fbpx

ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ ಕಾರ್ಯಕ್ರಮ.

ಕೊಪ್ಪಳ, ನ.೨೦ (ಕರ್ನಾಟಕ ವಾರ್ತೆ)  ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನ. ೨೧ ರಂದು ಕೊಪ್ಪಳ ಜಿಲ್ಲೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು, ಬೆ. ೧೦-೫೦ ಕ್ಕೆ ಗಿಣಿಗೇರಾ ಏರ್‌ಸ್ಟ್ರಿಪ್ (ಎಂಎಸ್‌ಪಿಎಲ್ ವಿಮಾನ ನಿಲ್ದಾಣ) ಕ್ಕೆ ಆಗಮಿಸುವರು. ನಂತರ ತಳಕಲ್ ಗ್ರಾಮಕ್ಕೆ ಭೇಟಿ ನೀಡಿ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರ ತಂದೆಯವರಾದ ದಿವಂಗತ ಬಸವಲಿಂಗಪ್ಪ ರಾಯರಡ್ಡಿ ಅವರ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸುವರು.  ಬೆಳಿಗ್ಗೆ ೧೧-೪೦ ಗಂಟೆಗೆ ಗಿಣಿಗೇರಾ ಏರ್‌ಸ್ಟ್ರಿಪ್‌ಗೆ ಆಗಮಿಸಿ, ಹೆಲಿಕಾಪ್ಟರ್ ಮೂಲಕ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಗೆ ಪ್ರಯಾಣ ಬೆಳೆಸುವರು.  ಹಡಗಲಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ, ಹೆಲಿಕಾಪ್ಟರ್ ಮೂಲಕ ಕೊಪ್ಪಳ ತಾಲೂಕು ಗಿಣಿಗೇರಾ ಏರ್‌ಸ್ಟ್ರಿಪ್‌ಗೆ ಆಗಮಿಸುವರು.  ಮಧ್ಯಾಹ್ನ ೩-೪೫ ಗಂಟೆಗೆ ವಿಶೇಷ ವಿಮಾನ ಮೂಲಕ ಮುಖ್ಯಮಂತ್ರಿಗಳು ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ
ಕೊಪ್ಪಳ ನ. ೨೦ (ಕರ್ನಾಟಕ ವಾರ್ತೆ) ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ನ. ೨೧ ಮತ್ತು ೨೨ ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಬೆಳಿಗ್ಗೆ ೭-೩೦ ಗಂಟೆಗೆ ಮುನಿರಾಬಾದಿನ ಇಂದ್ರಭವನ ಅತಿಥಿ ಗೃಹಕ್ಕೆ ಆಗಮಿಸುವರು.  ಬೆ. ೧೦-೪೫ ಗಂಟೆಗೆ ಗಿಣಿಗೇರಾ ಏರ್‌ಸ್ಟ್ರಿಪ್‌ಗೆ ಆಗಮಿಸಿ, ಬೆ. ೧೧ ಗಂಟೆಗೆ ಮುಖ್ಯಮಂತ್ರಿಗಳ ಜೊತೆಯಲ್ಲಿ ಯಲಬುರ್ಗಾ ತಾಲೂಕು ತಳಕಲ್ ಗ್ರಾಮಕ್ಕೆ ತೆರಳುವರು.  ನಂತರ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರ ತಂದೆಯವರಾದ ದಿವಂಗತ ಬಸವಲಿಂಗಪ್ಪ ರಾಯರಡ್ಡಿ ಅವರ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿ,  ಬೆಳಿಗ್ಗೆ ೧೧-೪೦ ಗಂಟೆಗೆ ಗಿಣಿಗೇರಾ ಏರ್‌ಸ್ಟ್ರಿಪ್‌ಗೆ ಆಗಮಿಸುವರು.  ಮಧ್ಯಾಹ್ನ ೧೨-೧೦ ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು.  ನ. ೨೨ ರಂದು ಕಾರಟಗಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಂಡು, ಮಧ್ಯಾಹ್ನ ೩ ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
ಮಧ್ಯವರ್ತಿಗಳ ಮೋಸಕ್ಕೆ ಬಲಿಯಾಗದಿರಲು ದೇವದಾಸಿ ಮಹಿಳೆಯರಿಗೆ ಸೂಚನೆ.
ಕೊಪ್ಪಳ, ನ.೨೦ (ಕರ್ನಾಟಕ ವಾರ್ತೆ) ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಾಜಿ ದೇವದಾಸಿ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಈ ಸೌಲಭ್ಯಗಳನ್ನು ಒದಗಿಸುವ ನೆಪದಲ್ಲಿ ಕೆಲ ಮಧ್ಯವರ್ತಿಗಳು ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಮಧ್ಯವರ್ತಿಗಳ ಮೋಸಕ್ಕೆ ಬಲಿಯಾಗದಂತೆ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ಮಾಜಿ ದೇವದಾಸಿ ಮಹಿಳೆಯರಿಗೆ ಸೂಚನೆ ನೀಡಿದ್ದಾರೆ.
     ಕೊಪ್ಪಳ ಜಿಲ್ಲೆಯಲ್ಲಿರುವ ೨೮೪೪ ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ಪ್ರತಿ ತಿಂಗಳಿಗೆ ೧,೦೦೦ ರೂ ಮಾಶಾಸನವನ್ನು ಎನ್.ಇ.ಎಫ್.ಟಿ ಮುಖಾಂತರ ನೇರವಾಗಿ ಫಲಾನುಭವಿಗಳ ಖಾತೆಗೆ ಬೆಂಗಳೂರಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಜಮಾ ಮಾಡಲಾಗುತ್ತಿದೆ. ಅಲ್ಲದೆ ವಸತಿ ರಹಿತ ನಿವೇಶನ ಹೊಂದಿದ ಫಲಾನುಭವಿಗಳಿಗೆ ೧.೨೦ ಲಕ್ಷ ರೂ.ಗಳಲ್ಲಿ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ. ಈ ಹಿಂದೆ ಮಾಸಿಕ ೫೦೦ ರೂ. ಇದ್ದ ಮಾಶಾಸನವನ್ನು ೨೦೧೫ ಜುಲೈ ತಿಂಗಳಿನಿಂದ ಮಾಸಿಕ ೧,೦೦೦ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದನ್ನರಿತ ಕೆಲ ಮಧ್ಯವರ್ತಿಗಳು ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಫಲಾನುಭವಿಗಳು ನಿಗಮದ ವಸತಿ, ಮಾಶಾಸನ, ಪ್ರೋತ್ಸಾಹಧನ ಸೇರಿದಂತೆ ಇತರೆ ಸೌಲಭ್ಯಗಳನ್ನು ಕೊಡಿಸುವುದಾಗಿ ಬರುವ ಮಧ್ಯವರ್ತಿಗಳ ಮೋಸಕ್ಕೆ ಬಲಿಯಾಗಬಾರದು ಹಾಗೂ ಅಂತಹ ವ್ಯಕ್ತಿಗಳು ಅಥವಾ ಸಂಘ, ಸಂಸ್ಥೆಗಳು ಹಣ ಕೊಡುವಂತೆ ಒತ್ತಾಯಿಸಿದಲ್ಲಿ ಸಮೀಪದ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು ಹಾಗೂ ಅಂತಹ ವ್ಯಕ್ತಿಗಳನ್ನು ಸ್ಥಳೀಯ ಪ್ರಮುಖರ ಸಹಾಯದಿಂದ ಪೊಲೀಸರ ವಶಕ್ಕೆ ಒಪ್ಪಿಸಿ, ಈ ಕಛೇರಿಗೆ ಮಾಹಿತಿ ತಿಳಿಸಬೇಕು. ಮಧ್ಯವರ್ತಿಗಳಿಗೆ ಹಣ ನೀಡಿ ವಂಚನೆಗೆ ಬಲಿಯಾದಲ್ಲಿ ಮಾಜಿ ದೇವದಾಸಿ ಫಲಾನುಭವಿಗಳೇ ನೇರವಾಗಿ ಹೊಣೆಗಾರರಾಗುತ್ತಾರೆ ಎಂದು ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ತಿಳಿಸಿದ್ದಾರೆ. 
ಹೈನುಗಾರಿಕೆ ತರಬೇತಿ ಅರ್ಜಿ ಆಹ್ವಾನ.
ಕೊಪ್ಪಳ, ನ.೨೦ (ಕರ್ನಾಟಕ ವಾರ್ತೆ) ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಕೊಪ್ಪಳ ಇವರ ವತಿಯಿಂದ ಕೊಪ್ಪಳ ಜಿಲ್ಲೆಯ ಯುವಕ ಯುವತಿಯರಿಗೆ ೬ ದಿನಗಳ ಉಚಿತ ಹೈನುಗಾರಿಕೆ (ಡೈರಿ ಫಾರ್ಮಿಂಗ್) ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ಕೊಪ್ಪಳ ಜಿಲ್ಲೆಯ ನಿವಾಸಿಯಾಗಿರಬೇಕು. ೧೮ ರಿಂದ ೪೫ ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ಕನಿಷ್ಠ ೫ನೇ ತರಗತಿ ಉತ್ತೀರ್ಣತೆ ಹೊಂದಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. ಅರ್ಜಿ ನಮೂನೆಗಳನ್ನು ವಿತರಿಸಲು ಹಾಗೂ ಸ್ವೀಕರಿಸಲು ನ.೨೭ ಕೊನೆ ದಿನಾಂಕವಾಗಿದ್ದು, ನ.೨೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಸಂದರ್ಶನ ನಡೆಯಲಿದೆ. ನ.೩೦ ರಿಂದ ತರಬೇತಿ ತರಗತಿಗಳು ಪ್ರಾರಂಭವಾಗಲಿವೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ, ದೂರವಾಣಿ ಸಂಖ್ಯೆ : ೦೮೫೩೯-೨೩೧೦೩೮ ಇವರನ್ನು ಸಂಪರ್ಕಿಸಬಹುದಾಗಿದೆ.  
Please follow and like us:
error

Leave a Reply

error: Content is protected !!