You are here
Home > Koppal News > ಗ್ಯಾಸ್ ಸಂಪರ್ಕದ ಕಾರ್ಡ್ ನೀಡದಿದ್ದಲ್ಲಿ ಸೇವಾ ನ್ಯೂನತೆ- ಗ್ರಾಹಕರ ವೇದಿಕೆ ತೀರ್ಪು

ಗ್ಯಾಸ್ ಸಂಪರ್ಕದ ಕಾರ್ಡ್ ನೀಡದಿದ್ದಲ್ಲಿ ಸೇವಾ ನ್ಯೂನತೆ- ಗ್ರಾಹಕರ ವೇದಿಕೆ ತೀರ್ಪು

: ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ನೀಡುವ ಏಜೆನ್ಸಿಗಳು ಗ್ರಾಹಕರಿಗೆ ಕೂಡಲೆ ಗ್ಯಾಸ್ ಸಂಪರ್ಕದ ಕಾರ್ಡ್ ನೀಡದಿದ್ದಲ್ಲಿ, ಅದು ಸೇವಾ ನ್ಯೂನತೆಯಾಗುತ್ತದೆ ಎಂದು ಕೊಪ್ಪಳದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.     ಕುಷ್ಟಗಿ ತಾಲೂಕಿನ ಶರಣಪ್ಪ ಮತ್ತು ಅಲ್ಲಿನ ಪ್ರಭು ಗ್ಯಾಸ್ ಡಿಸ್ಟ್ರಿಬ್ಯೂಟರ್ ಏಜೆನ್ಸಿ ಅವರೊಂದಿಗಿನ ಪ್ರಕರಣವೊಂದರಲ್ಲಿ ಕೊಪ್ಪಳದ ಗ್ರಾಹಕರ ವೇದಿಕೆ ಈ ತೀರ್ಪು ನೀಡಿದೆ.  ಬೆಂಗಳೂರಿನಲ್ಲಿ ವಾಸವಿದ್ದ ಶರಣಪ್ಪ ಅವರು ಅಲ್ಲಿನ ಗ್ಯಾಸ್ ಏಜೆನ್ಸಿಯಿಂದ ಗೃಹ ಬಳಕೆಗೆ ಗ್ಯಾಸ್ ಸಂಪರ್ಕ ಪಡೆದಿದ್ದರು.  ಈ ಗ್ಯಾಸ್ ಸಂಪರ್ಕವನ್ನು ಕುಷ್ಟಗಿಗೆ ವರ್ಗಾವಣೆಗೊಳಿಸಲು, ವರ್ಗಾವಣೆ ಪತ್ರ ಹಾಗೂ 1400 ರೂ. ಗಳ ಶುಲ್ಕವನ್ನು ಕುಷ್ಟಗಿಯ ಪ್ರಭು ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ಅವರಿಗೆ ಪಾವತಿಸಿದರು.  ಪ್ರಭು ಗ್ಯಾಸ್ ಏಜೆನ್ಸಿ ಅವರು ಶರಣಪ್ಪ ಅವರಿಂದ 2140 ರೂ. ಗಳ ಮೊತ್ತ ಪಡೆದು, 1400 ರೂ. ಗಳಿಗೆ ಗ್ಯಾಸ್ ಸಂಪರ್ಕದ ವೋಚರ್ ಮಾತ್ರ ನೀಡಿ, ಉಳಿದ ಮೊತ್ತಕ್ಕೆ ಯಾವುದೇ ರಸೀದಿ ನೀಡಿಲ್ಲ.  ಅಲ್ಲದೆ ಗ್ಯಾಸ್ ಸಂಪರ್ಕದ ಕಾರ್ಡ್ ಕೂಡ ನೀಡಲಿಲ್ಲ.  ಗ್ಯಾಸ್ ಸಂಪರ್ಕದ ಕಾರ್ಡ್ ಇಲ್ಲದಿರುವುದರಿಂದ ರೀಫಿಲ್ ಗ್ಯಾಸ್ ಸಿಲಿಂಡರ್ ಪಡೆಯಲು ತೊಂದರೆಯಾಗುತ್ತಿದೆ ಅಲ್ಲದೆ ಏಜೆನ್ಸಿಯವರು ಹೆಚ್ಚಿನ ಮೊತ್ತ ಪಡೆದು, ಯಾವುದೇ ರಸೀದಿ ನೀಡದಿರುವುದು ಸೇವಾ ನ್ಯೂನತೆ ಎಂದು ಪರಿಗಣಿಸಿ 95 ಸಾವಿರ ರೂ. ಪರಿಹಾರವನ್ನು ದೊರಕಿಸುವಂತೆ ಶರಣಪ್ಪ ಅವರು ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.  ಪ್ರಕರಣ ಕುರಿತು ಪ್ರಭು ಗ್ಯಾಸ್ ಏಜೆನ್ಸಿ ಅವರಿಗೆ ಸಮನ್ಸ್ ಜಾರಿಗೊಳಿಸಿದರೂ, ವೇದಿಕೆಯ ಮುಂದೆ ಹಾಜರಾಗಿರುವುದಿಲ್ಲ.  ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ಪ್ರಭಾರಿ ಸದಸ್ಯ ಆರ್. ಬಂಡಾಚಾರ್ ಅವರು,  ಗ್ಯಾಸ್ ಸಂರ್ಪದ ವೋಚರ್ ಮತ್ತು ಗ್ರಾಹಕರ ಸಂಖ್ಯೆಯನ್ನು ನೀಡಿದ ಕೂಡಲೆ ಗ್ಯಾಸ್ ಸಂಪರ್ಕದ ಕಾರ್ಡ್ ಅನ್ನು ಸಹ ಏಜೆನ್ಸಿಯವರು ನೀಡಬೇಕು.  ಏಜೆನ್ಸಿಯವರು ಇದನ್ನು ಪಾಲಿಸದಿರುವುದು ಸೇವಾ ನ್ಯೂನತೆ ಎಂದು ಪರಿಗಣಿಸಿ, ಪರಿಹಾರವಾಗಿ 2000 ರೂ. ಮತ್ತು ಪ್ರಕರಣದ ಖರ್ಚು 3000 ರೂ. ಗಳನ್ನು ಎಂಟು ವಾರಗಳ ಒಳಗಾಗಿ ಶೇ. 10 ರ ಬಡ್ಡಿಯೊಂದಿಗೆ ಶರಣಪ್ಪ ಅವರಿಗೆ ಪಾವತಿಸಬೇಕು ಎಂದು ತೀರ್ಪಿನಲ್ಲಿ ಆದೇಶಿಸಿದ್ದಾರೆ.

Leave a Reply

Top