ಬಂಡವಾಳಿಗರನ್ನು ಓಲೈಸುವುದೇ ಇಂದಿನ ಬಜೆಟ್‌ಗಳ ಉದ್ದೇಶ: ಬರಗೂರು

ಬೆಂಗಳೂರು, ಮಾ.17: ಬಹುರಾಷ್ಟ್ರೀಯ ಕಂಪೆನಿಗಳ ಬಂಡವಾಳದಾರರನ್ನು ಓಲೈಸುವುದೆ ಇಂದಿನ ಎಲ್ಲ ಸರಕಾರಗಳು ಮಂಡಿಸುವ ಬಜೆಟ್‌ಗಳ ಮುಖ್ಯ ಉದ್ದೇಶವಾಗುತ್ತಿದೆ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಆರೋಪಿಸಿದ್ದಾರೆ.
ನಗರದ ಸೆಂಟ್ರಲ್ ಕಾಲೇಜಿನಲ್ಲಿಂದು ಸಂವಾದ ಪತ್ರಿಕೆಯ ದಶಮಾನೋತ್ಸವದ ಅಂಗ ವಾಗಿ ಹಮ್ಮಿಕೊಂಡಿದ್ದ ‘ಸಂವಾದ 10-ಸಂಭ್ರಮ; ಸವಾಲು’ ಕಾರ್ಯಕ್ರಮದಲ್ಲಿ ಸಂವಾದ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅಭಿವೃದ್ಧಿ ಅಥವಾ ಸುಧಾರಣೆ ಎಂಬುದರ ಅರ್ಥ ಇಂದು ಬದಲಾಗಿದೆ. ಅಭಿವೃದ್ಧಿ ಎಂದರೆ ದೇಶದಲ್ಲಿ ತುಳಿತಕ್ಕೆ ಒಳಗಾದವರ, ದೀನ- ದಲಿತರ, ಹಿಂದುಳಿದವರ ಅಭಿವೃದ್ಧಿಗೊಳಿಸುವುದು ಎಂದರ್ಥವಲ್ಲ. ದೊಡ್ಡ ಕೈಗಾರಿಕೆಗಳ ಐಟಿ-ಬಿಟಿ ಕಂಪೆನಿಗಳ ಮಾಲಕರ ಹಿತವನ್ನು ಬಯಸುವುದು ಮತ್ತು ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವುದು ಎಂಬುದಾಗಿದೆ ಎಂದು ಅವರು ವಿಷಾದದಿಂದ ನುಡಿದರು.
ಭಾರತ ಕೃಷಿ ಪ್ರಧಾನ ದೇಶ ಎಂಬ ವಾಕ್ಯ ನಿಧಾನಕ್ಕೆ ಮರೆಯಾಗುತ್ತಿದೆ. ಅಭಿವೃದ್ಧಿಯ ಆದ್ಯತೆಗಳು ಬದಲಾಗುತ್ತಿದ್ದು, ಅವಗಣನೆಗೆ ಒಳ ಗಾಗಿರುವ ಕೃಷಿಕರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ದೇಶದ ಕೆಳವರ್ಗದವರು ಪ್ರಾಣಿ ಗಳಂತೆ ಬದುಕುತ್ತಿದ್ದಾರೆ ಎಂದು ಬರಗೂರು ಹೇಳಿದರು.
ಕೆಳವರ್ಗದವರ ಧ್ವನಿಯಾಗಬೇಕಿದ್ದ ಮಾಧ್ಯಮ ಗಳು ಸಹ ಬದಲಾಗಿದ್ದು, ಉದ್ಯಮಗಳಾಗಿ ಪರಿವರ್ತನೆಯಾಗಿವೆ. ಚಲನಚಿತ್ರ ಕ್ಷೇತ್ರ ಚಿತ್ರೋದ್ಯಮವೆಂದು, ಪುಸ್ತಕ ಮಾಧ್ಯಮ ಪುಸ್ತಕೋದ್ಯಮವೆಂದು ಹೀಗೆ ಎಲ್ಲ ರೀತಿಯ ಮಾಧ್ಯಮಗಳು ಉದ್ಯಮಗಳಾಗಿ ಪರಿವರ್ತನೆ ಯಾಗಿವೆ. ಮಾಧ್ಯಮಗಳನ್ನು ಮುನ್ನಡೆಸಲು ಬೃಹತ್ ಪ್ರಮಾಣದ ಬಂಡವಾಳ ತೊಡಗಿಸಬೇಕಾದ ಅನಿವಾರ್ಯತೆ ಇದೆ. ಬಂಡವಾಳ ಹೂಡಿದ ಮಾಲಕ ಅದರ ದುಪ್ಪಟ್ಟು ಲಾಭ ನಿರೀಕ್ಷಿಸುವವನಾದ್ದರಿಂದ ಸಹಜವಾಗಿಯೆ ಮಾಧ್ಯಮಗಳು ದನಿ ಇಲ್ಲದವರ ದನಿಯಾಗುವುದನ್ನು ಬಿಟ್ಟು ದನಿಯಿದ್ದವರ ಜೊತೆಗೆ ದನಿ ಗೂಡಿಸಿದವು. ಬಡವರ ಸಮಸ್ಯೆಗಳ ಪರವಾಗಿ ಬೆಳಕು ಚೆಲ್ಲಬೇಕಾದ ಮಾಧ್ಯಮಗಳು ಶ್ರೀಮಂತರ ವ್ಯಾಪಾರೋದ್ಯಮ ಹೆಚ್ಚಿಸುವ ಸಾಧನಗಳಾಗಿ ಬದಲಾಗಿವೆ ಎಂದು ಅವರು ಹೇಳಿದರು.
ಧರ್ಮ ಮತ್ತು ಶಿಕ್ಷಣ ಕ್ಷೇತ್ರಗಳು ಸಹ ಉದ್ಯಮಗಳಾಗಿ ಬದಲಾಗಿರುವುದು ಎಲ್ಲಕಿಂತ ಘೋರವಾದುದು. ಇಂದು ಶಿಕ್ಷಣ ತಜ್ಞರ ಸ್ಥಾನವನ್ನು ಶಿಕ್ಷಣೋದ್ಯಮಿಗಳು ಅಲಂಕರಿಸುತ್ತಿದ್ದು, ಈಗ ಶಿಕ್ಷಣ ತಜ್ಞರ ಅಭಿಪ್ರಾಯಕ್ಕಿಂತಲೂ ಶಿಕ್ಷಣದ ವ್ಯಾಪಾರಿಗಳ ಮಾತಿಗೆ ಹೆಚ್ಚು ಮನ್ನಣೆ ಸಿಗುತ್ತಿದೆ ಎಂದು ದೂರಿದರು.
ಮಠ-ಮಂದಿರಗಳು ಶಿಕ್ಷಣ ಮತ್ತು ಧರ್ಮದ ವ್ಯಾಪಾರದಲ್ಲಿ ತೊಡಗಿಸಿಕೊಂಡಿವೆ. ಮಠಗಳು ಧರ್ಮವನ್ನು ಮಾರಿಕೊಳ್ಳುತ್ತಿರುವುದನ್ನು ಬೆಂಬಲಿ ಸುವುದಕ್ಕಾಗಿ ಸರಕಾರ ಕಳೆದ ವರ್ಷ 394 ಕೋಟಿ ರೂ.ಅನುದಾನವನ್ನು ಮಠಗಳಿಗೆ ಹಂಚಿದೆ ಎಂದು ಬರಗೂರು ಆರೋಪಿಸಿದರು.
ಪ್ರಜಾಪ್ರಭುತ್ವವೆಂದರೆ ಚುನಾವಣೆಗಳು ನಡೆ ಸುವುದು ಎಂದು ತಪ್ಪಾಗಿ ತಿಳಿದು ಕೊಂಡಿರುವುದರಿಂದಲೆ ಮಧ್ಯಂತರ ಚುನಾವಣೆ ಗಳು ಹೆಚ್ಚಾಗಿ ನಡೆಯುತ್ತಿವೆ. ಬ್ರಿಟಿಷರು ದೇಶ ಬಿಟ್ಟು ಹೋದರೆ ಸ್ವಾತಂತ್ರ ಸಿಕ್ಕಂತಾಗುವುದಿಲ್ಲ. ಸ್ವಾತಂತ್ರದ ಪರಿಕಲ್ಪನೆಗೆ ನಮ್ಮ ದೇಶದಲ್ಲಿ ಬೇರೆಯ ಅರ್ಥವಿದೆ ಎಂದು ಅವರು ಹೇಳಿದರು.
ಇಂದು ಮಾನವೀಯತೆಯ ಸ್ಥಾನವನ್ನು ಮತೀ ಯತೆ ಮತ್ತು ಮಠೀಯತೆ ಆಕ್ರಮಿಸಿಕೊಂಡಿವೆ. ಸಂಘಟನೆಯ ಸ್ಥಾನವನ್ನು ವಿಘಟನೆ ಆಕ್ರಮಿಸಿಕೊಂಡಿದೆ. 70-80ರ ದಶಕದಲ್ಲಿದ್ದ ಪ್ರಗತಿಪರರ ಒಗ್ಗಟ್ಟು ಮುಂದಿನ ದಿನಗಳಲ್ಲಿ ವಿಘಟನೆಯತ್ತ ಸಾಗಿದ್ದು, ಈ ದಿನಗಳಲ್ಲೂ ಸಂಘಟಿತರಾಗಲು ಸಾಧ್ಯವಾಗುತ್ತಿಲ್ಲ. ಪ್ರಗತಿಪರ ಶಕ್ತಿಯನ್ನು ಒಡೆಯುವುದಕ್ಕಾಗಿಯೇ ಪ್ರತಿಗಾಮಿ ಶಕ್ತಿಗಳು ಬಲಿಷ್ಠವಾಗುತ್ತಿವೆ. ದಲಿತರು, ಮುಸ್ಲಿಮರು ಬಿಜೆಪಿಯಂಥ ಕೋಮುವಾದಿ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬುದು ನಾವು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದು ಅವರು ವಿಷಾದವ್ಯಕ್ತಪಡಿಸಿದರು.
‘ಸಂವಾದ’ ಪತ್ರಿಕೆಯ ಸಂಪಾದಕ ಇಂದೂದರ ಹೊನ್ನಾಪುರ ಮಾತನಾಡಿ, ದೊಡ್ಡ ಪತ್ರಿಕೆಗಳು ಇಂದು ಬಂಡವಾಳದಾರರ ಓಲೈಕೆಯಲ್ಲಿ ತೊಡಗಿಸಿಕೊಂಡಿದ್ದರೆ, ಸಂವಾದ, ಸಂಕ್ರಮಣ, ಶೂದ್ರ, ಅನ್ವೇಷಣೆಯಂಥ ಸಣ್ಣ ಪತ್ರಿಕೆಗಳು ಸಮಾಜದ ಕೆಳವರ್ಗದವರ ಧ್ವನಿಯಾಗಿ ಜನರಲ್ಲಿ ವೈಚಾರಿಕತೆಯನ್ನು ಬೆಳೆಸುವ ಕೆಲಸ ಮಾಡುತ್ತಿವೆ ಎಂದರು.
ಹಿರಿಯ ಚಿಂತಕರಾದ ಪ್ರೊ.ವಿ.ಎಸ್.ಶ್ರೀಧರ, ಪ್ರೊ.ಮುಜಾಫರ್ ಅಸ್ಸಾದಿ, ಎಸ್.ಮರಿಸ್ವಾಮಿ ಉಪಸ್ಥಿತರಿದ್ದರು. 

Leave a Reply