ತಪ್ಪು ಹೇಳಿಕೆಗಳು ಮತ್ತು ಅಸಹ್ಯಕರ ಪ್ರತಿಕ್ರಿಯೆಗಳು

ಡಾ. ನಟರಾಜ್ ಹುಳಿಯಾರ್
ಅನಂತಮೂರ್ತಿಯವರು ನಿಜಕ್ಕೂ ಖಿನ್ನರಾಗಿ ದ್ದರು. ಅದು ಖಾಸಗಿ ಖಿನ್ನತೆ ಮಾತ್ರ ಆಗಿರಲಿಲ್ಲ. ಎಲ್ಲ ಬಗೆಯ ಸೂಕ್ಷ್ಮ ಚರ್ಚೆಗಳನ್ನೂ ಕೈಬಿಟ್ಟು, ಎಲ್ಲವನ್ನೂ ವಿವಾದಕ್ಕೀಡು ಮಾಡಿ ಕೆಟ್ಟ ಆನಂದ ಪಡೆಯುವ ಚಪಲಕ್ಕೆ ನಮ್ಮ ಮಾಧ್ಯಮ ಜಗತ್ತು ಬಲಿಯಾಗತೊಡಗಿರುವುದರ ಬಗ್ಗೆ ಎಲ್ಲ ಸೂಕ್ಷ್ಮಜ್ಞರಲ್ಲಿರುವ ಆತಂಕ ಹಾಗೂ ದಿಗ್ಭ್ರಮೆ ಅವರಲ್ಲಿ ಈಗ ಇನ್ನಷ್ಟು ಹೆಚ್ಚತೊಡಗಿತ್ತು. ಆ ಬಗ್ಗೆ ಅಲ್ಲಲ್ಲಿ ಪ್ರತಿಕ್ರಿಯೆ ನೀಡಿದ್ದ ನಾನು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಈ ಬಗ್ಗೆ ಬರೆಯುವಂತೆ ಕೇಳಿದಾಗ ಇನ್ನಷ್ಟು ವಿವರವಾಗಿ ಯೋಚಿಸತೊಡಗಿದೆ. ಅಲ್ಲಿ ಬರೆದಿದ್ದರ ಸಾರಾಂಶ ಇಲ್ಲಿದೆ:
ವಿದ್ವಾಂಸರೊಬ್ಬರು ಒಂದು ಪ್ರಶಸ್ತಿಯ ಬಗ್ಗೆ ಆರಂಭಿಸಿದ ಒಂದು ಗೊಣಗಾಟ ಎಲ್ಲೆಲ್ಲಿಗೋ ಹೋಗಿ ತಲುಪಿದ ವಿಚಿತ್ರ ಹಾಗೂ ಅಪಾಯ ಕರ ಪ್ರಸಂಗವಿದು. ಕರ್ನಾಟಕ ಸರಕಾರ ಅನಂತಮೂರ್ತಿಯವರಿಗೆ ‘ಬಸವಶ್ರೀ’ ಪ್ರಶಸ್ತಿ ಕೊಟ್ಟದ್ದು ಕಲಬುರ್ಗಿಯವರಿಗೆ ಒಪ್ಪಿಗೆಯಾಗಲಿಲ್ಲ; ಪ್ರಶಸ್ತಿಗೆ ಅನಂತಮೂರ್ತಿ ಅರ್ಹರಲ್ಲ ಎಂದು ಅವರು ಬರೆದರು. ಜೊತೆಗೆ ತಮ್ಮ ಈ ಪ್ರತಿಭಟನೆಯ ಬಗ್ಗೆ ಸರಕಾರದ ಗಮನ ಸೆಳೆಯಲು ಹನ್ನೆರಡನೆಯ ಶತಮಾನದ ಚರಿತ್ರೆಯ ಜೊತೆಗಿನ ಒಂದು ಹೋಲಿಕೆಯನ್ನೂ ಬಳಸಿದರು. ಕಲಬುರ್ಗಿಯವರ ಈ ಹೋಲಿಕೆಯ ಪ್ರಕಾರ, ಬಿಜ್ಜಳನ ಕಾಲದಲ್ಲೂ ಬಸವಣ್ಣನಿಗೆ ನ್ಯಾಯ ಸಿಗಲಿಲ್ಲ; ಇದೀಗ ಈ ಪ್ರಶಸ್ತಿ ಅನಂತಮೂರ್ತಿಯವರಿಗೆ ಹೋಗಿದ್ದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾಲದಲ್ಲೂ ಬಸವಣ್ಣನವರಿಗೆ ನ್ಯಾಯ ಸಿಗಲಿಲ್ಲ! ತಕ್ಷಣ ಆಯ್ಕೆ ಸಮಿತಿಯ ಸದಸ್ಯರೊಬ್ಬರು, ‘‘ಆಯ್ಕೆ ಸಮಿತಿಯು ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಸರಕಾರದ ಕಾಲದಲ್ಲಿ ನೇಮಕವಾಗಿತ್ತು; ಸಿದ್ದ್ಧರಾಮಯ್ಯನವರ ಸರಕಾರದ ಕಾಲದಲ್ಲಲ್ಲ’’ ಎಂದು ಈ ಪ್ರಶ್ನೆಗೆ ಉತ್ತರ ಕೊಟ್ಟರು; ‘‘ಈಗಾಗಲೇ ಇದ್ದ ಮಾನದಂಡಗಳ ಪ್ರಕಾರ ಹಾಗೂ ಆಯ್ಕೆ ಸಮಿತಿಯ ತೀರ್ಮಾನದಂತೆ ಪ್ರಶಸ್ತಿ ತೀರ್ಮಾನವಾಗಿದೆ; ಅದರಲ್ಲಿ ಸರಕಾರ ಹಸ್ತಕ್ಷೇಪ ಮಾಡಿಲ್ಲ; ಹಾಗೆ ಮಾಡಲು ಬರು ವುದಿಲ್ಲ’’ ಎಂದು ಕನ್ನಡ ಸಂಸ್ಕೃತಿ ಸಚಿವೆಯವರು ಹೇಳಿದರು. ಪ್ರಶಸ್ತಿ ನೀಡುವ ಮೊದಲು ಹಗ ರಣ ಮಾಡುವ ಸಣ್ಣತನವನ್ನು ಪ್ರೊ.ಕಲಬುರ್ಗಿಯವರು ತೋರಿರಲಿಲ್ಲ; ಅದು ಅವರ ಘನತೆಯನ್ನೂ ಸೂಚಿಸುತ್ತದೆ ಎಂಬುದನ್ನು ಎಲ್ಲರೂ ಒಪ್ಪಬೇಕು. ಈ ಚರ್ಚೆ ಅಲ್ಲಿಗೆ ಮುಗಿಯಬಹುದಿತ್ತು; ಅಥವಾ ಪ್ರಶಸ್ತಿಯ ಮಾನದಂಡಗಳನ್ನು ಕುರಿತು ಆ ನಂತರವೂ ಚರ್ಚೆ ಗಂಭೀರವಾಗಿ ಮುಂದುವರಿಯಬಹುದಿತ್ತು. ಆದರೆ ಚರ್ಚೆಯ ಸಂದರ್ಭದಲ್ಲಿ ಕಲಬುರ್ಗಿ ಯಾಕೋ ತಮ್ಮ ಸೈರಣೆ ಕಳೆದುಕೊಂಡರು. ಸಾಮಾನ್ಯವಾಗಿ ಪಠ್ಯಗಳ ಸತ್ಯಾಸತ್ಯತೆಗಳನ್ನು ಗುರುತಿಸಲು ತಮ್ಮದೇ ಆದ ಖಚಿತ ವಿಧಾನ ಗಳನ್ನು ಬಳಸುವ ಅವರು ಯಾರೋ ತೋರಿಸಿ ಕೊಟ್ಟ ಸಾಲೊಂದನ್ನು ಉಲ್ಲೇಖಿಸಿ ಅನಂತಮೂರ್ತಿಯವರು ಬಸವಣ್ಣನನ್ನು ‘‘ನಾನ್ಸೆನ್ಸ್ ಫಿಲಾಸಫರ್’’ ಎಂದಿದ್ದಾರೆ; ಆದ್ದರಿಂದ ಅವರಿಗೆ ಬಸವಶ್ರೀ ಪ್ರಶಸ್ತಿ ಕೊಟ್ಟಿದ್ದು ಸರಿಯಲ್ಲ ಎಂದು ವಾದಿಸಿದರು. ಆದರೆ ಅನಂತಮೂರ್ತಿಯವರು ಹೇಳಿದ್ದು ಬಸವಣ್ಣ ‘ನೋ ನಾನ್ಸೆನ್ಸ್ ಫಿಲಾಸಫರ್’ ಎಂಬುದು ಮೂಲ ಪಠ್ಯದಲ್ಲಿ ಸ್ಪಷ್ಟವಾಗಿತ್ತು. ಅಷ್ಟು ದೊಡ್ಡ ವಿದ್ವಾಂಸರಾದ ಕಲಬುರ್ಗಿಯವರು ಕೊನೆಯ ಪಕ್ಷ ಅನಂತಮೂರ್ತಿಯವರಿಂದಲೇ ಈ ಪಠ್ಯದ ಬಗ್ಗೆ ವಿವರಣೆ ಕೇಳಿ ನಂತರ ಬರೆಯ ಬಹುದಿತ್ತು. ಅದನ್ನೂ ಅವರು ಮಾಡಲಿಲ್ಲ.
ಹೀಗೆ ಚರ್ಚೆಯೊಂದು ವಿವಾದವಾಗಲು ತಮ್ಮ ಕಾಣಿಕೆ ನೀಡಿದ ಕಲಬುರ್ಗಿಯವರು ಇದೇ ಸರಿ ಸುಮಾರಿನಲ್ಲೇ ಮತ್ತೊಂದು ಸಂದರ್ಭದಲ್ಲಿಯೂ ದುಡುಕಿದರು. ಕಲಬುರ್ಗಿಯವರು ಸಾಮಾನ್ಯವಾಗಿ ಆಧುನಿಕ ಸಾಹಿತ್ಯದ ತಂಟೆಗೆ ಹೋಗು ವುದು ಕಡಿಮೆ. ಆದರೆ ವಿಚಾರ ಸಂಕಿರಣ ವೊಂದರಲ್ಲಿ ಮೂಢನಂಬಿಕೆಯ ವಿರುದ್ಧ ಮಾತಾಡುತ್ತಾ, ‘‘ಅನಂತಮೂರ್ತಿ ಬಾಲಕ ನಾಗಿದ್ದಾಗ ದೇವರ ಕಲ್ಲಿನ ಮೇಲೆ ಮೂತ್ರ ಮಾಡಿದ್ದರೂ ಅವರಿಗೆ ಏನೂ ಆಗಲಿಲ್ಲ; ಆ ಬಗ್ಗೆ ಅನಂತಮೂರ್ತಿಯವರೇ ಬರೆದುಕೊಂಡಿದ್ದಾರೆ; ಆದ್ದರಿಂದ ಈ ಮೂಢನಂಬಿಕೆಗಳನ್ನು ನಾವು ನಂಬಬಾರದು’’ ಎಂದರು. ನಿರಂತರ ಅಸಿಡಿಟಿಯಿಂದ ಉರಿಯುತ್ತಾ ಸುದ್ದಿಗಾಗಿ ಬಾಯ್ತೆರೆದಿರುವ ಎಲೆಕ್ಟ್ರಾನಿಕ್ ಮಾಧ್ಯಮಗಳು ಈ ಮಾತನ್ನೇ ಹಿಂಜಿ ಇದು ಕಲಬುರ್ಗಿಯವರ ಮಾತು ಎಂಬಂತೆ ಅಮಾನವೀಯವಾಗಿ ಕಲಬುರ್ಗಿಯವರ ಮೇಲೆ ಮುಗಿ ಬಿದ್ದವು. ಅದರಿಂದ ತಪ್ಪಿಸಿಕೊಳ್ಳಲು ಕಲಬುರ್ಗಿಯವರು, ‘‘ಅದು ನನ್ನ ಮಾತಲ್ಲ ಅನಂತಮೂರ್ತಿಯವರದು; ಆ ಮಾತನ್ನು ನಾನು ಒಪ್ಪುವುದಿಲ್ಲ; ಹಾಗೆಲ್ಲ ದೇವರಿಗೆ ಅವಮಾನ ಮಾಡುವುದು ಸರಿಯಲ್ಲ’’ ಎಂದುಬಿಟ್ಟರು. ಜೊತೆಗೆ, ‘‘ನಮ್ಮ ಮೋದಿ ಸರಕಾರ ಬಂದಿರುವಾಗ ನಾನು ಆ ರೀತಿ ಮಾತಾಡುವುದಿಲ್ಲ’’ ಎಂದು ಕೂಡ ಹೇಳಿ ಬಿಟ್ಟರು!
 ಆದರೆ ಅನಂತಮೂರ್ತಿಯವರನ್ನು ಉಲ್ಲೇಖಿಸುವಾಗ ಎರಡನೆಯ ಸಲವೂ ಕಲಬುರ್ಗಿ ತಪ್ಪುಮಾಡಿದ್ದರು. ಅನಂತ ಮೂರ್ತಿಯವರ ‘ಬೆತ್ತಲೆ ಪೂಜೆ ಏಕೆ ಕೂಡದು?’ ಲೇಖನದಲ್ಲಿ ಅನಂತಮೂರ್ತಿ ಬಾಲಕನಾಗಿದ್ದಾಗ ‘‘ನನ್ನನ್ನೂ ಮೀರಿದ ಅಜ್ಞಾತ ಶಕ್ತಿಗಳು ಇಲ್ಲ ಎಂದು ನನಗೆ ನಾನು ದೃಢಪಡಿಸಿಕೊಳ್ಳುವುದಕ್ಕಾಗಿ ನಮ್ಮ ಹಳ್ಳಿಯ ಮರಗಳ ಕೆಳಗಿದ್ದ ದೆವ್ವದ ಕಲ್ಲುಗಳ ಮೇಲೆ ನಾನು ಮೂತ್ರ ವಿಸರ್ಜನೆ ಮಾಡಿದ್ದಿದೆ’’ ಎಂಬ ನಿವೇದನೆಯಿದೆ. ಈ ಮಾತನ್ನು ಅನಂತಮೂರ್ತಿಯವರು ಲೇಖನದ ನಿರ್ದಿಷ್ಟ ಸಾಂಸ್ಕೃತಿಕ ಸಂದರ್ಭವೊಂದರಲ್ಲಿ ಚರ್ಚಿಸಿದ್ದಾರೆ. ಆದರೆ ಯಾವ ಕಲ್ಪನಾ ವಿಲಾಸದಿಂದ ಕಲಬುರ್ಗಿಯವರು ‘ದೆವ್ವದ ಕಲ್ಲ’ನ್ನು ‘ದೇವರ ಕಲ್ಲು’ ಎಂದು ಭಾಷಾಂತರ ಮಾಡಿಕೊಂಡರೋ ತಿಳಿಯದು! ಆದರೆ ಕಲ್ಲು ದೈವ, ಮರ ದೈವಗಳನ್ನು ತೀವ್ರ ಪರೀಕ್ಷೆಗೊಳಪಡಿಸಿರುವ ವಚನಕಾರರ ವಚನಗಳನ್ನು ಸಂಪಾದಿಸಿರುವ ಕಲಬುರ್ಗಿಯವರಿಗೆ, ಬಾಲಕನೊಬ್ಬನಲ್ಲಿ ವೈಚಾರಿಕತೆ ಮೂಡುವಾಗ ಆತ ದೇವರ ಕಲ್ಲಿನ ಮೇಲೆ ಮೂತ್ರ ವಿಸರ್ಜಿಸಿದ್ದರೂ ಅದರ ಹಿಂದಿರುವ ಪರೀಕ್ಷಾ ಮನೋಭಾವವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇರಬೇಕಾಗಿತ್ತು ಎಂದು ನಮ್ಮಂಥವರು ನಿರೀಕ್ಷಿಸುವುದು ಸಹಜ. ಆದರೆ ಹಾಗಾಗಲಿಲ್ಲ. ಬದಲಿಗೆ ಇವೆಲ್ಲ ಬೀದಿ ಚರ್ಚೆಯ ಅಶ್ಲೀಲ ಮಟ್ಟಕ್ಕಿಳಿದು ಅಸಹ್ಯವನ್ನು ಸೃಷ್ಟಿಸುವಲ್ಲಿ ಮಾತ್ರ ನೆರವಾದವು. ಅನಗತ್ಯವಾಗಿ ಹಿರಿಯ ಲೇಖಕರಾದ ಅನಂತಮೂರ್ತಿಯವರನ್ನೂ ವಿದ್ವಾಂಸರಾದ ಕಲಬುರ್ಗಿಯವರನ್ನೂ ಅವಮಾನಿಸುವ ಕೆಲಸ ಶುರುವಾಯಿತು. ಇಡೀ ಚರ್ಚೆಯಲ್ಲಿ ಅಂತಃಸ್ಸಾಕ್ಷಿಯ ಕೊರತೆ ಎದ್ದು ಕಾಣುತ್ತಿತ್ತು.
ಇವೆಲ್ಲವನ್ನೂ ವಿದ್ವಾಂಸರಾದ ಕಲಬುರ್ಗಿ ಯವರು ಸೃಷ್ಟಿಸಿದರೆಂದು ನಾನು ಹೇಳುತ್ತಿಲ್ಲ. ಸ್ವತಃ ಕಲಬುರ್ಗಿಯವರು ಹಿಂದೊಮ್ಮೆ ತಮ್ಮ ಸಂಶೋಧನೆಗಳನ್ನು ಆಧರಿಸಿದ ಸತ್ಯಗಳನ್ನು ಮುಂದಿಟ್ಟಾಗ ಮೂಲಭೂತವಾದಿಗಳು ಅವರ ವಿರುದ್ಧವೇ ಅಸಹ್ಯಕರ ಅಪಪ್ರಚಾರ ಮಾಡಿದ್ದನ್ನು ಅವರು ಮರೆಯಬಾರದಿತ್ತು. ಅಕಸ್ಮಾತ್ ಅದು ನೆನಪಾಗದಿದ್ದರೂ ಈ ಸಂದರ್ಭದಲ್ಲಿ ಸತ್ಯ ಗೊತ್ತಾದಾಗ ಆ ಬಗ್ಗೆ ಒಂದು ಸರಳ ಸ್ಪಷ್ಟನೆಯನ್ನಾದರೂ ನೀಡಿ ಅವರು ದೊಡ್ಡವರಾಗಬಹುದಿತ್ತು. ಆ ಕೆಲಸ ಆಗಲಿಲ್ಲ.
 ಇಡೀ ಪ್ರಕರಣ ಆಸಕ್ತ ಹಿತಗಳು ಏನನ್ನಾದರೂ ಯಾರ ಮೇಲಾದರೂ ತಿರುಗಿಸಲು ಸಿದ್ಧರಾಗಿರುವ ಈ ಸಟ್ಯೆಾಟಿಜಿಗಳ ಕಾಲದಲ್ಲಿ ನಮ್ಮೆಲ್ಲ ಚರ್ಚೆಗಳೂ ಹೇಗೆ ದಿಕ್ಕೆಟ್ಟು ಹೋಗಬಲ್ಲವು ಎಂಬ ಬಗ್ಗೆ ನಾವೆಲ್ಲ ಆತ್ಮಪರೀಕ್ಷೆ ಮಾಡಿಕೊಳ್ಳುವಂತೆ ನಮ್ಮನ್ನು ಒತ್ತಾಯಿಸುತ್ತದೆ. ಅದರ ಜೊತೆಗೆ, ಮಾಧ್ಯಮಗಳಲ್ಲಿ ಇರುವ ಎಲ್ಲ ಸೂಕ್ಷ್ಮಜ್ಞರೂ ಈ ಬಗೆಯ ವಿವಾದಗಳ ಅಡ್ಡ ಪರಿಣಾಮಗಳನ್ನು ಕುರಿತು ತಂತಮ್ಮ ಅಂತಃಸ್ಸಾಕ್ಷಿಯ ಜೊತೆ ಮಾತಾಡಿಕೊಳ್ಳಬೇಕಾಗಿದೆ. ಒಮ್ಮೆ ನಾವು ಸುಳ್ಳು ಹೇಳಲಾರಂಭಿಸಿರುವುದು ಓದುಗರಿಗೆ, ಪ್ರೇಕ್ಷಕರಿಗೆ ಮನವರಿಕೆಯಾದ ತಕ್ಷಣ ಅವರು ಜೀವಮಾನಪೂರ್ತಿ ನಮ್ಮನ್ನು ಅಸಹ್ಯದಿಂದ ಕಾಣುತ್ತಾರೆ ಹಾಗೂ ನಮ್ಮನ್ನು ತಿರಸ್ಕರಿಸುತ್ತಾರೆ ಎಂಬ ಸರಳ ಸತ್ಯವನ್ನು ಕುರಿತು ಎಲ್ಲರೂ ಮತ್ತೊಮ್ಮೆ ಯೋಚಿಸಬೇಕಾಗಿದೆ. ಜೊತೆಗೆ, ಜನರ ಪೂರ್ವಗ್ರಹಗಳನ್ನು ತೊಡೆಯುವ ಕೆಲಸ ಮಾಡುವುದು ಪತ್ರಕರ್ತರ ಹಾಗೂ ಎಲ್ಲ ಬರಹಗಾರರ ಮೂಲ ಕರ್ತವ್ಯವೇ ಹೊರತು ಪೂರ್ವಗ್ರಹವನ್ನು ಬಿತ್ತುವುದು ಹಾಗೂ ಬೆಳೆಸುವುದು ಅಲ್ಲ ಎಂಬುದನ್ನು ಸಾರ್ವಜನಿಕ ಜೀವನದಲ್ಲಿ ಇರುವ ಎಲ್ಲರೂ ಸ್ಪಷ್ಟವಾಗಿ ತಿಳಿಯಬೇಕಾಗಿದೆ. ಹಾಗೆಯೇ ಇಂತಹ ಕ್ಷುಲ್ಲಕ ವಿಚಾರಗಳ ಕೇಸುಗಳನ್ನು ಪ್ರೋತ್ಸಾ ಹಿಸುವುದರಿಂದ ಹುಟ್ಟುವ ಅಪಾಯಗಳ ಬಗ್ಗೆ ನಮ್ಮ ಪೊಲೀಸರು ಹಾಗೂ ಕೋರ್ಟುಗಳು ಕೂಡ ಆಳವಾಗಿ ಯೋಚಿಸಬೇಕು. 
courtesy : varthbharati
Please follow and like us:

Leave a Reply