ಆಕ್ಷೇಪಾರ್ಹ ವಿಷಯಗಳ ಪ್ರಸಾರ ನಿಲ್ಲಿಸಿ, ಇಲ್ಲ ನಿಷೇಧ ಎದುರಿಸಿ

: ಗೂಗ್ಲ್, ಫೇಸ್‌ಬುಕ್‌ಗೆ ದಿಲ್ಲಿ ಹೈಕೋರ್ಟ್ ಎಚ್ಚರಿಕೆ 
ಹೊಸದಿಲ್ಲಿ,ಜ.12:ಜನಪ್ರಿಯ ಅಂತರ್ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಗೂಗ್ಲ್‌ಗಳು ತಮ್ಮ ವೆಬ್‌ಸೈಟ್‌ಗಳಿಂದ ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕದಿದ್ದಲ್ಲಿ ಅವನ್ನು ನಿಷೇಧಿಸಲಾಗುವುದೆಂದು ದಿಲ್ಲಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಚೀನದ ಹಾಗೆ ಆಕ್ಷೇಪಾರ್ಹ ವಿಷಯಗಳನ್ನು ಪ್ರಕಟಿಸುವ ವೆಬ್‌ಸೈಟ್‌ಗಳನ್ನು ಭಾರತ ಕೂಡಾ ನಿಷೇಧಿಸಲಿದೆಯೆಂದು ದಿಲ್ಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯಿಸಿದೆ.ತಾವು ಪ್ರಸಾರ ಮಾಡುವ ವಿಷಯಗಳ ಬಗ್ಗೆ ಕಾರ್ಯತಂತ್ರವೊಂದನ್ನು ರೂಪಿಸುವಂತೆ ವೆಬ್‌ಸೈಟ್‌ಗಳಿಗೆ ನ್ಯಾಯಾ ಲಯ ಸಲಹೆ ನೀಡಿದೆ.
ಈ ವೆಬ್‌ಸೈಟ್‌ಗಳಿಗೆ ಇನ್ನೊಂದು ಹಿನ್ನಡೆಯೆಂಬಂತೆ,ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಇಂಟರ್‌ನೆಟ್ ದಿಗ್ಗಜರ ವಿರುದ್ಧ ನಡೆಯುತ್ತಿರುವ ವಿಚಾರಣಾ ಕಲಾಪಗಳಿಗೆ ತಡೆಯಾಜ್ಞೆ ನೀಡಲು ದಿಲ್ಲಿ ಹೈಕೋರ್ಟ್ ನಿರಾಕರಿಸಿದೆ.
ತಮಗೆ ಸಮನ್ಸ್ ಜಾರಿ ಗೊಳಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬುಧವಾರ ಫೇಸ್‌ಬುಕ್ ಹಾಗೂ ಗೂಗ್ಲ್‌ಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.ಆ ಬಳಿಕ ಹೈಕೋರ್ಟ್ ದಿಲ್ಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿತ್ತು.
ಗೂಗ್ಲ್,ಫೇಸ್‌ಬುಕ್ ಮತ್ತಿತರ ವೆಬ್ ಸೈಟ್‌ಗಳು ವಿವಿಧ ಹಿಂದೂ ದೇವತೆಗಳು,ಪ್ರವಾದಿ ಮುಹಮ್ಮದ್ ಹಾಗೂ ಯೇಸುಕ್ರಿಸ್ತರ ಬಗ್ಗೆ ಅವಹೇಳನಕಾರಿಯಾದ ಲೇಖನಗಳನ್ನು ಹಾಗೂ ಚಿತ್ರಗಳನ್ನು ಪ್ರಕಟಿಸಿರುವ ದಾಖಲೆಗಳನ್ನು ದೂರಿನೊಂದಿಗೆ ಸಲ್ಲಿಸಿರುವುದನ್ನು ಈ ಆದೇಶ ನೀಡುವಾಗ ಗಮನಕ್ಕೆ ತೆಗೆದುಕೊಂಡಿರುವುದಾಗಿ ವಿಚಾರಣಾ ನ್ಯಾಯಾಲದ ಮ್ಯಾಜಿಸ್ಟ್ರೇಟರು ತಿಳಿಸಿದ್ದರು.
ವೆಬ್‌ಸೈಟ್‌ಗಳಲ್ಲಿ ಆಕ್ಷೇಪಾರ್ಹ ಅಂಶಗಳನ್ನು ಪ್ರಕಟಿಸುತ್ತಿರುವ ಬಗ್ಗೆ ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆಯೂ ವಿಚಾರಣಾ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ತಿಳಿಸಿತ್ತು.

Leave a Reply