೨೪ರಂದು ಜೆಡಿಎಸ್‌ನ ಯುವಚೇತನ ಪ್ರವಾಸ ಚಾಲನೆ

ಕೊಪ್ಪಳ ,೨೧-  ಇದೇ ದಿ. ೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ನ ಯುವಚೇತನ ಪ್ರವಾಸ ಚಾಲನೆ ಪಡೆಯಲಿದೆ ಎಂದು ಜೆಡಿಎಸ್‌ನ ಮುಖಂಡ ಪ್ರದೀಪಗೌಡ ಮಾಲೀಪಾಟೀಲ್ ಹೇಳಿದರು.
ಕೊಪ್ಪಳದ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ಅಂದು ಬೆಳಿಗ್ಗೆ ೧೦ ಗಂಟೆಗೆ ಜೆಡಿಎಸ್‌ನ ಯುವ  ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹಾಗೂ ನಟಿ ಪೂಜಾ ಗಾಂಧಿ ನಗರದ ಗೌರಿಶಂಕರ ದೇವಸ್ಥಾನಕ್ಕೆ ಆಗಮಿಸಿ ಯುವ ಚೇತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯ ಕ್ರಮದಲ್ಲಿ ಸುಮಾರು ೨ ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಪಕ್ಷವನ್ನು ಇದೀಗ ರಾಜ್ಯಾದ್ಯಂತ ಬಲಪಡಿಸುವ ಸಂಘಟನಾತ್ಮಕ ಕಾರ್ಯಗಳು ನಡೆದಿರುವುದರಿಂದ ಜಿಲ್ಲೆಯಲ್ಲಿ ಶೀಘ್ರವೇ ಎಲ್ಲ ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಕೊಪ್ಪಳ ಜಿಲ್ಲೆಯಲ್ಲಿ ಬಲಿಷ್ಠವಾಗಲಿದೆ ಎಂದು ತಿಳಿಸಿದರು.
ಕೊಪ್ಪಳದಲ್ಲಿ ಕೇಂದ್ರೀಯ ವಿದ್ಯಾಲಯ ರದ್ದಾಗುವ ಭೀತಿ ಪಾಲಕರಿಗೆ ಕಾಡುತ್ತಿರುವುದು ನಿಜಕ್ಕೂ ದುರಂತ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಹೆಜ್ಜೆ ತಪ್ಪಾಗಿದೆ. ಈ ಕುರಿತು ಹೋರಾಟ ನಡೆಸಲು ಕಾರ್ಯಕರ್ತರ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು. ಜಿಲ್ಲೆಯ ಯಾವುದೇ ಸಮಸ್ಯೆಗೆ ಜೆಡಿಎಸ್ ಸ್ಪಂದಿಸಲಿದೆ. ಫೆ.೨೪ ರಂದು ನಡೆಯಲಿರುವ ಕಾರ್ಯ ಕ್ರಮದಲ್ಲಿ ವಿವಿಧ ಪಕ್ಷಗಳ ಅನೇಕ ಕಾರ್ಯಕರ್ತರು ಜೆಡಿಎಸ್ ಸೇರಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಕೆ.ಎಂ. ಸೈಯದ್, ವೀರೇಶ ಮಹಾಂತಯ್ಯನಮಠ, ರಮೇಶಗೌಡ, ಶೇಖಣ್ಣ, ಜಗದೀಶಗೌಡ ಮತ್ತಿತರರು ಇದ್ದರು.
Please follow and like us:
error