ಸಂಪಂಗಿಗೆ ಜಾಮೀನು,ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಮಧ್ಯಂತರ ಜಾಮೀನು

ಬೆಂಗಳೂರು, ಅ.31: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ ನಾಶಪಡಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಕೆಜಿಎಫ್‌ನ ಬಿಜೆಪಿ ಶಾಸಕ ವೈ. ಸಂಪಂಗಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೋಮವಾರ ಷರತ್ತು ಬದ್ಧ ಜಾಮೀನು ನೀಡಿದೆ.
ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸಂಪಂಗಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಧೀಶರು 2 ಶ್ಯೂರಿಟಿ, 1ಲಕ್ಷ ರೂಪಾಯಿ ಬಾಂಡ್ ಆಧಾರದ ಮೇಲೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.
ಅಲ್ಲದೇ, ಯಾವುದೇ ಕಾರಣಕ್ಕೂ ದೇಶಬಿಟ್ಟು ಹೋಗದಂತೆ ತಾಕೀತು ಮಾಡಿದ ನ್ಯಾಯಾಧೀಶರು, 3 ದಿನಗಳಲ್ಲಿ ಪಾಸ್‌ಫೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಸೂಚಿಸಿದರು. ಸಾಕ್ಷಿಗಳನ್ನು ಬೆದರಿಸುವುದು, ಪ್ರಭಾವ ಬೀರುವ ಸಾಹಸಕ್ಕೆ ಕೈಹಾಕಬಾರದು ಎಂಬ ಎಚ್ಚರಿಕೆಯನ್ನೂ ಕೊಟ್ಟರು. ಈ ಸಂದರ್ಭದಲ್ಲಿ ಸಂಪಂಗಿ ಕೋರ್ಟ್ ಕಟಕಟೆಯಲ್ಲೇ ಕಣ್ಣೀರಿಟ್ಟ ಘಟನೆ ನಡೆಯಿತು. ಪ್ರಕರಣದ ವಿಚಾರಣೆಯನ್ನು ನ. 15ಕ್ಕೆ ಮುಂದೂಡಲಾಯಿತು.
ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿ 2009ರ ಜನವರಿ 29ರಂದು ಹುಸೈನ್ ಮೊಯಿನ್ ಫಾರೂಕ್‌ರಿಂದ ವಿಧಾನ ಸೌಧದ ತನ್ನ ಕಚೇರಿಯಲ್ಲಿ ಶಾಸಕ ಸಂಪಂಗಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಸಂಪಂಗಿಯವರಿಗೆ ಶರ್ತಬದ್ಧ ಜಾಮೀನು ನೀಡಿತ್ತು.
ಈ ಮಧ್ಯೆ ದೂರುದಾರ ಹುಸೈನ್ ಮೊಯಿನ್ ಫಾರೂಕ್, ಸಂಪಂಗಿ ತನ್ನ ಪ್ರಭಾವ ಬೀರಿ ಸಾಕ್ಷ ನಾಶಪಡಿಸಿದ್ದಾರೆ ಹಾಗೂ ತನ್ನ ಮೇಲೆ ಜೀವ ಬೆದರಿಕೆಯೊಡ್ಡಿದ್ದಾರೆ. ಆದುದರಿಂದ ಅವರ ಜಾಮೀನು ರದ್ದುಗೊಳಿಸಬೇಕೆಂದು ಕೋರಿ ಮತ್ತೊಂದು ದೂರು ನೀಡಿದ್ದರು.
ಈ ಅರ್ಜಿಯ ವಿಚಾರಣೆಯನ್ನು ಕಳೆದ ಶುಕ್ರವಾರ (ಅ.28)ರಂದು ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಶಾಸಕ ಸಂಪಂಗಿಯವರ ಜಾಮೀನು ಅರ್ಜಿಯನ್ನು ರದ್ದುಗೊಳಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿತು.
ಈ ಹಿನ್ನೆಲೆಯಲ್ಲಿ ಶಾಸಕ ವೈ.ಸಂಪಂಗಿಯವರನ್ನು ಬಂಧಿಸಿದ ಪೊಲೀಸರು, ಅವರನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ರವಾನಿಸಿದ್ದರು.
ಅನಾರೋಗ್ಯದ ಹಿನ್ನೆಲೆ: ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಮಧ್ಯಂತರ ಜಾಮೀನು

ಬೆಂಗಳೂರು, ಅ.31: ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಕಟ್ಟಾ ಸುಬ್ರಹ್ಮಣಯ್ಯ ನಾಯ್ಡುಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ 3 ತಿಂಗಳ ಅವಧಿಗೆ ಮಧ್ಯಂತರ ಜಾಮೀನು ನೀಡಿದೆ.
ಕೆಐಡಿಬಿಐ ಭೂ ಹಗರಣ ಕುರಿತಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ, ಕಟ್ಟಾರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಆದರೆ, ಅನಾರೋಗ್ಯದಿಂದ ಬಳಲುತ್ತಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ‘‘ತಾನು ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅದಕ್ಕಾಗಿ ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ. ಆದುದರಿಂದ ತನ್ನ ಜಾಮೀನು ಅರ್ಜಿಯನ್ನು ಮಾನ್ಯ ಮಾಡುವಂತೆ’’ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.
ಈ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ, ಕಟ್ಟಾ ಸುಬ್ರಹ್ಮಣ್ಯ ನಾಯ್ಡುರಿಗೆ 3 ತಿಂಗಳ ಅವಧಿಗೆ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ. ಇದರೊಂದಿಗೆ 5 ಲಕ್ಷ ರೂ. ಚೆಕ್ ಅನ್ನು ಭದ್ರತೆಗಾಗಿ ನ್ಯಾಯಾಲಯಕ್ಕೆ ನೀಡಬೇಕು ಹಾಗೂ 3 ತಿಂಗಳ ಬಳಿಕವೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅನಾರೋಗ್ಯದಿಂದಿದ್ದರೆ, ಲೋಕಾಯುಕ್ತ ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೈಕೋರ್ಟ್ ತಿಳಿಸಿದೆ
ಯಡಿಯೂರಪ್ಪ ಜಾಮೀನು ವಿಚಾರಣೆ : ದೀಪಾವಳಿಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕತ್ತಲೆಯಲ್ಲೇ ಕಳೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡ ರಾಜ್ಯೋತ್ಸವದಂದು ಕೂಡ ಕನ್ನಡ ಬಾವುಟವನ್ನು ಜೈಲಲ್ಲೇ ಹಾರಿಸುವಂತಾಗಿದೆ. ಅವರ ಡಿನೋಟಿಫಿಕೇಷನ್ ಗೆ ಸಂಬಂಧಿಸಿದ ಕೇಸಿನಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ನ.2ಕ್ಕೆ ಹೈಕೋರ್ಟ್ ಮುಂದೂಡಿದೆ.
Please follow and like us:

Leave a Reply