ಬಾಯಿ ತಪ್ಪಿದ ಈಶ್ವರಪ್ಪ | ವಿಪಕ್ಷದಿಂದ ಧರಣಿ; ಕ್ರಮಕ್ಕೆ ಪಟ್ಟು; ಕಲಾಪ ಮುಂದೂಡಿಕೆ

ಬೆಂಗಳೂರು,ಡಿ.7:ರಾಜ್ಯಪಾಲರು ಹಾಗೂ ಸರಕಾರದ ನಡುವಿನ ಮುಸುಕಿನ ಗುದ್ದಾಟವಿಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು,ರಾಜ್ಯಪಾಲರ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಆಡಿದ ಮಾತಿನಿಂದ ಕೆರಳಿದ ಪ್ರತಿಪಕ್ಷದ ಸದಸ್ಯರು ಸದನದ ಅಂಗಳಕ್ಕಿಳಿದು ಪ್ರತಿಭಟನೆ ನಡೆಸಿದುದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯ ಕೆ.ಎಸ್.ಈಶ್ವರಪ್ಪ ರಾಜ್ಯಪಾಲರ ವಿರುದ್ಧ ಕಿಡಿಗಾರಿದ್ದು, ಇದರಿಂದ ಸಿಟ್ಟಿಗೆದ್ದ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು, ಈಶ್ವರಪ್ಪ ಕ್ಷಮೆ ಕೋರಬೇಕೆಂದು ಆಗ್ರಹಿಸಿ,ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸಭಾಧ್ಯಕ್ಷರಲ್ಲಿ ಪಟ್ಟು ಹಿಡಿದ ಪರಿಣಾಮ ಎರಡು ಬಾರಿ ಸದನವನ್ನು ಮುಂದೂಡಿದ ಪ್ರಸಂಗ ನಡೆಯಿತು.
‘ವಿಪಕ್ಷ ಕಾಂಗ್ರೆಸ್‌ನ ಕೈಗೊಂಬೆಯಾಗಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು,ಅವರನ್ನು ಕರ್ನಾಟಕ ಬಿಟ್ಟು ಓಡಿಸಲು ಸದನದೊಳಗೆ ನಿರ್ಣಯ ಕೈಗೊಳ್ಳಬೇಕು’ಎಂಬ ಈಶ್ವರಪ್ಪನವರ ಹೇಳಿಕೆ ಸದನದೊಳಗೆ ಗದ್ದಲ,ಮಾತಿನ ಚಕಮಕಿ,ಕೋಲಾಹಲಕ್ಕೆ ಕಾರಣವಾಯಿತು.ಈಶ್ವರಪ್ಪ ರಾಜ್ಯಪಾಲ ಹುದ್ದೆಗೆ ಅಗೌರವ ತೋರಿದ್ದಾರೆ, ಅವರು ಕೂಡಲೇ ಸದನದಲ್ಲಿ ಕ್ಷಮೆ ಯಾಚಿಸಬೇಕು,ಜೊತೆಗೆ ಅವರ ವಿರುದ್ಧ ಕ್ರಮ ಜರಗಿಸಬೇಕು ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಸದನದ ಅಂಗಳಕ್ಕಿಳಿದು ಧರಣಿ ನಡೆಸಿದ್ದು,ಧರಣಿ ಮತ್ತಷ್ಟು ವಿಕೋಪಕ್ಕೆ ತೆರಳುವುದನ್ನು ಅರಿತ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಸದನವನ್ನು ನಾಳೆ ಬೆಳಗ್ಗೆ 11ಗಂಟೆಗೆ ಮುಂದೂಡಿದರು.
ಜೊತೆಗೆ ರಾಜ್ಯಪಾಲರ ಕುರಿತು ಸದನದೊಳಗೆ ನಡೆದ ಚರ್ಚೆಯನ್ನು ಕತಡದಿಂದ ತೆಗೆದುಹಾಕುವಂತೆಯೂ ಸೂಚಿಸಿದರು.ಬುಧವಾರ ಪ್ರಶ್ನೋತ್ತರ ಕಲಾಪದ ನಂತರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ರೇವಣ್ಣ,‘ಲೋಕಾಯುಕ್ತರ ನೇಮಕ ವಿಳಂಬ’ಕುರಿತು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಭಾಧ್ಯಕ್ಷರನ್ನು ಕೋರಿದರು.ಅಲ್ಲದೆ, ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಮುಖಂಡರು ಒಂದೆಡೆ ಸಂಸತ್‌ನಲ್ಲಿ ಹೋರಾಟ ಮಾಡುತ್ತಿದ್ದಾರೆ.ಇನ್ನೊಂದೆಡೆ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಹುನ್ನಾರ ನಡೆಯುತ್ತಿದೆ ಎಂಬ ಅನುಮಾನ ಉಂಟಾಗಿದೆ ಎಂದು ತೀಕ್ಷ್ಣವಾಗಿ ಚುಚ್ಚಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್,ಸರಕಾರ ಲೋಕಾಯುಕ್ತ ನೇಮಕ ವಿಷಯಕ್ಕೆ ಸಂಬಂಧಿಸಿದಂತೆ ವಿಳಂಬ ಅನುಸರಿಸುತ್ತಿಲ್ಲ.ಈ ಬಗ್ಗೆ ಯಾರು ವಿಳಂಬ ಮಾಡುತ್ತಿದ್ದಾರೆಂಬುದನ್ನು ಚರ್ಚಿಸಲು ಸರಕಾರ ಸಿದ್ಧವಿದೆ.ಆದರೆ, ನಿಲುವಳಿ ಸೂಚನೆಯಡಿ ಚರ್ಚೆ ಸಾಧ್ಯವಿಲ್ಲ ಎಂದು ನಿರಾಕರಿಸಿದರು.ಈ ವೇಳೆ ಮಧ್ಯೆ ಪ್ರವೇಶಿಸಿದ ಆಡಳಿತ ಪಕ್ಷದ ಹಿರಿಯ ಸದಸ್ಯ ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಮುಖಂಡರ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ.ರಾಜ್ಯಪಾಲರು ‘ಕೈಗೊಂಬೆ’ಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು ಎಂದು ಹೇಳಿದರು.
ಇದರಿಂದ ಕೆರಳಿದ ವಿಪಕ್ಷಗಳ ಸದಸ್ಯರು ಅವರ ವಿರುದ್ಧ ಕೆರಳಿ ಕೆಂಡಾಮಂಡಲವಾದರು.ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ,ರಾಜ್ಯಪಾಲರು ಮತ್ತು ಸಂವಿಧಾನದ ಬಗ್ಗೆ ಈಶ್ವಪ್ಪರಿಗೆ ಕನಿಷ್ಠ ಗೌರವವಿಲ್ಲ.ರಾಜ್ಯಪಾಲರ ಬಗ್ಗೆ ಸದನದಲ್ಲಿ ಚರ್ಚಿಸುವುದು ಸೂಕ್ತವಲ್ಲ ಎಂದು ಈಶ್ವರಪ್ಪರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸದಾನಂದಗೌಡ,ಯಾವುದೇ ವಿಷಯದ ಚರ್ಚೆಗೆ ಸರಕಾರದ ಅಭ್ಯಂತರವಿಲ್ಲ.ಪಲಾಯನ ಮಾಡುವುದಿಲ್ಲ.ಲೋಕಾಯುಕ್ತರ ನೇಮಕಕ್ಕೆ ಸರಕಾರ ಶಿಫಾರಸು ಮಾಡಿದ್ದು,ಎರಡು ಬಾರಿ ರಾಜ್ಯಪಾಲರೊಂದಿಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.ಈ ವೇಳೆ ಈಶ್ವರಪ್ಪ ಮತ್ತೊಮ್ಮೆ ಅದೇ ಹೇಳಿಕೆಯನ್ನು ಪುನಃರುಚ್ಚರಿಸಿದರು.ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ,ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಈಶ್ವರಪ್ಪರಿಗೆ ಛೀಮಾರಿ ಹಾಕಬೇಕು ಎಂದು ಸಭಾಧ್ಯಕ್ಷರನ್ನು ಕೋರಿದರು.
ಇದಕ್ಕೆ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ‘ಕೈಗೊಂಬೆ’ಪದವನ್ನು ಕಡತದಿಂದ ತೆಗೆದುಹಾಕುವಂತೆ ರೋಲಿಂಗ್ ನೀಡಿದರು.ಆದರೂ,ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಗದ್ದಲ, ಮಾತಿನ ಚಕಮಕಿ ಮುಂದುವರಿಸಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರು ಸಭಾಧ್ಯಕ್ಷ ಪೀಠದ ಮುಂದಿನ ಬಾವಿಗಿಳಿದು ಧರಣಿಗೆ ಮುಂದಾದರು. ತಮ್ಮ ಆಸನಕ್ಕೆ ತೆರಳುವಂತೆ ಸಭಾಧ್ಯಕ್ಷರು ಮಾಡಿದ ಮನವಿಗೆ ವಿಪಕ್ಷ ಸದಸ್ಯರು ಕಿವಿಗೊಡದ ಹಿನ್ನೆಲೆಯಲ್ಲಿ ಅವರು ಸದನವನ್ನು ಮಧ್ಯಾಹ್ನ 2:30ಕ್ಕೆ ಮುಂದೂಡಿದರು.
ಮತ್ತೆ ಸದನ 4:10ಕ್ಕೆ ಆರಂಭಗೊಂಡಾಗ ವಿಪಕ್ಷದ ಸದಸ್ಯರು ತಮ್ಮ ಪಟ್ಟನ್ನು ಬಿಡಲಿಲ್ಲ. ಸದನದ ಬಾವಿಗಿಳಿದು ತಮ್ಮ ಧರಣಿಯನ್ನು ಮುಂದುವರಿಸಿದರು.
ಈಶ್ವರಪ್ಪ ರಾಜ್ಯಪಾಲರನ್ನು ಅವಮಾನಿಸಿದ್ದಾರೆ.ಹಂಸರಾಜ್‌ರಿಗೆ ಗೌರವ ಕೊಡದಿದ್ದರೂ ಪರವಾಗಿಲ್ಲ,ಅವರ ಸ್ಥಾನಕ್ಕೆ ಗೌರವ ನೀಡಬೇಕಿತ್ತು.ಆದರೆ ಸದನದೊಳಗೆ ರಾಜ್ಯಪಾಲರ ವಿರುದ್ಧ ಅಗೌರ ತರುವಂತಹ ಹೇಳಿಕೆಯನ್ನು ನೀಡಿರುವುದರಿಂದ ತಕ್ಷಣ ಈಶ್ವರಪ್ಪ ಕ್ಷಮೆಕೋರಬೇಕು, ಜೊತೆಗೆ ಅವರ ವಿರುದ್ಧ ಸಭಾಧ್ಯಕ್ಷರು ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ನಾವು ಧರಣಿಯನ್ನು ಮುಂದುವರಿಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ,ಉಪನಾಯಕ ಟಿ.ಬಿ.ಜಯಚಂದ್ರ ಸೇರಿದಂತೆ ಎಲ್ಲ ಸದಸ್ಯರು ಒಕ್ಕೊರಳಿನಿಂದ ಗದ್ದಲವೆಬ್ಬಿಸಿದರು.
ಇದನ್ನೆಲ್ಲ ನೋಡುತ್ತಿದ್ದ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ,ಸದನದೊಳಗೆ ರಾಜ್ಯಪಾಲರ ವಿಷಯ ಮಾತನಾಡುವುದು ಸರಿ ಕಾಣುವುದಿಲ್ಲ,ಅವರ ಕುರಿತು ಯಾರೂ ಮಾತನಾಡುವಂತಿಲ್ಲ ಎಂದರಲ್ಲದೆ,ಕಡತದಿಂದ ಇದನ್ನೆಲ್ಲ ತೆಗೆದುಹಾಕುವಂತೆಯೂ ಸೂಚಿಸಿದರು.ಆದರೆ ವಿಪಕ್ಷದ ನಾಯಕರು ಮಾತ್ರ ಸುಮ್ಮನೆ ಇರಲಿಲ್ಲ.ಕ್ಷಮೆ ಕೋರಲೇ ಬೇಕು,ಶಿಕ್ಷೆ ನೀಡಲೇ ಬೇಕು ಎಂದು ಒತ್ತಾಯವನ್ನು ಬಿಗಿಗೊಳಿಸಿದರು.ಇದರಿಂದ ಗದ್ದಲ ಇಮ್ಮಡಿಗೊಂಡಾಗ ಸಬಾಧ್ಯಕ್ಷ ಕೆ.ಜಿ.ಬೋಪಯ್ಯ ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.
ನಾನು ಹೇಳಿದ್ದರಲ್ಲಿ ತಪ್ಪೇನಿದೆ?
ರಾಜ್ಯದಲ್ಲಿ ರಾಜ್ಯಪಾಲರಾಗಿ ನೇಮಕವಾದಂದಿನಿಂದ ಹಂಸರಾಜ್ ಭಾರದ್ವಾಜ್ ವಿರೋಧ ಪಕ್ಷದವರಂತೆ ವರ್ತಿಸುತ್ತಿದ್ದಾರೆ.ಸದಾ ಸರಕಾರದ ವಿರುದ್ಧ ವಿಪಕ್ಷದ ನಾಯಕನಂತೆ ಕೆಲಸ ಮಾಡುತ್ತಿದ್ದಾರೆ.ಕಾಂಗ್ರೆಸ್‌ನ ಕೈಗೊಂಬೆಯಾಗಿರುವ ರಾಜ್ಯಪಾಲರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕುವಂತೆ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ವಿಧಾನಸಭೆಯ ಕಲಾಪವನ್ನು ನಾಳೆಗೆ ಮುಂದೂಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಲೋಕಾಯುಕ್ತರ ನೇಮಕ ವಿಳಂಬಕ್ಕೆ ರಾಜ್ಯಪಾಲರೇ ನೇರ ಕಾರಣ.ಅಲ್ಲದೆ,ಅವರು ಸರಕಾರದ ವಿರುದ್ಧ ಸದಾ ಸಮರ ಸಾರುತ್ತಲೇ ಇದ್ದಾರೆ.ಅವರು ರಾಜ್ಯಪಾಲರ ಹುದ್ದೆಗೆ ಅಗೌರವ ತರುವ ರೀತಿಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅದಕ್ಕಾಗಿಯೇ ಅವರ ವಿರುದ್ಧ ಛೀಮಾರಿ ಹಾಕುವಂತೆ ಸದನದೊಳಗೆ ಹೇಳಿದ್ದೇನೆ ಎಂದರು.
ಕ್ಷಮೆ-ಕ್ರಮ ಆಗುವವರೆಗೂ ಧರಣಿ
ವಿಧಾನಸಭಾ ಕಲಾಪದ ವೇಳೆ ರಾಜ್ಯದ ಗೌರವಾನ್ವಿತ ರಾಜ್ಯಪಾಲರ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಕ್ಷಮೆ ಕೋರಬೇಕು ಹಾಗೂ ಅವರ ವಿರುದ್ಧ ಸಭಾಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಲ್ಲವಾದಲ್ಲಿ ತಾವು ಸದನದೊಳಗೆ ಧರಣಿಯನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಲಾಪವನ್ನು ನಾಳೆಗೆ ಮುಂದೂಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸದನದಲ್ಲಿ ಈಶ್ವರಪ್ಪ ಉನ್ನತ ಸ್ಥಾನದಲ್ಲಿರುವ ರಾಜ್ಯಪಾಲರನ್ನು ಅವಮಾನಿಸಿದ್ದಾರೆ.
ರಾಜ್ಯಪಾಲರ ಸ್ಥಾನಕ್ಕೆ ಅವರು ಗೌರವ ನೀಡಬೇಕಿತ್ತು.ಆದರೆ ಅವರಿಗೆ ಛೀಮಾರಿ ಹಾಕಿ, ರಾಜ್ಯದಿಂದ ಓಡಿಸಬೇಕು ಎಂದು ಹೇಳಿರುವುದು ಸರಿಯಲ್ಲ.ಅವರು ಕೂಡಲೇ ಕ್ಷಮೆಕೇಳಬೇಕು ಹಾಗೂ ಅವರ ವಿರುದ್ಧ ಕ್ರಮ ಜರಗಿಸಬೇಕು ಎಂದು ತಮ್ಮ ಪಟ್ಟನ್ನು ಮುಂದುವರಿಸಿದರು.
ಸಂಧಾನ ವಿಫಲ
ರಾಜ್ಯಪಾಲರ ವಿರುದ್ಧ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆಯಿಂದ ಸದನದೊಳಗೆ ಗದ್ದಲ,ಧರಣಿ, ಕೋಲಾಹಲವೇರ್ಪಟ್ಟು ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದ ಬಳಿಕ ನಡೆದ ಆಡಳಿತ ಮತ್ತು ವಿಪಕ್ಷದ ಮಧ್ಯದ ಸಂಧಾನಸಭೆ ವಿಫಲಗೊಂಡಿದೆ.ಮಧ್ಯಾಹ್ನ ಕಲಾಪ ಮುಂದೂಡಿದ ಬಳಿಕ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ,ಸಚಿವ ಸುರೇಶ್ ಕುಮಾರ್,ವಿಪಕ್ಷ ನಾಯಕರಾದ ಸಿದ್ದರಾಮಯ್ಯ,ಟಿ.ಬಿ.ಜಯಚಂದ್ರ,ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಮತ್ತಿತರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಸಲಾಯಿತು.ಸಭೆಗೆ ಈಶ್ವರಪ್ಪ ಗೈರಾಗಿದ್ದು,ಅವರಿಗೆ ಬುಲಾವ್ ನೀಡಿದರೂ ಅವರು ಬಾರದ ಕಾರಣ ವಿಪಕ್ಷದ ನಾಯಕರು ಹಾಗೂ ಇತರರು ಸಭೆಯಿಂದ ಹೊರ ಬಂದರೆನ್ನಲಾಗಿದೆ. ಇದರಿಂದ ಸಭೆ ವಿಫಲಗೊಂಡಿತು.
ಸದನದಲ್ಲಿ ಕೋಲಾಹಲ, ಧರಣಿ
ಬೆಂಗಳೂರು:`ರಾಜ್ಯಪಾಲರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು, ಅವರನ್ನು ವಾಪಸ್ ಕಳುಹಿಸಲು ನಿರ್ಣಯ ಮಾಡಬೇಕು`ಎಂಬುದಾಗಿ ಕೆ.ಎಸ್.ಈಶ್ವರಪ್ಪ ಬುಧವಾರ ವಿಧಾನಸಭೆಯಲ್ಲಿ ಆಡಿದ ಮಾತಿನಿಂದ ಕೆರಳಿದ ಪ್ರತಿಪಕ್ಷಗಳ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿ ಧರಣಿ ನಡೆಸಿದರು.ಈಶ್ವರಪ್ಪ ವಿರುದ್ಧ ಪ್ರತಿಪಕ್ಷಗಳ ಸದಸ್ಯರು,ರಾಜ್ಯಪಾಲರ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿದ ಅಹಿತಕರ ಪ್ರಸಂಗಕ್ಕೂ ಸದನ ಸಾಕ್ಷಿಯಾಯಿತು.
`ಲೋಕಾಯುಕ್ತರ ನೇಮಕ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಆಗಿದೆ. ಈ ಕುರಿತು ನಿಲುವಳಿ ಸೂಚನೆಯಡಿ ಚರ್ಚಿಸಲು ಅವಕಾಶ ಕೊಡಬೇಕು`ಎಂದು ಕೋರಿ ಎಚ್.ಡಿ.ರೇವಣ್ಣ (ಜೆಡಿಎಸ್) ಅವರು ಮಾಡಿದ ಪ್ರಸ್ತಾವ ಗದ್ದಲಕ್ಕೆ ನಾಂದಿ ಹಾಡಿತು.ರಾಜ್ಯಪಾಲರ ಬಗ್ಗೆ ಈಶ್ವರಪ್ಪ ಸೇರಿದಂತೆ ಕೆಲವು ಸದಸ್ಯರು ಆಡಿದ `ಪದ`ಗಳನ್ನು ಕಡತದಿಂದ ತೆಗೆದು ಹಾಕಲಾಗಿದೆ ಎಂದು ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಪ್ರಕಟಿಸಿದರು.
`ಇದು ಆಡಳಿತಾತ್ಮಕ ವಿಚಾರ. ಸರ್ಕಾರ ಚರ್ಚೆಗೆ ಸಿದ್ಧವಿದೆ. ಆದರೆ ಈ ವಿಷಯವನ್ನು ಬೇರೆ ರೂಪದಲ್ಲಿ ತನ್ನಿ`ಎಂದು ಸಭಾನಾಯಕ ಸುರೇಶ್‌ಕುಮಾರ್,ರೇವಣ್ಣ ಅವರಿಗೆ ಉತ್ತರವಾಗಿ ಹೇಳಿದರು.ಆದರೆ,ರೇವಣ್ಣ ಅವರು ನಿಲುವಳಿ ಸೂಚನೆಯಡಿಯೇ ಚರ್ಚೆ ಆಗಲಿ,ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಜನಚೇತನ ಯಾತ್ರೆ ಹಮ್ಮಿಕೊಂಡಿದ್ದರು.ಆದರೆ ರಾಜ್ಯದಲ್ಲಿ ಭ್ರಷ್ಟರನ್ನು ಮಟ್ಟಹಾಕಬೇಕಾದ ಲೋಕಾಯುಕ್ತ ಸಂಸ್ಥೆಗೆ ಮುಖ್ಯಸ್ಥರೇ ಇಲ್ಲ.ಭ್ರಷ್ಟಾಚಾರ ನಿರ್ಮೂಲನೆ ಆಗುವುದು ಸರ್ಕಾರಕ್ಕೆ ಬೇಕಿಲ್ಲವೇ ಎಂದು ಪ್ರಶ್ನಿಸಿದರು. 
ಈ ಹಂತದಲ್ಲಿ ಎದ್ದುನಿಂತ ಈಶ್ವರಪ್ಪ ಅವರು ರಾಜ್ಯಪಾಲರ ವಿರುದ್ಧ ಮಾಡಿದ ವಾಗ್ದಾಳಿ ಗದ್ದಲಕ್ಕೆ ಕಾರಣವಾಯಿತು.ರೇವಣ್ಣ ಅವರು ಬಿಜೆಪಿ ನಾಯಕರ ಹೆಸರೆತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಈಶ್ವರಪ್ಪ,ರಾಜ್ಯಪಾಲರ ವಿರುದ್ಧ ತಿರುಗಿಬಿದ್ದರು.ಲೋಕಾಯುಕ್ತರ ನೇಮಕ ವಿಳಂಬ ಆಗಿರುವ ಕುರಿತು ರಾಜಕಾರಣ ಮಾಡಲು ಅಧಿವೇಶನವನ್ನು ಬಳಸಬೇಡಿ ಎಂದು ಪ್ರತಿಪಕ್ಷಗಳ ಸದಸ್ಯರನ್ನು ಛೇಡಿಸಿದರು.
ರಾಜ್ಯಪಾಲರ ಬಗ್ಗೆ ಈಶ್ವರಪ್ಪ ಅವರು ಆಡಿರುವ ಮಾತು ಸದನಕ್ಕೆ ಗೌರವ ತರುವಂಥದ್ದಲ್ಲ ಎನ್ನುತ್ತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ವಿಚಾರವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದರು.ಆದರೆ ಈಶ್ವರಪ್ಪ ಅವರು ಮತ್ತೆ ಮತ್ತೆ ರಾಜ್ಯಪಾಲರ ಬಗ್ಗೆ ಟೀಕೆಗಳನ್ನು ಮಾಡುತ್ತಲೇ ಹೋದರು.ಗೋಹತ್ಯೆ ನಿಷೇಧ ಮಸೂದೆ,ಅಕ್ರಮ-ಸಕ್ರಮ ಮಸೂದೆಗಳನ್ನು ತಡೆಹಿಡಿದಿದ್ದೇಕೆ?ಸರ್ಕಾರ ಸೂಚಿಸಿದ ವ್ಯಕ್ತಿಯನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡದಿರಲು ರಾಜ್ಯಪಾಲರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಕೇಳಿದರು. `ಒಂದಲ್ಲ ಹತ್ತು ಸಾರಿ ಬೇಕಾದರೂ ಇದೇ ಮಾತನ್ನು ಹೇಳುತ್ತೇನೆ`ಎನ್ನುತ್ತಲೇ ಟೀಕಾಪ್ರಹಾರ ಮುಂದುವರಿಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದವರು ಆಡುವ ಮಾತೇ ಇದು ಎನ್ನುತ್ತ ಕಾಂಗ್ರೆಸ್‌ನ ಉಪ ನಾಯಕ ಟಿ.ಬಿ.ಜಯಚಂದ್ರ ಅವರು ಕ್ರಿಯಾಲೋಪ ಎತ್ತಿದರು.ಈಶ್ವರಪ್ಪ ಮಾತುಗಳನ್ನು ಖಂಡಿಸಿದ ಪ್ರತಿಪಕ್ಷಗಳು`ಬಾಯಿಗೆ ಬಂದ ಹಾಗೆ ಮಾತನಾಡಲು ಬಿಡಬೇಡಿ`ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.ಆಗ ಎರಡೂ ಕಡೆಯಿಂದ ವಾದ-ವಾಗ್ವಾದ ಮುಂದುವರಿಯಿತು.
ಸರ್ಕಾರದ ಮುಖ್ಯಸ್ಥರಾಗಿರುವ ರಾಜ್ಯಪಾಲರ ಬಗ್ಗೆಯೇ ಅವಾಚ್ಯ ಶಬ್ದಗಳನ್ನು ಬಳಸಿದರೆ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಅವಾಚ್ಯ ಪದ ಬಳಸಿಲ್ಲ ಎಂದು ಈಶ್ವರಪ್ಪ ಸಮರ್ಥನೆಗೆ ನಿಂತರು.ಅವಾಚ್ಯ ಅಲ್ಲ,ಅವಹೇಳನ,ಅಗೌರವ,ಅವಮಾನಕಾರಿ ಮಾತುಗಳು ಎಂದು ಸಿದ್ದರಾಮಯ್ಯ ಚುಚ್ಚಿದರು.
ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಿಕೊಡುವ ಅಧಿಕಾರವನ್ನು ಸಂವಿಧಾನಬದ್ಧವಾಗಿ ರಾಜ್ಯಪಾಲರಿಗೆ ನೀಡಲಾಗಿದೆ.ಇದನ್ನು ಅರಿಯದೆ ಮಾತನಾಡುವುದು ಸರಿಯಲ್ಲ. ಸಂವಿಧಾನವನ್ನೇ ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಲು ಅವಕಾಶ ಕೊಡಬೇಡಿ ಎಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.ಅವಹೇಳನಕಾರಿಯಾದ `ಎಲ್ಲ ಪದಗಳನ್ನು` ಕಡತದಿಂದ ತೆಗೆದು ಹಾಕಲಾಗಿದೆ ಎಂದು ಸ್ಪೀಕರ್ ತಿಳಿಸಿದರು.
ಚರ್ಚೆಗೆ ಸಿದ್ಧ:ಈ ಹಂತದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು, ರಾಜ್ಯಪಾಲರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಬಾರದು ನಿಜ.ಆದರೆ ಲೋಕಾಯುಕ್ತರ ನೇಮಕದ ವಿಚಾರದಲ್ಲಿ ಸರ್ಕಾರದ ಕಡೆಯಿಂದ ಯಾವುದೇ ತಪ್ಪಾಗಲೀ,ವಿಳಂಬವಾಗಲೀ ಆಗಿಲ್ಲ ಎಂದು ತಿಳಿಸಿದರು.ಯಾವುದೇ ಚರ್ಚೆಗೂ ಸರ್ಕಾರ ಸಿದ್ಧವಿದೆ.ಪಲಾಯನವಾದ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದರು.
`ರಾಜ್ಯಪಾಲರ ಹಕ್ಕನ್ನು ಪ್ರಶ್ನೆ ಮಾಡುವ ಮೂಲಕ ಸಂವಿಧಾನವನ್ನೇ ಪ್ರಶ್ನಿಸುತ್ತಿದ್ದಾರೆ.ಅವರಿಗೆ ಛೀಮಾರಿ ಹಾಕಬೇಕು`ಎಂದು ಜಯಚಂದ್ರ ಸಲಹೆ ಮಾಡಿದರು.`ರಾಜ್ಯಪಾಲರನ್ನು ಯಾಕೆ ಇಲ್ಲಿ ಎಳೆದು ತರುತ್ತೀರಿ?`ಎನ್ನುತ್ತ ಈ ವಾದ-ವಿವಾದಗಳಿಗೆ ತೆರೆ ಎಳೆಯಲು ಸ್ಪೀಕರ್ ಯತ್ನಿಸಿದರು. ಅಷ್ಟರಲ್ಲಿ ಈಶ್ವರಪ್ಪ ಆಡಿದ ಮಾತು ಸದನದಲ್ಲಿ ಮತ್ತೆ ಕೋಲಾಹಲಕ್ಕೆ ಎಡೆ ಮಾಡಿತು. ಪ್ರತಿಪಕ್ಷಗಳ ಸದಸ್ಯರು ಧರಣಿಗೆ ಇಳಿದರು.ಘೋಷಣೆಗಳು ಮೊಳಗಿದವು.ಪಕ್ಷೇತರ ಸದಸ್ಯರ ಪೈಕಿ ಶಿವರಾಜ ತಂಗಡಗಿ ಅವರೂ ಧರಣಿಗೆ ಮುಂದಾದರೂ ಇತರ ಸದಸ್ಯರ ಸೂಚನೆಯಂತೆ ಅವರು ತಟಸ್ಥರಾಗಿ ಉಳಿದರು.ತಮ್ಮ ಸ್ಥಾನಕ್ಕೆ ಮರಳಿದರು.
ಸದನ ಗದ್ದಲದಲ್ಲಿ ಮುಳುಗಿದ್ದರಿಂದ ಸ್ಪೀಕರ್ ಬೋಪಯ್ಯ ಸದನವನ್ನು ಮಧ್ಯಾಹ್ನ 2.30ರವರೆಗೂ ಮುಂದೂಡಿದರು. ಸಂಜೆ 4.15ರ ಸುಮಾರಿಗೆ ಮತ್ತೆ ಕಲಾಪ ಆರಂಭ ವಾಗುತ್ತಿದ್ದಂತೆಯೇ ಪ್ರತಿಪಕ್ಷ ಗಳ ಸದಸ್ಯರು ಧರಣಿ ಮುಂದುವರಿಸಿದರು. ರಾಜ್ಯಪಾಲರ ವಿರುದ್ಧ ಮತ್ತೆ ಆರ್ಭಟ ಮುಂದುವರಿಸಿದ ಈಶ್ವರಪ್ಪ,ರಾಜ್ಯಪಾಲರನ್ನು ವಾಪಸ್ ಕಳುಹಿಸುವ ನಿರ್ಣಯ ಸದನದಲ್ಲಿ ಆಗಬೇಕು ಎಂದು ಆಗ್ರಹಿಸಿದರು.ಪ್ರತಿಪಕ್ಷಗಳ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ನಡುವೆ ಪಕ್ಷೇತರ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ,`ಪಕ್ಷೇತರರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮ ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.ಆ ಬಗ್ಗೆ ಈಶ್ವರಪ್ಪ ಏನು ಹೇಳುತ್ತಾರೆ` ಎಂದು ಪ್ರಶ್ನೆ ಮಾಡಿದರು.
ರಾಜ್ಯಪಾಲರ ಕುರಿತು ಆಡಿದ ಪದಗಳನ್ನು ಕಡತದಿಂದ ತೆಗೆಯಲಾಗಿದೆ.ರಾಜ್ಯಪಾಲರ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದು ಬೋಪಯ್ಯ ಹೇಳಿದರೂ, ಈಶ್ವರಪ್ಪ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.ಒಂದೆಡೆ ಈಶ್ವರಪ್ಪ ಅವರು ರಾಜ್ಯಪಾಲರ ವಿರುದ್ಧ ಮಾತನಾಡುವುದನ್ನು ಮುಂದುವರಿಸಿದರೆ,ಮತ್ತೊಂದೆಡೆ ಪ್ರತಿಪಕ್ಷಗಳ ಸದಸ್ಯರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈಶ್ವರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದರು.ಹೀಗೆ ಸದನದಲ್ಲಿ ತೀವ್ರ ಗದ್ದಲ,ಕೋಲಾಹಲ ಮುಂದುವರಿದ ಪರಿಣಾಮ ಬೋಪಯ್ಯ ಅವರು ಸದನವನ್ನು ಗುರುವಾರಕ್ಕೆ ಮುಂದೂಡಿದರು.
ಪರಿಷತ್‌ನಲ್ಲಿ ಚರ್ಚೆ:ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ಲೋಕಾಯುಕ್ತರ ನೇಮಕಾತಿ ವಿಳಂಬ ಕುರಿತು ನಿಲುವಳಿ ಸೂಚನೆ ಮಂಡನೆಗೆ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಅವಕಾಶ ಕೋರಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಈ ವಿಷಯದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.
ಸರ್ಕಾರ ಯಾವುದೇ ತಪ್ಪು ಮಾಡಿಲ್ಲ ಎಂದು ಸದಾನಂದ ಗೌಡ ಉತ್ತರ ನೀಡಿದರು.ನಂತರ ಪರಿಷತ್‌ನಲ್ಲೂ ರಾಜ್ಯಪಾಲರ ಹೆಸರು ಪ್ರಸ್ತಾಪವಾಗಿ,ಆಡಳಿತ ಮತ್ತು ವಿರೋಧಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.ನಿಲುವಳಿ ಸೂಚನೆಗೆ ಅವಕಾಶ ನಿರಾಕರಿಸಿದ ಉಪ ಸಭಾಪತಿ ವಿಮಲಾ ಗೌಡ ಅವರು,ಈ ಬಗ್ಗೆ ನಿಯಮ 68ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಿರುವುದಾಗಿ ಪ್ರಕಟಿಸಿದರು
Please follow and like us:
error