ಕುತೂಹಲ ಸೃಷ್ಟಿಸಿದ ರಾಜ್ಯ ರಾಜಕಾರಣ

ಡಿವಿ, ಈಶ್ವರಪ್ಪ ದಿಲ್ಲಿಗೆ ದೌಡು : 
ಬೆಂಗಳೂರು, ಡಿ. : ರಾಜ್ಯ ಬಿಜೆಪಿಯಲ್ಲಿ ನಾಯತ್ವಕ್ಕಾಗಿ ನಡೆಯುತ್ತಿರುವ ಜಟಾಪಟಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಮಂಗಳವಾರ ರಾತ್ರಿ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ನಂತರ ಸದಾನಂದ ಗೌಡ ಹಾಗೂ ಈಶ್ವರಪ್ಪ ಬೆಂಗಳೂರಿನಿಂದ ವಿಮಾನದಲ್ಲಿ ಹೊಸ ದಿಲ್ಲಿಗೆ ತೆರಳಲಿದ್ದು, ಬುಧವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರೊಂದಿಗೆ ಚರ್ಚಿಸಲಿ ದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿ.22ರಂದು ವಿಧಾನ ಪರಿಷತ್ ಚುನಾ ವಣೆಯಲ್ಲಿ ಜಯ ಗಳಿಸಿದ ನಂತರ ಸದಾನಂದ ಗೌಡ ಹೊಸದಿಲ್ಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದರು. ನಾಳೆ (ಡಿ.28) ಮತ್ತೆ ವರಿಷ್ಠರ ಭೇಟಿ ರಾಜಕೀಯ ಕುತೂಹಲ ಮೂಡಿಸಿದ್ದು, ಬಿಜೆಪಿಯಲ್ಲಿ ನಾಯಕತ್ವದ ಒಳ ಜಗಳ ಇರುವುದು ಗುಟ್ಟಾಗೇನೂ ಉಳಿದಿಲ್ಲ.
ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತನ್ನ ಬೆಂಬಲಿಗ ಶಾಸಕರು ಹಾಗೂ ಸಂಸದರ ಜೊತೆ ವರಿಷ್ಠರನ್ನು ಭೇಟಿ ಮಾಡಿ ‘ಜನವರಿ 20ರೊಳಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡ ಬೇಕು. ಇಲ್ಲವಾದರೆ ತನ್ನ ದಾರಿ ತನಗೆ’ ಎಂದು ಎಚ್ಚರಿಕೆ ನೀಡಿರುವುದು ಬಿಜೆಪಿ ವರಿಷ್ಠರಿಗೆ ತೀವ್ರ ತಲೆ ನೋವಾಗಿ ಪರಿಣಮಿಸಿದೆ. ಬಂಗಾರಪ್ಪನವರ ಅಂತ್ಯಕ್ರಿಯೆಗೆ ತೆರಳ ಬೇಕಿದ್ದ ಸದಾನಂದ ಗೌಡ ವಿಮಾನ ನಿಲ್ದಾಣದಿಂದ ದಿಢೀರ್ ಹಿಂದಿರುಗಿ ಪಕ್ಷದ ಅಧ್ಯಕ್ಷ ಈಶ್ವರಪ್ಪ, ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್.ಅಶೋಕ್, ಗೋವಿಂದ ಕಾರಜೋಳ ಮತ್ತಿತರ ಮುಖಂಡರೊಂದಿಗೆ ಚರ್ಚಿಸಿದ್ದಾರೆ.
ಅಲ್ಲದೆ, ಸದಾನಂದಗೌಡ ತಮ್ಮ ಮುಖ್ಯಮಂತ್ರಿ ಸ್ಥಾನ ಭದ್ರಪಡಿಸಿಕೊಳ್ಳಲು ವರಿಷ್ಠರ ಭೇಟಿ ಅಚ್ಚರಿ ಮೂಡಿಸಿದೆ. ಮೇಲ್ಕಂಡ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯ ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಸದಾನಂದಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪರ ಮಧ್ಯೆ ನಾಯಕತ್ವಕ್ಕಾಗಿನ ಗುದ್ದಾಟ ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿವೆ.
ಲೋಕಸಭಾ ಸ್ಥಾನಕ್ಕೆ ಇಂದು ರಾಜೀನಾಮೆ: ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಇಂದು ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸದಾನಂದಗೌಡ, ರಾಜ್ಯದ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯ ಎದುರಾಗಿದೆ.
Please follow and like us:
error