ಕೊಪ್ಪಳದಲ್ಲಿ ಸೇನಾ ನೇಮಕಾತಿ ರ್‍ಯಾಲಿ ಪ್ರಾರಂಭ : ಯುವಕರಿಗೆ ಉತ್ತಮ ಅವಕಾಶ

ಕೊಪ್ಪಳ ಫೆ.  ಭಾರತೀಯ ಭೂಸೇನೆಯಲ್ಲಿನ ವಿವಿಧ ಹುದ್ದೆಗಳಿಗೆ ವಿಶೇಷ ನೇಮಕಾತಿ ರ್‍ಯಾಲಿ ಫೆ. ೩ ರಿಂದ ಕೊಪ್ಪಳದ ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ಪ್ರಾರಂಭಗೊಂಡಿದ್ದು, ನೇಮಕಾತಿ ರ್‍ಯಾಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ನೇಮಕಾತಿ ರ್‍ಯಾಲಿ ಸುವ್ಯವಸ್ಥೆಯಿಂದ ಸಾಗಿದೆ ಎಂದು ಬೆಳಗಾವಿಯ ಸೇನಾ ನೇಮಕಾತಿ ಪ್ರಾಧಿಕಾರದ ಕರ್ನಲ್ ವಿಧಾನ್ ಶರಣ್ ಅವರು ಅಭಿಪ್ರಾಯಪಟ್ಟರು.
       ಸೇನಾ ನೇಮಕಾತಿ ರ್‍ಯಾಲಿ ಪ್ರಾರಂಭ ಕುರಿತಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಭೂಸೇನೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗಾಗಿ ಬೆಳಗಾವಿ ಹಾಗೂ ಬೆಂಗಳೂರಿನ ಸೇನಾ ನೇಮಕಾತಿ ಪ್ರಾಧಿಕಾರವು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ. ೩ ರಿಂದ ೧೦ ರವರೆಗೆ ೮ ದಿನಗಳ ಕಾಲ ವಿಶೇಷ ರ್‍ಯಾಲಿ ಏರ್ಪಡಿಸಿದೆ.  ನೇಮಕಾತಿ ರ್‍ಯಾಲಿಗಾಗಿ ಕರ್ನಾಟಕ ಮತ್ತು ಕೇರಳ ರಾಜ್ಯದಿಂದ ಸೇನಾ ಅಧಿಕಾರಿಗಳು, ತಜ್ಞ ವೈದ್ಯರು ಸೇರಿದಂತೆ ಸುಮಾರು ೭೦ ಜನ ಆಗಮಿಸಿದ್ದಾರೆ.  ಸೇನಾ ರ್‍ಯಾಲಿಗಾಗಿ ಕೊಪ್ಪಳ ಜಿಲ್ಲಾಡಳಿತ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿದ್ದು, ಬ್ಯಾರಿಕೇಡ್ ನಿರ್ಮಾಣ, ಕ್ರೀಡಾಂಗಣದ ವ್ಯವಸ್ಥೆ, ಕಂಪ್ಯೂಟರ್ ಅಳವಡಿಕೆ ಸೇರಿದಂತೆ ಉತ್ತಮ ವ್ಯವಸ್ಥೆಯನ್ನು ಒದಗಿಸಿದೆ.  ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ, ಕೊಪ್ಪಳದಲ್ಲಿ ಒದಗಿಸಿರುವ ವ್ಯವಸ್ಥೆ ಅತ್ಯುತ್ತಮವಾಗಿದೆ ಎಂದು ಶ್ಲಾಘಿಸಿದರು. ನೇಮಕಾತಿ ರ್‍ಯಾಲಿಯ ಮೊದಲ ದಿನವಾದ  ಫೆ. ೩ ರಂದು ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಹಾಗೂ ಸೋಲ್ಜರ್ ನರ್ಸಿಂಗ್ ಅಸಿಸ್ಟಂಟ್ಸ್ ಹುದ್ದೆಗೆ ಬೆಳಗಾವಿ, ಬೀದರ, ಬಳ್ಳಾರಿ, ಕೊಪ್ಪಳ, ರಾಯಚೂರು, ಗುಲಬರ್ಗಾ ಹಾಗೂ ಯಾದಗಿರಿ ಜಿಲ್ಲೆಯ ಸುಮಾರು ೧೪೫೦ ಅಭ್ಯರ್ಥಿಗಳು ಭಾಗವಹಿಸಿದ್ದು,  ಜಿಲ್ಲಾಡಳಿತ ಕೈಗೊಂಡ ಪೂರ್ವಭಾವಿ ತರಬೇತಿಯ ಫಲವಾಗಿ ಈ ಬಾರಿ ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳೂ ಸೇರಿದಂತೆ ಸುಮಾರು ೩೩೦ ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ.  ಫೆ. ೪ ರಂದು ರಾಜ್ಯದ ಇತರೆ ಜಿಲ್ಲೆಯ ಅಭ್ಯರ್ಥಿಗಳು ಅಂದರೆ ಬೆಳಗಾವಿ, ಬೀದರ, ಬಳ್ಳಾರಿ, ಕೊಪ್ಪಳ, ರಾಯಚೂರು, ಗುಲಬರ್ಗಾ ಹಾಗೂ ಯಾದಗಿರಿ ಜಿಲ್ಲೆ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸುವರು. ಫೆ. ೫ ರಂದು ಸೋಲ್ಜರ್ ಜನರಲ್ ಡ್ಯೂಟಿ ಹಾಗೂ ಸೋಲ್ಜರ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ ಬೀದರ, ಬಳ್ಳಾರಿ, ಕೊಪ್ಪಳ, ರಾಯಚೂರ, ಗುಲಬರ್ಗಾ ಹಾಗೂ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು,  ಫೆ. ೬ ರಂದು ಸೋಲ್ಜರ್ ಜನರಲ್ ಡ್ಯುಟಿ ಹಾಗೂ ಸೋಲ್ಜರ್ ಟ್ರೇಡ್ಸ್‌ಮನ್ ಹುದ್ದೆಗೆ ಬೆಳಗಾವಿ, ಖಾನಾಪೂರ ತಾಲೂಕಿನ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಫೆಬ್ರುವರಿ ೭ ರಂದು ಗೋಕಾಕ, ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ಅಭ್ಯರ್ಥಿಗಳು, ಫೆಬ್ರುವರಿ ೮ ರಂದು ಬೈಲಹೊಂಗಲ, ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಅಭ್ಯರ್ಥಿಗಳು, ಮತ್ತು ಫೆಬ್ರುವರಿ ೯ ರಂದು ಅಥಣಿ, ಹುಕ್ಕೇರಿ ತಾಲೂಕಿನ ಅಭ್ಯರ್ಥಿಗಳು ಹಾಗೂ ಫೆಬ್ರುವರಿ ೧೦ ರಂದು ಮಾಜಿ ಸೈನಿಕರಿಗೆ  ಹಾಗೂ ಎಲ್ಲ ಎನ್.ಸಿ.ಸಿ. ಕ್ರೀಡಾಪಟು ಅಭ್ಯರ್ಥಿಗಳಿಗೆ ರ್‍ಯಾಲಿ ನಡೆಯಲಿದೆ ಎಂದು ಬೆಳಗಾವಿಯ ಸೇನಾ ನೇಮಕಾತಿ ಪ್ರಾಧಿಕಾರದ ಕರ್ನಲ್ ವಿಧಾನ್ ಶರಣ್ ಅವರು ಹೇಳಿದರು.
       ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಫ್. ಬೀರನಾಯ್ಕರ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಎಸ್.ಎಂ. ತುಕ್ಕರ್ ಸೇರಿದಂತೆ ಸೇನೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
Please follow and like us:
error