fbpx

ಸದೃಢ ರಾಷ್ಟ್ರ ಕಟ್ಟಲು ತಪ್ಪದೇ ಮತದಾನ ಮಾಡಿ – ಕೃಷ್ಣ ಉದಪುಡಿ

 ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ದೇಶದ ಪ್ರತಿಯೊಬ್ಬ ನಾಗರೀಕ ತಪ್ಪದೇ ಮತದಾನ ಮಾಡಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಮತದಾರರಿಗೆ ಕರೆ ನೀಡಿದರು. 

ಜಿಲ್ಲಾ ಪಂಚಾಯತ ಕೊಪ್ಪಳ, ಯಲಬುರ್ಗಾ ತಾಲೂಕು ಆಡಳಿತ, ತಾಲೂಕು ಪಂಚಾಯತ, ಪಟ್ಟಣ ಪಂಚಾಯತಿ, ಕಾಲೇಜು ಶಿಕ್ಷಣ ಇಲಾಖೆ, ಯುವಜನ ಕ್ರೀಡೆ ಸೇರಿದಂತೆ ವಿವಿಧ ಇಲಾಖೆಗಳು ಸ್ವೀಪ್ ಕಾರ್ಯಕ್ರಮದಡಿ ಯಲಬುರ್ಗಾದಲ್ಲಿ ಮತದಾರರ ಜಾಗೃತಿಗಾಗಿ ಏರ್ಪಡಿಸಲಾಗಿದ್ದ ಮತದಾರರ ಜಾಗೃತಿ ಜಾಥಾ ಮತ್ತು ಮ್ಯಾರಥಾನ್ ಓಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

  ಪ್ರತಿಯೊಬ್ಬ ಮತದಾರನು ನಿರ್ಭಯದಿಂದ ಮತ ಚಲಾಯಿಸಬೇಕು.  ಜಾತಿ, ಹಣ, ಮತ್ತಿತರ ಆಮಿಷಗಳಿಗೆ ಬಲಿಯಾಗದೇ ಮತ ಚಲಾಯಿಸುತ್ತೇವೆ ಎಂದು ಪ್ರಮಾಣ ಮಾಡಬೇಕು.  ಶೇಕಡವಾರು ಮತದಾನ ಹೆಚ್ಚಾಗುವಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು.  ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಹೆಚ್ಚಿನ ಹೊಣೆಗಾರಿಕೆ ಇದೆ.   ಈ ನಿಟ್ಟಿನಲ್ಲಿ ಮತದಾರರ ಜಾಗೃತಿಗೆ ಕಾಲೇಜು ವಿದ್ಯಾರ್ಥಿಗಳು ಕಡ್ಡಾಯ ಮತದಾನದ ಬಗ್ಗೆ ತಮ್ಮ ವ್ಯಾಪ್ತಿಯ ಗ್ರಾಮ, ಗ್ರಾಮಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಯುವಕರಿಗೆ ಕರೆ ನೀಡಿದರು.
  ಮತದಾನ ಜಾಗೃತಿಗಾಗಿ ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಾಲೇಜುಗಳ ಸಿಬ್ಬಂದಿಗಳು, ಅಧಿಕಾರಿಗಳಿಂದ ಯಲಬುರ್ಗಾದ ಪ್ರಮುಖ ಬೀದಿಗಳಲ್ಲಿ ಮತದಾರರ ಜಾಗೃತಿಯ ಘೋಷಣೆಗಳೊಂದಿಗೆ ಜಾಥಾ ನಡೆಸಲಾಯಿತು. 
   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ,  ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಯಪ್ಪ, ತಹಸಿಲ್ದಾರ್ ಮಡಿವಾಳರ್, ವಾರ್ತಾಧಿಕಾರಿ ತುಕಾರಾಂರಾವ್, ಕ್ರೀಡಾ ಇಲಾಖೆಯ ಅಧಿಕಾರಿ ಪಿ. ರಾಮಕೃಷ್ಣಯ್ಯ, ಕಾಲೇಜುಗಳ ಪ್ರಾಂಶುಪಾಲರುಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.  ’ಪ್ರಜಾ ಪ್ರಭುತ್ವದಲ್ಲಿ ದೃಢವಿಶ್ವಾಸ ಹೊಂದಿ, ಮುಕ್ತ, ನ್ಯಾಯ ಸಮ್ಮತ ಚುನಾವಣೆಯ ಘನತೆಯನ್ನು ಎತ್ತಿ ಹಿಡಿಯುತ್ತೇವೆ, ನಿರ್ಭೀತರಾಗಿ, ಜಾತಿ,ಧರ್ಮ, ಮತ, ಇತ್ಯಾದಿಗಳಿಗೆ ಪ್ರಭಾವಿತರಾಗದೆ, ಯಾವುದೇ ಆಮಿಷಕ್ಕೊಳಗಾಗದೆ ಮತ ಚಲಾಯಿಸುತ್ತೇವೆ’ ಎಂಬ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿಯನ್ನು ಇದೇ ಸಂದರ್ಭದಲ್ಲಿ ಎಲ್ಲರಿಗೂ ಬೋಧಿಸಲಾಯಿತು. 
Please follow and like us:
error

Leave a Reply

error: Content is protected !!