಗೊಳಿಸಿ ಭ್ರಷ್ಠಾಚಾರ ಕುರಿತಂತೆ ತನಿಖೆಗೆ ಅವಕಾಶ ಮಾಡಿಕೊಡಬೇಕೆಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ, ಭಾರತ್ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎ.ಗಫಾರ್, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ, ಜಿಲ್ಲಾ ಸಂಚಾಲಕ ಮೈಲಪ್ಪ ಬಿಸರಳ್ಳಿ, ಅಖಿಲ ಭಾರತ ಕಿಸಾನ ಸಭಾದ ಸಂಚಾಲಕ ನನ್ನುಸಾಬ ನೀಲಿ, ಅಖಿಲ ಭಾರತ ಯುವಜನ ಒಕ್ಕೂಟದ ಸಂಚಾಲಕ ಗಾಳೆಪ್ಪ ಮುಂಗೋಲಿ, ಆಟೋ ಸಂಘದ ಮಖಬೂಲ್ ರಾಯಚೂರ, ಶಿವಪ್ಪ ಹಡಪದ, ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಎಂ.ಡಿ.ಗೌಸ್ ನೀಲಿ, ಅಬ್ದುಲ್ ವಹಾಬ್ ಮುಂತಾದವರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.   

Leave a Reply

Top