ಎಚ್‌ಡಿಕೆ, ಚನ್ನಿಗಪ್ಪ ವಿರುದ್ಧ ತನಿಖೆಗೆ ಆದೇಶ

ಡಿನೋಟಿಫಿಕೇಷನ್ :

ಬೆಂಗಳೂರು, ಜ.2: ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘವೊಂದಕ್ಕೆ ಅಕ್ರಮ ಭೂ ಮಂಜೂರಾತಿ, ಜಂತಕಲ್ ಮೈನಿಂಗ್ ಕಂಪನಿಯ ಪರವಾನಿಗೆ ನವೀಕರಣಕ್ಕೆ ನಿಯಬಾಹಿರ ಶಿಫಾರಸು ಹಾಗೂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಿಂದ ಮುಕ್ತಿ ಪಡೆದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಕೊರಳಿಗೆ ಹೊಸ ವರ್ಷದ ಆರಂಭದಲ್ಲೇ ಡಿನೋಟಿಫಿಕೇಷನ್ ಉರುಳು ಸುತ್ತಿಕೊಂಡಿದೆ. ಚಾಮರಾಜನಗರದ ಸಂತೆ                                            ಮಾರಹಳ್ಳಿ ನಿವಾಸಿ ಎಂ.ಎಸ್. ಮಾಧುಸ್ವಾಮಿ ಎಂಬವರು ಸಲ್ಲಿಸಿದ ಖಾಸಗಿ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಲಯದ ನ್ಯಾಯಧೀಶ ಎನ್.ಕೆ. ಸುಧೀಂದ್ರ ರಾವ್, ಕಳೆದ 2007ರ ಡಿನೋಟಿಫಿಕೇಷನ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ. ಚನ್ನಿಗಪ್ಪ ವಿರುದ್ಧ ಸಿಆರ್‌ಪಿಸಿ 156(3)ರ ಅಡಿ ತನಿಖೆ ನಡೆಸಿ ಫೆ.6ರೊಳಗೆ ವರದಿ ಸಲ್ಲಿಸುವಂತೆ ನಗರದ ಲೋಕಾಯುಕ್ತ ಎಸ್ಪಿಗೆ ಆದೇಶ ನೀಡಿದ್ದಾರೆ.
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ (2007) ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಆಗಿನ ಅರಣ್ಯ ಸಚಿವ ಚನ್ನಿಗಪ್ಪನವರ ಮನವಿಯ ಮೇರೆಗೆ ಥಣಿಸಂದ್ರದ ಬಳಿ 3.8 ಎಕರೆ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದರು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಆರೋಪಿಸಿರುವ ಅರ್ಜಿದಾರ ಮಾಧುಸ್ವಾಮಿ, ಕುಮಾರಸ್ವಾಮಿ, ಚೆನ್ನಿಗಪ್ಪ ಹಾಗೂ ಡಿನೋಟಿಫಿಕೇಷನ್ ಫಲಾನುಭವಿಗಳು ಮತ್ತು ಭೂಮಾಲಕರಾದ ತಿಪ್ಪಸಂದ್ರ ನಿವಾಸಿಗಳಾದ ಎಂ.ವಿ. ರವಿಪ್ರಕಾಶ ಮತ್ತು ಶ್ರೀರಾಮು ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿದ್ದರು.
ಪ್ರಕರಣದ ವಿವರ:   ಅರ್ಕಾವತಿ ಬಡಾವಣೆ ನಿರ್ಮಿಸಲು ಬೆಂಗಳೂರು ಪಶ್ಚಿಮ ವಲಯದ ಕೆ.ಆರ್.ಪುರಂನ ಥಣಿಸಂದ್ರದ ಸುತ್ತಮುತ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಟ್ಟು 3900 ಎಕರೆ ಭೂಮಿ ಗುರುತಿಸಿತ್ತು.ಆ ಪೈಕಿ ಅಂತಿಮವಾಗಿ 2004ರಲ್ಲಿ 2750 ಎಕರೆ ಭೂಮಿಯನ್ನು ನೋಟಿಫೈ ಮಾಡಿ ಅಂದಿನ ಸರಕಾರ ಆದೇಶ ಹೊರಡಿಸಿತ್ತು. ಇದರಲ್ಲಿ ರವಿಪ್ರಕಾಶ್ ಮತ್ತು ಶ್ರೀರಾಮು ಎಂಬವರಿಗೆ ಸೇರಿದ ಥಣಿಸಂದ್ರ ಗ್ರಾಮದ ಸರ್ವೆ ನಂಬರ್ 87/4ಬಿ ಯಲ್ಲಿ 3.8 ಎಕರೆ ಜಮೀನು ಸಹ ನೋಟಿಫೈ ಆಗಿತ್ತು.
ಇದಾದ ನಂತರ 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅಂದು ಅರಣ್ಯ ಮತ್ತು ಪರಿಸರ ಸಂರಕ್ಷಣಾ ಸಚಿವರಾಗಿದ್ದ ಸಿ.ಚನ್ನಿಗಪ್ಪ ಅವರು ರವಿಪ್ರಕಾಶ್ ಮತ್ತು ಶ್ರೀರಾಮುಗೆ ಸೇರಿದ ಭೂಮಿ ನೋಟಿಫಿಕೇಷನ್‌ನಿಂದ ಕೈ ಬಿಡಬೇಕೆಂದು ಸರಕಾರಕ್ಕೆ ಪತ್ರ ಬರೆಯುತ್ತಾರೆ. ಇದನ್ನು ಪುರಸ್ಕರಿದ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಥಣಿಸಂದ್ರ ಗ್ರಾಮದ ಸರ್ವೆ ನಂಬರ್ 87/4ಬಿ ಯಲ್ಲಿ 3.8 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿ ಆದೇಶ ಹೊರಡಿಸಿದರು. ಆದರೆ ಆಶ್ಚರ್ಯದ ಸಂಗತಿ ಎಂದರೆ, ತಮ್ಮ ಜಮೀನು ಡಿನೋಟಿಫಿಕೇಷನ್ ಮಾಡುವಂತೆ ಭೂಮಾಲಕರಾದ ರವಿಪ್ರಕಾಶ್ ಹಾಗೂ ಶ್ರೀರಾಮು ಸರಕಾರಕ್ಕೆ ಅರ್ಜಿ ಸಲ್ಲಿಸಿರುವುದಿಲ್ಲ.
ಬದಲಾಗಿ ಸಿ. ಚನ್ನಿಗಪ್ಪ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಚನ್ನಿಗಪ್ಪ ಹಾಗೂ ಭೂಮಾಲಕರಿಗೆ ಯಾವುದೇ ಸಂಬಂಧವಿಲ್ಲ. ಡಿನೋಟಿಫಿಕೇಷನ್‌ಗೊಳಿಸಿದ 3.8 ಎಕರೆ ಭೂಮಿಯನ್ನು ಬಿಡಿಎ ಅಭಿವೃದ್ಧಿಗೊಳಿಸಿ 58 ನಿವೇಶನ ನಿರ್ಮಿಸಿ ಇದರಲ್ಲಿ 38 ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೂ ಸಹ ಸಾರ್ವಜನಿಕರಿಂದ 38 ನಿವೇಶನ ವಾಪಸ್ಸು ಪಡೆದು ಡಿನೋಟಿಫಿಕೇಷನ್ ಮಾಡುವ ಮೂಲಕ ಸಿ.ಚನ್ನಿಗಪ್ಪರ ಅರ್ಜಿಗೆ ಕುಮಾರಸ್ವಾಮಿ ಮಾನ್ಯತೆ ನೀಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಎರಡನೆ ಮುಖ್ಯಮಂತ್ರಿ:
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಡಿನೋಟಿಫಿಕೇಷನ್ ಆರೋಪ ಎದುರಿಸುತ್ತಿರುವ ರಾಜ್ಯದ ಎರಡನೆ ಮುಖ್ಯಮಂತ್ರಿ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಿನೋಟಿಫಿಕೇಷನ್ ಆರೋಪದ ಮೇಲೆ 24 ದಿನ ಜೈಲುವಾಸ ಅನುಭವಿಸಿದ್ದಾರೆ. ಈಗಾಗಲೇ ಡಿನೋಟಿಫಿಕೇಷನ್, ಭೂಹಗರಣ ಆರೋಪ ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿ ಸರಕಾರದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಎಚ್.ಎನ್. ಕೃಷ್ಣಯ್ಯ ಶೆಟ್ಟಿ, ವಸತಿ ಸಚಿವ ವಿ. ಸೋಮಣ್ಣ, ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ, ಶಾಸಕರಾದ ಸಿ.ಟಿ. ರವಿ, ಸಿ. ಮುನಿರಾಜು, ನೆಹರು ಓಲೇಕಾರ್ ಪಟ್ಟಿಗೆ ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಹೆಸರು ಸೇರ್ಪಡೆ ಆಗಿದೆ. ಮೂರನೆ ದೂರು: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿರುವ ದೂರು ಸೇರಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಲ್ಲಿಕೆಯಾಗಿರುವುದು ಇದು ಮೂರನೇ ದೂರು.
ಈ ಹಿಂದೆ ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಕಾನೂನು ಬಾಹಿರವಾಗಿ ಜಮೀನು ಮಂಜೂರು ಮಾಡಿದ್ದು ಹಾಗೂ ಜಂತಕಲ್ ಮೈನಿಂಗ್ ಕಂಪನಿ ಪರವಾನಿಗೆ ನವೀಕರಣದಲ್ಲಿ ನಿಯಮ ಬಾಹಿರವಾಗಿ ನಡೆದುಕೊಂಡ ಆರೋಪದಲ್ಲಿ ದೂರು ಸಲ್ಲಿಕೆ ಆಗಿತ್ತು. ಹೈಕೋರ್ಟ್ ಈ ಪ್ರಕರಣವನ್ನು ರದ್ದುಪಡಿಸಿದೆ. ಅದೇ ರೀತಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ದಾಖಲಾದ ಮತ್ತೊಂದು ದೂರಿನ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

Please follow and like us:
error