ಸಾರೆಕೊಪ್ಪ ಬಂಗಾರಪ್ಪ ಯುಗಾಂತ್ಯ – ಇಂದು ಅಂತ್ಯಕ್ರಿಯೆ

ಬೆಂಗಳೂರು, ಡಿ.26: ಕರ್ನಾಟಕ ರಾಜಕಾರಣದ ಪರ್ಯಾಯ ಶಕ್ತಿ ಎಂದೇ ಗುರುತಿಸಲ್ಪಟ್ಟಿದ್ದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಹಿನ್ನೆಲೆಯ ಹಿರಿಯ ರಾಜಕೀಯ ಧುರೀಣ ಸಾರೆಕೊಪ್ಪ ಬಂಗಾರಪ್ಪ(79) ಸೋಮವಾರ
 ನಸುಕಿನಲ್ಲಿ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರಿಗೆ ಅವರ ನಿವಾಸದಲ್ಲಿ ಅಂತಿಮ ನಮನ ಸಲ್ಲಿಸುತ್ತಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಸಚಿವ ಬಸವರಾಜ ಬೊಮ್ಮಾಯಿ ಮತ್ತಿತರರು.
ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಮೂತ್ರಪಿಂಡ ವೈಫಲ್ಯದ ಕಾರಣಕ್ಕಾಗಿ ನಗರದ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಎಸ್. ಬಂಗಾರಪ್ಪ, ಸೋಮವಾರ ಬೆಳಗಿನ ಜಾವ 12:45ರ ಸುಮಾರಿಗೆ ನಿಧರಾಗಿದ್ದು, ಅವರು ಪತ್ನಿ ಶಕುಂತಲಾ, ಪುತ್ರರಾದ ಶಾಸಕ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಮೂವರು ಪುತ್ರಿಯರು, ಬಂಧುಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿನ ಅವರ ನಿವಾಸದಲ್ಲಿ ಬಂಗಾರಪ್ಪನವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಸಲ್ಮಾನ್ ಖುರ್ಷಿದ್, ಎಸ್.ಎಂ.ಕೃಷ್ಣ, ರಾಜ್ಯದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಗೃಹ ಸಚಿವ ಆರ್. ಅಶೋಕ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಎನ್. ಧರ್ಮಸಿಂಗ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇ ಶ್ವರ್, ಡಿ.ಕೆ. ಶಿವಕುಮಾರ್, ಭಾರತಿ ವಿಷ್ಣು ವರ್ಧನ್, ಪಾರ್ವತಮ್ಮ ರಾಜ್‌ಕುಮಾರ್ ಸೇರಿದಂತೆ ನೂರಾರು ಗಣ್ಯರು, ಅಪಾರ ಸಂಖ್ಯೆಯ ಅಭಿಮಾನಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಬಟೂರಿನಲ್ಲಿ 1932ರ ಅಕ್ಟೋಬರ್ 26ರಂದು ಕಲಮ್ಮ ಹಾಗೂ ಕಲ್ಲಪ್ಪ ದಂಪತಿಯ ಪುತ್ರನಾಗಿ ಹುಟ್ಟಿದ ಬಂಗಾರಪ್ಪ, 1962ರಲ್ಲಿ ರಾಜಕೀಯ ಪ್ರವೇಶಿಸಿದರು. 1967ರಲ್ಲಿ ಪ್ರಜಾ ಸೋಷಿಯಲಿಷ್ಟ್ ಪಕ್ಷದಿಂದ ಮೊದಲ ಬಾರಿಗೆ
ವಿಧಾನಸಭೆಗೆ ಆಯ್ಕೆಯಾದರು. ನಾಲ್ಕು ಬಾರಿ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ 1992ರಲ್ಲಿ ರಾಜ್ಯದ ಮುಖ್ಯ ಮಂತ್ರಿಯಾಗಿ, ಮೂರು ಬಾರಿ ಲೋಕಸಭಾ ಸದಸ್ಯರಾಗಿ ಅವರು ಆಯ್ಕೆಯಾಗಿದ್ದರು. ಗೃಹ, ಕಂದಾಯ, ಲೋಕೋಪಯೋಗಿ, ಕೃಷಿ ಮತ್ತು ತೋಟಗಾರಿಗೆ ಸೇರಿದಂತೆ ಮಹತ್ವದ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದ ಬಂಗಾರಪ್ಪ, 1996ರಲ್ಲಿ ಸಂಸದರಾಗಿ ಆಯ್ಕೆಯಾಗಿ, 1998ರಲ್ಲಿ ಬಿಜೆಪಿಯ ಅಯನೂರು ಮಂಜುನಾಥ್ ವಿರುದ್ಧ ಸೋತಿದ್ದರು. 1999ರಲ್ಲಿ ಮತ್ತೆ ಸಂಸದರಾಗಿ ಆಯ್ಕೆಯಾಗಿ, 2003ರಲ್ಲಿ ಕಾಂಗ್ರೆಸ್‌ಗೆ ಸಡ್ಡು ಹೊಡೆದು ಬಿಜೆಪಿ ಅಭ್ಯರ್ಥಿಯಾಗಿ ಜಯ ಗಳಿಸಿದರು.
ಅನಂತರ 2005ರಲ್ಲಿ ಬಿಜೆಪಿ ತ್ಯಜಿಸಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಕೈಹಿಡಿದು, ಉಪ ಚುನಾವಣೆಯಲ್ಲಿ
ಸೋಮವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.
ಸಂಸದರಾಗಿ ಪುನಃ ಆಯ್ಕೆಯಾದರು. 2009ರಲ್ಲಿ ಸಮಾಜವಾದಿ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿ ಲೋಕಸಭೆಗೆ ಸ್ಪರ್ಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರ ಪುತ್ರ ಬಿ.ವೈ.ರಾಘವೇಂದ್ರರ ವಿರುದ್ಧ ಪರಾಜಿತರಾಗಿದ್ದರು. 2010ರಲ್ಲಿ ಕಾಂಗ್ರೆಸ್ ತ್ಯಜಿಸಿದ ಬಂಗಾರಪ್ಪ, ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದರು. ಅವರು ಆಶ್ರಯ, ಅಕ್ಷಯ, ಆರಾಧನ, ವಿಶ್ವ ಎಂಬ ಜನಪ್ರಿಯ ಯೋಜನೆಗಳನ್ನು ರೂಪಿಸಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಕಣ್ಮಣಿಯಾಗಿದ್ದರು.
ಇಂದು ಹುಟ್ಟೂರು ಕುಬಟೂರಿನಲ್ಲಿ ಅಂತ್ಯಕ್ರಿಯೆ: ಬಂಗಾರಪ್ಪನವರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಸದಾಶಿವನಗರದ ನಿವಾಸದಿಂದ ತುಮಕೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಕೊಂಡೊಯ್ಯಲಾಯಿತು. ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಿ, ಡಿ.27ರ ಸಂಜೆ 5:30ರ ಸುಮಾರಿಗೆ ಕುಬಟೂರಿನ ಲಕ್ಕವಳ್ಳಿ ಫಾರಂನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸರಕಾರಿ ರಜೆ: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರ ನಿಧನದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಎರಡು ದಿನ ಹಾಗೂ ರಾಜ್ಯದ ಶಾಲೆ-ಕಾಲೇಜು ಹಾಗೂ ಸರಕಾರಿ ಕಚೇರಿಗಳಿಗೆ ಡಿ.26ರ ಸೋಮವಾರ ಒಂದು ದಿನ ರಜೆ ಘೋಷಿಸಿದ್ದು, ಮೂರು ದಿನ ಶೋಕಾಚರಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸದಾನಂದಗೌಡ ತಿಳಿಸಿದ್ದಾರೆ
Please follow and like us:
error