೧೭ ರಿಂದ ಬಾಗಲಕೋಟೆಯಲ್ಲಿ ೬ ನೇ ದಲಿತ ಸಾಹಿತ್ಯ ಸಮ್ಮೇಳನ.

ಕೊಪ್ಪಳ, ಅ. ೧೩. ದಲಿತ ಸಾಹಿತ್ಯ ಪರಿಷತ್ತು ಏರ್ಪಡಿಸುವ ಅಖಿಲ ಭಾರತ ೬ನೇ ದಲಿತ ಸಾಹಿತ್ಯ ಸಮ್ಮೇಳನ ಬಾಗಲಕೋಟೆಯ ಕಲಾಭವನದಲ್ಲಿ ಅಕ್ಟೊಬರ್ ೧೭ ಮತ್ತು ೧೮ ರಂದು ನಡೆಯಲಿದೆ ಎಂದು ದಲಿತ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
    ಈ ಕುರಿತು ಪ್ರಕಟಣೆ ನೀಡಿರುವ ಅವರು, ೬ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಚಿಂತಕ ಡಾ|| ಸತ್ಯಾನಂದ ಪಾತ್ರೋಟ ಆಯ್ಕೆಯಾಗಿದ್ದು ಸನಾದಿ ಅಪ್ಪಣ್ಣ ವೇದಿಕೆಯಲ್ಲಿ ಎರಡು ದಿನ ನಡೆಯುವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತ ಎಂ. ವೀರಪ್ಪ ಮೊಯ್ಲಿ ಚಾಲನೆ ನೀಡುವರು. ಸಚಿವರಾದ ಎಸ್. ಆರ್. ಪಾಟೀಲ, ಸತೀಶ ಜಾರಕಿಹೊಳಿ, ಎಂ. ಬಿ. ಪಾಟೀಲ, ಉಮಾಶ್ರೀ ಮುಂತಾದವರು ಭಾಗವಹಿಸುವರು.
    ಸಮ್ಮೇಳನದಲ್ಲಿ ವಿವಿದ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾವ್ಯ ಕುಂಚ ಗಾಯನ ಕಾರ್ಯಕ್ರಮ ಪುಸ್ತಕ ಪ್ರದರ್ಶನ, ಪುಸ್ತಕ ಬಹುಮಾನ ಮತ್ತು ವಾರ್ಷಿಕ ಪ್ರಶಸ್ತಿ ಪ್ರಧಾನ, ಕವಿಗೋಷ್ಠಿ ಕಾರ್ಯಕ್ರಮಗಳು ನಡೆಯಲಿವೆ. ಸಮಾರೋಪ ಸಮಾರಂಭದಲ್ಲಿ ಸಚಿವರಾದ ಡಾ|| ಹೆಚ್. ಸಿ ಮಹದೇವಪ್ಪ, ರಾಣೀ ಚೆನ್ನಮ್ಮ ವಿವಿ ಕುಲಸಚಿವ ಡಾ|| ರಂಗರಾಜ ವನದುರ್ಗ, ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ|| ಅರ್ಜುನ ಗೊಳಸಂಗಿ ಭಾಗವಹಿಸುವರು ಹಿರಿಯ ಸಾಹಿತಿ ಬಿ. ಟಿ. ಲಲಿತಾನಾಯ್ಕ ಸಮಾರೋಪ ಭಾಷಣ ಮಾಡುವರು.
    ಸಮ್ಮೇಳನದ ಅಂಗವಾಗಿ ನಾಡಿನ ಪ್ರಖ್ಯಾತರನ್ನು ಸನ್ಮಾನಿಸುವ ಕಾರ್ಯಕ್ರಮವಿದ್ದು ಪತ್ರಿಕೋದ್ಯಮ ಸೇವೆಗೆ ಹಿಮಾಗ್ನಿ ಪತ್ರಿಕೆ ವರದಿಗಾರ ಕೊಪ್ಪಳದ ಮಂಜುನಾಥ ಜಿ. ಗೊಂಡಬಾಳ ಹಾಗೂ ಶಿಕ್ಷಣ ರಂಗದ ಸೇವೆಗೆ ಗವಿಸಿದ್ಧೇಶ್ವರ ಕಾಲೇಜಿನ ಸಹ ಪ್ರಾಧ್ಯಾಪಕ ಡಾ|| ಸಿದ್ಧಲಿಂಗಪ್ಪ ಕೊಟ್ನೆಕಲ್‌ರನ್ನು ಒಳಗೊಂಡಂತೆ ಸೇವಾ ಕ್ಷೇತ್ರದವರನ್ನು ಸನ್ಮಾನಿಸಲಾಗುತ್ತಿದೆ. ಇದೇ ವೇಳೆ ಪರಿಷತ್ತಿನ ವಾರ್ಷಿಕ ಪ್ರಶಸ್ತಿಯಲ್ಲಿ ಗಂಗಾವತಿಯ ಉಪನ್ಯಾಸಕ ಡಾ|| ಜಾಜಿ ದೇವೇಂದ್ರಪ್ಪರವರ ಅನುವಾದ ಕೃತಿ ದೇವರ ರಾಜಕೀಯ ತತ್ವ ಮತ್ತು ಕೊಪ್ಪಳದ ಸಾವಿತ್ರಿ ಮುಜುಂದಾರ ಅವರ ಅಂಕಣ ಬರಹ ಹೆಣ್ಣು ಹೆಜ್ಜೆ ಕೃತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ರಾಜ್ಯದ ಅನೇಕ ದಲಿತ ಚಿಂತಕರು, ದಲಿತ ಸಾಹಿತಿಗಳು, ದಲಿತ ಹೋರಾಟಗಾರರು, ದಲಿತಪರ ಬರಹಗಾರರು ಪಾಲ್ಗೊಳ್ಳಲಿದ್ದು ಜಿಲ್ಲೆಯ ಸಾಹಿತಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

Please follow and like us:
error