You are here
Home > Koppal News > ಅರ್ಥಪೂರ್ಣ ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಧಾರ

ಅರ್ಥಪೂರ್ಣ ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಧಾರ

  ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಹೇಳಿದರು.
  ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಆಚರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಇದೇ ಅಕ್ಟೋಬರ್ ೨೯ ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾಡಳಿತವು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುವುದು.  ವಾಲ್ಮೀಕಿ ಜಯಂತಿಯ ಅಂಗವಾಗಿ ಅಂದು ಬೆಳಿಗ್ಗೆ ೯ ಗಂಟೆಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ಕೊಪ್ಪಳದ ಶಿರಸಪ್ಪಯ್ಯನಮಠದಿಂದ ಪ್ರಾರಂಭಗೊಂಡು ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನ ತಲುಪಲಾಗುವುದು.   ಈ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.  ಈ ಮೆರವಣಿಗೆಯಲ್ಲಿ ಎಲ್ಲಾ ಸಂಘಟನೆಗಳು, ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಬೇಕು. ಮೆರವಣಿಗೆಯು ಜವಾಹರ ರಸ್ತೆಯಿಂದ ಸಾಹಿತ್ಯ ಭವನಕ್ಕೆ ಮಧ್ಯಾಹ್ನ ೧೨ ಗಂಟೆಗೆ ತಲುಪಲಿದೆ.  ನಂತರ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗಿದ್ದು, ಸಮಾರಂಭದಲ್ಲಿ ಗಣ್ಯಾತಿಗಣ್ಯರೆಲ್ಲರು ಭಾಗವಹಿಸಲಿದ್ದಾರೆ.  ಮಹರ್ಷಿ ವಾಲ್ಮೀಕಿಯವರ ಕುರಿತು ಹಾಗೂ ಜಯಂತಿ ಕಾರ್ಯಕ್ರಮದ ಮಹತ್ವ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಾಲ್ಮೀಕಿ ಜಯಂತಿಯ ಅಂಗವಾಗಿ ಅ. ೨೯ ರಂದು ಏರ್ಪಡಿಸಲಾಗಿರುವ ಅದ್ಧೂರಿ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು.  ಸಾರ್ವಜನಿಕರ, ಸಂಘಟನೆಗಳ ಪದಾಧಿಕಾರಿಗಳು ಶಾಂತಿಯನ್ನು ಕಾಪಾಡಿಕೊಂಡು ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಮನವಿ ಮಾಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿರುವುದರಿಂದ, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ, ಗ್ರಾಮ ಪಂಚಾಯತಿ, ತಾಲೂಕಾ ಪಂಚಾಯತಿ ಕಚೇರಿಗಳಲ್ಲಿ ಕಡ್ಡಾಯವಾಗಿ ವಾಲ್ಮೀಕಿ ಜಯಂತಿ ಆಚರಿಸಬೇಕು.  ಅ. ೨೯ ರಂದು ಸಾಹಿತ್ಯ ಭವನದಲ್ಲಿ ಜರುಗುವ ವಾಲ್ಮೀಕಿ ಜಯಂತಿ ಸಮಾರಂಭದ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳಿಗೆ ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಕೋಟಾದಲ್ಲಿ ಸೀಟು ಪಡೆದು, ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ಉನ್ನತ ವ್ಯಾಸಂಗ ನಡೆಸಿರುವ ಜಿಲ್ಲೆಯ ವಾಲ್ಮೀಕಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
  ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿ ಹೆಚ್.ಎಸ್. ಅಂಗಡಿ ಅವರು ವಾಲ್ಮೀಕಿ ಜಯಂತಿ ಆಚರಣೆ ಕುರಿತ ಸಮಗ್ರ ವಿವರವನ್ನು ಸಭೆಗೆ ಸಲ್ಲಿಸಿದರು. ನಗರಸಭೆ ಸದಸ್ಯೆ ಇಂದಿರಾ ಬಾವಿಕಟ್ಟಿ, ಶಿವಾನಂದ ಹೊದ್ಲೂರ್, ದೇವೇಂದ್ರಪ್ಪ ಡೊಳ್ಳಿನ, ಮಂಜುನಾಥ ಗೊಂಡಬಾಳ, ರಾಮಣ್ಣ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

Leave a Reply

Top