ಅಂಗನವಾಡಿ ಮಕ್ಕಳಿಗೆ ಮೊಟ್ಟೆ : ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಜಿ.ಪಂ. ಅಧ್ಯಕ್ಷರ ಸೂಚನೆ

ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಸಲುವಾಗಿ ಪ್ರತಿ ತಿಂಗಳು ಅಂಗನವಾಡಿ ಕಾರ್ಯಕರ್ತರ ಬ್ಯಾಂಕ್ ಖಾತೆಗೆ ಅನುದಾನ ಜಮಾ ಮಾಡುತ್ತಿರುವ ಪದ್ಧತಿಯನ್ನು ಕೈಬಿಟ್ಟು, ಕೂಡಲೆ ಟೆಂಡರ್ ಕರೆದು, ಮಕ್ಕಳಿಗೆ ಸಮರ್ಪಕ ಮೊಟ್ಟೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಜಿ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲೆಯ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಿಸುವ ನಿಟ್ಟಿನಲ್ಲಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆ ಜಾರಿಯಲ್ಲಿದ್ದು, ಒಂದು ಮೊಟ್ಟೆಗೆ ೦೪ ರೂ. ನಂತೆ ದರ ನಿಗದಿಪಡಿಸಿ, ಪ್ರತಿ ತಿಂಗಳು ಅನುದಾನವನ್ನು ಆಯಾ ಅಂಗನವಾಡಿ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.  ಆದರೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಸಮರ್ಪಕವಾಗಿ ಮೊಟ್ಟೆಯನ್ನು ವಿತರಿಸುತ್ತಿಲ್ಲ.  ಇದರಿಂದಾಗಿ ಮಕ್ಕಳ ಅಪೌಷ್ಠಿಕತೆ ನಿವಾರಣೆಯೂ ಆಗುತ್ತಿಲ್ಲ ಎನ್ನುವ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಹಲವು ಬಾರಿ ಎಚ್ಚರಿಕೆಯನ್ನು ನೀಡಿದರೂ ಯಾವುದೇ ಸುಧಾರಣೆಯಾಗಿಲ್ಲ ಎಂದು ಜಿ.ಪಂ. ಸದಸ್ಯರು ಸಭೆಯ ಗಮನಕ್ಕೆ ತಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷರು, ಮೊಟ್ಟೆ ಖರೀದಿಗೆ ಅಂಗನವಾಡಿ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ಅನುದಾನ ಜಮಾ ಮಾಡುವ ವ್ಯವಸ್ಥೆಯನ್ನು ಕೂಡಲೆ ಕೈಬಿಡಬೇಕು.  ತಕ್ಷಣವೇ ಟೆಂಡರ್ ಕರೆದು, ಉತ್ತಮ ಗುಣಮಟ್ಟದ ಮೊಟ್ಟೆಯನ್ನು ಸಮರ್ಪಕವಾಗಿ ಪೂರೈಕೆ ಮಾಡುವುದರ ಬಗ್ಗೆ ಖಾತ್ರಿ ಪಡಿಸಿಕೊಂಡು, ಅಂತಹ ಏಜೆನ್ಸಿಗೆ ಟೆಂಡರ್ ನೀಡಬೇಕು.  ಯಾವುದೇ ಕಾರಣಕ್ಕೂ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆಯಲ್ಲಿ ಲೋಪ-ದೋಷವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರಿಗೆ ಸೂಚನೆ ನೀಡಿದರು.  ಗಂಗಾವತಿ ತಾಲೂಕು ಚಿಕ್ಕರಾಂಪುರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡವೂ ನಿರ್ಮಾಣಗೊಂಡಿದೆ.  ಮಕ್ಕಳೂ ಸಹ ಇದ್ದಾರೆ. ಆದರೆ ಅಧಿಕೃತವಾಗಿ ಅಂಗನವಾಡಿ ಕೇಂದ್ರ ಮಂಜೂರಾತಿ ಆಗಿಲ್ಲ ಎಂದು ಜಿ.ಪಂ. ಸದಸ್ಯೆ ವಿಜಯಲಕ್ಷ್ಮಿ ರಾಮಕೃಷ್ಣ ಅವರು ಸಭೆಯ ಗಮನಕ್ಕೆ ತಂದರು.  ಈ ಕುರಿತು ಕೂಡಲೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.  ಅಂಗನವಾಡಿ ಕೇಂದ್ರ ಮಂಜೂರಾತಿಗೆ ಶೀಘ್ರ ಕ್ರಮ ಜರುಗಿಸಬೇಕು ಎಂದು ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.
೪೯೬೧೦ ಶೌಚಾಲಯ ಗುರಿ : ೨೦೧೫-೧೬ ನೇ ಸಾಲಿಗಾಗಿ ಕೊಪ್ಪಳ ಜಿಲ್ಲೆಗೆ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ೪೯೬೧೦ ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ನೀಡಲಾಗಿದೆ.  ಕಳೆದೆರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ವಿಷಯದಲ್ಲಿ ಉತ್ತಮ ಸಾಧನೆಯಾಗಿದ್ದು, ಈ ವರ್ಷವೂ ನಿಗದಿತ ಗುರಿ ಸಾಧನೆಗೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಾಮಾಣಿಕ ಯತ್ನ ಮಾಡಬೇಕು.  ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಮನವಿ ಮಾಡಿದರು.
ಭತ್ತ ಖರೀದಿ ಕೇಂದ್ರ ಪ್ರಾರಂಭಿಸಿ : ಜಿಲ್ಲೆಯಲ್ಲಿ ಉಂಟಾದ ಅಕಾಲಿಕ ಆಲಿಕಲ್ಲು ಮಳೆಯಿಂದ ೨೬೮೬೧ ಹೆ. ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದ್ದು, ಉಳಿದಿರುವ ಅಲ್ಪ ಸ್ವಲ್ಪ ಬೆಳೆಯನ್ನು ರೈತರು ರಸ್ತೆಗಳಲ್ಲಿ ಒಣಗಿಸಿ ಇರಿಸುತ್ತಿದ್ದಾರೆ.  ಭತ್ತದ ಬೆಲೆ ಕುಸಿದಿದ್ದು, ರೈತರು ಸಂಕಷ್ಟದಲ್ಲಿದ್ದಾರೆ.  ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಕೂಡಲೆ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿ.ಪಂ. ಸದಸ್ಯರು ಸಭೆಯ ಗಮನಕ್ಕೆ ತಂದರು.  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಅವರು ಮಾತನಾಡಿ, ಕಾರಟಗಿ ಮತ್ತು ಗಂಗಾವತಿಯ ಎಪಿಎಂಸಿಯಲ್ಲಿ ಭತ್ತ ಖರೀದಿ ಮಾಡುವ ಪ್ರಕ್ರಿಯೆ ಮಾ. ೩೧ ಕ್ಕೆ ಮುಕ್ತಾಯವಾಗಿದ್ದು, ಹೊಸದಾಗಿ ಸರ್ಕಾರದಿಂದ ಆದೇಶ ಬರಬೇಕಿದೆ.  ಸರ್ಕಾರದ ಆದೇಶ ಬಂದಲ್ಲಿ ಖರೀದಿ ಕೇಂದ್ರ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.  ಭತ್ತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.
ಇಂಗ್ಲೀಷ್ ಶಿಕ್ಷಕರ ಕೊರತೆ : ಜಿಲ್ಲೆಯಲ್ಲಿ ಹಲವು ಪ್ರೌಢಶಾಲೆಗಳಲ್ಲಿ ಇಂಗ್ಲೀಷ್ ಭಾಷಾ ಶಿಕ್ಷಕರ ಹುದ್ದೆಯೇ ಮಂಜೂರಾಗಿಲ್ಲ.  ಇದರಿಂದಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದ್ದು, ಇಂಗ್ಲೀಷ್ ವಿಷಯದ ಶಿಕ್ಷಣದಲ್ಲಿ ಜಿಲ್ಲೆಯ ಮಕ್ಕಳು ಹಿಂದುಳಿಯುತ್ತಿದ್ದಾರೆ.  ಈ ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಯಲಬುರ್ಗಾ ತಾ.ಪಂ. ಅಧ್ಯಕ್ಷೆ ಮಹದೇವಿ ಕಂಬಳಿ ಅವರು ಅಸಮಾಧಾನ ವ್ಯಕ್ತಪಡಿಸಿದರು.  ಡಿಡಿಪಿಐ ಶ್ಯಾಮಸುಂದರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರು ಹೆಚ್ಚುವರಿಯಾಗಿದ್ದು, ಇಂತಹ ಹೆಚ್ಚುವರಿ ಹುದ್ದೆಗಳನ್ನು ಗುರುತಿಸಿ, ಇಂಗ್ಲೀಷ್ ವಿಷಯದ ಶಿಕ್ಷಕರ ಹುದ್ದೆಗಳನ್ನಾಗಿ ಪರಿವರ್ತಿಸಲು ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ಸರ್ಕಾರದಿಂದ ಆದೇಶ ಬಂದ ಕೂಡಲೆ, ಇಂಗ್ಲೀಷ್ ಭಾಷಾ ಶಿಕ್ಷಕರ ಹುದ್ದೆಗಳು ಮಂಜೂರಾಗಲಿವೆ ಎಂದರು.
ವಿಕಲಚೇತನರ ಸಮಗ್ರ ವಿವರ ನೀಡಿ : ಜಿಲ್ಲೆಯಲ್ಲಿ ಒಟ್ಟು ೩೪ ಸಾವಿರ ವಿಕಲಚೇತನರಿದ್ದು, ಅರ್ಹ ವಿಕಲಚೇತನರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆತಿದೆಯೇ, ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಇಲಾಖೆಯಲ್ಲಿ ಸಮರ್ಪಕ ಮಾಹಿತಿ ಇಲ್ಲ.  ಇಲಾಖೆಗಳಲ್ಲಿ ಶೇ. ೩ ರಷ್ಟು ಅನುದಾನವನ್ನು ವಿಕಲಚೇತನರಿಗಾಗಿ ಮೀಸಲಿರಿಸುವುದು ಅಗತ್ಯವಾಗಿದ್ದು, ಈ ನಿಯಮ ಸಮರ್ಪಕವಾಗಿ ಜಾರಿಯಾಗುತ್ತಿದೆಯೇ ಇಲ್ಲವೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ.  ಪ್ರತಿ ಗ್ರಾಮ ಪಂಚಾಯತಿ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಅಂಗವಿಕಲರಿಗೆ ಸರ್ಕಾರಿ ಸೌಲಭ್ಯಗಳನ್ನು ದೊರಕಿಸುವ ಸಲುವಾಗಿ ಸಿಬ್ಬಂದಿಗಳನ್ನು ಅಂಗವಿಕಲರ ಕಲ್ಯಾಣ ಇಲಾಖೆ ನಿಯೋಜಿಸಿದ್ದು, ಸಮರ್ಪಕ ಕಾರ್ಯ ಆಗುತ್ತಿಲ್ಲ ಎಂದು ಜಿ.ಪಂ. ಸದಸ್ಯ ಜನಾರ್ಧನ ಹುಲಿಗಿ ಸಭೆಯ ಗಮನಕ್ಕೆ ತಂದರು.   ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ಜಿಲ್ಲೆಯಲ್ಲಿರುವ ವಿಕಲಚೇತನರ ಒಟ್ಟು ಸಂಖ್ಯೆ, ವಿಕಲಚೇತನ ಪ್ರಮಾಣವನ್ನು ಆಧರಿಸಿ, ಅವರಿಗೆ ನೀಡಲಾಗುತ್ತಿರುವ ಸರ್ಕಾರಿ ಸೌಲಭ್ಯಗಳ ಕುರಿತ ಸಮಗ್ರ ವಿವರವನ್ನು ಹತ್ತು ದಿನಗಳ ಒಳಗಾಗಿ ಸಲ್ಲಿಸಬೇಕು ಎಂದು ಅಂಗವಿಕಲ್ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅರವಿಂದಗೌಡ ಪಾಟೀಲ್, ಪರಸಪ್ಪ ಕತ್ತಿ, ವೀರೇಶ್ ಸಾಲೋಣಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ಜಿ.ಪಂ. ಸದಸ್ಯರುಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error