fbpx

ಚಳಿಗಾಲದಲ್ಲಿ ಲಾಭ ತರುವ ತೋಟಗಾರಿಕೆ ಬೆಳೆಗಳು ರೈತರಿಗೆ ಸಲಹೆ.

ಕೊಪ್ಪಳ
ನ. ೧೯ (ಕ ವಾ)ರಾಜ್ಯದಲ್ಲಿ ಮಳೆಗಾಲ ಮುಗಿದು, ಚಳಿಗಾಲ
ಆರಂಭವಾಗುತ್ತಿದೆ.  ಈ ಸಂದರ್ಭದಲ್ಲಿ ತೋಟಗಾರಿಕೆಯ ಅಲ್ಪಾವಧಿ ಬೆಳೆಗಳನ್ನು ಬೆಳೆದು ಲಾಭ
ಕಂಡುಕೊಳ್ಳುವುದರ ಬಗ್ಗೆ ಕೊಪ್ಪಳ ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ
    
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಳೆಗಾಲ ಮುಗಿದು, ಚಳಿಗಾಲ ಆರಂಭವಾಗುತ್ತಿದೆ.
ಉತ್ತಮ ಮಳೆ ಇಲ್ಲದ ಕಾರಣ ರೈತರಲ್ಲಿ ಆತಂಕವಿರುವುದು ಸಹಜ. ಇಂತಹ ಸಂದರ್ಭದಲ್ಲಿ
ಅಲ್ಪಾವಧಿ ಬೆಳೆಗಳನ್ನು ಬೆಳೆದು ರೈತರು ಲಾಭ ಕಂಡುಕೊಳ್ಳುವ ನಿಟ್ಟಿನಲ್ಲಿ ತೋಟಗಾರಿಕೆ 
ಇಲಾಖೆ ರೈತರಿಗೆ ಸಲಹೆ ನೀಡಿದೆ.
ಹೂವಿನ ಬೆಳೆಗಳಾದ, ಚೆಂಡು ಹೂ, ಗಲಾಟೆ ಹೂಗಳು
ಲಾಭದಾಯಕವಾಗಿವೆ. ಅದರಂತೆ ಅನೇಕ ತರಕಾರಿಗಳನ್ನು  ಅಲ್ಪಾವಧಿಯಲ್ಲಿ ಕಡಿಮೆ ನೀರನ್ನು
ಬಳಸಿ ಬೆಳೆಯಬಹುದಾಗಿದೆ. ಲಭ್ಯವಿದ್ದ ನೀರನ್ನು ಹನಿ ನೀರಾವರಿ, ತುಂತುರು ನೀರಾವರಿ
ಅಳವಡಿಸಿಕೊಂಡು ನೀರನ್ನು ಮಿತವಾಗಿ ಬಳಸಿ ಅನೇಕ ಬಗೆಯ ತರಕಾರಿಗಳನ್ನು ಬಳೆದು ಲಾಭ
ಗಳಿಸಬಹುದಾಗಿದೆ.
ಚಳಿಗಾಲದ ಬೆಳೆಗಳಲ್ಲಿ ಎರಡು ವಿಧಗಳಿವೆ.  ಮೊದಲನೆಯದು, ಮಳೆಗಾಲದ
ಕೊನೆಯಲ್ಲಿ ನಾಟಿ  ಅಥವಾ ಬಿತ್ತನೆ ಮಾಡಿ ಚಳಿಗಾಲದಲ್ಲಿ ಬೆಳವಣಿಗೆ ಹಂತ ಮುಗಿಸಿ,
ಚಳಿಗಾಲದ ಅಂತ್ಯದಲ್ಲಿ ಅಥವಾ ಬೇಸಿಗೆ ಕಾಲದ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಕಟಾವಿಗೆ
ಬರುವ ಕೆಲವು ಬೆಳೆಗಳು ಉದಾಹರಣೆಗೆ ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ ಇತ್ಯಾದಿ. 
ಇನ್ನೊಂದು ವಿಧದ ಬೆಳೆಗಳೆಂದರೆ ಚಳಿಗಾಲದಲ್ಲಿ ನಾಟಿ ಅಥವಾ ಬಿತ್ತನೆ ಮಾಡಿ
ಅಲ್ಪಾವಧಿಯಲ್ಲೇ ಅಂದರೆ ಬೇಸಿಗೆ ಆರಂಭ ಆಗುವುದರೊಳಗೆ  ಕಟಾವಿಗೆ ಬರುವ ತರಕಾರಿಗಳು.
ಉದಾಹರಣೆಗೆ ಎಲೆಕೋಸು, ಹೂ ಕೋಸು, ಪಾಲಕ ಮುಂತಾದ ಸೊಪ್ಪಿನ ತರಕಾರಿಗಳಲ್ಲದೇ ಗಡ್ಡೆ
ಜಾತಿಗೆ ಸೇರಿದ ಸೀಮೆ ಈರುಳ್ಳಿ, ಟರ್ನಿಪ್ ಇತ್ಯಾದಿ.  ಇನ್ನು ದ್ವಿದಳ ಧಾನ್ಯಗಳಲ್ಲಿ
ಬಟಾಣಿ, ತಿಂಗಳ ಹುರುಳಿ ಮುಖ್ಯವಾದವು.   ಇದಲ್ಲದೇ, ಬೇರು ಜಾತಿಗೆ ಸೇರಿದ ಗಜ್ಜರಿ,
ಮೂಲಂಗಿ, ಸಾಂಬಾರ ಜಾತಿಗೆ ಸೇರಿದ ಕೊತ್ತಂಬರಿ ಮುಂತಾದ ಬೆಳೆಗಳು ೭೦ ರಿಂದ ೮೦
ದಿನಗಳಲ್ಲಿ ಕಟಾವಿಗೆ ಬರುತ್ತವೆ. ಕೆಲವು ತಳಿಗಳು ಇನ್ನೂ ಕಡಿಮೆ ಅವಧಿಯಲ್ಲಿ ಕಟಾವಿಗೆ
ಸಿಧ್ಧವಾಗುತ್ತವೆ. ಇದಲ್ಲದೇ ಹೊಸ ತಾಂತ್ರಿಕತೆಗಳಾದ ಹಸಿರುಮನೆ ಹಾಗೂ ಕಡಿಮೆ ವೆಚ್ಚದ
ನೆರಳು ಪರದೆ ಅಳವಡಿಸಿಕೊಂಡು ಕೇವಲ ೧೦ ಗುಂಟೆ ಜಾಗದಲ್ಲಿ ಕಡಿಮೆ ನೀರಿನ ನಿರ್ವಹಣೆಯಲ್ಲಿ
ಅಧಿಕ ಹಾಗೂ ಗುಣಮಟ್ಟದ ಇಳುವರಿ ಪಡೆದು ಹೆಚ್ಚಿನ ಲಾಭ ಮಾಡಿಕೊಳ್ಳಬಹುದು.  ಇವೆಲ್ಲ
ಯೋಜನೆಗಳು ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿದೆ.
ಆದರೆ, ಚಳಿಗಾಲದಲ್ಲಿ ರಸಹೀರುವ
ಕೀಟಗಳ ಮತ್ತು ಬೂದಿ ರೋಗದಂತಹ ಪೀಡೆಗಳ ಹಾವಳಿ ಜಾಸ್ತಿ ಇರುತ್ತದೆ.  ಸಾವಯವ ರೀತಿಯಲ್ಲಿ
ತರಕಾರಿ ಬೇಸಾಯ ಲಾಭಕರವಷ್ಟೇ ಅಲ್ಲದೇ ಪರಿಸರ ಪ್ರೇಮಿ ಬೇಸಾಯ ಕ್ರಮವಾಗಿದೆ.  ಆದಾಗ್ಯೂ,
ರೋಗ , ಕೀಟಗಳ ಹಾವಳಿ ಹೆಚ್ಚಾದಾಗ ತಜ್ಙರ ಸಲಹೆ ಪಡೆದು ಒಂದೆರಡು ಸಾರಿ ಶಿಫಾರಸು ಮಾಡಿದ
ಪೀಡೆ ನಾಶಕಗಳನ್ನು ಮಾತ್ರ ಬಳಕೆ ಮಾಡಿದರೆ, ಖರ್ಚೂ ಕಡಿಮೆ ಮಾಡಬಹುದಲ್ಲದೇ, ಗುಣಮಟ್ಟದ
ಉತ್ಪನ್ನ ಪಡೆಯಬಹುದಾಗಿದೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು.
ಹೆಚ್ಚಿನ
ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೊಪ್ಪಳ, ಗಂಗಾವತಿ, ಸಹಾಯಕ
ನಿರ್ದೇಶಕರು, ಯಲಬುರ್ಗಾ, ಕುಷ್ಟಗಿ ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ,
ಹಾರ್ಟಿಕ್ಲಿನಿಕ್ , ಕೊಪ್ಪಳ ವನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ
ತಿಳಿಸಲಾಗಿದೆ.
ತೋಟಗಾರಿಕೆ ಅತ್ಯುತ್ತಮ ತಾಂತ್ರಿಕ ಅನ್ವೇಷಕರ ಪ್ರಶಸ್ತಿ ಅರ್ಜಿ ಆಹ್ವಾನ.
ಕೊಪ್ಪಳ
ನ. ೧೯ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು
ನಾಲ್ಕನೇಯ ತೋಟಗಾರಿಕೆ ಮೇಳವನ್ನು ಡಿ. ೧೯ ರಿಂದ ೨೧ ರವರೆಗೆ ತೋಟಗಾರಿಕೆ ವಿವಿಯ
ಆವರಣದಲ್ಲಿ ಆಯೋಜಿಸಿದ್ದು, ಈ ಮೇಳದಲ್ಲಿ ರೈತರು ತಮ್ಮ ಕ್ಷೇತ್ರದಲ್ಲಿ ತಾವೇ ಸ್ವತ:
ಕಂಡುಹಿಡಿದ ಪ್ರಯೋಗಗಳನ್ನು ಮಾಡಿ ಆವಿಷ್ಕಾರ ಮಾಡಿದ ತಂತ್ರಜ್ಞಾನಗಳನ್ನು ಅಥವಾ
ಯಂತ್ರೋಪಕರಣಗಳನ್ನು ಅಥವಾ ನೂತನ ತಳಿಗಳನ್ನು ಪ್ರದರ್ಶನಕ್ಕೆ ಇಡಲು ಅರ್ಜಿಗಳನ್ನು
ಅಹ್ವಾನಿಸಲಾಗಿದೆ.
     ಇಚ್ಛೆವುಳ್ಳ ರೈತರು ಸ್ವತ: ತಾವೇ
ಕಂಡುಹಿಡಿದ/ಆವಿಷ್ಕಾರಿಸಿದ ಹೊಸ ತಳಿಗಳು, ವಿನೂತನ ಪದ್ಧತಿಗಳು, ತಾಂತ್ರಿಕತೆಗಳು,
ಯಂತ್ರೋಪಕರಣಗಳು, ತೋಟಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿ ಪಡೆದ ಉತ್ತಮ
ಇಳುವರಿಯ ಮಾದರಿಗಳು, ಉತ್ಪನ್ನಗಳು ಹಾಗೂ ಇತರೆ ಅವಿಷ್ಕಾರಗಳನ್ನು ತೋಟಗಾರಿಕೆ ಮೇಳದಲ್ಲಿ
ಪ್ರದರ್ಶಿಸಲು ತಮ್ಮ ಹೆಸರು, ಸ್ಥಳ, ದೂರವಾಣಿ ಸಂಖ್ಯೆ ಮತ್ತು ಪ್ರದರ್ಶಿಸುವ
ಅವಿಷ್ಕಾರಗಳ ವಿವರ ಮತ್ತು ಅವುಗಳ ಫೋಟೋಗಳನ್ನು ವಿಸ್ತರಣಾ ನಿರ್ದೇಶಕರು, ವಿಸ್ತರಣಾ
ನಿರ್ದೇಶನಾಲಯ, ಉದ್ಯಾನಗಿರಿ, ಹುಬ್ಬಳ್ಳಿ ಬೈಪಾಸ್ (ಸೀಮಿಕೆರಿ ಕ್ರಾಸ್ ಹತ್ತಿರ),
ನವನಗರ, ಬಾಗಲಕೋಟ- ೫೮೭೧೦೪ ಪೋನ ನಂ. (೦೮೩೫೪-೨೦೧೩೫೨)
ಇವರಿಗೆ ನ. ೩೦ ರೊಳಗಾಗಿ ಸಲ್ಲಿಸಬೇಕು.  ತೋಟಗಾರಿಕೆ ವಿ.ವಿ.ಯು ಅನುಮೋದಿಸಿದ ರೈತರಿಗೆ
ಡಿ. ೧೦ ರೊಳಗಾಗಿ ತಿಳಿಸಲಾಗುವುದು. ಆಯ್ಕೆಗೊಂಡ ರೈತರು ತಮ್ಮ ಆವಿಷ್ಕಾರಗಳು ತೋಟಗಾರಿಕೆ
ಮೇಳದ ಅವಧಿ ೧೯ ರಿಂದ ೨೧ನೇ ಡಿಸೆಂಬರ್, ೨೦೧೫ ರವರೆಗೆ ಪ್ರದರ್ಶಿಸಲು ತಿಳಿಸಲಾಗುವುದು.
ಪ್ರದರ್ಶಿಸಲು ಪ್ರತ್ಯೇಕ ವಿಶಾಲವಾದ ಮಳಿಗೆಯ ವ್ಯವಸ್ಥೆ ಮಾಡಲಾಗುತ್ತದೆ.
ತೋಟಗಾರಿಕೆ
ಮೇಳದಲ್ಲಿ ರೈತರು ಪ್ರದರ್ಶಿಸಿದ ಪ್ರದರ್ಶನಗಳಲ್ಲಿ ಒಂದು ವಿನೂತನ ಹಾಗೂ ಉತ್ತಮ
ಅನ್ವೇಷಣೆಯನ್ನು ಆಯ್ಕೆ ಮಾಡಿದ ರೈತ / ರೈತ ಮಹಿಳೆಗೆ ಅತ್ಯುತ್ತಮ ತಾಂತ್ರಿಕ ಅನ್ವೇಷಕ /
ಅನ್ವೇಷಕಿ ಪ್ರಶಸ್ತಿಯ ಪ್ರಮಾಣ ಪತ್ರ ಹಾಗೂ ರೂ ೫,೦೦೦ ಗಳ ನಗದು ಪ್ರಶಸ್ತಿಯೊಂದಿಗೆ
ಸನ್ಮಾನಿಸಲಾಗುವುದು ಎಂದು ವಿಸ್ತರಣಾ ನಿರ್ದೇಶಕ ಎ.ಬಿ. ಪಾಟೀಲ್ ತಿಳಿಸಿದ್ದಾರೆ.

ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸಲಾಗುವುದಿಲ್ಲ ಭೋಜಾನಾಯ್ಕ ಕಟ್ಟೀಮನಿ.
ಕೊಪ್ಪಳ,
ನ.೧೯ (ಕ ವಾ) ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿಂಗಾರು
ಹಂಗಾಮಿನ ಬೆಳೆಗಳಿಗೆ ನೀರು ಹರಿಸಲಾಗುವುದಿಲ್ಲ ಎಂದು ತುಂಗಭದ್ರಾ ಯೋಜನಾ ವೃತ್ತ,
ಮುನಿರಾಬಾದ್‌ನ ಅಧೀಕ್ಷಕ ಅಭಿಯಂತರ ಹಾಗೂ ನೀರಾವರಿ ಅಧಿಕಾರಿ ಭೋಜಾನಾಯ್ಕ ಕಟ್ಟೀಮನಿ
ಅವರು ತಿಳಿಸಿದ್ದಾರೆ.
     ನ.೧೬ ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಜರುಗಿದ
ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ೧೦೨ ನೇ
ಸಭೆಯಲ್ಲಿ ತುಂಗಭದ್ರಾ ಯೋಜನೆ ವ್ಯಾಪ್ತಿಯ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು
ಹರಿಸದಿರಲು ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು
ಪ್ರದೇಶದಲ್ಲಿ ರೈತರು ಬೆಳೆದ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸಲಾಗುವುದಿಲ್ಲ
ಹಾಗೂ ಈಗ ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ, ಕುಡಿಯುವ ನೀರಿನ ಸಲುವಾಗಿ ನೀರನ್ನು
ಕಾಯ್ದಿರಿಸಿ, ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತ ಬೆಳೆಗಳನ್ನು ಸಂರಕ್ಷಿಸಲು ಲಭ್ಯತೆ
ಅನುಸಾರ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಯೋಜನಾ ವೃತ್ತ, ಮುನಿರಾಬಾದ್‌ನ
ಅಧೀಕ್ಷಕ ಅಭಿಯಂತರ ಹಾಗೂ ನೀರಾವರಿ ಅಧಿಕಾರಿ ಭೋಜಾನಾಯ್ಕ ಕಟ್ಟೀಮನಿ ಅವರು
ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.
ಅಪಘಾತ ವಿಮೆ ಯೋಜನೆಯಡಿ ಖಾಸಗಿ ವಾಹನ ಚಾಲಕರ ನೊಂದಣಿ.
ಕೊಪ್ಪಳ,
ನ.೧೯ (ಕ ವಾ) ಕೊಪ್ಪಳ ಜಿಲ್ಲಾ ಕಾರ್ಮಿಕ ಇಲಾಖೆ ಮತ್ತು ಪ್ರಾದೇಶಿಕ
ಸಾರಿಗೆ ಕಛೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರದ ವತಿಯಿಂದ ಇರುವ ೨ ಲಕ್ಷ ರೂ.
ಅಪಘಾತ ವಿಮೆ ಯೋಜನೆಯಡಿ ಗುರುವಾರ ನಗರದ ಹೊಸಪೇಟೆ, ಗದಗ ರಸ್ತೆಯಲ್ಲಿ ಖಾಸಗಿ ವಾಹನ
ಚಾಲಕರ ನೊಂದಣಿ ಕಾರ್ಯವನ್ನು ಕೈಗೊಳ್ಳಲಾಯಿತು.
     ಪ್ರಾದೇಶಿಕ ಸಾರಿಗೆ ಇಲಾಖೆಯ
ಸಾರಿಗೆ ನಿರೀಕ್ಷಕ ಜೆ.ಪಿ. ಪ್ರಕಾಶ, ಕಾರ್ಮಿಕ ಅಧಿಕಾರಿ ಶಿವಕುಮಾರ. ಜಿ, ಕಾರ್ಮಿಕ
ನಿರೀಕ್ಷಕ ಬಸಯ್ಯ ಅಂಗಡಿ ನೊಂದಣಿ ಕಾರ್ಯದ ನೇತೃತ್ವ ವಹಿಸಿದ್ದರು.  ವಿಮಾ ನೊಂದಣಿ
ಕಾರ್ಯಕ್ರಮದಲ್ಲಿ ೭೫ ಖಾಸಗಿ ವಾಹನ ಚಾಲಕ ಫಲಾನುಭವಿಗಳನ್ನು ನೊಂದಾಯಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸಿಬ್ಬಂದಿಗಳಾದ ವೀರಣ್ಣ
ವ್ಹಿ.ಕುಂಬಾರ, ಮಾರುತಿ ನಾಯಕರ್  ಉಪಸ್ಥಿತರಿದ್ದರು.
ನ.೨೫ ರಂದು ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ.
ಕೊಪ್ಪಳ,
ನ.೧೯ (ಕ ವಾ)  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಂದೇ ಮಾತರಂ
ಸಾಂಸ್ಕೃತಿಕ ಸೇವಾ ಸಂಘ (ರಿ) ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಕೊಪ್ಪಳ
ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ನ.೨೫ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ನಗರದ
ಸಾಹಿತ್ಯ ಭವನದಲ್ಲಿ ನಡೆಯಲಿದೆ.
     ಯುವಜನೋತ್ಸವದಲ್ಲಿ ಜನಪದ ನೃತ್ಯ, ಜನಪದ
ಗೀತೆ, ನಾಟಕ (ಹಿಂದಿ ಅಥವಾ ಇಂಗ್ಲೀಷ್), ಭರತ ನಾಟ್ಯ, ತಬಲಾ ಸೋಲೋ, ಕೊಳಲು, ವೀಣಾ, ಆಶು
ಭಾಷಣ, ಶಾಸ್ತ್ರೀಯ ಸಂಗೀತ, ಕುಚುಪುಡಿ ನೃತ್ಯ ಗಿಟಾರ್ ಸೋಲೋ, ಹಾರ್ಮೋನಿಯಂ, ಸಿತಾರ್
ಸೋಲೋ ಸೇರಿದಂತೆ ಒಟ್ಟು ೧೬ ಕಲೆಗಳ ಸ್ಪರ್ಧೆಗಳನ್ನು ವೈಯಕ್ತಿಕ ಹಾಗೂ ಗುಂಪು
ವಿಭಾಗಗಳಲ್ಲಿ ಸಂಘಟಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳ ೧೬ ರಿಂದ ೩೫ ವರ್ಷ
ವಯೋಮಿತಿಯೊಳಗಿನ ಆಸಕ್ತ ಯುವಕ, ಯುವತಿಯರು, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು
ಭಾಗವಹಿಸಬಹುದಾಗಿದೆ.  ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ನ.೨೫ ರಂದು ಬೆಳಿಗ್ಗೆ
೯.೦೦ ಗಂಟೆಯೊಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,
ಕೊಪ್ಪಳ ಇವರಲ್ಲಿ ತಮ್ಮ ಹೆಸರನ್ನು ನೊಂದಾಯಿಸಬಹುದು.  ಹೆಚ್ಚಿನ ಮಾಹಿತಿಗಾಗಿ ಕಛೇರಿ
ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ಅಥವಾ ಆನಂದ ಹಳ್ಳಿಗುಡಿ, ಮೊ :೯೧೬೪೧೦೭೦೧೬
ಇವರನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಹಾಗೂ ಸಮಾವೇಶ : ಅರ್ಜಿ ಆಹ್ವಾನ
ಕೊಪ್ಪಳ,
ನ.೧೯ (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ
ನೀಡಲಾಗುವ ಪ್ರಸಕ್ತ ಸಾಲಿನ ಯುವ ವಿಜ್ಞಾನಿ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ಯುವ
ವಿಜ್ಞಾನಿಗಳ ಸಮಾವೇಶದ ಅಂಗವಾಗಿ ೯ ರಿಂದ ೧೨ನೇ ತರಗತಿಯಲ್ಲಿ ಓದುತ್ತಿರುವ
ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಕರ್ನಾಟಕ ಸರ್ಕಾರದ ವಿಜ್ಞಾನ
ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನಲ್ಲಿ ಈ ಪ್ರಶಸ್ತಿಯನ್ನು ಆಯೋಜಿಸಲಾಗಿದ್ದು,
ವೈಜ್ಞಾನಿಕ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು
ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ, ತಮ್ಮ
ಪ್ರತಿಭೆಯನ್ನು ತೋರಿದ ವಿದ್ಯಾರ್ಥಿಗಳನ್ನು ಆಯ್ದು, ಪ್ರಶಸ್ತಿ ಪತ್ರ ಹಾಗೂ ನಗದು
ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ. ಎಳೆಯ ವಯಸ್ಸಿನಲ್ಲಿಯೇ ವೈಜ್ಞಾನಿಕ ವಿಧಾನದ
ಮನವರಿಕೆ ಮಾಡುವುದು, ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸುವುದು, ರಾಜ್ಯದ ಅಥವಾ
ರಾಷ್ಟ್ರದ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು, ಮೂಲ
ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹಾಗೂ ಚಿಂತನ ಕೌಶಲ್ಯವನ್ನು ವರ್ಧಿಸಬೇಕೆಂಬುದು ಕರ್ನಾಟಕ
ರಾಜ್ಯ ವಿಜ್ಞಾನ ಪರಿಷತ್ತಿನ ಉದ್ದೇಶವಾಗಿದ್ದು, ‘ವಿಜ್ಞಾನ ಶಿಕ್ಷಣ ಮತ್ತು
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವನ್ನು ಸಮಾಜದ ಅಭಿವೃದ್ಧಿಗೆ ಬೆಸೆಯುವ’ ಒಂದು
ಅಭೂತಪೂರ್ವ ಪ್ರಯತ್ನವಾಗಿ ಪರಿಷತ್ತು ಈ ಯೋಜನೆಯನ್ನು ಕೈಗೊಂಡಿದೆ.
    
ಯೋಜನೆಯಲ್ಲಿ ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ
ಪೂರ್ವ ಶಿಕ್ಷಣ ಇಲಾಖೆ ಅಥವಾ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವೆಬ್‌ಸೈಟ್
ತಿತಿತಿ.ಞಡಿvಠಿ.oಡಿg ಅರ್ಜಿ ಹಾಗೂ
ಮಾಹಿತಿಯನ್ನು ಪಡೆಯಬಹುದಾಗಿದೆ. ನಂತರ ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಸೂಕ್ತ
ದಾಖಲೆಗಳನ್ನು ಲಗತ್ತಿಸಿ, ಡಿ.೦೮ ರೊಳಗಾಗಿ ಆಯಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆ,
ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬಹುದಾಗಿದೆ. ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಡಿ.೧೫
ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲದಲ್ಲಿ ಆಯೋಜಿಸಲಾಗುವುದು. ಜಿಲ್ಲಾ ಮಟ್ಟದ
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಯುವ ವಿಜ್ಞಾನಿಗಳು ೨೦೧೬
ಜನವರಿಯಲ್ಲಿ ಜರುಗುವ ರಾಜ್ಯಮಟ್ಟದ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲು ಅರ್ಹತೆ
ಪಡೆಯುತ್ತಾರೆ. ರಾಜ್ಯ ಮಟ್ಟದ ಸ್ಪರ್ಧೆಯು ೩ ದಿನಗಳ ಕಾಲ ಜರುಗಲಿದ್ದು, ಸ್ಪರ್ಧೆಯಲ್ಲಿ
ಖ್ಯಾತ ವಿಜ್ಞಾನಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
     ಈ
ಕುರಿತು ಹೆಚ್ಚಿನ ಮಾಹಿತಿಗಾಗಿ ಪರಿಷತ್ತಿನ ರಾಜ್ಯ ಸಂಯೋಜಕರಾದ ಗಿರೀಶ ಬಿ.ಕಡ್ಲೇವಾಡ,
ಮೊ : ೯೪೪೮೮೩೦೪೫೪ ಅಥವಾ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಛೇರಿ ದೂರವಾಣಿ
ಸಂಖ್ಯೆ : ೦೮೦-೨೬೭೧೮೯೩೯/೫೯ ಇವರನ್ನು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ವಿಜ್ಞಾನ
ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ|| ವಸುಂಧರಾ ಭೂಪತಿ ಅವರು ತಿಳಿಸಿದ್ದಾರೆ.     

Please follow and like us:
error

Leave a Reply

error: Content is protected !!