ಹಝಾರೆ ವಿರುದ್ಧ ಬಿಜೆಪಿ ಡಬಲ್ ಗೇಮ್! : ಯಶವಂತ ಸಿನ್ಹಾ ಸಹಿತ ಮೂವರು ನಾಯಕರಿಂದ ರಾಜೀನಾಮೆ ಬೆದರಿಕೆ

ಹೊಸದಿಲ್ಲಿ, ಆ.24: ಅಣ್ಣಾ ಹಝಾರೆಯವರ ಜನಲೋಕಪಾಲದ ಕುರಿತಂತೆ ಪಕ್ಷವು ಗಂಭೀರವಾಗಿ ಕ್ರಮ ಕೈಗೆತ್ತಿಕೊಳ್ಳುತ್ತಿಲ್ಲವೆಂದು ಯಶವಂತ ಸಿನ್ಹಾ ಸಹಿತ ಮೂವರು ಬಿಜೆಪಿ ನಾಯಕರು ಬುಧವಾರ ಆರೋಪಿಸಿದ್ದು, ಸಂಸತ್ತಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹಾಲಿ ಸಂಸತ್ ಅಧಿವೇಶನ ಹಾಗೂ ಲೋಕಪಾಲ ಮಸೂದೆಯ ಬಗ್ಗೆ ಪ್ರಧಾನಿ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಅನುಸರಿಸಬೇಕಾದ ಕಾರ್ಯವ್ಯೆಹದ ಕುರಿತು ಚರ್ಚಿಸಲು ಕರೆದಿದ್ದ ಬಿಜೆಪಿ ಸಂಸದೀಯ ಪಕ್ಷದ ಸಭೆ ಯಲ್ಲಿ ಯಶವಂತ ಸಿನ್ಹಾ, ಶತ್ರುಘ್ನ ಸಿನ್ಹಾ ಹಾಗೂ ಉದಯ್ ಸಿಂಗ್, ನಾಯಕರ ಹುಬ್ಬೇರುವಂತೆ ಮಾಡಿದರು.
ಅಣ್ಣಾ ಹಝಾರೆ ಬೆಂಬಲಿಗರು ಹಝಾರಿಬಾಗ್‌ನ ಸಂಸದ ಯಶವಂತ ಸಿನ್ಹಾರ ಕಚೇರಿಗೆ ಮುತ್ತಿಗೆ ಹಾಕಿದ್ದರು. ಸಂಸದರ ಮನೆಗಳ ಮುಂದೆ ಪ್ರತಿಭಟಿಸಿ ಲೋಕಪಾಲ ಮಸೂದೆಯ ಬಗ್ಗೆ ಅವರ ಬದ್ಧತೆ ಪಡೆಯುವಂತೆ ಅಣ್ಣಾ ನೀಡಿದ್ದ ಕರೆಯನುಸಾರ ಹಝಾರಿಬಾಗ್‌ನ ಅವರ ಬೆಂಬಲಿಗರು, ಸಂಸತ್ತಿನಲ್ಲಿ ಮಸೂದೆಯನ್ನು ಬೆಂಬಲಿಸುವಂತೆ ಸಿನ್ಹಾರಿಗೆ ಮನವಿ ಮಾಡಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಮುಂದಕ್ಕೊಯ್ಯಲು ಅಗತ್ಯವಾದ ಲೋಕಪಾಲ ಮಸೂದೆಯ ಕುರಿತು ಪ್ರಬಲ ನಿಲುವೊಂದಕ್ಕೆ ಬರಲು ಬಿಜೆಪಿ ವಿಫಲವಾಗಿದೆಯೆಂದು ಯಶವಂತ್ ಆರೋಪಿಸಿದ್ದಾರೆ.
ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಅವರು ಆಶ್ಚರ್ಯ ಮೂಡಿಸಿದರು. ಸಭೆಯು ಹಝಾರೆಯವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ನಿರಶನ ಕೈಬಿಡುವಂತೆ ಅವರನ್ನು ವಿನಂತಿಸಿದೆ. ಬಿಜೆಪಿಯು ಸ್ಪಷ್ಟ ನಿರ್ಧಾರವೊಂದನ್ನು ಕೈಗೊಳ್ಳುವ ಬದಲು ಹಝಾರೆಯವರ ವಿಷಯದಲ್ಲಿ ‘ತುಟಿ ಸೇವೆ’ ನಡೆಸುತ್ತಿದೆ ಹಾಗೂ ಕಾಂಗ್ರೆಸ್‌ನ ವಿರುದ್ಧವಷ್ಟೇ ಹಝಾರೆಯವರನ್ನು ಬಳಸಿಕೊಳ್ಳುತ್ತಿದೆಯೆಂದು ಶತ್ರುಘ್ನ ಸಿನ್ಹಾ ಆರೋಪಿಸಿದ್ದಾರೆ. ಆದಾಗ್ಯೂ, ಯಶವಂತ ಸಿನ್ಹಾರ ರಾಜೀನಾಮೆ ಕೊಡುಗೆಯ ಪ್ರಶ್ನೆಯನ್ನು ಹಗುರಗೊಳಿಸಿರುವ ಹಿರಿಯ ಬಿಜೆಪಿ ನಾಯಕ ಎಸ್.ಎಸ್. ಅಹ್ಲುವಾಲಿಯಾ, ಇಂತಹ ಸಭೆಗಳಲ್ಲಿ ಭಿನ್ನ ಧ್ವನಿಗಳು ಕೇಳಿ ಬರುವುದು ಸಹಜ. ಆದರೆ, ಅಂತಿಮ ನಿರ್ಧಾರವು ಕಾರ್ಯರೂಪಕ್ಕೆ ಬರುತ್ತದೆ ಎಂದಿದ್ದಾರೆ
Please follow and like us:
error

Related posts

Leave a Comment