ರೈತರನ್ನು ರಾಷ್ಟ್ರೀಯ ಕೃಷಿ ವಿಮೆ ಯೋಜನೆ ವ್ಯಾಪ್ತಿಗೆ ತರಲು ಶ್ರಮ ವಹಿಸಿ- ಎಂ. ಕನಗವಲ್ಲಿ ಸೂಚನೆ.

ಕೊಪ್ಪಳ
ಡಿ. ೧೭ (ಕ ವಾ) ಪ್ರಸಕ್ತ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಎಲ್ಲ
ರೈತರನ್ನು ರಾಷ್ಟ್ರೀಯ ಕೃಷಿ ವಿಮೆ ಯೋಜನೆಯ ವ್ಯಾಪ್ತಿಗೆ ತರಲು ಕೃಷಿ, ಕಂದಾಯ, ಹಾಗೂ
ಸಹಕಾರ ಇಲಾಖೆ ಇಲಾಖೆಗಳು ಬ್ಯಾಂಕುಗಳೊಂದಿಗೆ ಸಮನ್ವಯತೆ ಸಾಧಿಸಿ, ಕಾರ್ಯಗತಗೊಳಿಸಬೇಕು
ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
    
ಪ್ರಸಕ್ತ ಸಾಲಿನ ಹಿಂಗಾರು-ಬೇಸಿಗೆ ಹಂಗಾಮಿನ ಬೆಳೆ ವಿಮಾ ಯೋಜನೆಯನ್ನು
ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ
ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
     ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆ
ತೀವ್ರವಾಗಿದ್ದು, ರೈತರು ಆತಂಕದಲ್ಲಿದ್ದಾರೆ.  ರೈತರು ಬೆಳೆ ವಿಮೆ ವ್ಯಾಪ್ತಿಗೆ
ಒಳಪಟ್ಟಲ್ಲಿ, ಬೆಳೆ ವಿಮಾ ಮೊತ್ತವಾದರೂ ರೈತರಿಗೆ ಆಸರೆಯಾಗಲಿದೆ.  ರಾಷ್ಟ್ರೀಯ ಕೃಷಿ
ವಿಮಾ ಯೋಜನೆಯಡಿ   ಹಿಂಗಾರು ಹಂಗಾಮಿಗೆ ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ
ರೈತರು ಬ್ಯಾಂಕುಗಳಲ್ಲಿ ಘೋಷಣೆಗಳನ್ನು ಸಲ್ಲಿಸಲು ಡಿ. ೩೧ ಕೊನೆಯ ದಿನಾಂಕವಾಗಿದ್ದು,
ಕಾಲಾವಕಾಶ ಕಡಿಮೆ ಇದೆ.  ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಈ ಕುರಿತು
ವ್ಯಾಪಕ ಪ್ರಚಾರ ಕೈಗೊಳ್ಳುವುದು, ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು
ಹಮ್ಮಿಕೊಂಡು, ಎಲ್ಲ ರೈತರು ಬೆಳೆ ವಿಮೆ ಯೋಜನೆಯ ವ್ಯಾಪ್ತಿಗೆ ಒಳಪಡುವಂತೆ
ನೋಡಿಕೊಳ್ಳಬೇಕು.  ಇನ್ನು ಬೇಸಿಗೆ ಹಂಗಾಮಿಗೆ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು
ಸಲ್ಲಿಸಲು ಬೆಳೆ ಸಾಲ ಪಡೆಯುವ ರೈತರಿಗೆ ೨೦೧೬ ರ ಮಾರ್ಚ್ ೩೧ ಕೊನೆಯ ದಿನಾಂಕವಾಗಿದ್ದರೆ,
ಬೆಳೆ ಸಾಲ ಪಡೆಯದ ರೈತರಿಗೆ ೨೦೧೬ ರ ಫೆಬ್ರವರಿ ೨೯ ಕೊನೆಯ ದಿನಾಂಕವಾಗಿದೆ.  ಬೆಳೆ
ವಿಮೆ ಯೋಜನೆಗಾಗಿ ಬ್ಯಾಂಕುಗಳಿಗೆ ದಾಖಲೆ ಸಲ್ಲಿಸಲು ರೈತರಿಗೆ ಅನುಕೂಲವಾಗುವಂತೆ ಕಂದಾಯ
ಇಲಾಖೆ ಅಧಿಕಾರಿಗಳು ಬೆಳೆ ದೃಢೀಕರಣ ಪತ್ರ ಹಾಗೂ ಪಹಣಿ ಪತ್ರಗಳನ್ನು ಯಾವುದೇ ಕಾರಣಕ್ಕೂ
ವಿಳಂಬವಾಗದಂತೆ ವಿತರಿಸಲು ಕ್ರಮ ಕೈಗೊಳ್ಳಬೇಕು.  ಯೋಜನೆಗೆ ಸೇರಲು ರೈತರು ಸಲ್ಲಿಸಬೇಕಾದ
ದಾಖಲೆಗಳ ಬಗ್ಗೆಯೂ ರೈತರಲ್ಲಿ ಅರಿವು ಮೂಡಿಸಬೇಕು.  ವಿನಾ ಕಾರಣ ವಿಳಂಬ ಧೋರಣೆ ತಾಳುವ
ಕಂದಾಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ.  ಒಟ್ಟಾರೆ
ಆತಂಕದಲ್ಲಿರುವ ಅನ್ನದಾತ ರೈತರಲ್ಲಿ ಮನೋಸ್ಥೈರ್ಯ ಮೂಡಿಸುವಂತಾಗಬೇಕು.  ರೈತರು ಸರ್ಕಾರದ
ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತಾಗಬೇಕು.  ಬೆಳೆ ವಿಮೆ ವ್ಯಾಪ್ತಿಗೆ ಒಳಪಡುವ
ರೈತರ ನಿಖರ ಸಂಖ್ಯೆಯನ್ನು ಪ್ರತಿ ನಿತ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ
ಸಲ್ಲಿಸುವಂತೆ ಸಹಕಾರ ಸಂಘಗಳ ಉಪನಿಬಂಧಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. 
    
ಬೆಳೆ ವಿಮೆಗಾಗಿ ಘೋಷಣೆಗಳನ್ನು ಸಲ್ಲಿಸಲು ಬ್ಯಾಂಕುಗಳಿಗೆ ಆಗಮಿಸುವ ರೈತರಿಗೆ
ಬ್ಯಾಂಕುಗಳು ಸಹಕಾರ ನೀಡಿ, ಯೋಜನೆ ವ್ಯಾಪ್ತಿಗೆ ಸೇರಿಸಬೇಕು.  ನಿರ್ಲಕ್ಷ್ಯ ತೋರುವ
ಬ್ಯಾಂಕುಗಳ ಬಗ್ಗೆ ದೂರುಗಳು ಬಂದಲ್ಲಿ, ಕ್ರಮ ಕೈಗೊಳ್ಳಲಾಗುವುದು.  ಕೃಷಿ ಇಲಾಖೆ ಹಳ್ಳಿ
ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ
ನೀಡಿದರು.
     ಸಭೆಯಲ್ಲಿ ಭಾಗವಹಿಸಿದ್ದ ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಅವರು
ಮಾತನಾಡಿ, ಬೆಳೆ ವಿಮೆ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಮಾ ಕಂತಿನಲ್ಲಿ
ಶೇ. ೧೦ ರಷ್ಟು ರಿಯಾಯಿತಿಯಿದೆ.  ಅದೇ ರೀತಿ ಪ.ಜಾತಿ ಮತ್ತು ಪ.ಪಂಗಡದವರಿಗೆ ಶೇ. ೯೦
ರಷ್ಟು ರಿಯಾಯಿತಿ ಇದೆ.  ಪಾಲು ಬೆಳೆಗಾರರು, ಗೇಣಿದಾರರು ಸೇರಿದಂತೆ ಎಲ್ಲ ರೈತರು ಯೋಜನೆ
ವ್ಯಾಪ್ತಿಗೆ ಸೇರಬಹುದಾಗಿದೆ.  ಪ್ರಸಕ್ತ ಹಿಂಗಾರಿನಲ್ಲಿ ಭತ್ತ, ಜೋಳ, ಮೆಕ್ಕೆಜೋಳ,
ಗೋಧಿ, ಕಡಲೆ, ಹುರುಳಿ, ಸೂರ್ಯಕಾಂತಿ, ಶೇಂಗಾ ಸೇರಿದಂತೆ ಒಟ್ಟು ೧೯ ಬೆಳೆಗಳನ್ನು ಹೋಬಳಿ
ಮಟ್ಟಕ್ಕೆ ಹಾಗೂ ಬೇಸಿಗೆ ಹಂಗಾಮಿಗೆ ಭತ್ತ (ನೀರಾವರಿ), ಶೇಂಗಾ,
ಸೂರ್ಯಕಾಂತಿ(ನೀರಾವರಿ) ಸೇರಿದಂತೆ ೦೫ ಬೆಳೆಗಳನ್ನು ಅಧಿಸೂಚಿಸಲಾಗಿದೆ.  ಒಂದು ವೇಳೆ
ಪ್ರಕೃತಿ ವಿಕೋಪ ಅಂದರೆ ಪ್ರವಾಹ, ಆಲಿಕಲ್ಲು ಮಳೆ, ಭೂಕುಸಿತ, ಚಂಡಮಾರುತದಂತಹ
ವಿಕೋಪದಿಂದ ನಷ್ಟ ಸಂಭವಿಸಿದರೆ, ನಷ್ಟವಾದ ೪೮ ಗಂಟೆಯೊಳಗೆ ರೈತರು ನಷ್ಟದ ಕಾರಣ, ಹಾನಿಯ
ವ್ಯಾಪ್ತಿ ಹಾಗೂ ವಿಮೆ ವಿವರಗಳೊಂದಿಗೆ ಸಂಬಂಧಪಟ್ಟ ಬ್ಯಾಂಕ್‌ಗೆ ಅರ್ಜಿ
ಸಲ್ಲಿಸಬೇಕಾಗುತ್ತದೆ.  ಎಲ್ಲ ರೈತರು ಬೆಳೆ ವಿಮೆ ವ್ಯಾಪ್ತಿಗೆ ಒಳಪಡುವಂತೆ ಮಾಡಲು
ಹಳ್ಳಿ, ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
    
ಸಭೆಯಲ್ಲಿ ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ, ತಹಸಿಲ್ದಾರರುಗಳಾದ
ಚಂದ್ರಕಾಂತ್, ಪುಟ್ಟರಾಮಯ್ಯ ಸೇರಿದಂತೆ ಕಂದಾಯ, ಸಹಕಾರ ಇಲಾಖೆ, ಲೀಡ್‌ಬ್ಯಾಂಕ್
ಅಧಿಕಾರಿಗಳು ಭಾಗವಹಿಸಿದ್ದರು.

Please follow and like us:
error