ಮೈಸೂರಿನಿಂದ ರಾಹುಲ್ ಸ್ಪರ್ಧೆ?

  ಯುಪಿಎ ಮೈತ್ರಿಕೂಟದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಿರುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತ

ಪಡಿಸಿದ್ದು ಈ ಮೂಲಕ ನೆಹರೂ ಕುಟುಂಬ ಮತ್ತೊಮ್ಮೆ ಕರ್ನಾಟಕದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ದಕ್ಷಿಣ ಭಾರತದಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಏಕೈಕ ಆಸರೆಯಾಗಿರುವ ಕರ್ನಾಟಕ ರಾಜ್ಯದಿಂದ ಸ್ಪರ್ಧಿಸುವ ಮೂಲಕ ಲೋಕಸಭಾ ಚುನಾವಣೆಗೆ ಹೊಸ ತಿರುವು ನೀಡಲು ರಾಹುಲ್ ಚಿಂತನೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಹೊಸದಿಲ್ಲಿಯಲ್ಲಿ ನಡೆದ ಮುಖ್ಯಮಂತ್ರಿಗಳ ಶೃಂಗಸಭೆಯ ವೇಳೆ ಸಿದ್ದರಾಮಯ್ಯನವರೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿರುವ ರಾಹುಲ್, ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಆಸಕ್ತಿ ತೋರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರ ಜೊತೆಗೆ ಉಡುಪಿ-ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಮೇಲೂ ರಾಹುಲ್ ಕಣ್ಣಿಟ್ಟಿದ್ದಾರೆ. ಈ ಹಿಂದೆ ನೆಹರೂ ಕುಟುಂಬಕ್ಕೆ ರಾಜಕೀಯ ಮರುಜನ್ಮ ನೀಡಿದ್ದ ಚಿಕ್ಕಮಗಳೂರು ಕ್ಷೇತ್ರದತ್ತಲೂ ಕಾಂಗ್ರೆಸ್ ಯುವ ರಾಜನ ಆಸಕ್ತಿ ಇದೆ ಎಂದು ಮೂಲಗಳು ತಿಳಿಸಿವೆ.
ಚಿಕ್ಕಮಗಳೂರಿನಿಂದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಆಯ್ಕೆಯಾಗುವ ಮೂಲಕ ದೇಶದಲ್ಲಿ ಮೂಲೆಗುಂಪಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಮರು ಚೈತನ್ಯ ದೊರೆತಿತ್ತು. ಅದೇ ರೀತಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸೋನಿಯಾ ಗಾಂಧಿಯವರನ್ನು ಜನ ಅಭೂತಪೂರ್ವವಾಗಿ ಆಯ್ಕೆ ಮಾಡಿದ್ದರು. ಹೀಗಾಗಿ ಕರ್ನಾಟಕದ ಮತದಾರರ ಮೇಲೆ ವಿಶೇಷ ಕಾಳಜಿಯಿರುವ ರಾಹುಲ್, ಮುಖ್ಯಮಂತ್ರಿ ಸಿದ್ದರಾಮಯ್ಯರ ತವರು ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.
ಈ ಮಧ್ಯೆ ಲೋಕಸಭಾ ಚುನಾವಣೆಗೆ ತಾಲೀಮು ಆರಂಭಿಸಿರುವ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ರೂಪಿಸಲು ಬೆಂಗಳೂರಿನಲ್ಲಿ ರಾಹುಲ್ ನೇತೃತ್ವದಲ್ಲಿ 250 ಯುವ ಪ್ರತಿನಿಧಿಗಳ ಸಭೆ ನಡೆಸಿದೆ. ಈ ಮೂಲಕ ಚುನಾವಣೆಗೆ ಕರ್ನಾಟಕವನ್ನು ಮೂಲ ನೆಲೆಯಾಗಿಸಿಕೊಂಡು ಹೋರಾಟ ರೂಪಿಸಲು ನಿರ್ಧರಿಸಿದೆ.

Leave a Reply