ಮರಣದ ಸ್ಪಷ್ಟ ಕಾರಣಗಳು ಹೆಚ್ಚಿನ ಸಂಶೋಧನೆಗೆ ಸಹಕಾರಿ- ಡಿ.ಸಿ. ತುಳಸಿ ಮದ್ದಿನೇನಿ

: ಯಾವುದೇ ವ್ಯಕ್ತಿಯ ಸಾವಿಗೆ ಸಂಬಂಧಿಸಿದಂತೆ ವೈದ್ಯರು ಮರಣದ ಕಾರಣವನ್ನು ಸ್ಪಷ್ಟವಾಗಿ ಪ್ರಮಾಣ ಪತ್ರದಲ್ಲಿ ನಮೂದಿಸಬೇಕು.  ಇದು ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಂಶೋಧನೆ ಸೇರಿದಂತೆ ಹಲವು ಕಾರ್ಯಗಳಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
  ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಮರಣ ಕಾರಣದ ವೈದ್ಯಕೀಯ ಪ್ರಮಾಣ ಪತ್ರ ಕುರಿತು ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳಿಗಾಗಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ ಒಂದು ದಿನದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಸಾಮಾನ್ಯವಾಗಿ ವೈದ್ಯರು ಮರಣೋತ್ತರ ಪರೀಕ್ಷೆ ಸಂದರ್ಭವನ್ನು ಹೊರತುಪಡಿಸಿ, ಉಳಿದಂತೆ ಯಾವುದೇ ವ್ಯಕ್ತಿಯ ಮರಣದ ಪ್ರಮಾಣ ಪತ್ರದಲ್ಲಿ, ಆ ವ್ಯಕ್ತಿಯ ಮರಣದ ಕಾರಣವನ್ನು ಸ್ಪಷ್ಟವಾಗಿ ನಮೂದಿಸುವುದಿಲ್ಲ.  ಇದು ನಿಜಕ್ಕೂ ವೈದ್ಯರ ಕರ್ತವ್ಯ ನಿರ್ಲಕ್ಷ್ಯ ಎಂದೇ ಪರಿಗಣಿಸಲಾಗುತ್ತದೆ.  ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಕಾರಣಗಳಿಂದ ಸಾವು ಪ್ರಕರಣಗಳು ಸಂಭವಿಸುತ್ತವೆ.  ಈ ಸಾವಿನ ಕಾರಣವನ್ನು ಆಯಾ ಕರ್ತವ್ಯ ನಿರತ ವೈದ್ಯರು ಸ್ಪಷ್ಟವಾಗಿ ನಮೂದಿಸಿದಲ್ಲಿ, ಆಯಾ ಪ್ರದೇಶದಲ್ಲಿನ ಭೌಗೋಳಿಕ ಹವಾಮಾನದ ತೊಂದರೆಗಳು, ಪ್ರಮುಖ ಕಾರಣಗಳನ್ನು ಅರಿಯಲು ಸಾಧ್ಯವಾಗುತ್ತದೆ.  ಅಲ್ಲದೆ ಆ ಪ್ರದೇಶದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕಾರ್ಯಗಳಿಗೂ ಅನುಕೂಲವಾಗಲಿದೆ.  ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಗಂಗಾವತಿ, ಕೊಪ್ಪಳ ತಾಲೂಕುಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಹಾಗೂ ಕೀಟನಾಶಕವನ್ನು ಬಳಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.  ಈ ಅತಿಯಾದ ರಸಗೊಬ್ಬರ ಮತ್ತು ಕೀಟನಾಶಕ ಬಳಸಿ ಉತ್ಪಾದಿಸಲಾಗುವ ಆಹಾರವನ್ನು ನಾವೆಲ್ಲ ಸೇವಿಸುತ್ತಿದ್ದು, ಇದು ಮನುಷ್ಯನ ಆರೋಗ್ಯದ ಮೇಲೆ ತಕ್ಷಣಕ್ಕೆ ದುಷ್ಪರಿಣಾಮ ಬೀರದೇ ಇದ್ದರೂ, ದೀರ್ಘ ಕಾಲೀನ ಬಳಕೆಯಿಂದ ಆರೋಗ್ಯದ ಮೇಲೆ ಖಂಡಿತ ದುಷ್ಪರಿಣಾಮವಾಗುವ ಸಾಧ್ಯತೆ ಇದೆ.  ಇಂತಹ ಆಹಾರ ಸೇವನೆಯಿಂದ ಮನುಷ್ಯರಿಗೆ ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲುವ ಅವಶ್ಯಕತೆ ಇದೆ.  ಮರಣ ಕಾರಣದ ಸ್ಪಷ್ಟ ವರದಿಯ ಆಧಾರದಲ್ಲಿ ಸರ್ಕಾರ ತನ್ನ ಕಾರ್ಯ ನೀತಿಯನ್ನು ರೂಪಿಸಲು ಸಹಕಾರಿಯಾಗಲಿದೆ.  ಈ ದಿಸೆಯಲ್ಲಿ ಈ ಭಾಗಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯಾಧಿಕಾರಿಗಳು, ಆಸಕ್ತಿ ವಹಿಸಿ ಶ್ರಮಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವೈದ್ಯರಲ್ಲಿ ಮನವಿ ಮಾಡಿದರು.
  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಬಿ.ಜಿ. ಕೃಷ್ಣಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ವ್ಯಕ್ತಿಯ ಮರಣಕ್ಕೆ ಸಂಬಂಧಿಸಿದಂತೆ, ವೈದ್ಯರುಗಳು ನೀಡುವ ಪ್ರಮಾಣ ಪತ್ರಗಳ ಪೈಕಿ ಶೇ. ೫೦ ರಿಂದ ೬೦ ರಷ್ಟು ಪ್ರಮಾಣ ಪತ್ರಗಳು ಅಸಮರ್ಪಕವಾಗಿರುವುದನ್ನು ಗಮನಿಸಲಾಗಿದ್ದು, ಈ ಕಾರಣದಿಂದಾಗಿಯೇ ವೈದ್ಯಾಧಿಕಾರಿಗಳಿಗೆ ಅರಿವು ಮೂಡಿಸಲು ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವಸ್ವಾಮಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ ಅವರು ಉಪಸ್ಥಿತರಿದ್ದರು.  ಕಾರ್ಯಾಗಾರದ ಅಂಗವಾಗಿ ಹುಬ್ಬಳ್ಳಿಯ ಕಿಮ್ಸ್‌ನ ತಜ್ಞ ವೈದ್ಯರುಗಳಾದ ಡಾ. ಬಿ.ಜಿ. ಶೆಲವಡಿ, ಡಾ. ಎ.ಎ. ನದಾಫ್ ಅವರು ವಿಶೇಷ ಉಪನ್ಯಾಸ ನೀಡಿದರು.  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಭಾಗವಹಿಸಿದ್ದರು.
Please follow and like us:
error