ಕ್ರೀಡಾಪಟುಗಳಿಗೆ ಉದ್ಯೋಗ ಭದ್ರತೆ ಅಗತ್ಯ- ಕ್ರೀಡಾಸಕ್ತರ ಮನವಿ

  ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ, ಉದ್ಯೋಗದಲ್ಲಿ ಮೀಸಲಾತಿ ನಿಗದಿಪಡಿಸಬೇಕು, ಪ್ರಾಥಮಿಕ ಹಂತದಿಂದಲೇ ಕ್ರೀಡಾಪಟುಗಳನ್ನು ಸೃಷ್ಟಿಸುವಂತಹ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಜಿ.ಎಂ. ಸುರೇಶ್ ಅವರಿಗೆ ಕೊಪ್ಪಳ ಕ್ರೀಡಾಪಟುಗಳು ಹಾಗೂ ಕ್ರೀಡಾಸಕ್ತರು ಒಕ್ಕೊರಲಿನ ಮನವಿಯನ್ನು ಸಲ್ಲಿಸಿದರು.
  ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಯುವ ಕ್ರೀಡಾ ನೀತಿ ರಚನೆ ಕುರಿತಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು, ಕ್ರೀಡಾಸಕ್ತರು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಕರ ಸಂಘದ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಮಂಡಿಸಿದರು.
  ರಾಜ್ಯ ಯುವ ಕ್ರೀಡಾ ನೀತಿ ರಚನಾ ಸಮಿತಿ ಸದಸ್ಯ ಜಿ.ಎಂ. ಸುರೇಶ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ನೂತನ ಯುವ ಕ್ರೀಡಾ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸರ್ಕಾರ ರಾಜ್ಯ ಮಟ್ಟದ ಸಮಿತಿಯನ್ನು ರಚಿಸಿದೆ. ಬೆಂಗಳೂರಿನಲ್ಲಿ ಕುಳಿತುಕೊಂಡು ಕ್ರೀಡಾ ನೀತಿ ತಯಾರಿಸುವುದು ಸರಿಯಲ್ಲ, ಆಯಾ ಜಿಲ್ಲೆಗಳ ಕ್ರೀಡಾಪಟುಗಳೊಂದಿಗೆ ಚರ್ಚಿಸಿ ನೀತಿ ರೂಪಿಸಲು ನಿರ್ಧರಿಸಿ, ರಾಜ್ಯಾದ್ಯಂತ ಅಭಿಪ್ರಾಯ ಸಂಗ್ರಹಣೆಗೆ ಸರ್ಕಾರ ಮುಂದಾಗಿದೆ.  ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳಲ್ಲಿ ದೇಶದ ಕ್ರೀಡಾ ಪಟುಗಳ ಸಾಧನೆ, ಬೇರೆ ದೇಶಗಳಿಗೆ ಹೋಲಿಸಿದಾಗ ತೃಪ್ತಿಕರವಿಲ್ಲ.  ಈ ನಿಟ್ಟಿನಲ್ಲಿ, ಉತ್ತಮ ಕ್ರೀಡಾ ಪಟುಗಳನ್ನು ಸೃಷ್ಟಿಸಿ, ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ಯುವ ಕ್ರೀಡಾ ನೀತಿ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
  ಸಭೆಯಲ್ಲಿ ಭಾಗವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ. ಮರುಳಯ್ಯ ಅವರು ಮಾತನಾಡಿ, ಸರ್ಕಾರ ಶಾಲಾ, ಕಾಲೇಜುಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಸಮರ್ಪಕ ಆಟದ ಮೈದಾನಕ್ಕೆ ಆದ್ಯತೆ ನೀಡುತ್ತಿಲ್ಲ.  ಇದು ಕ್ರೀಡಾಭಿವೃದ್ಧಿಗೆ ತೀವ್ರ ಹಿನ್ನಡೆ ಎಂದೇ ಪರಿಗಣಿಸಬಹುದಾಗಿದೆ.  ವಿದ್ಯಾರ್ಥಿಗಳಿಗೆ ಎನ್.ಸಿ.ಸಿ. ಜೊತೆಗೆ ಕ್ರೀಡಾ ತರಬೇತಿ ನೀಡಿದಲ್ಲಿ ಸದೃಢ ದೇಹದ ಜೊತೆಗೆ ಪಠ್ಯ ಚಟುವಟಿಕೆಗಳಲ್ಲಿ ಏಕಾಗ್ರತೆಗೆ ಸಹಕಾರಿಯಾಗುತ್ತದೆ ಎಂದರು.
  ಪ್ರಾಚಾರ್ಯರುಗಳ ಸಂಘದ ಅಧ್ಯಕ್ಷ ಡಾ. ವಿ.ಬಿ. ರಡ್ಡೇರ ಅವರು ಮಾತನಾಢಿ, ಕಾಲೇಜುಗಳಲ್ಲಿ ಕ್ರೀಡಾ ತರಬೇತುದಾರರು, ದೈಹಿಕ ತರಬೇತುದಾರರ ಹುದ್ದೇಯೇ ಮಂಜೂರಾಗಿಲ್ಲ.  ತರಬೇತಿ ಇಲ್ಲದೆ ಉತ್ತಮ ಕ್ರೀಡಾಪಟುಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ.  ಕ್ರಿಕೆಟ್ ಹೊರತುಪಡಿಸಿ ರಾಜ್ಯದಲ್ಲಿ ಹಲವಾರು ಪ್ರತಿಭಾನ್ವಿತ, ಅಸಾಧಾರಣ ಸಾಧನೆಗೈದ ಕ್ರೀಡಾಪಟುಗಳ ಬದುಕು ದುಸ್ತರವಾಗಿರುವುದನ್ನು ಮಾಧ್ಯಮಗಳ ಮೂಲಕ ನಾವು ನೋಡುತ್ತಿದ್ದೇವೆ.  ಕ್ರೀಡಾಪಟುಗಳಿಗೆ ಉದ್ಯೋಗದ ಖಾತ್ರಿ ಇಲ್ಲದಿರುವುದರಿಂದ ಕ್ರೀಡಾ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ.  ಇದರಿಂದಾಗಿ ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ತೋರುವ ಕ್ರೀಡಾ ಪಟುಗಳ ಸಾಧನೆ ಜಿಲ್ಲಾ ಮಟ್ಟಕ್ಕೆ ಮುಗಿದುಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.  ಜಿಲ್ಲಾ ಪ್ರಭಾರಿ ದೈಹಿಕ ಶಿಕ್ಷಣ ಅಧಿಕಾರಿ ಸುದರ್ಶನ್ ಅವರು ಮಾತನಾಡಿ, ಪ್ರತಿ ಶಾಲಾ ಕಾಲೇಜುಗಳಿಗೆ ಪೀಠೋಪಕರಣಗಳ ಜೊತೆಗೆ ಕ್ರೀಡಾ ಸಾಮಗ್ರಿಗಳ ಖರೀದಿಗೆ ಪ್ರತ್ಯೇಕವಾಗಿ ಅನುದಾನ ಒದಗಿಸಬೇಕು.  ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.  ಎಂ.ಆರ್. ಹವಳದ ಅವರು ಮಾತನಾಡಿ, ಶಾರೀರಿಕ ಶಿಕ್ಷಣ ವಿಷಯವನ್ನು ಕಡ್ಡಾಯ ವಿಷಯವನ್ನಾಗಿ ಜಾರಿಗೆ ತರುವುದು ಅಗತ್ಯವಾಗಿದೆ ಎಂದರು.  ಖಾಸಗಿ ಸೇವಾ ವಲಯ ಹಾಗೂ ಸರ್ಕಾರಿ ಹುದ್ದೆಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಕಲ್ಪಿಸಬೇಕು.  ಪ್ರತಿ ತಾಲೂಕುಗಳ ಕ್ರೀಡಾಂಗಣಗಳ ಸದ್ಬಳಕೆಗೆ ಯೋಜನೆ ರೂಪಿಸಬೇಕು ಎಂದು ಹಲವರು ಸಲಹೆ ಸೂಚನೆಗಳನ್ನು ನೀಡಿದರು.  
  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಉಪಸ್ಥಿತರಿದ್ದರು.  ಜಿಲ್ಲೆಯ ಹಲವಾರು ಕ್ರೀಡಾಪಟುಗಳು, ಕಾಲೇಜುಗಳ ಪ್ರಾಚಾರ್ಯರು, ಕ್ರೀಡಾಸಕ್ತರು, ದೈಹಿಕ ಶಿಕ್ಷಕರ ಸಂಘದ ಪ್ರತಿನಿಧಿಗಳು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.
Please follow and like us:
error

Related posts

Leave a Comment