ಲೋಕಪಾಲ ಅಂಗೀಕಾರ :ಎಸ್ಪಿ, ಬಿಎಸ್ಪಿ, ಎಡ ಪಕ್ಷಗಳಿಂದ ಸಭಾತ್ಯಾಗ

 ಸಂವಿಧಾನ ತಿದ್ದುಪಡಿ ಮಸೂದೆ 321-71ರಿಂದ ಮಂಜೂರು
  
ಹೊಸದಿಲ್ಲಿ, ಡಿ.27: ಎಡಪಕ್ಷಗಳು, ಸಮಾಜವಾದಿ ಪಾರ್ಟಿ ಹಾಗೂ ಬಹುಜನ ಸಮಾಜವಾದಿ ಪಕ್ಷಗಳ ಸದನ ಬಹಿಷ್ಕಾರದ ನಡುವೆಯೇ ಲೋಕಪಾಲ ಮಸೂದೆ ಮಂಗಳವಾರ ಲೋಕಸಭೆಯಲ್ಲಿ ಧ್ವನಿ ಮತದಿಂದ ಮಂಜೂರಾಗಿದೆ. ಲೋಕಪಾಲಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಕುರಿತಾದ ಮಸೂದೆಯೂ ಬಹುಮತದೊಂದಿಗೆ ಅಂಗೀಕಾರಗೊಂಡಿದೆ. ಒಟ್ಟು 394 ಸಂಸದರು ಮತದಾನದಲ್ಲಿ ಪಾಲ್ಗೊಂಡಿದ್ದು, ಲೋಕಪಾಲಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಮಸೂದೆ 321 ಪರ ಹಾಗೂ 71 ವಿರೋಧ ಮತಗಳಿಂದ ಅಂಗೀಕಾರವಾಯಿತು. ಇಬ್ಬರು ಸದಸ್ಯರು ಮತದಾನದಲ್ಲಿ ಭಾಗವಹಿಸಿರಲಿಲ್ಲ.
ಲೋಕಪಾಲ ಮಸೂದೆಯನ್ನು ಮತಕ್ಕೆ ಹಾಕುವ ಮೊದಲು ಸರಕಾರವು ಸೆಕ್ಷನ್ 24 ಹಾಗೂ ಸಶಸ್ತ್ರ ಪಡೆಗಳನ್ನು ಅದರ ವ್ಯಾಪ್ತಿಗೆ ತರುವ ಪ್ರಸ್ತಾಪಗಳಿಗೆ ತಿದ್ದುಪಡಿ ತಂದಿತು ಹಾಗೂ ಪ್ರಧಾನಿಯ ವಿರುದ್ಧ ತನಿಖೆಗೆ ಲೋಕಪಾಲದ ನಾಲ್ಕನೆ ಮೂರು ಭಾಗ ಸದಸ್ಯರ ಒಪ್ಪಿಗೆ ಅಗತ್ಯವೆಂಬುದನ್ನು ಮೂರನೆ ಎರಡೆಂದು ತಿದ್ದುಪಡಿ ಮಾಡಿತು.
ಲೋಕಪಾಲದಿಂದ ವಿಚಾರಣೆ ನಡೆಯುತ್ತಿರುವಾಗಲೂ, ಸಂಸದರ ಕುರಿತು ಕ್ರಮ ತೆಗೆದುಕೊಳ್ಳಲು ಲೋಕಸಭೆ ಹಾಗೂ ರಾಜ್ಯಸಭೆಗಳ ಅಧ್ಯಕ್ಷರಿಗೆ ಅಧಿಕಾರವನ್ನು ಸೆಕ್ಷನ್ 24 ನೀಡಿತ್ತು.
ಕಾರ್ಪೊರೇಟ್ ಹೌಸ್‌ಗಳು ಹಾಗೂ ಪ್ರಧಾನಿ ವಾಣಿಜ್ಯ ಒಪ್ಪಂದಗಳಿಗೆ ಸಹಿ ಮಾಡಿದ ಕುರಿತ ವಿವಾದವನ್ನು ಲೋಕಪಾಲದ ವ್ಯಾಪ್ತಿಗೆ ತರಬೇಕೆಂಬ ಎಡಪಕ್ಷದ ವಾಸುದೇವ ಆಚಾರ್ಯರ ತಿದ್ದುಪಡಿಗೆ ಮತದಾನ ಮಾಡುವುದರಿಂದ ಬಿಜೆಪಿ ತಪ್ಪಿಸಿಕೊಂಡಿತು.
ಮತದಾನ ಆರಂಭಕ್ಕೆ ಸ್ವಲ್ಪ ಮೊದಲು ಎಸ್ಪಿ ಹಾಗೂ ಬಿಎಸ್ಪಿ ಸದಸ್ಯರು ಸದನದಿಂದ ಹೊರ ನಡೆದರು.
ತಾವು ಬಿಜೆಪಿಯನ್ನು ಬೆಂಬಲಿಸಲು ಇಷ್ಟ ಪಡುವುದಿಲ್ಲ ಅದಕ್ಕಾಗಿ ಹೊರ ಬಂದೆವೆಂದು ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹೇಳಿದರು. ತಮ್ಮ ತಿದ್ದುಪಡಿಗಳು ಮಾನ್ಯವಾಗದಿರುವುದರಿಂದ ತಾವು ಸದನವನ್ನು ಬಹಿಷ್ಕರಿಸಿದೆವೆಂದು ಬಿಎಸ್ಪಿ ಸದಸ್ಯ ದಾರಾ ಸಿಂಗ್ ಚೌಹಾಣ್ ತಿಳಿಸಿದರು.
Please follow and like us:
error