ಜಿಲ್ಲೆಯ ಶೈಕ್ಷಣಿಕ ಏಳ್ಗೆಗೆ ಸರ್ವ ಶ್ರಮ ಅಗತ್ಯ – ಸಂಸದ ಕರಡಿ

ಕೊಪ್ಪಳ, ೨೯-ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಹಿನ್ನೆಡೆ ಹಣೆಪಟ್ಟಿ ಅಳಿಸಲು ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ. ಕೊಪ್ಪಳ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸರ್ವರೂ ನಿರಂತರವಾಗಿ ಶ್ರಮಿಸೋಣ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ನಗರದ ಸಾಹಿತ್ಯ ಭವನದಲ್ಲಿ  ಸೋಮವಾರದಂದು  ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಯುವ ಘಟಕ, ಸ್ಪಂದನ ಹಾಗೂ  ಶ್ರೀ ಗವಿಶ್ರೀ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ತರಬೇತಿ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.  
ಕೊಪ್ಪಳ ಜಿಲ್ಲೆಯ ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಶಿಕ್ಷಣದ ಅಭಿವೃದ್ಧಿ ಹೆಚ್ಚು ಶಿಬಿರಗಳನ್ನು ಅಯೋಜಿಸುವ ಅಗತ್ಯತೆ ಇದೆ. ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿಸುವ ಮೂಲಕ ಗುಣಮಟ್ಟದ ಸುಧಾರಣೆಗೆ ಆದ್ಯತೆ ನೀಡೋಣವೆಂದರು.
ಹೈ.ಕ.ಭಾಗದಲ್ಲಿ ವಿಶೇಷವಾಗಿ ಕೊಪ್ಪಳ ಜಿಲ್ಲೆಯಲ್ಲಿ ಶೇ.೫೦ ವಿದ್ಯಾರ್ಥಿಗಳು ಸಹ ಇಂಗ್ಲೀಷ ವಿಷಯದಲ್ಲಿ ಉತ್ತೀರ್ಣರಾಗುತ್ತಿಲ್ಲ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ಮತ್ತು ತಿಳುವಳಿಕೆಯ ಅಗತ್ಯ ಇದೆ. ನಾವೆಲ್ಲರೂ ಶಿಕ್ಷಣ ಸುಧಾರಣೆಗೆ ಮುಂದಾಗೋಣ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ  ಹೈ.ಕ.ಹೋರಾಟ ಸಮಿತಿ ಹಾಗೂ ಇತರ ಸಂಘಟನೆಗಳು ಹಮ್ಮಿಕೊಂಡಿರುವ ಈ ಉಚಿತ ಇಂಗ್ಲೀಷ ತರಬೇತಿ ಶಿಬಿರ ಅತ್ಯುತ್ತಮವಾದುದು. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇಂಗ್ಲೀಷ ವಿಷಯದಲ್ಲಿ ಜ್ಞಾನದ ಕೊರತೆ ಇದ್ದು ವಿಶೇಷ ಶಿಬಿರದ ಮೂಲಕ ಫಲಿತಾಂಸ ಹಾಗೂ ವಿದ್ಯಾರ್ಥಿಗಳ ತಿಳುವಳಿಕೆ ಗುಣಮಟ್ಟ ಹೆಚ್ಚಿಸಲು ಶ್ರಮಿಸಬೇಕೆಂದರು.
ಮುಂದಿನ ವರ್ಷದಿಂದ ಕೊಪ್ಪಳ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿ ಎರಡು ತಿಂಗಳಿಗೊಮ್ಮೆ ಶಿಬಿರವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ ಸೇರಿದಂತೆ ಎಲ್ಲ ವಿಷಯದ ಕುರಿತು ವಿಶೇಷ ತಿಳುವಳಿಕೆ ನೀಡಲು ಸಹಕರಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹೈ.ಕ.ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಸಂತೋಷ ದೇಶಪಾಮಡೆ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ಇಂಗ್ಲೀಷ ವಿಷಯದಲ್ಲಿ ೧೦೦ ಕ್ಕೆ ೪೦ ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣ ಹೊಂದುತ್ತಿದ್ದು, ಈ ವರ್ಷ ಹೊಸ ಪಠ್ಯಪುಸ್ತಕ ಬಂದಿರುವುದರಿಂದ ಇನ್ನು ಹೆಚ್ಚು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ಈ ಉಚಿತ ಇಂಗ್ಲೀಷ ಶಿಬಿರದಿಂದ ಸ್ವಲ್ಪ ಮಟ್ಟಿಗೆ ಸಹಕಾರಿಯಾಗಲಿದೆ ಎಂದರು.
ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಂಸದರು ಹಾಗೂ ಶಾಸಕರು ವಿಶೇಷ ಒತ್ತು ನೀಡಿ ಹೆಚ್ಚು ಕಾಲೇಜು ಮತ್ತು ಉಪನ್ಯಾಸಕರನ್ನು ತರಲು ಶ್ರಮಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಅನಿಲ ವೈದ್ಯ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶ ಭೂಮರಡ್ಡಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಪಾನಘಂಟಿ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ|ವಿ.ಬಿ.ರಡ್ಡೇರ್, ಸಾಹಿತಿ ಮಹಾಂತೇಶ ಮಲ್ಲನಗೌಡರ, ಮುಖಂಡರಾದ ಸಿದ್ಧಲಿಂಗಯ್ಯ ಹಿರೇಮಠ, ಪ್ರಭಾರಿ ಡಿಡಿಪಿಯು ಶಿವಾನಂದ ಕಡಪಟ್ಟಿ, ಉಪನ್ಯಾಸಕರಾದ ರಾಜಶೇಖರ ಎಂ.ಪಾಟೀಲ, ಸ್ಪಂದನ ಸಂಸ್ಥೆ ಸದಸ್ಯೆ ಪದ್ಮಿನಿ ಕೆ. ಇತರರು ಹಾಜರಿದ್ದರು.
ಪ್ರಾರಂಭದಲ್ಲಿ ರಮೇಶ ತುಪ್ಪದ ಸ್ವಾಗತಿಸಿದರು. ಉಪನ್ಯಾಸಕ ಮಲ್ಲಿಕಾರ್ಜುನ ಹ್ಯಾಟಿ ನಿರೂಪಿಸಿದರು. ಕೊನೆಯಲ್ಲಿ ಮಂಜುನಾಥ ಅಂಗಡಿ ವಂದಿಸಿದರು.ಶಿಬಿರದಲ್ಲಿ ಕೊಪ್ಪಳ ತಾಲೂಕಿನ ೯ ಸರಕಾರಿ ಪದವಿ ಪೂರ್ವ ಕಾಲೇಜಿನ ೮೦೦ ಕ್ಕೂ ಅಧಿಕ ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಎಂದು ಉಪನ್ಯಾಸಕ ರಾಜೇಶ ಯಾವಗಲ್ ತಿಳಿಸಿದ್ದಾರೆ.

Leave a Reply