ಸಾಹಿತ್ಯಕ್ತರಿಗೆ ಜಿಲ್ಲಾ ದರ್ಶನ

ಗಂಗಾವತಿ: ನಗರದಲ್ಲಿ ನಡೆಯುವ 78ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಕ್ತರಿಗೆ ಕೇವಲ ಸಾಹಿತ್ಯದ ರಸದೌತಣ ಉಣಬಡಿಸುವುದು ಮಾತ್ರವಲ್ಲ,  ಜಿಲ್ಲೆಯ ಸಾಂಸ್ಕೃತಿಕ, ಸ್ಮಾರಕ ಪರಂಪರೆಯನ್ನು ಬಿಂಬಿಸುವ `ಜಿಲ್ಲಾ ದರ್ಶನ` ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ದರ್ಶನ ಯೋಜನೆಯಡಿ ಕೊಪ್ಪಳ ಸೇರಿದಂತೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿರುವ ಐತಿಹಾಸಿಕ ಸ್ಮಾರಕ, ಯಾತ್ರಾ ಸ್ಥಳಗಳನ್ನು ಸಾಹಿತ್ಯಾಸಕ್ತರಿಗೆ ಸಾರಿಗೆ ವಾಹನದಲ್ಲಿ ಕರೆದೊಯ್ದು ಪರಿಚಯಿಸುವ  ಉದ್ದೇಶ ಜಿಲ್ಲಾ ದರ್ಶನ ಸಮಿತಿ ಹೊಂದಿದೆ. 
ನೆರೆಹೊರೆ ಜಿಲ್ಲೆ ಮತ್ತು ರಾಜ್ಯದ ಗಮನ ಸೆಳೆದ ಜಿಲ್ಲೆಯ ವಿವಿಧ ತಾಲ್ಲೂಕಿನ ಸ್ಥಳಗಳಾದ  ಗವಿಮಠ, ಇಟಗಿ ಮಹಾದೇವ ಮಂದಿರ, ಕುಷ್ಟಗಿಯ ಪುರ, ಕನಕಗಿರಿಯ ಕನಕಾಚಲ ಪತಿ ಮಂದಿರ ಮೊದಲಾದ ಸ್ಥಳಗಳನ್ನು ಆಸಕ್ತರಿಗೆ ತೋರಿಸುವ ಯೋಜನೆ ರೂಪಿಸಲಾಗಿದೆ. 
ಇನ್ನು ವಿಜಯನಗರದ ಮೂಲ ರಾಜಧಾನಿ, ರಾಮಾಯಣದಂತಹ ಪುರಾಣ ಕಥಾನಕದೊಂದಿಗೆ ಥಳಕು ಹಾಕಿಕೊಂಡಿರುವ ಆನೆಗೊಂದಿ ಸುತ್ತಲಿನ ಹತ್ತಾರು ಪ್ರಾಚೀನ ಐತಿಹಾಸಿಕ ಹಿನ್ನೆಲೆಯುಳ್ಳ ಯಾತ್ರಾ ಸ್ಥಳ, ಸ್ಮಾರಕಗಳನ್ನು  ವೀಕ್ಷಿಸುವ ಭಾಗ್ಯ ಸಾಹಿತ್ಯಾಸಕ್ತರಿಗೆ ದೊರೆಯಲಿದೆ. 
ಈಗಾಗಲೆ ಜಿಲ್ಲಾ ದರ್ಶನ ಸಮಿತಿಯು ಜಿಲ್ಲೆಯಲ್ಲಿರುವ ಆಯಾ ಪ್ರಸಿದ್ದ ಸ್ಮಾರಕ, ಸ್ಥಳಗಳ ಮಾಹಿತಿ ನೀಡುವ ಉದ್ದೇಶಕ್ಕೆ ಸಂಶೋಧಕ ಹಾಗೂ ಇತಿಹಾಸಕಾರ ಡಾ, ಶರಣಬಸಪ್ಪ ಕೋಲ್ಕಾರ ನೇತೃತ್ವದಲ್ಲಿ ಒಂದು ಕಿರುಹೊತ್ತಿಗೆ ತರುತ್ತಿದೆ.
ಅದರಲ್ಲಿ ಸ್ಮಾರಕ, ಯಾತ್ರಾ ಸ್ಥಳದ ಮಾಹಿತಿ, ಹಿನ್ನೆಲೆ, ಸಮ್ಮೇಳನದ ನಡೆಯುವ ಕೇಂದ್ರ ಸ್ಥಳವಾದ ನಗರದಿಂದ ಎಷ್ಟು ದೂರವಾಗಲಿದೆ. ಅಲ್ಲಿಗೆ ತೆರಳಲು ಇರುವ ಸಾರಿಗೆ ಸಂಪರ್ಕ, ಸೌಲಭ್ಯ ಮೊದಲಾದ ಮಾಹಿತಿ ಒಳಗೊಂಡ ಸಂಚಿಕೆ ಸಿದ್ದವಾಗುತ್ತದೆ.
ಅಲ್ಲದೇ ಆಸಕ್ತ ಪ್ರವಾಸಿಗರಿಗೆ ಹೆಚ್ಚುವರಿ ಮಾಹಿತಿ ನೀಡಲು ಸಮ್ಮೇಳನದಲ್ಲಿ ಎರಡು ಪ್ರತ್ಯೇಕ ಕೌಂಟರ್ ತೆಗೆದು ಮಾಹಿತಿ ನೀಡುವ ಉದ್ದೇಶ ಸಂಘಟಕರಿಗಿದೆ.           ಪ್ರಜಾವಾಣಿ ವಾರ್ತೆ – ಎಂ.ಜೆ.ಶ್ರೀನಿವಾಸ್
Please follow and like us:
error