ಪತ್ತೆದಾರಿ ಕಾದಂಬರಿಕಾರ ಎನ್. ನರಸಿಂಹಯ್ಯ ಇನ್ನಿಲ್ಲ

ಬೆಂಗಳೂರು, ಡಿ.25: ಕನ್ನಡ ಸಾಹಿತ್ಯ ಲೋಕದಲ್ಲಿ ‘ಪತ್ತೆದಾರಿ ಕಾದಂಬರಿ ಬ್ರಹ್ಮ’ ಎಂದೆ ಖ್ಯಾತರಾಗಿದ್ದ ಎನ್.ನರಸಿಂಹಯ್ಯ ರವಿವಾರ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು
ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನರಸಿಂಹಯ್ಯನವರನ್ನು 15 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 11:30ಕ್ಕೆ ಅವರು ಆಸ್ಪತ್ರೆಯಲ್ಲಿಯೆ ಕೊನೆಯುಸಿರೆಳೆದರು. ಅವರು ಮಡದಿ ಮತ್ತು ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ.
ಪತ್ತೆದಾರಿ ಸಾಹಿತ್ಯದ ಮೂಲಕ ಒಂದು ತಲೆಮಾರನ್ನೇ ಓದುವ ಗೀಳಿಗೆ ಹಚ್ಚಿದ್ದ ಎನ್.ನರಸಿಂಹಯ್ಯನವರು ಕನ್ನಡದ ಶೆರ್ಲಾಕ್ಸ್ ಹೋಮ್ ಎಂದೆ ಹೆಸರಾಗಿದ್ದರು. ಪತ್ತೆದಾರಿ ಮತ್ತು ಸಾಮಾಜಿಕ ಸೇರಿದಂತೆ ಒಟ್ಟು 500ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿ ಅವರು ಭಾರತದಲ್ಲಿಯೇ ದಾಖಲೆ ಸೃಷ್ಟಿಸಿದ್ದಾರೆ. ಅಂತಿಮ ಸಂಸ್ಕಾರ: ಬಸವೇಶ್ವರ ನಗರದ ಮೃತರ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಸಂಜೆ 7.30ಕ್ಕೆ ನಗರದ ಸುಮನಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನರಸಿಂಹಯ್ಯನವರ ಅಂತಿಮ ಸಂಸ್ಕಾರ ನಡೆಯಿತು.
ಪರಿಚಯ: 1925 ಸೆ.18ರಂದು ಬೆಂಗಳೂರಿನಲ್ಲಿ ಜನಿಸಿದ ನರಸಿಂಹಯ್ಯ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದಾಗಲೆ ತನ್ನ ತಂದೆಯನ್ನು ಕಳೆದುಕೊಂಡರು. ಸರಿಯಾದ ನೆಲೆ, ಆರ್ಥಿಕ ಸಹಕಾರ ಸಿಗದ ಕಾರಣ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿ ಅವರು ತಾಯಿಯ ತವರೂರಾದ ಚಿಕ್ಕಮಗಳೂರಿಗೆ ತೆರಳಿದರು. 13ನೆ ವರ್ಷದಲ್ಲಿಯೇ ಎನ್. ನರಸಿಂಹಯ್ಯ ನವರು ಹೊಟ್ಟೆಪಾಡಿಗಾಗಿ ಸಿಂಪಿಗ ವೃತ್ತಿ ಆಯ್ದುಕೊಂಡರು. ಅನಂತರ ಬಸ್ ಕ್ಲೀನರ್ ಮತ್ತು ಬಸ್ ಕಂಡಕ್ಟರ್ ಆಗಿದ್ದರು. 1947ರಲ್ಲಿ ನಾಗರತ್ನಮ್ಮನವರ ಜೊತೆ ಅವರ ಮದುವೆಯಾಯಿತು. ಚಿಕ್ಕಮಗಳೂರು ಬಿಟ್ಟು ಬೆಂಗಳೂರಿಗೆ ಬಂದು ಲಾರಿ ಸರ್ವಿಸ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಓದಿನ ಹವ್ಯಾಸ ಬೆಳೆಸಿಕೊಂಡಿದ್ದ ನರಸಿಂಹಯ್ಯ ಬಿಡುವಿನ ವೇಳೆಯಲ್ಲಿ ಸ್ವತಃ ಕಾದಂಬರಿ ಬರೆಯಲು ಮುಂದಾದರು.
ಸಾಹಿತ್ಯ ಸಾಧನೆ: 1952 ರಲ್ಲಿ ಎನ್.ನರಸಿಂಹಯ್ಯನವರು ತಮ್ಮ ಪ್ರಥಮ ಪತ್ತೆದಾರಿ ಕಾದಂಬರಿ ‘ಪತ್ತೇದಾರ ಪುರುಷೋತ್ತಮ’ ಬರೆದರು. ಮುಂದೆ ಇವರು ಸೃಷ್ಟಿಸಿದ ಪಾತ್ರಗಳಾದ ಗಾಳಿರಾಯ, ಪತ್ತೇದಾರ ಮಧುಸೂದನ, ಪತ್ತೇದಾರ ಅರಿಂಜ ಮುಂತಾದವರು ಓದುಗರ ಪಾಲಿನ ನಾಯಕರಾಗಿ ಮೆರೆದರು. ಆದರೆ, ಪಾತ್ರ ಸೃಷ್ಟಿಸಿದ ನರಸಿಂಹಯ್ಯನವರು ಮಾತ್ರ ತಮ್ಮ ಜೀವನದುದ್ದಕ್ಕೂ ಬಡತನದಲ್ಲಿಯೆ ಕಳೆದರು.
ಪ್ರಶಸ್ತಿ ಮತ್ತು ಸನ್ಮಾನ: ಎನ್.ನರಸಿಂಹಯ್ಯನವರಿಗೆ 1992ರಲ್ಲಿ ದಾವಣಗೆರೆಯಲ್ಲಿ ಜರುಗಿದ 61ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಅದೆ ವರ್ಷ ಅವರಿಗೆ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು. 1997 ನೆಯ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಗಣ್ಯರ ಭೇಟಿ: ಸಚಿವ ಸುರೇಶ್‌ಕುಮಾರ್, ವಾಟಾಳ್ ನಾಗರಾಜ್, ಹಿರಿಯ ಕವಿ ಎಸ್.ಜಿ.ಸಿದ್ದರಾಮಯ್ಯ, ಶಾಸಕರಾದ ನೆ.ಲ.ನರೇಂದ್ರಬಾಬು ಮತ್ತು ಕೃಷ್ಣಪ್ಪ, ಪತ್ರಕರ್ತ ಗಂಗಾಧರ್ ಮೊದಲಿಯಾರ್, ಜನಪದ ಸಂಘಟಕ ಡಾ.ವಿರೇಶ್ ಬಳ್ಳಾರಿ, ಬೆಂಗಳೂರು ಕಸಾಪ ಅಧ್ಯಕ್ಷ ಸಿ.ಕೆ.ರಾಮೇಗೌಡ ಸೇರಿದಂತೆ ಮುಂತಾದ ಗಣ್ಯರು ಮೃತರ ಸ್ವಗೃಹಕ್ಕೆ ಭೇಟಿ ನೀಡಿ ಅಂತಿಮದರ್ಶನವನ್ನು ಪಡೆದುಕೊಂಡರು.   – ವಾರ್ತಾಭಾರತಿ
Please follow and like us:
error