ಬಾಲ್ಯ ವಿವಾಹ ತಡೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚನೆ.

ಕೊಪ್ಪಳ,
ಜ.೦೭ (ಕ ವಾ) ಬಾಲ್ಯವಿವಾಹ ತಡೆಗಾಗಿ ಜಿಲ್ಲಾದ್ಯಂತ ವಿವಿಧ ಜಾಗೃತಿ
ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಸಂಬಂಧಪಟ್ಟ
ಅಧಿಕಾರಿಗಳಿಗೆ ಸೂಚಿಸಿದ್ದಾರೆ.  
     ಬಾಲ್ಯ ವಿವಾಹವು ಗಂಭೀರವಾಗಿ
ಅಭಿವೃದ್ಧಿಗೆ ಕೆಡುಕಾಗಿದ್ದು, ಇದರಿಂದಾಗಿ ಮಕ್ಕಳ ಎಲ್ಲಾ ಹಕ್ಕುಗಳು
ಉಲ್ಲಂಘನೆಯಾಗುತ್ತವೆ. ಬಾಲ್ಯವನ್ನು ಸುಂದರವಾಗಿ ಅನುಭವಿಸಬೇಕಾದ ಜೀವನದಲ್ಲಿ
ಬಾಲ್ಯವಿವಾಹವು ದುಖಃ, ದುಮ್ಮಾನ, ಕಷ್ಟ, ನೋವು, ಹಿಂಸೆ ಮುಂತಾದವುಗಳನ್ನು ನೀಡಿ, ಅವರ
ಭವಿಷ್ಯವನ್ನು ಹಾಳು ಮಾಡುತ್ತದೆ. ಈ ಅನಿಷ್ಟ ಪದ್ಧತಿಯನ್ನು ಜಿಲ್ಲೆಯಿಂದ ಸಂಪೂರ್ಣವಾಗಿ
ನಿರ್ಮೂಲನೆ ಮಾಡಲು ಜಿಲ್ಲಾಡಳಿತ ಪಣ ತೊಟ್ಟಿದ್ದು, ಜಿಲ್ಲೆಯ ಜನತೆ ಈ ಸದುದ್ದೇಶ
ಈಡೇರಿಸಲು ಸಹಕರಿಸುತ್ತಿರುವುದು ಅಭಿನಂದನಾರ್ಹ. ಕೊಪ್ಪಳದ ಶ್ರೀಗವಿಮಠವು ಈ
ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕೈ ಜೋಡಿಸುತ್ತಿದೆ ಮಾತ್ರವಲ್ಲದೆ, ಜನೇವರಿ ತಿಂಗಳಲ್ಲಿ
ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ‘ಬಾಲ್ಯವಿವಾಹ ತಡೆ’ ಜಾತ್ರೆಯ ವಿಷಯವಾಗಿಟ್ಟುಕೊಂಡು
ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲ್ಯವಿವಾಹದ ತಡೆ
ಜಾಗೃತಿಗಾಗಿ ಪ್ರಬಂಧ ಸ್ಪರ್ಧೆ, ಜಾಗೃತಿ ನಡೆ ಕಾರ್ಯಕ್ರಮವನ್ನು ಈ ಕೆಳಗಿನ
ಸೂಚನೆಗಳನ್ವಯ ನಡೆಸುವಂತೆ ಅವರು ಸೂಚನೆ ನೀಡಿದ್ದಾರೆ.
     ‘ಬಾಲ್ಯವಿವಾಹ
ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ’ ಈ ವಿಷಯದ ಕುರಿತು ಜಿಲ್ಲೆಯ ಎಲ್ಲಾ ಸರ್ಕಾರಿ,
ಅನುದಾನಿತ, ಖಾಸಗಿ ಪ್ರೌಢಶಾಲೆಗಳಲ್ಲಿ, ಪದವಿ ಪೂರ್ವ ಕಾಲೇಜುಗಳಲ್ಲಿ ಹಾಗೂ ಪದವಿ
ಕಾಲೇಜುಗಳಲ್ಲಿ ಪ್ರತ್ಯೇಕವಾಗಿ ಪ್ರಬಂಧ ಸ್ಪರ್ಧೆಯನ್ನು ಜ.೧೬ ರಂದು ಆಯೋಜಿಸಬೇಕು.
ಉತ್ತಮವಾದ ಪ್ರಬಂಧವನ್ನು ಬರೆದಂತಹ ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯನ್ನು ಆಯ್ಕೆ
ಮಾಡಿ ಅವರನ್ನು ಜ.೨೦ ರಂದು ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ನಡೆಯುವ ಜಿಲ್ಲಾಮಟ್ಟದ
ಪ್ರಬಂಧ ಸ್ಪರ್ಧೆಗೆ ಭಾಗವಹಿಸಲು ಒಬ್ಬರು ಶಿಕ್ಷಕರೊಂದಿಗೆ ಕಳುಹಿಸಿಕೊಡಬೇಕು.
    
‘ಬಾಲ್ಯವಿವಾಹ ನಿರ್ಮೂಲನೆಗಾಗಿ ಜಾಗೃತಿ ನಡೆ’ ಈ ಕಾರ್ಯಕ್ರಮವನ್ನು ಜ.೨೩ ರಂದು
ಜಿಲ್ಲೆಯ ಪ್ರತಿಯೊಂದು ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ ಕಾಲೇಜುಗಳು ಆಯೋಜಿಸಬೇಕು.
ಸ್ಥಳೀಯ ಗ್ರಾಮ ಪಂಚಾಯತ್, ಎಸ್.ಡಿ.ಎಮ್.ಸಿ, ಮಕ್ಕಳ ರಕ್ಷಣಾ ಸಮಿತಿ, ಅಂಗನವಾಡಿ,
ಬಾಲಿಕಾ ಸಂಘ, ಮಹಿಳಾ ಸ್ವಸಹಾಯ ಸಂಘಗಳು, ಪಾಲಕರು, ಮಕ್ಕಳು ಮತ್ತು ಸಾರ್ವಜನಿಕರು
ಮುಂತಾದವರನ್ನು ಸೇರಿಸಿಕೊಂಡು ಅಂದು ಬೆಳಿಗ್ಗೆ ೯.೦೦ ಗಂಟೆಯಿಂದ ೧೦.೦೦ ಗಂಟೆಯವರಿಗೆ ಈ
ಜಾಥಾವನ್ನು ಆಯೋಜಿಸಬೇಕು. ಬಾಲ್ಯ ವಿವಾಹವಾಗುವುದಿಲ್ಲ ಮತ್ತು ಕಂಡುಬಂದರೆ ತಡೆಯುತ್ತೇವೆ
ಎನ್ನುವ ಪ್ರತಿಜ್ಞಾವಿಧಿಯನ್ನು ಇದೇ ಸಂದರ್ಭದಲ್ಲಿ ಸ್ವೀಕರಿಸಬೇಕು. ಅಲ್ಲದೆ ಜಿಲ್ಲಾ
ಮಟ್ಟದಲ್ಲಿ ಅಂದು ಮ್ಯಾರಾಥಾನ್ ಆಯೋಜಿಸಲು ಕೊಪ್ಪಳ ನಗರದ ಪ್ರೌಢ, ಪದವಿ ಪೂರ್ವ ಮತ್ತು
ಪದವಿ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ನಿಯೋಜಿಸಬೇಕು. ಈ ಎಲ್ಲ ಕಾರ್ಯಕ್ರಮಗಳನ್ನು
ಯಶಸ್ವಿಯಾಗಿ ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು
ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
Please follow and like us:
error