೩೭೧ನೇ ಕಲಂ ತಿದ್ದುಪಡಿ ಮಸೂದೆ ಪುನರ್ ಮಂಡನೆಗೆ ಸಂಸದ ಶಿವರಾಮಗೌಡ ಒತ್ತಾಯ

ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ೩೭೧ನೇ ಕಲಂ ತಿದ್ದುಪಡಿ ಮಸೂದೆಯನ್ನು ಶೀಘ್ರ ಪುನರ್ ಮಂಡಿಸುವಂತೆ ಕೊಪ್ಪಳ ಸಂಸದ ಶಿವರಾಮಗೌಡ ಅವರು ಗೃಹ ಸಚಿವಾಲಯದ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ.
     ಸಂವಿಧಾನದ ೩೭೧ನೇ ಕಲಂ ತಿದ್ದುಪಡಿ ಮಸೂದೆಯ ಕೆಲ ಅಂಶಗಳನ್ನು ಪುನರ್ ಪರಿಶೀಲಿಸುವಂತೆ ರಾಜ್ಯ ಸರ್ಕಾರ ಗೃಹ ಸಚಿವಾಲಯದ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಬರೆದ ಪತ್ರದಿಂದ ಉಂಟಾದ ಗೊಂದಲಕ್ಕೆ ಕೊಪ್ಪಳ ಸಂಸದ ಶಿವರಾಮಗೌಡ ಅವರು ಪ್ರತಿಕ್ರಿಯಿಸಿದ್ದು,  ಸಂವಿಧಾನದ ೩೭೧ನೇ ಕಲಂ ತಿದ್ದುಪಡಿ ಮಸೂದೆ ಪುನರ್ ಪರಿಶೀಲಿಸುವ ಕುರಿತಂತೆ ರಾಜ್ಯದ ಮುಖ್ಯಮಂತ್ರಿಗಳು ನವದೆಹಲಿ ಗೃಹ ಸಚಿವಾಲಯದ ಸ್ಥಾಯಿ ಸಮಿತಿ ಅಧ್ಯಕ್ಷರಾದ ವೆಂಕಯ್ಯ ನಾಯ್ಡು ಅವರಿಗೆ ನವೆಂಬರ್ ೦೯ ರಂದು ಬರೆದ ಪತ್ರ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಕೇಂದ್ರದ ಮುಖ್ಯ ಕಾರ್ಯದರ್ಶಿಗಳಿಗೆ, ಮಸೂದೆಯನ್ನು ಪರಿಷ್ಕರಣೆಗಾಗಿ ಹಿಂಪಡೆಯಲು ಕೈಗೊಂಡ ಕ್ರಮ ಸಮಂಜಸವಲ್ಲ.  ಕರ್ನಾಟಕ ರಾಜ್ಯ ಸರ್ಕಾರ ಬರೆದ ಪತ್ರದಲ್ಲಿ ರಾಜ್ಯ ಸರ್ಕಾರಕ್ಕೆ ಹಣಕಾಸಿನ ಹೆಚ್ಚಿನ ಹೊರೆ ಬೀಳಬಹುದಾದ ಅಂಶ ಹೊರತುಪಡಿಸಿ, ಗಂಭೀರವಾದ ಯಾವುದೇ ಶಿಫಾರಸ್ಸುಗಳಿರುವುದಿಲ್ಲ.  ಈಗಾಗಲೆ ಕೇಂದ್ರ ಸರ್ಕಾರ ಸಂವಿಧಾನದ ೩೭೧ನೇ ಕಲಂ ಜೆ. ಗೆ ತಿದ್ದುಪಡಿ ಮಾಡುವ ಉದ್ದೇಶಿತ ಮಸೂದೆಯಲ್ಲಿ ವಿಶೇಷ ಸ್ಥಾನಮಾನಗಳು, ಮೀಸಲಾತಿಗಳು ಒಳಗೊಂಡಿರುವುದರಿಂದ, ಕೂಡಲೆ ವಿಳಂಬ ಮಾಡದೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವಾಲಯದ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಒತ್ತಾಯಿಸಲಾಗಿದೆ.  ನ. ೨೬ ರಂದು ವೆಂಕಯ್ಯ ನಾಯ್ಡು ಅವರನ್ನು ಖುದ್ದು ಭೇಟಿಯಾಗಿ, ಮಸೂದೆಯನ್ನು ಹಿಂತಿರುಗಿಸದೆ, ಸಂಸತ್ತಿನಲ್ಲಿ ಪುನರ್ ಮಂಡನೆಗೆ ಒತ್ತಾಯಿಸುತ್ತೇನೆ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ
Please follow and like us:
error